ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡು
ಡಿಸೆಂಬರ್ ೧೯೪೮

ಅಧ್ಯಕ್ಷತೆ: ತಿ.ತಾ. ಶರ್ಮ

೩೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ತಿರುಮಲೆ ತಾತಾಚಾರ್ಯಶರ್ಮ

ಮೊನೆಚಾದ ಬರಹ ಸಿಡಿಲಿನಂಥ ಮಾತಿಗೆ ಪ್ರಸಿದ್ಧರಾಗಿ ವಿಶ್ವಕರ್ನಾಟಕ ಪತ್ರಿಕೆಯ ಮೂಲಕ ಇತಿಹಾಸವನ್ನೇ ನಿರ್ಮಿಸಿದ ಕನ್ನಡ ಭೀಷ್ಮರು ಎಂದರೆ ತಿರುಮಲೆ ತಾತಾಚಾರ್ಯಶರ್ಮರು. ಇವರು ಶ್ರೀನಿವಾಸ ತಾತಾಚಾರ್ಯ-ಜಾನಕಿ ಅವರ ಪುತ್ರರಾಗಿ ೨೭-೪-೧೮೯೫ರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜಮನೆತನದಲ್ಲಿ ಜನಿಸಿದರು.

ಗುರುಕುಲಪದ್ಧತಿಯ ಶಿಕ್ಷಣ ಮನೆಯಲ್ಲಿ ಸಿಕ್ಕಿತು. ಶಾಲಾ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರ, ಬೆಂಗಳೂರು ಹಾಸನಗಳಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ ಸೇರಿದರೂ ಧನಾಭಾವದಿಂದ ವಿದ್ಯಾಭ್ಯಾಸ ಮುಂದಕ್ಕೆ ಸಾಗಲಿಲ್ಲ.

೧೯೧೯ರಲ್ಲಿ ಶಾಸನ ಇಲಾಖೆಯಲ್ಲಿ ತೆಲುಗು – ಕನ್ನಡ ಸಹಾಯಕ ಅಧಿಕಾರಿಯಾಗಿ ೫ ವರ್ಷ ಸೇವೆ ಸಲ್ಲಿಸಿದ ಮೇಲೆ  ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಕೆಲಸಕ್ಕೆ ರಾಜೀನಾಮೆಯಿತ್ತರು.  ಗಾಂಧೀಜಿಯವರನ್ನು ಭೇಟಿ ಆಗಿ ಅವರ ಆಣತಿಯಂತೆ ವಿಶ್ವಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ೨೭ ವರ್ಷಗಳ ಕಾಲ ಅವರು ಆ ಪತ್ರಿಕೆಯನ್ನು ನಡೆಸಿದರು.

೧೯೪೩ರಲ್ಲಿ ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾದರು, ೧೯೪೪-೫0ರಲ್ಲಿ ಬೆಂಗಳೂರು ಮುನಿಸಿಪಲ್ ಕೌನ್ಸಿಲ್‍ರಾದರು. ಬೆಂಗಳೂರಿನ ಅಮೆಚೂರ್ ನಾಟಕ ಮಂಡಳಿ ಮೂಲಕ ಟೊಳ್ಳುಗಟ್ಟಿ ನಾಟಕವನ್ನು ಬೆಳಕಿಗೆ ತಂದರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

೧೯೪೭ರಲ್ಲಿ ಕಾಸರಗೋಡಿನಲ್ಲಿ ನಡೆದ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶರ್ಮರನ್ನು ಅಧ್ಯಕ್ಷರನ್ನಾಗಿ ಆರಿಸಿ ಸನ್ಮಾಸಿದರು. ೧೯೭0ರಲ್ಲಿ ಮಂಡ್ಯ ಜಿಲ್ಲಾಪರಿಷತ್ತಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ೧೯೪೭ರಿಂದ ೧೯೪೯ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಗೊಂಡರು.

ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಪತ್ರಿಕಾಕರ್ತರೂ ಸರಳ ಜೀವಿಗಳು ವಾಗ್ಮಿಗಳೂ ಗಾಂಧಿ ಭಕ್ತರೂ ಹಾಸ್ಯಪ್ರಿಯರೂ ಆಗಿದ್ದ ತಿ. ತಾ. ಶರ್ಮರ ಲೇಖನಿಯಿಂದ ಹತ್ತಾರು ಗ್ರಂಥಗಳು ಬಂದಿವೆ. ಅವರ ಕೆಲವು ಗ್ರಂಥಗಳು ಹೀಗಿವೆ :

ಕನ್ನಡ ಕವಿಗಳು (ಜೀವನ ಚರಿತ್ರೆ), ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಜೀವನ ಚರಿತ್ರೆ), ಕರ್ಮಫಲ (ಕಥಾಸಂಗ್ರಹ), ವಿಕ್ರಾಂತ ಭಾರತ (ಇತಿಹಾಸ), ಜಗತ್ಕಥಾವಲ್ಲರಿ (ಅನುವಾದ), ಕರ್ಣಾಟಕ ಕೈಪಿಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಮಾಸ್ತಿಯವರ ಮನೋಧರ್ಮ ವಿಚಾರ ಕರ್ನಾಟಕ, ಕರ್ಣಾಟಕ ಕೈಪಿಡಿ – ಇತ್ಯಾದಿ.

ಇವರು ೧-೯-೧೯೭೩ರಂದು ದಿವಂಗತರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೧

ಅಧ್ಯಕ್ಷರು, ತಿ.ತಾ. ಶರ್ಮ

ದಿನಾಂಕ ೨೯, ೩0, ೩೧ ಡಿಸೆಂಬರ್ ೧೯೪೮   

ಸ್ಥಳ : ಕಾಸರಗೋಡು

ಜನರ ಅಭಿಲಾಷೆ

“ಸಂಪ್ರದಾಯದ ನಾನಾ ಸಿಕ್ಕುಗಳಲ್ಲಿ ವಿಲಿವಿಲಿ ಒದ್ದಾಡುತ್ತಿರುವ ಪರಿಷತ್ತಿನಲ್ಲಿ ನೀವು ಕೆಲವು ಪ್ರಗತಿಪರ ಮಾರ್ಪಾಡುಗಳನ್ನು ಅನುಷ್ಠಾನದಲ್ಲಿ ತರುವಿರೆಂದು ಆಶಿಸುತ್ತೇನೆ.”

“ಕರ್ನಾಟಕದ ಜಟಿಲ ಪ್ರಶ್ನೆ ಸಮ್ಮೇಳನಾಧ್ಯಕ್ಷರಾದ ನಿಮ್ಮ ಮೇಲೆ ಬಿದ್ದಿದೆ.”

“ತಾವು ಸಮ್ಮೇಳನಾಧ್ಯಕ್ಷರಾಗಿ, ಪ್ರಗತಿಯ ದಾರಿಯಲ್ಲಿ ನಡೆಯುವ ಸಾವಿರಾರು ಯುವಕರಿಗೆ ಬೆಂಬಲವಾಗಿ ನಿಂತು, ಕನ್ನಡ ಸಾಹಿತ್ಯದ ಪ್ರತಿಗಾಮಿ ಧೋರಣೆಯನ್ನು ವಿರೋಧಿಸಿ, ಪ್ರಗತಿ ಪಥದಲ್ಲಿ ಇನ್ನಷ್ಟು ವೇಗವಾಗಿ ಮುಂದುವರಿಯುವಂತೆ ಶ್ರಮಿಸುವಿರಾಗಿ ಹಾರೈಸುತ್ತೇನೆ.”

“ಕ್ರಾಂತಿಯ ಒಳ್ಳೆಯ ಸಮಯದಲ್ಲಿ ತಾವು ಅಧ್ಯಕ್ಷರಾದುದು ಸಂತೋಷ. ಸಮಸ್ತ ಕನ್ನಡ ದೇಶಕ್ಕೆ ಬೇಕಾದುದು ತಮಗೇ ವಿಧಿತ.”

ಈ ಅಭಿನಂದನ ವಚನಗಳಲೆಲ್ಲ ಕನ್ನಡ ನಾಡಿನ ನಾಡಿಯ ಹೊಡೆತ ಹೇಗಿದೆಯೆಂಬುದು ಕಾಣಬರುತ್ತದೆ. ಕನ್ನಡಿಗರೆಲ್ಲರ ಆಶಯ ಆದರ್ಶವೇನು. ಅವರ ಆತುರ ಕಾತರಗಳೇನೆಂಬುದು  ಸ್ಪಷ್ಟವಾಗುತ್ತದೆ. ಕ್ರಾಂತಿ ಬೇಕು! ಕನ್ನಡ ನಾಡೆಲ್ಲ ಒಂದಾಗಬೇಕು! ನನ್ನ ಅಧ್ಯಕ್ಷ ಪದವಿಯ ಅವಧಿಯಲ್ಲೇ ಆ ಕಾರ್ಯಸಿದ್ಧಿ ಆಗಿಬಿಡಬೇಕು!!

ಸಮ್ಮೇಳನಾಧ್ಯಕ್ಷರ ಹೊಣೆ

“ಸ್ವತಂತ್ರ-ಏಕೀಕೃತ-ಕನ್ನಡನಾಡನ್ನು ಕಟ್ಟಲು ಹೆಣಗಬೇಕು. ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಆರಸಿ ಬಂದವರ ಹೊಣೆ ದೊಡ್ಡದಿದೆ. ಆರಿಸಿ ಬಂದವರು ಹಿಂದಿನ ಸಮ್ಮೇಳನಾಧ್ಯಕ್ಷರಂತೆ ಮೂರೋ ನಾಲ್ಕೋ ದಿನಗಳ ಸಮ್ಮೇಳನದ ಕಾರ್ಯಕಲಾಪಗಳನ್ನು ಮುಗಿಸಿ ಮನೆ ಸೇರಬಾರದು. ಈ ವರ್ಷ ಇಡೀ ಕರ್ಣಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗಬೇಕು. ಸಮ್ಮೇಳನದಲ್ಲಿ ಬಹುಮತ ದೊರಕಿಸಿಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು. ಕಾಂಗ್ರೆಸ್ ಅಧ್ಯಕ್ಷರಂತೆ ನಾಡಿನಲ್ಲೆಲ್ಲಾ ಪ್ರವಾಸ ಕೈಕೊಂಡು ಪ್ರಚಾರ ನಡೆಸಿ, ಕನ್ನಡಿಗರಲ್ಲಿ ಕನ್ನಡದ ಕುರಿತು ಜಾಗೃತಿ ಹುಟ್ಟಿಸಬೇಕು. ಕರ್ತವ್ಯೋನ್ಮುಖರಾಗುವಂತೆ ಹುರಿದುಂಬಿಸಬೇಕು. ಹಾಗಾದಲ್ಲಿ ಮಾತ್ರ ಅಧ್ಯಕ್ಷರಾಗಿ ಆರಿಸಿ ಬಂದವರ ಕರ್ತವ್ಯ ಸಾರ್ಥಕತೆಯನ್ನು ಪಡೆಯುತ್ತದೆ.”

ಇದು ಉಡುಪಿಯ “ಪ್ರಕಾಶ”ವಾಣಿ ಬರಹ. ಈ ಅಧ್ಯಕ್ಷ ಪದವಿಯ ಜವಾಬ್ದಾರಿ ಎಷ್ಟೆಂಬುದು ಸ್ಪಷ್ಟವಾಗುತ್ತದೆ. “ಕನ್ನಡ ನಾಡನ್ನು ಕಟ್ಟಲು ಹೆಣಗಾಡಬೇಕು” – ಈ ವಾಕ್ಯವೊಂದರಲ್ಲಿ ಸಮ್ಮೇಳನದ-ಪರಿಷತ್ತಿನ-ಕರ್ತವ್ಯ ಏನೆಂಬುದು ಸೂಚಿತವಾಗಿದೆ. ಅಧ್ಯಕ್ಷನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಈ ಸಮ್ಮೇಳನದ ಮುಖ-ಪರಿಷತ್ತಿನ ಮುಖ-ಕನ್ನಡ ಜನಪದದ ಮಹಾಮುಖ. ಕನ್ನಡ ನಾಡಿನ ಜನರು “ನಾಡನ್ನು ಕಟ್ಟಬೇಕು” ಎಂದು ಸಂಕಲ್ಪ ಮಾಡಿ ಅನೇಕ ವರ್ಷಗಳಾದುವು. ಈ ಸಂಕಲ್ಪ ಸಾಧನೆಯ ಸಿದ್ಧಿಯ ಕಾಲ ಸವಿೂಪಿಸುತ್ತಿರುವ ಹಾಗಿದೆ. “ಇಗೋ ಸಿದ್ಧಿಸಿತು” ಎಂದು ಕಾಸರಗೋಡಿನ ವೇದಿಕೆಯಿಂದ ಕನ್ನಡಿಗರೆಲ್ಲ ಉಚ್ಛಕಂಠದಿಂದ ಸಾಗರಘೋಷವನ್ನು ವಿೂರಿಸಿ ಘೋಷಿಸಿದ್ದಾದರೆ ಸಿದ್ಧಿಸಿತು! ಇಚ್ಛಾಶಕ್ತಿಯನ್ನು ವಿೂರಿಸಿದ ಶಕ್ತಿ ಮತ್ತೊಂದಿಲ್ಲ.

ಪರಿಷತ್ತಿನ ಬಗ್ಗೆ ಉಷ್ಣೋದ್ರೇಕ ವಚನಗಳು

“ಪರಿಷತ್ತು-ಸಾಹಿತ್ಯ ಪರಿಷತ್ತು-ಎಂದಿನವರೆಗೆ ರಾಜಕಾರಣದಿಂದ ಲಿಪ್ತವಾಗದೆ ಇರುವುದೋ ಅಂದಿನವರೆಗೆ ಅದು ಭದ್ರವಾಗಿರುವುದು; ಬೆಳೆದು ಬೆಳಗುತ್ತ ಹೋಗುವುದು. ಅದು ಎಂದು ರಾಜಕೀಯ ಕ್ರೀಡಾಕ್ಷೇತ್ರವಾಗುವುದೋ, ರಾಜಕಾರಣದಲ್ಲಿ ಓಡಾಡುವವರ ಕೈಗೆ ಪರಿಷತ್ತಿನ ಆಡಳಿತ ಸೂತ್ರಗಳು ಬರುವುವೋ ಅಂದೇ ಮುಗಿಯಿತು ಪರಿಷತ್ತಿನ ಕೆಲಸ.”

ಈ ಬಗೆಯ ಉಷ್ಣೋದ್ರೇಕ ವಚನಗಳು ಅಲ್ಲಿ ಇಲ್ಲಿ ಕೇಳಿ ಬರದೆ ಇಲ್ಲ. ಇಂತಹ ವಚನಗಳ ರಚನೆಯಾಗಿರುವುದೇ ಆಕ್ಷೇಪಣೆಗೆ ಸಮಾಧಾನ ಸಾಕ್ಷಿಗಳಾಗಿವೆ. ಕೋಪದಿಂದ, ಅಸಮಾಧಾನದಿಂದ, ‘ಹಾಳಾಗಿ ಹೋಯಿತಲ್ಲಾ’ ಎಂಬ ಭಂಗಿತ ಭಾವದಿಂದ ಅಂದ ಮಾತು ಗದ್ಯರಚನೆಗೊಂದು ಉತ್ತಮ ಮಾದರಿಯಾಯಿತು.

ಪರಿಷತ್ ಏನಾಗಬೇಕು?

‘ಜೀವನ ಪಥನಿರ್ಣಯ, ನಿತ್ಯಜೀವನ-ಈ ಕರ್ತವ್ಯವನ್ನು ಮೇಲ್ಮಟ್ಟದಲ್ಲಿ ನಿರ್ವಹಿಸಬಲ್ಲವರು ಸಾಹಿತಿಗಳು, ಕಲಾವಿದರು, ಸಂಸ್ಕೃತಿ ಪೋಷಕರು. ಇಂತಹ ರಾಷ್ಟ್ರಜೀವ ನಿರ್ಮಾಣ ನಿರ್ವಾಹಕಶಕ್ತಿಯನ್ನು ಉತ್ಪತ್ತಿ ಮಾಡಬಲ್ಲ, ಮಹಾಶಿಲ್ಪಿಗಳನ್ನೂ ಸಾಹಿತಿಗಳನ್ನೂ, ಚಿತ್ರಕರ್ಮಿಗಳನ್ನೂ, ರೂಪಕಾರಿಗಳನ್ನೂ, ಗಾಯಕವಾದಕರನ್ನೂ ಸೃಷ್ಟಿಸಬಲ್ಲ ಮೂಲಸ್ಥಾನವೆನಿಸಬೇಕು ಪರಿಷತ್.

ಪರಿಷತ್ತು ಶಕ್ತಿಯ ಉತ್ಪತ್ತಿಸ್ಥಾನ ಆಗಬೇಕು

ಕಲಾವಿದ ಸಾಹಿತಿ ಅವರಿಬ್ಬರೂ ರಾಷ್ಟ್ರ ಸೃಷ್ಟಿಸ್ಥಿತಿ ಕಾರ್ಯಕರ್ತರು ಅಂದ ಮೇಲೆ ಅವರ ಸ್ಥಾನವು ಜನಪದದಲ್ಲಿ ಎಷ್ಟು ಶ್ರೇಷ್ಠವೆಂಬುದನ್ನು ಪ್ರತಿಯೊಬ್ಬರೂ ಗ್ರಹಿಸಬಲ್ಲರು. ಸಾಹಿತಿಗಳೇನು ಸೃಷ್ಟಿಮಾಡುವರು, ಕಲಾವಿದರೇನು ನಿರ್ಮಾಣ ಮಾಡುವರು. ಅದು ಇಂದಿನ ಜನಜೀವನದ ಪ್ರತಿಬಿಂಬವಾಗಿರಬೇಕು. ನಾಳೆಯ ಭವ್ಯಜೀವನದ ಆದರ್ಶಚಿತ್ರಗಳನ್ನು ಸಾಹಿತಿಗಳು, ಕಲಾವಿದರು ನಿರ್ಮಾಣಮಾಡುವರು. ಒಂದು ಕಡೆ ಇರುವ ನಡೆಯುವ, ಪ್ರಸಕ್ತ ಜೀವನದ ಸತ್ಯಚಿತ್ರಗಳನ್ನೆತ್ತಿ ತೋರಿಸುವುದು ಇನ್ನೊಂದು ಕಡೆ ಇರಬೇಕಾದ ಸಾಧಿಸಬೇಕಾದ ಆದರ್ಶ ಜೀವನಚಿತ್ರಗಳನ್ನು ನಿರ್ಮಿಸುವುದು- ಇವೆರಡೂ ಕೆಲಸಗಳು ಮುಂದುವರಿಯಬೇಕು. ಈ ಕೆಲಸಗಳಿಗೆ ಬೇಕಾದ ಶಕ್ತಿಯನ್ನು ರಾಷ್ಟ್ರದಲ್ಲಿ ಉತ್ಪತ್ತಿ ಮಾಡಬೇಕು. ಅಂತಹ ಶಕ್ತಿಯ ಉತ್ಪತ್ತಿಸ್ಥಾನವೆನಿಸಬೇಕು ಸಾಹಿತ್ಯ ಪರಿಷತ್ತು.

 

ಪರಿಷತ್ತು ಮತ್ತು ಕನ್ನಡ ನಾಡಿನ ಕನಸು

ಕನ್ನಡ ನಾಡು ದೀರ್ಘಕಾಲದಿಂದ ಸವಿಕನಸೊಂದನ್ನು ಕಾಣುತ್ತಿದೆ. ಈ ಕನಸೇನೆಂಬುದನ್ನು ನಾಡಿನವರೆಲ್ಲ ಚೆನ್ನಾಗಿ ಬಲ್ಲರು. ಆ ಕನಸು ನನಸಾಗುವ, ಅಮೃತಘಳಿಗೆ ಬಂದಿದೆ. ಕರ್ಣಾಟಕ ಮಹಾರಾಷ್ಟ್ರವನ್ನು-ವಿಶ್ವಕರ್ಣಾಟಕವನ್ನು- ನಿರ್ಮಿಸಬೇಕೆಂದು ಎಲ್ಲ ಜನರೂ, ಲಿಂಗ, ವಯಸ್ಸು, ಸ್ಥಾನ ಗೌರವ, ವೃತ್ತಿ, ಪಕ್ಷ, ಕುಲ ಯಾವುದನ್ನೂ ಲೆಕ್ಕಿಸದೆ ಏಕೈಕ ಧ್ಯೇಯದಿಂದ, ಒಂದಲ್ಲ ಒಂದು ಪ್ರಮಾಣದಲ್ಲಿ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಕೆಲಸಮಾಡುತ್ತಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಅದಕ್ಕೆ ಕೊಂಚಕಾಲದ ಹಿಂದೆಯೇ ಧಾರವಾಡದ ವಿದ್ಯಾವರ್ಧಕ ಸಂಘವೇ ಮುಂತಾದ ಒಂದೆರಡು ಸಂಸ್ಥೆಗಳು ಹುಟ್ಟಿದ್ದವು. ಕರ್ಣಾಟಕ ಸಾಹಿತ್ಯ ಪರಿಷತ್ತು ಬೆಳೆದಂತೆಲ್ಲ ನಾಡಿನಲ್ಲಿ ನಾನಾ ಕನ್ನಡ ಸಂಘಗಳು ಸಾಹಿತ್ಯ ಸಮಿತಿಗಳು ಗೆಳೆಯರ ಗುಂಪುಗಳು, ತುಂಟರ ತಂಡಗಳು, ಬಳಗಗಳು, ಸಮಿತಿಗಳು ಅವತಾರ ಮಾಡಿದವು. ಅವುಗಳಲ್ಲನೇಕ ಸಂಸ್ಥೆಗಳು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಂಗಸಂಸ್ಥೆಗಳಾದವು. ಜೊತೆ ಜೊತೆಯಲ್ಲೇ ಕರ್ಣಾಟಕದ ಏಕೀಕರಣ ಸಂಘದ ಸ್ಥಾಪನೆಯಾಗಿ ಆ ಸಂಸ್ಥೆಯೂ ತನ್ನದೇ ಆದ ವಿಶಿಷ್ಟ ರೂಪದಲ್ಲಿ ಕರ್ಣಾಟಕವನ್ನೆಲ್ಲ ಒಂದುಗೂಡಿಸುವ ಧ್ಯೇಯಸಾಧನೆಗಾಗಿ ಕೆಲಸ ಮಾಡುತ್ತಾ ಬಂದಿದೆ.

ಸುಧಾರಣೆಗಳಾಗಬೇಕು

ಈ ಕನ್ನಡ ಸಾಹಿತ್ಯ ಪರಿಷತ್ ರಾಷ್ಟ್ರ ನಿರ್ಮಾಣಶಕ್ತಿಯ ಉತ್ಪತ್ತಿ ಸ್ಥಾನವೆನಿಸಬೇಕು ಎಂದೇನೋ  ಹೇಳಿದ್ದಾಯಿತು. ರಾಷ್ಟ್ರ ಮತ್ತು ವ್ಯಕ್ತಿಗೆ ಸಂಬಂಧಪಟ್ಟಂತೆ ಮಹಾಜೀವನಪಥ ತೋರಿಸಲು ಸಮರ್ಥರಾದ ರಾಜಶಿಲ್ಪಿಗಳನ್ನೂ, ಸಾಹಿತಿಗಳನ್ನೂ, ಚಿತ್ರಕರ್ಮಿಗಳನ್ನೂ, ಗಾಯಕ ವಾದಕರನ್ನೂ ವಾಗ್ಮಿಗಳನ್ನೂ ಈ ಪರಿಷತ್ತು ನಿರ್ಮಿಸಬೇಕು. ಇಂತಹ ರಾಷ್ಟ್ರಶಿಲ್ಪಿಗಳ ಪ್ರವಾಹ ಅವಿಚ್ಛಿನ್ನವಾಗಿ ನಾಡಿನೊಳಗೆ ಹರಿಯಬೇಕು; ಶಾಖೋಪಶಾಖೆಗಳಾಗಿ ಹರಿಯಬೇಕು; ನಾಡಿನ ನಾಡಿನಾಡಿಗಳಲ್ಲಿ ಹೊಸಶಕ್ತಿ ಹರಿಸಬೇಕು. ಹೊಸ ಚೈತನ್ಯವಿತ್ತು ನಾಡನ್ನೆಲ್ಲ ಬೆಳೆಸಿ, ಬೆಳಗಿಸಬೇಕು.

ಅಂದಮೇಲೆ ಇಷ್ಟು ಮಾತ್ರ ಸ್ಥಿರವಾಯಿತು. ಪರಿಷತ್ತಿನ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು. ಕಾರ್ಯಕ್ಷೇತ್ರ ವಿಸ್ತಾರವಾಗಬೇಕು. ಒಂದೊಂದು ಕ್ಷೇತ್ರದಲ್ಲೂ ಸುವ್ಯವಸ್ಥೆಯಿಂದ, ಭರದಿಂದ ಕೆಲಸ ನಡೆಯಬೇಕು. ಹೀಗೆ ಕೆಲಸ ನಡೆಯಲು ನಾಡಿನ ಉತ್ಸಾಹ, ತಾರುಣ್ಯ, ಅನುಭವ, ನೈಪುಣ್ಯ, ಸಾಹಸ, ಜನ, ಧನ, ಅಭಿಮಾನ, ಎಲ್ಲವನ್ನೂ ಉಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನೂ ಕಟ್ಟಿಕೊಳ್ಳಬೇಕು. ಎಲ್ಲರನ್ನೂ ಕಟ್ಟಿಕೊಳ್ಳಬೇಕು. ಆಗ ಮಾತ್ರ ನಾವು ರಾಷ್ಟ್ರವನ್ನು ಕಟ್ಟಲು ಸಮರ್ಥರಾಗುವೆವು.

ಪರಿಷತ್ತಿನ ರಚನೆ ಆಡಳಿತ ವ್ಯವಸ್ಥೆಯಲ್ಲಿ ತಕ್ಕ ಬದಲಾವಣೆಗಳಾಗಬೇಕೆಂಬ ಅಪೇಕ್ಷೆಯನ್ನು ನಾಡಿನ ಹಿತೈಷಿಗಳೆಲ್ಲ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ನಾಡಿನ ಎಲ್ಲ ಭಾಗಗಳಲ್ಲೂ `ಪರಿಷತ್ತಿನಲ್ಲಿ ಸುಧಾರಣೆಗಳಾಗಬೇಕು’ ಎಂಬ ಕೂಗು ಕೇಳಿಬರುತ್ತಿದೆ. ಏನಾಗಬೇಕು, ಹೇಗಾಗಬೇಕೆಂಬ ನಿರ್ಣಯ ಮಾಡುವ ಸ್ಥಳವಿದಲ್ಲ. ಆದರೆ ಜನತೆಯ ಹೃದಯದಲ್ಲಿ ಈ ಬಗೆಯ ಅಪೇಕ್ಷೆಯೊಂದಿದೆಯೆಂಬುದನ್ನು ಒತ್ತಿ ಹೇಳಬೇಕಾಗಿದೆ. ಸ್ವಾಗತಿಸಬೇಕಾಗಿದೆ. ಅಲ್ಲದೆ ಪರಿಷತ್ತಿನ ಆಗುಹೋಗುಗಳ ಹೊಣೆಗಾರಿಕೆ ಹೊತ್ತವರ ಲಕ್ಷ್ಯವನ್ನಿತ್ತ ಕಡೆ ಎಳೆಯುವುದು ಆವಶ್ಯಕವೆಂದು ಕಂಡುಬರುತ್ತದೆ.

ಬಿಜಾಪುರದ ರಾವ್ ಬಹದ್ದೂರ್ ಶ್ರೀ ಪಿ.ಜಿ. ಹಳಕಟ್ಟಿಯವರು ನನಗೆ ಇತ್ತೀಚೆಗೆ ಬರೆದ ಪತ್ರಗಳೊಂದರಲ್ಲಿ ಹೀಗೆ ಹೇಳಿದ್ದಾರೆ. ಇದನ್ನು ನಾನು ಎತ್ತಿ  ಕೊಡುವುದರಲ್ಲಿ ಯಾವ ಔಚಿತ್ಯಕ್ಕೂ ಲೋಪವನ್ನುಂಟುಮಾಡುತ್ತಿಲ್ಲ.

“ಹೊಸ ಪರಿಸ್ಥಿತಿನುಸರಿಸಿ ಪರಿಷತ್ತಿನ ನಿಬಂಧನೆಗಳಲ್ಲಿ ಮಾರ್ಪಾಡುಗಳಾಗುವುದು ಅತ್ಯಾವಶ್ಯಕವಾಗಿದೆ. ಮನ್ನಣೆಗಾಗಿ ಆರಿಸಿದ ಅಧ್ಯಕ್ಷ, ಉಪಾಧ್ಯಕ್ಷರಿರಕೂಡದು. ಹೀಗೆ ನಡೆದುಬಂದುದನ್ನು ಇನ್ನು ಮುಂದೆ ನಿಲ್ಲಿಸಬೇಕು. ಪರಿಷತ್ತಿನ ಅಧಿವೇಶನದ ಅಧ್ಯಕ್ಷರೇ ವರ್ಷಾದ್ಯಂತದವರೆಗೆ ಅಧ್ಯಕ್ಷರಾಗಿ ಉಳಿಯತಕ್ಕದ್ದು. ಅವರು ತಮ್ಮ ಸಹಾಯಕ್ಕೋಸ್ಕರ ಉಪಾಧ್ಯಕ್ಷಸ್ಥಾನಕ್ಕೆ ನಾಲ್ಕಾರು ಜನರನ್ನು ಸೂಚಿಸಿ ಅವರನ್ನು ಪರಿಷತ್ತಿನ `ಜನರಲ್ ಕಮಿಟಿ’ಯವರು ಆರಿಸತಕ್ಕದ್ದು.

 

ಕಾರ್ಯಕ್ಷೇತ್ರ ವಿಸ್ತಾರ

ಈ ಪರಿಷತ್ತಿನ-ರಾಷ್ಟ್ರ ಪರಿಷತ್ತಿನ ಕಾರ್ಯಕ್ಷೇತ್ರ ವಿಸ್ತಾರವಾಗಬೇಕೆಂಬುದನ್ನು ಗ್ರಹಿಸಿದ್ದಾಯಿತು. ಆ ಕ್ಷೇತ್ರ ವಿಸ್ತಾರ ವಿವರಗಳನ್ನಿಲ್ಲೀಗ ಕೊಡಲು ಸಾಧ್ಯವಿಲ್ಲವಾದರೂ ಸಂಗ್ರಹವಾಗಿ ಸೂಚನೆ ಮಾಡಬಹುದು. ಎಲ್ಲ ಕೆಲಸಗಳನ್ನೂ, ಕಾರ್ಯವಿಧಾನಗಳನ್ನೂ “ಇನ್ನೇನೂ ಉಳಿದಿಲ್ಲ” ಅನ್ನುವ ಹಾಗೆ ಮಾಡುವುದು ಸಾಧ್ಯವೂ ಅಲ್ಲ; ಹಾಗೆ ಮಾಡಲೆತ್ನಿಸುವುದು ಸಂಸ್ಥೆಯ ಸಹಜ ಬೆಳವಣಿಗೆಯಲ್ಲಿ ವಿಶ್ವಾಸವುಳ್ಳವರಿಗೆ ನ್ಯಾಯವೆಂದೂ ಕಾಣುವುದಿಲ್ಲ. ಯಾವ ಸಂಸ್ಥೆಯ ಕಾರ್ಯಕ್ಷೇತ್ರವಾದರೂ, ಕಾರ್ಯಸಾಧನ ವಿಧಾನವಾದರೂ ಕಾಲಧರ್ಮ ಮತ್ತು ಜನತೆಯ ಆಶಯದಂತೆ ಸಹಜ ಪರಿವರ್ತನ ಮತ್ತು ಅನುಗೊಳ್ಳುವ ಸ್ವಭಾವದಿಂದ ಕೂಡಿರಬೇಕು. ಚೌಕಟ್ಟೇಕೆ ಉಕ್ಕಿನದಾಗಿರಬೇಕು?

ಭಾಷೆ ಸಾಹಿತ್ಯ

೧. ಭಾಷಾಸಾಹಿತ್ಯ ಸಂಶೋಧನ, ವ್ಯವಸಾಯ ಮತ್ತು ಪ್ರಚಾರ.

೨. ಪ್ರಾಚೀನ ಗ್ರಂಥಗಳ ಸಂಗ್ರಹ, ಸಂರಕ್ಷಣೆ ಮತ್ತು ಪ್ರಕಟನೆ.

೩. ವಿಶ್ವಕೋಶ, ನಿಘಂಟುಗಳ ನಿರ್ಮಾಣ.

೪. ಶಬ್ದ ಸಂಪತ್ತು ಲಿಪಿ.

೫. ಪ್ರಮಾಣ ವಿಶಿಷ್ಟ (standardised) ಪಠ್ಯಪುಸ್ತಕಗಳ ಪ್ರಕಟನೆ.

೬. ಗ್ರಂಥಕರ್ತರಿಗೆ ಪ್ರೋತ್ಸಾಹ.

೭ ವಯೋನುಪೂರ್ವ ಸಾಹಿತ್ಯ ಮತ್ತು ಶಿಶುಸಾಹಿತ್ಯ.

೮. ಗದ್ಯ ಸಾಹಿತ್ಯ ಪ್ರಾಧಾನ್ಯ.

 

ಸಾಂಸ್ಕತಿಕ ಸಂಶೋಧನೆ

೧. ಇತಿಹಾಸ, ಗತವೈಭವಾವಶೇಷಗಳ, ಅಧ್ಯಯನ        .

೨. ಶಿಲಾಶಾಸನಾನ್ವೇಷಣ.

೩. ಪ್ರಾಚೀನ ವಸ್ತು, ವಾಸ್ತುಶಿಲ್ಪ ಪರೀಕ್ಷೆ.

೪. ಸಂಶೋಧನ ಕಾರ್ಯಕ್ಕಾಗಿ ಪುದುವಟ್ಟುಗಳ ಏರ್ಪಾಟು.

೫. ಚಿತ್ರಕರ್ಮ, ಚಿತ್ರಕೂಟ ವ್ಯವಸ್ಥೆ.

೬. ನಾನಾ ಪ್ರಾಚೀನ ಲಿಪ್ಯನ್ವೇಷಣ ಶಾಖೆಗಳು, ಸಂಶೋಧ ಸಂಸ್ಥೆಗಳೊಂದಿಗೆ ಸಂಬಂಧ

೭. ಸಂಸ್ಕೃತಿಗೆ ಸಂಬಂಧsಪಟ್ಟಂತೆ ಅನುಸಂಧೇಯ, ನಿದರ್ಶನ (Reference) ಗ್ರಂಥಗಳ ರಚನೆ ಪ್ರಕಟನೆ.

 

ಪ್ರಚಾರ-ಪ್ರಕಟನೆ

೧. ಪ್ರಭುತ್ವ ಕಾರ್ಯಗಳೆಲ್ಲ ಕನ್ನಡದ ಮೂಲಕವೇ ಆಗುವಂತೆ ಮಾಡಬೇಕು.

೨. ನ್ಯಾಯಸ್ಥಾನಗಳ ಕೆಲಸವೆಲ್ಲ ಕನ್ನಡದಲ್ಲೇ ಆಗಬೇಕು.

೩. ಮಕ್ಕಳ ಶಿಕ್ಷಣವು ಕಲಾವಸ್ಥೆಗಳಲ್ಲೂ ಕನ್ನಡದ ಮೂಲಕವಾಗಿಯೇ ನಡೆಯಬೇಕು.

೪. ವಿಶ್ವವಿದ್ಯಾನಿಲಯಗಳ ಶಿಕ್ಷಣವೂ ಕನ್ನಡದ ಮೂಲಕವಾಗಿಯೇ ನಡೆಯಬೇಕು.

೫. ಸಂಚಾರೋಪನ್ಯಾಸಗಳು, ನಾಟಕ ಪ್ರದರ್ಶನಗಳು, ಯಕ್ಷಗಾನಗಳು, ಹರಿಕಥೆಗಳ ವ್ಯವಸ್ಥೆ.

೬. ಪ್ರದರ್ಶನಗಳ ಏರ್ಪಾಟು; ಚಲನಚಿತ್ರಗಳ ನಿರ್ಮಾಣ ಮತ್ತು ಪ್ರದರ್ಶನ  ವ್ಯವಸ್ಥೆ.

೭. ಸುವ್ಯವಸ್ಥಿತ ಸರ್ವಾಂಗ ಪರಿಪೂರ್ಣ ಮುದ್ರಣಾಲಯ; ಗ್ರಂಥಪ್ರಕಟನೆ ಮತ್ತು  ಮಾರಾಟದ ವ್ಯವಸ್ಥೆ.

೮. ಕನ್ನಡ ನಾಡಿನ ಸಂಸ್ಕೃತಿ, ಅಭಿಮಾನ ಪ್ರಚಾರ ಮಾಡಲು ನೈಪುಣ್ಯ ಪಡೆದ ಶ್ರದ್ಧಾಳುಗಳನ್ನು ಉತ್ಸಾಹಿಗಳನ್ನು                ಸಿದ್ಧಗೊಳಿಸುವ ಶಿಕ್ಷಣ ಕೇಂದ್ರವಾಗಬೇಕು.

 

ವಸಂತ ಸಾಹಿತ್ಯೋತ್ಸವ

 

ಈಗ ಸಮ್ಮೇಳನಗಳು ನಡೆಯುವಾಗಲೂ ಮತ್ತು ಅಲ್ಲಲ್ಲಿ ವಸಂತ ಸಾಹಿತ್ಯೋತ್ಸವಗಳು ನಡೆಯುವಾಗಲೂ ಅವುಗಳ ಅಂಗವಾಗಿ ಪ್ರದರ್ಶನಗಳು ನಡೆಯುತ್ತಿವೆ. ಆದರೆ ಈಗ ನಡೆಯುತ್ತಿರುವಂತೆ ಅವು ಸಾಕಾದಷ್ಟು ಬೋಧಪ್ರದವಾಗಿಯೂ ಇಲ್ಲ; ಜ್ಞಾನಪ್ರಚಾರ ದೃಷ್ಟಿಯಿಂದ ಪರಿಣಾಮಕಾರಿಯಾಗಿಯೂ ಇಲ್ಲ. ಗ್ರಂಥಪ್ರದರ್ಶನ ಕಲಾಪ್ರದರ್ಶನ ವೃತ್ತಪತ್ರಿಕಾ ಪ್ರದರ್ಶನ ಹೀಗೆ ಅನೇಕ ಸಾಂಸ್ಕೃತಿಕ ಮತ್ತು ಇತರ ಪ್ರಾಚೀನ ಮತ್ತು ಅರ್ವಾಚೀನ ವಸ್ತುಸಂಗ್ರಹ ಮತ್ತು ಪ್ರದರ್ಶನಗಳನ್ನು ಸುವ್ಯವಸ್ಥೆಯಿಂದ ಏರ್ಪಡಿಸುವುದೇ ಒಂದು ಮುಖ್ಯ ಕರ್ತವ್ಯವೆಂದು ಭಾವಿಸಿ ಅದನ್ನು ತೃಪ್ತಿಕರವಾಗಿ ಪೂರೈಸಬೇಕು.

 

ಪರಿಷತ್ತಿನ ಮುದ್ರಣಾಲಯ

ಕೀರ್ತಿಶೇಷ ಶ್ರೀ ಬಿ.ಎಂ.ಶ್ರೀಕಂಠಯ್ಯನವರ ಅಪಾರ ದೇಶಭಕ್ತಿ ಮತ್ತು ಔದಾರ್ಯದ ಫಲವಾಗಿ ಒಂದು ಮುದ್ರಣಾಲಯವು ಪರಿಷತ್ತಿನ ಆಸ್ತಿಯಾಗಿದೆ. ಅದರ ಪ್ರಯೋಜನವಷ್ಟಿಷ್ಟೆಂದು ಹೇಳಲಾಗದು. ಅನುಭವದಿಂದ ಈಗಿನ ಯಂತ್ರೋಪಕರಣಗಳೂ ಮತ್ತು ಇತರ ಸಲಕರಣೆಗಳು ಸಾಕಾದಷ್ಟು ಇಲ್ಲ. ಮುದ್ರಣಾಲಯವನ್ನು ಸರ್ವಾಂಗ ಪರಿಪೂರ್ಣವಾಗಿ ಮಾಡಬೇಕಾಗಿದೆ. ಪ್ರಾಚೀನ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ. ಹಿಂದಿನ “ಕಾವ್ಯಕಲಾನಿಧಿ” ಪ್ರಾರಂಭಿಸಿದ ಕೆಲಸವನ್ನು  ಮತ್ತಷ್ಟು ವಿತರಣೆಯಿಂದ ಮುಂದುವರಿಸಬೇಕಾಗಿದೆ. ಇಷ್ಟು ಮಾತ್ರವೇ ಅಲ್ಲ. ಇಂದಿನ ನೂರಾರು ಲೇಖಕರು ತಾವು ಬರೆದ ಗ್ರಂಥಗಳನ್ನು ಮುದ್ರಣ ಮಾಡಿಸಿ ಪ್ರಕಟಿಸಲು ಸಾಧ್ಯವಿಲ್ಲದೆ ನಿರಾಶರಾಗಿ ಕೂತಿದ್ದಾರೆ. ಸಾಹಸಿಗಳಾದ ಒಬ್ಬಿಬ್ಬರು ಸಾಲಸೋಲಗಳನ್ನು ಮಾಡಿ ಮುದ್ರಣ ಮಾಡಿಸುವ ಮಟ್ಟಿಗೆ ತಮ್ಮ ಚಾಪಲ್ಯವನ್ನು ತೀರಿಸಿಕೊಳ್ಳುತ್ತಿದ್ದಾರೆ.  ಅಲ್ಲದೆ ಕೇವಲ ಲಾಭದೃಷ್ಟಿಯಿಂದ ಮಾತ್ರ ವ್ಯಾಪಾರ ಮಾಡುವ ಪುಸ್ತಕ ಪ್ರಚಾರಕರ ಕೈಗೆ ಸಿಕ್ಕಿ ಗೋಳಾಡುತ್ತಿದ್ದಾರೆ. ಈ ದುಃಖದಿಂದ ಈ ಗುಂಪಿನ ಸಾಹಿತ್ಯ ಸೇವಕರನ್ನು ಪಾರುಮಾಡಲು ಪರಿಷತ್ತು ಒಂದು ಆಲೋಚನೆಯನ್ನು ಮಾಡಬೇಕು. ಗ್ರಂಥಗಳನ್ನು ಪ್ರಕಟಿಸುವ ಮತ್ತು ಮಾರಾಟದ ಏರ್ಪಾಟನ್ನು ಮಾಡುವುದರ ಕಡೆಗೆ ಗಮನವನ್ನು ಕೊಡಬೇಕು.

 

ಭಾಷಾಭ್ಯಾಸ

ಕನ್ನಡ ಭಾಷೆಯ ಚರಿತ್ರೆಯನ್ನು ಸಂಪೂರ್ಣವಾಗಿ ಶಾಸ್ತ್ರೀಯವಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳಲು ಸಾಕಾದಷ್ಟು ಸಾಹಿತ್ಯಬೇಕು. ಅಂತಹ ನಿದರ್ಶನ (ರೆಫರೆನ್ಸ್) ಸಾಹಿತ್ಯ ಗ್ರಂಥಗಳು ನಮ್ಮಲ್ಲಿ ಇಲ್ಲವೇ ಇಲ್ಲ. ಅವುಗಳು ಇನ್ನಮೇಲೆ ನಿರ್ಮಾಣ ಆಗಬೇಕಾಗಿವೆ. ಈ ಭಾಗದಲ್ಲಿ ರೆ|| ಕಿಟ್ಟಲ್, ಲೂಯಿ ರೈಸ್, ಆರ್. ನರಸಿಂಹಾಚಾರ್ಯ ಮೊದಲಾದ ನಿಪುಣರು ಅತ್ಯಪೂರ್ವ ಮತ್ತು ಆಶ್ಚರ್ಯಕರವಾದಂಥ ಆರಂಭ ಕಾರ್ಯವನ್ನು ಮಾಡಿದ್ದಾರೆ. ಆ ಕಾರ್ಯವನ್ನು ಮುಂದುವರಿಸುವುದರ ಕಡೆಗೆ ಸಾಕಾದಷ್ಟು ಗಮನ ಹೋಗಿಲ್ಲ.  ಇಂತಹ ಕೆಲಸವನ್ನು ಒಬ್ಬಿಬ್ಬರು ವಿದ್ವಾಂಸರು ಮಾತ್ರ ಅಥವಾ ಸಂಶೋಧಕರು ಮಾತ್ರ ಮಾಡುವುದು ಸಾಧ್ಯವಿಲ್ಲ. ಪರಿಷತ್ತಿನಂತಹ ಮಹಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಪ್ರಭುತ್ವಗಳು ಇವುಗಳಿಂದ ಮಾತ್ರ ಸಾಧ್ಯ. ನಿಘಂಟುಗಳು, ವಿಶ್ವಕೋಶದ ನಿರ್ಮಾಣದ ಕತೆಗಳನ್ನು ನಾವು ತಿಳಿದುಕೊಳ್ಳಲು ಪ್ರಯತ್ನಪಟ್ಟಾಗ ಮೇಲಿನ ಮಾತಿನ ಸತ್ಯ ವಿಸ್ತಾರಪಡುತ್ತದೆ,

ಅಂತು ಕನ್ನಡ ಬಾಷೆಯ ಪ್ರಾಚೀನತೆ ಕುರಿತು ಅದರ ಮೂಲ ಸ್ವರೂಪ ಮತ್ತು ಕ್ರಮವಾದ ಬೆಳವಣಿಗೆ ಕುರಿತು ನಿಕರವಾದ ಜ್ಞಾನ ಸಂಪಾದನೆಗೆ ಈಗ ಸಾಕಾದಷ್ಟು ಅವಕಾಶವಿಲ್ಲವಾಗಿದೆ. ಭಾಷಾಶಾಸ್ತ್ರದಲ್ಲಿ ಆಸಕ್ತರಾದ ವಿದ್ಯಾರ್ಥಿಗಳು ಏನನ್ನು ನೋಡಬೇಕು, ಹೇಗೆ ಮುಂದುವರಿಯಬೇಕು ಎಂಬುದನ್ನರಿಯದೆ ಬಹಳ ಭಾಷೆಯ ಸ್ವರೂಪದ ವಿಮರ್ಶಾಕಾರ್ಯ ಪರೀಕ್ಷಾ ಕಾರ್ಯ ಶಾಸ್ತ್ರೋಕ್ತವಾಗಿ ನಡೆಯಬೇಕಾಗಿದೆ.

 

ಪರಿಷತ್ತಿನ ಪುಸ್ತಕ ಭಂಡಾರ

ಭರತಖಂಡದ, ಪ್ರಮುಖ ಸರಸ್ವತೀ ಭಂಡಾರಗಳನ್ನೆಲ್ಲಾ ನೋಡಿ ಅವುಗಳಲ್ಲಿ ಎಲ್ಲಾದರೂ ಕನ್ನಡ ಗ್ರಂಥಗಳಿದ್ದರೆ ಅಥವಾ ಕನ್ನಡ ನಾಡಿನ ಸಂಸ್ಕೃತಿ ಇತಿಹಾಸ ಮೊದಲಾದವುಗಳಿಗೆ ಸಂಬಂಧಪಟ್ಟ ಯಾವುದಾದರೂ ಗ್ರಂಥವಿದ್ದರೆ ಅಂತಹ ಗ್ರಂಥಗಳ ಪ್ರತಿಗಳನ್ನು ಮಾಡಿಸಿ ಅವುಗಳನ್ನು ಪರಿಷತ್ತಿನಲ್ಲಿ ಭದ್ರಪಡಿಸಬೇಕಾಗಿದೆ. ಮೊದಲು ಈ ಗ್ರಂಥಸಂಗ್ರಹ ಮತ್ತು ಸಂರಕ್ಷಣೆ ಅಗತ್ಯವಾಗಿ ಆಗಬೇಕು. ಪ್ರಕಟಣೆ ಕಾರ್ಯವಂತೂ ಆಗಲೇಬೇಕು. ಭಾಷೆ, ಸಾಹಿತ್ಯ, ಸಂಸ್ಕೃತಿ, ಈ ಕ್ಷೇತ್ರಗಳಲ್ಲಿ ಪರಿಶೋಧನೆಗಳನ್ನು ನಡೆಸಬೇಕೆಂದು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಂತಹ ಗ್ರಂಥಸಂಗ್ರಹಸ್ಥಾನವು ಎಂತಹ ಕ್ಷೇತ್ರ ಎಂಬುದನ್ನು ವರ್ಣಿಸಬೇಕಾಗಿಲ್ಲ. ಪರಿಷತ್ತು ಅಂತಹ ಜ್ಞಾನತೀರ್ಥವೆನಿಸಬೇಕು.

 

ಪರಿಷತ್ತು-ಪಠ್ಯಗಳು

ಭಾಷೆಯಲ್ಲಿ ಐಕ್ಯತೆಯನ್ನು ಉಂಟುಮಾಡಬೇಕೆಂದು ಸಾಹಿತ್ಯ ಪರಿಷತ್ತು ಹುಟ್ಟಿದಂದಿನಿಂದ ಪ್ರಯತ್ನಗಳಾಗುತ್ತಿವೆ. ಇಂದಿನವರೆಗೆ ಈ ಕನ್ನಡ ಏಕೀಕರಣವಾಗಿಲ್ಲ ಏಕಾಗಿಲ್ಲವೆಂಬ ಪ್ರಶ್ನೆಯನ್ನೀಗ ಎತ್ತಬೇಕಾಗಿಲ್ಲ. ಈ ಕೆಲಸ ಸಾಧ್ಯವಾಗಬೇಕಾದರೆ ಪ್ರಾಥಮಿಕ ಶಾಲೆಗಳಿಂದ ಪ್ರಾರಂಭವಾಗಿ ಪ್ರೌಢವಿದ್ಯಾಪೀಠಗಳಿಂದ ಬಾಲಕ ಬಾಲಕಿಯರು ಹೊರಬೀಳುವವರೆಗೆ ಅವರ ಪಠ್ಯಪುಸ್ತಕಗಳು ಒಂದೇ ರೂಪದಿಂದ ಕೂಡಿರುವಂತಾಗಬೇಕು. ಪ್ರಮಾಣವಿಶಿಷ್ಟವಾದ-ಸ್ಟ್ಯಾಂಡ್‍ಡ್ರೈಸ್ಡ್- ಪಠ್ಯಪುಸ್ತಕಗಳ ನಿರ್ಮಾಣವಾಗಬೇಕು. ಆ ಪುಸ್ತಕಗಳಿಗೆ ನಾನಾ ಪ್ರಭುತ್ವಗಳ ಅಂಗೀಕಾರ ಮುದ್ರೆ ಬೀಳಬೇಕು. ಆಗ ಮಾತ್ರ ಭಾಷೆಯ ಏಕೀಕರಣ ಮಾರ್ಗದಲ್ಲಿ ಕಾಲಿಟ್ಟಂತಾಗುತ್ತದೆ. ಈ ಕಾರ್ಯಸಾಧನೆಯಲ್ಲಿ ಪರಿಷತ್ತಿನ ಕರ್ತವ್ಯ ಅಷ್ಟಿಷ್ಟೆಂದು ಹೇಳಲಾಗದು.

ವಯೋನುಪೂರ್ವ ಸಾಹಿತ್ಯ

ಪಾಶ್ಚಾತ್ಯ ದೇಶಗಳಲ್ಲಿ ನಾನಾ ಬಗೆಯ ಸಾಹಿತ್ಯವನ್ನು ಸೃಷ್ಟಿಸುತ್ತಾರೆ. ಈ ಕೆಲಸದಲ್ಲಿ ಅವರು ವಯೋನುಗುಣವಾಗಿ ಎಲ್ಲ ಗ್ರಂಥಗಳನ್ನೂ ಬರೆಸಿ ಕ್ರಮವಾಗಿ ಪ್ರಕಟಿಸುತ್ತಾ ಹೋಗುತ್ತಾರೆ. ಷೇಕ್ಸ್‍ಪಿಯರಿನ ಕೃತಿಗಳ ಮಾತನ್ನು ಎತ್ತಿಕೋಳೋಣ. ಮಗುವಿಗೆ ಷೇಕ್ಸ್‍ಪಿಯರಿನ ಪರಿಚಯ ಮಾಡಿಕೊಡಬೇಕೆಂಬುದು ಪ್ರಕಾಶಕರ ಆಶೆ. ಆದಕಾರಣ ಆರೇಳು ವರ್ಷದ ಕೂಸನ್ನು ಲಕ್ಷ್ಯದಲ್ಲಿಟ್ಟುಕೊಂಡು ಷೇಕ್ಸ್‍ಪಿಯರಿನ ಕೃತಿಗಳಲ್ಲಿ ಕೆಲವು ಚಿತ್ತಾಕರ್ಷಕ ಸಂದರ್ಭಗಳನ್ನು ಆರಿಸಿ ಒಳ್ಳೆಯ ಚಿತ್ರಗಾರನಿಂದ ಸಂದರ್ಭೋಚಿತ ಚಿತ್ರಗಳನ್ನು ಬರೆಸಿ, ಆ ಚಿತ್ರಗಳ ಕೆಳಗೆ ಒಂದೆರಡು ವಾಕ್ಯಗಳನ್ನು ಬರೆದು ಮುದ್ದಾಗಿ ಅಚ್ಚುಮಾಡಿ ಮಕ್ಕಳ ಕೈಯಲ್ಲಿಡುತ್ತಾರೆ. ಹತ್ತು ಹನ್ನೆರಡು ವಯಸ್ಸಿನ ಬಾಲಕ ಬಾಲಕಿಯರಿಗಾಗಿ ಇದೇ ವಸ್ತುವುಳ್ಳ ಸಾಹಿತ್ಯವನ್ನು ಮತ್ತಷ್ಟು ವಿಸ್ತಾರ ಮಾಡಿಕೊಡುತ್ತಾರೆ. ಮತ್ತು ಭಾಷೆಯ ಮಟ್ಟವನ್ನು ತಕ್ಕಮಟ್ಟಿಗೆ ಹೆಚ್ಚಿಸುತ್ತಾರೆ. ಹನ್ನೆರಡರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆಂದು ಮಹಾಮಹಾ ಗ್ರಂಥಗಳೆಂದು ಹೆಸರಿಟ್ಟು ಮೂಲಕ್ಕೆ ಲೇಶವೂ ಕುಂದುಬಾರದಂತೆ, ಸಿದ್ಧಗೊಳಿಸಿ ಪ್ರಕಟಿಸುವ ಸಂಪ್ರದಾಯವನ್ನು ರೂಢಿಗೆ ತಂದಿದ್ದಾರೆ. ಈ ಸಂಪ್ರದಾಯವನ್ನು ನಾವು ಅನುಸರಿಸಿ ಅದರ ಪೂರ್ಣಲಾಭವನ್ನು ನಮ್ಮವರಿಗೆ ಗಳಿಸಿ ಕೊಡಬೇಕು. ಒಬ್ಬ ಕಾಳಿದಾಸ, ಒಬ್ಬ ರವೀಂದ್ರನಾಥ ಠಾಕೂರ್, ಒಬ್ಬ ಪಂಪ, ಒಬ್ಬ ಬೇಂದ್ರೆ, ಒಬ್ಬ ಪುಟ್ಟಪ್ಪ, ಒಬ್ಬ ಮಾಸ್ತಿ, ಒಬ್ಬ ಶ್ರೀ, ಒಬ್ಬ ಪಂಜೆ, ಒಬ್ಬ ನಂದಳಿಕೆ, ಒಬ್ಬ ರೂಪಕಾರಿ ವೆಂಕಟಪ್ಪ, ವೈಣಿಕ ಶೇಷಣ್ಣ, ಗಾಯಕ ಕೃಷ್ಣಪ್ಪ ಇವರ ಪರಿಚಯವನ್ನು ಆರು ವರ್ಷದ ಕೂಸಿಗೆ, ಹತ್ತು ವರ್ಷದ ಮಗುವಿಗೆ, ಇಪ್ಪತ್ತು ವಯಸ್ಸಿನ ತರುಣ ತರುಣಿಯರಿಗೆ, ಪ್ರಾಪ್ತ ವಯಸ್ಕರಿಗೆ, ಪ್ರೌಢ ವಿದ್ಯಾರ್ಥಿಗಳಿಗೆ ಮತ್ತು ಜ್ಞಾನವೃದ್ಧರಿಗೆ ಇವರೆಲ್ಲರಿಗೂ ಬೇಕೆನಿಸುವಂತಹ ರೀತಿಯಲ್ಲಿ ಗ್ರಂಥಗಳನ್ನು ಬರೆಸಿ ಪ್ರಕಟಿಸುವ ಕೆಲಸವಾರಂಭವಾಗಬೇಕು. ಇಂತಹ ಕೆಲಸವನ್ನು ಪರಿಷತ್ತಿನಂತಹ ಸಂಸ್ಥೆಗಳು ಮತ್ತು ಸುವ್ಯವಸ್ಥಿತ ಪುಸ್ತಕ ವ್ಯಾಪಾರಿಗಳು ಮಾತ್ರ ಮಾಡಲು ಸಾಧ್ಯ. ಮನಸ್ಸು ಮಾಡಿದರೆ ಪ್ರಭುತ್ವದ ಶಿಕ್ಷಣಶಾಖೆಯವರೂ ಸಹ ಈ ಕೆಲಸವನ್ನು ಸಮಪರ್ಕವಾಗಿ ನೆರವೇರಿಸಲು ಸಾಧ್ಯ.

 

ಮಕ್ಕಳ ಸಾಹಿತ್ಯ ನಿರ್ಮಾಣ

 

ಜಪಾನರ ಕಾರ್ಯೋತ್ಸಾಹ ಮತ್ತು ಕಾರ್ಯ ವಿಧಾನಗಳು ನಮ್ಮನ್ನು ಪ್ರೇರೇಪಿಸಬೇಕು. ಕನ್ನಡ ನಾಡಿನಲ್ಲಿ ಇತ್ತೀಚೆಗೆ ಕೆಲವರು ಮಕ್ಕಳಿಗಾಗಿಯೇ ಪುಟ್ಟ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಬಾಲಸಾಹಿತ್ಯ ಮಂಡಲವು ನನ್ನ ನೆನಪಿಗೆ ಬರುತ್ತದೆ. ಸ್ವರ್ಗವಾಸಿ ಪಂಜೆ ಮಂಗೇಶರಾಯರು ಶಿಶುಸಾಹಿತ್ಯ ನಿರ್ಮಾಣವಾಗಬೇಕೆಂದು ವಿಶೇಷ ಶ್ರದ್ಧೋತ್ಸಾಹಗಳನ್ನು ತೋರಿಸುತ್ತಿದ್ದರು. ಧಾರವಾಡ ಸೀಮೆಯಲ್ಲೂ ಮೈಸೂರು ಸೀಮೆಯಲ್ಲೂ ತರುಣ ಲೇಖಕರನೇಕರು ಮಕ್ಕಳಿಗಾಗಿಯೇ ಪುಟ್ಟ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಶ್ರೀ ಜಿ.ಪಿ. ರಾಜರತ್ನಂ ಅವರು ಮಾಡಿರುವ ಕೆಲಸ ಅಭಿನಂದನೀಯವಾದುದು. ವಯೋನುಪೂರ್ವ ಸಾಹಿತ್ಯದಂತೆಯೇ ಶಿಶುಸಾಹಿತ್ಯ ನಿರ್ಮಾಣ ಮತ್ತು ಪ್ರಕಟನ ಕಾರ್ಯದಲ್ಲಿ ಪರಿಷತ್ತು, ನಾನಾ ಪ್ರಭುತ್ವಗಳು ಮುಂದೆ ಬಂದು ಒಂದು ಕಾರ್ಯವಿಧಾನವನ್ನು ಹಾಕಿಕೊಂಡು ನಾನಾ ಲೇಖಕರ ಸಹಕಾರವನ್ನು ಒದಗಿಸಿಕೊಂಡು ಶಿಶುಸಾಹಿತ್ಯ ಗ್ರಂಥಮಾಲೆಯನ್ನು ಪ್ರಕಟಿಸಬೇಕು. ಕನ್ನಡ ನಾಡಿನಲ್ಲಿ ಈ ವಾಙ್ಮಯದ ಕೊರತೆ ಅಸಾಧ್ಯವಾಗಿದೆ. ಇದನ್ನು ನಿವಾರಿಸುವುದರ ಕಡೆಗೆ ಪ್ರತಿಯೊಬ್ಬರೂ ಗಮನ ಕೊಡಬೇಕು.

 

ಸಂಶೋಧನೆ ಮತ್ತು ಪರಿಷತ್ತು

 

ಪರಿಷತ್ತಿನಲ್ಲಿ ಭಾಷಾಸಾಹಿತ್ಯ ಇತಿಹಾಸ ಸಂಸ್ಕೃತಿಗಳ ಕುರಿತು ಶಾಸ್ತ್ರೀಯವಾದ ಸಂಶೋಧನಾ ಕಾರ್ಯ ನಡೆಯುವಂತಾಗಬೇಕು. ಪರಿಷತ್ತಿನಂತೆಯೇ ಇತರ ಇಂತಹ ಸಂಸ್ಥೆಗಳ ಮೂಲಕವಾಗಿಯೂ ಈ ಕಾರ್ಯ ನಡೆಯಬೇಕು. ಕನ್ನಡ ನಾಡಿನಲ್ಲಿ ಈಗಾಗಲೇ ಸಾವಿರಾರು ಶಿಲಾಶಾಸನಗಳೂ, ತಾಮ್ರಶಾಸನಗಳೂ ಹೊರಕ್ಕೆ ಬಂದಿವೆ. ಭಾರತ ಮೈಸೂರು ಪ್ರಾಚಿನ ಲಿಪ್ಯನ್ವೇಷಣ ಶಾಖೆಗಳವರೂ ಅನೇಕ ಶಾಸನಗಳನ್ನು ಪ್ರಕಟಿಸಿದ್ದಾರೆ. ಎಪಿಗ್ರಾಫಿಯಾ ಕರ್ಣಾಟಕ ಎಂಬ ಗ್ರಂಥಮಾಲೆಯು ಪ್ರಕಟನವಾಗಿ ಹತ್ತಾರು ವರ್ಷಗಳಾದವು. ಅನೇಕರಿಗೆ ಅದರ ಹೆಸರೇ ಗೊತ್ತಿಲ್ಲ. ಅನೇಕ ಪಾಶ್ಚಾತ್ಯ ವಿದ್ವಾಂಸರು ಕನ್ನಡ ನಾಡಿನ ಕನ್ನಡ ಶಾಸನಗಳನ್ನು ಇಂಡಿಯನ್ ಆಂಟಿಕ್ವೇರಿ ಎಫಿಗ್ರಾಫಿಯಾ ಇಂಡಿಕ ಮೊದಲಾದ ಪ್ರೌಢ ಮಾಸಪತ್ರಿಕೆಗಳಲ್ಲಿ ಮತ್ತು ತ್ರೈಮಾಸಿಕಗಳಲ್ಲಿ ಪ್ರಕಾಶಗೊಳಿಸಿದ್ದಾರೆ. ಈಗಲೂ ಪ್ರಕಟಿಸುತ್ತಿದ್ದಾರೆ; ಕನ್ನಡ ನಾಡಿನ ವಾಸ್ತು ಶಿಲ್ಪ, ರೂಪಕರ್ಮ ಕುರಿತ ಅವಶೇಷಗಳು ರಾಶಿರಾಶಿಯಾಗಿ ಬಿದ್ದಿವೆ.

“ಇವೆಲ್ಲವನ್ನೂ ಕ್ರೋಡೀಕರಿಸಿ ದೇಶಭಾಷಾ ಚರಿತ್ರಗಳನ್ನೇ ಮುಖ್ಯೋದ್ದೇಶಗಳನ್ನಾಗಿ ಮುಂದಿಟ್ಟುಕೊಂಡು ಜಾಣತನದಿಂದಲೂ, ವಾಕ್ಪ್ರಭವದಿಂದಲೂ ಚಾಚೂ ಬಿಡದೆ ಬರೆಯಿಸುವ ಭಾರವು ಮುಂದಾದರೂ ಸಾಹಿತ್ಯ ಪರಿಷತ್ತಿನದಾಗಿಯೇ ಇರಬೇಕಾಗುತ್ತದೆ.” ಹೀಗೆಂದು ಸಾಹಿತ್ಯ ಸಮ್ಮೇಳನದ ಹತ್ತನೆಯ ೧೯೨೪ ಅಧಿವೇಶನಾಧ್ಯಕ್ಷತೆ ವಹಿಸಿದ್ದ ಕೈಲಾಸವಾಸಿ ರಾವ್ ಬಹದ್ದೂರ್ ಹೊಸಕೋಟೆ ಕೃಷ್ಣಶಾಸ್ತ್ರಿಗಳವರು ಅಪ್ಪಣೆ ಕೊಡಿಸಿದರು. ಅದೇ ಸಂದರ್ಭದಲ್ಲೇ ಅವರು ಮೈಸೂರು ಹೊರಗಿನ ಕರ್ಣಾಟಕ ಶಾಸನಶಾಖೆಯಲ್ಲಿ ಮಾಡಿರುವ ಕೆಲಸವನ್ನು ಸಂಗ್ರಹವಾಗಿ ನಿರ್ದೇಶಿಸಿದ್ದಾರೆ. ಹೆಚ್ಚು ವಿವರಗಳಿಗೆ ಈಗ ಹೋಗಬೇಕಾಗಿಲ್ಲ.

 

ಸಂಶೋಧನೆಗೆ ದತ್ತಿನಿಧಿ ವ್ಯವಸ್ಥೆ

 

ಕನ್ನಡ ನಾಡಿನ ಚರಿತ್ರೆ ಸಂಸ್ಕೃತಿ ವಾಸ್ತುಶಿಲ್ಪ ಇವುಗಳಿಗೆ ಸಂಬಂಧಪಟ್ಟಂತೆ ಸಂಶೋಧನ ಅಧ್ಯಯನ ಕಾರ್ಯ, ಸುವ್ಯವಸ್ಥೆಯಿಂದ ನಡೆಯಬೇಕು. ಶಿಲಾಶಾಸನಗಳ ಅನ್ವೇಷಣ ಮತ್ತು ಅಧ್ಯಯನವಾಗಬೇಕು. ಇದಕ್ಕಾಗಿ ಪರಿಷತ್ತಿನಲ್ಲಿ ಪ್ರತ್ಯೇಕವಾಗಿ ಒಂದು ಸಂಶೋಧನ  ಶಾಖೆಯು ಏರ್ಪಾಟಾಗಬೇಕು. ಈ ಶಾಖೆಯಲ್ಲಿ ಕೆಲಸವನ್ನು ನಡೆಸಲು ಮತ್ತು ಈ ಕೆಲಸವನ್ನು ಕಲಿಸಲು ವಿದ್ಯಾನಿಪುಣರ ಸಹಾಯ ಪಡೆಯಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು. ಅವರಿಗೆ ವೇತನಗಳನ್ನು ಕೊಡುವುದಕ್ಕೆ ಪುದುವಟ್ಟುಗಳನ್ನಿಡಿಸುವ ಅಥವಾ ದತ್ತಿಗಳನ್ನು ಬಿಡಿಸುವ ಕೆಲಸವನ್ನು ಕೈಗೊಳ್ಳಬೇಕು. ಕನ್ನಡನಾಡಿನಲ್ಲಿ ಭೂಶೋಧನ ಕಾರ್ಯವು ಸಮರ್ಪಕವಾಗಿ ನಡೆದಿಲ್ಲ. ಚಿತ್ರದುರ್ಗದ ಚಂದವಳ್ಳಿ ಕೆಲಸವೇ ಅರೆಬರೆಯಾಗಿ ಸಾಗಿದೆ.

ನಾಡಿನ ದೌರ್ಭಾಗ್ಯದಿಂದ ಪ್ರಭುತ್ವಗಳ ಔದಾಸೀನ್ಯದಿಂದ ನಾಡಿನ ಈ ಸಂಪತ್ತು ಕ್ಷಣಕ್ಷಣಕ್ಕೂ ನಾಶವಾಗುತ್ತಿದೆ. ಇನ್ನು ಮೇಲೂ ನಾವು ಉದಾಸೀನವಾಗಿ ಕುಳಿತುಕೊಳ್ಳಲಾಗದು. ಪರಿಷತ್ತು ಮತ್ತು ಅದರ ಅಂಗಸಂಸ್ಥೆಗಳು ನಾನಾ ಪ್ರಾಚೀನ ಲಿಪ್ಯನ್ವೇಷಣ ಶಾಖೆಗಳೊಂದಿಗೂ ಸಂಶೋಧನ ಸಂಸ್ಥೆಗಳೊಂದಿಗೂ ಸಹಕಾರಮಾಡಿ ಇವುಗಳ ಸಂರಕ್ಷಣ ಕಾರ್ಯದಲ್ಲಿ ಉದ್ಯುಕ್ತವಾಗಬೇಕು.

ಈ ಸಂದರ್ಭದಲ್ಲಿ “ಮ್ಯೂಸಿಯಂ”ಗಳ ವ್ಯವಸ್ಥೆಯನ್ನೂ ಸಹ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪ್ರ್ರಾಚೀನ ಶಾಸನ, ನಾಣ್ಯ, ಚಿತ್ರಕರ್ಮ, ವಾಸ್ತುಶಿಲ್ಪ, ಗ್ರಂಥ ಮತ್ತು ಸಾಮಾನ್ಯ ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ವಸ್ತುಗಳು ನಾಡಿನಲ್ಲೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದು, ಅಜ್ಞಾನದಿಂದ ಜನರು ಅವುಗಳನ್ನು ಕೆಡಿಸುತ್ತಿದ್ದಾರೆ, ಇವುಗಳನ್ನೆಲ್ಲಾ ನಿಲ್ಲಿಸಬೇಕು. ಅಲ್ಲದೆ ಜನರಿಗೆ ಇವುಗಳಲ್ಲಿ ಅಭಿಮಾನ ಹುಟ್ಟಿಸಬೇಕು. ಮೇಲಿಂದ ಮೇಲೆ ಅವುಗಳನ್ನು ನೋಡಲು ಜನರಿಗೆ ಅವಕಾಶಗಳನ್ನು ಕಲ್ಪಿಸಬೇಕು. ಇವುಗಳಿಂದಲೇ ನಗರಗಳಲ್ಲಿ ಮ್ಯೂಸಿಯಂಗಳನ್ನು ಸ್ಥಾಪಿಸಿರುವುದು. ಈ ಮ್ಯೂಸಿಯಂಗಳು ಭರತಖಂಡದ ನಾನಾ ನಗರಗಳಲ್ಲಿವೆ. ಅವುಗಳಲ್ಲೊಂದೊಂದೂ ಸಂಶೋಧನ  ಕಾರ್ಯದ ಒಂದೊಂದು ವಿಶಿಷ್ಟ ಕ್ಷೇತ್ರಗಳೆನಿಸಿವೆ. ಅಂತಹ ಮ್ಯೂಸಿಯಂ ಒಂದು ಬೆಂಗಳೂರಿನಲ್ಲಿದೆ. ಬೆಂಗಳೂರಿನಂತಹ ಕರ್ನಾಟಕದ ಮಹಾನಗರಕ್ಕೆ ಒಂದು ಮ್ಯೂಸಿಯಂ ಸಾಲದು. ಈಗಿರುವಂತೆ ಆ ಮ್ಯೂಸಿಯಂ ವ್ಯವಸ್ಥೆಯೂ ಸಹ ಸಮರ್ಪಕವಾಗಿಲ್ಲ. ಸಂಶೋಧನೆಗೆ ಯಾವ ಏರ್ಪಾಡನ್ನೂ ಮಾಡಿಲ್ಲ. ಸಾಂಸ್ಕೃತಿಕ ವಸ್ತುಸಂಗ್ರಹ ಕಾರ್ಯವಂತೂ  ಇಲ್ಲವೆ ಇಲ್ಲ. ಇನ್ನು ಮೇಲಾದರೂ ಈ ಕಾರ್ಯದ ಕಡೆಗೆ ಮೈಸೂರು ಸರಕಾರವು ಲಕ್ಷ್ಯ ಕೊಡಬೇಕೆಂದು ನಾನು ಸೂಚನೆ ಮಾಡುತ್ತಿದ್ದೇನೆ. ಅಷ್ಟು ಮಾತ್ರವಲ್ಲದೆ ಕನ್ನಡ ನಾಡಿನ ಬೇರೆ ಬೇರೆ ಕಡೆಗಳಲ್ಲಿ ಇಂತಹ ಸಾಂಸ್ಕೃತಿಕ ವಿಶಿಷ್ಟವೆನಿಸಿದ ಮತ್ತು ಸಂಶೋಧನ ಕಾರ್ಯೋತ್ಸುಕರಾದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಮ್ಯೂಸಿಯಂಗಳನ್ನು ಏರ್ಪಡಿಸುವ ಪ್ರಯತ್ನವಾಗಬೇಕು. ಪರಿಷತ್ತಿನಲ್ಲೂ ಸಹ ಅಂತಹ ಒಂದು ಆದರ್ಶದ ಮ್ಯೂಸಿಯಂ ಏರ್ಪಾಟಾಗುವುದಾದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ. ಹಾಗೆಯೇ ಪರಿಷತ್ತಿನಲ್ಲಿ ಒಂದು ಚಿತ್ರಕೂಟ (ಪಿಕ್ಚರ್ ಗ್ಯಾಲರಿ)ವೂ ಏರ್ಪಾಟಾಗಬೇಕೆಂಬ ಆಶೆಯ ನನ್ನಲ್ಲಿ ಅಪಾರವಾಗಿದೆ. ಈ ಚಿತ್ರಕೂಟದಲ್ಲಿ ಪ್ರಾಚೀನ ಮತ್ತು ಅರ್ವಾಚೀನ ಕಲಾವಿದರ ಕೆಲಸ ಅಲ್ಲಿ ಕಂಡುಬರುವಂತಾಗಬೇಕು.

 

ರೆಫರೆನ್ಸ್ ಗ್ರಂಥ ನಿರ್ಮಾಣ

ಪಾಶ್ಚಾತ್ಯ ದೇಶಗಳಲ್ಲಿ ರೆಫರೆನ್ಸ್ ಬುಕ್ಸ್ ಎಂಬ ಸಾಹಿತ್ಯರಾಶಿಗೆ ವಿಶೇಷ ಬೆಲೆಯುಂಟು. ಪಂಡಿತರೂ ನಿಪುಣರೂ ಇಂತಹ ಗ್ರಂಥಗಳ ರಚನೆಯಲ್ಲಿ ವಿಶೇಷ ಸಾಹಸ ತೋರಿಸುತ್ತಾರೆ. ಪ್ರಭುತ್ವಗಳು, ಪಂಡಿತ ಸಂಸ್ಥೆಗಳು, ಈ ಬಗೆಯ ಗ್ರಂಥರಚನೆಗೂ ಪ್ರಕಟನೆಗೂ ಬೇಕಾದ ಜನಧನ ಸಹಾಯವನ್ನು ಒದಗಿಸಿಕೊಂಡು ಆಶ್ಚರ್ಯಕರವಾದ ಪ್ರಮಾಣ ನಿದರ್ಶನ ಗ್ರಂಥರಾಶಿಯ ನಿರ್ಮಾಣವಾಗಬೇಕು. ಪರಿಷತ್ತು ಮಾಡಬೇಕಾದ ಅನೇಕ ಕೆಲಸಗಳಲ್ಲಿ ಇದೂ ಒಂದು.

ಸಹಾಯಕ ಸೀಮಾನಿಶ್ಚಯ ವಿಚಾರ ಸಮಿತಿ

 

ಕರ್ನಾಟಕದ ಸುತ್ತ ಮೇರೆಗಲ್ಲುಗಳನ್ನು ಗುರುತು ಮಾಡಿ ಆಯಾ ಸ್ಥಳಗಳಲ್ಲಿ ಉಭಯಭಾಷಾವರ್ಯರಿಗೂ ಸಮ್ಮತವಾಗುವಂತೆ ನಿಲ್ಲಿಸಬೇಕು. ಡೊಮಿನಿಯನ್ನರ ಸರ್ಕಾರದವರು ಸೀಮಾ ನಿಶ್ಚಯ ಸಮಿತಿಯನ್ನು ಕೂಡಲೆ ನಿರ್ಮಿಸಲಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ ನಾಲ್ಕುಕಡೆಗಳಲ್ಲಿ ಕರ್ನಾಟಕ ಸೀಮಾರೇಖೆ ನಿಶ್ಚಯವಾಗಬೇಕು. ಕನ್ನಡನಾಡಿನವರೆಲ್ಲ ಶಾಸನಬದ್ಧವಾದ ಚೌಂಚರಿ ಕಮೀಷನ್ ಮುಂದೆ ಅಂಕಿ, ಅಂಶ, ನಕ್ಷೆಗಳನ್ನಿಟ್ಟು ಅದಕ್ಕೆ ಕರ್ನಾಟಕವಾದದ ನ್ಯಾಯವನ್ನು ಮನಗಾಣಿಸಬೇಕಾಗಿದೆ. ಈ ಭಾಗದಲ್ಲಿ ಏಕೀಕರಣ ಮಹಾಸಭೆ ಮಾಡುವ ಕೆಲಸ ಅದು ಮಾಡಿಯೇ ಮಾಡುತ್ತದೆ, ಈ ಪರಿಷತ್ತು ಸಹ ಒಂದು ಸಹಾಯಕ ಸೀಮಾ ನಿಶ್ಚಯವಿಚಾರ ಸಮಿತಿಯೊಂದನ್ನು ನೇಮಕಮಾಡಿ ಆ ಮೂಲಕ ಪೂರ್ವಭಾವಿ ಕೆಲಸಗಳನ್ನೆಲ್ಲ ಪೂರೈಸಬೇಕಾಗಿದೆ.

Tag: Thirumale Thathacharya Shrama, Thi.tha. Sharma, Kannada Sahitya Sammelana 31

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)