ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ
ಮೇ ೧೯೫0

ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ

೩೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಂ.ಆರ್. ಶ್ರೀನಿವಾಸಮೂರ್ತಿ

ಕನ್ನಡ ಶ್ರೀರತ್ನತ್ರಯರಲ್ಲಿ ಒಬ್ಬರಾದ (ಬಿಎಂಶ್ರೀ, ಎಂ ಆರ್‍ ಶ್ರೀ, ತೀನಂಶ್ರೀ) ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹಾಸನದಲ್ಲಿ ರಾಮಚಂದ್ರಯ್ಯ ಸಾವಿತ್ರಮ್ಮ ದಂಪತಿಗಳಿಗೆ ೨೮-೮-೧೮೯೨ರಲ್ಲಿ  ಜನಿಸಿದರು. ಮೈಸೂರು, ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು (೧೯೧೫) ಪಡೆದರು.

ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೇ ಸೇರಿ ಹಂತಹಂತವಾಗಿ ಮೇಲಧಿಕಾರ ಸ್ವೀಕರಿಸುತ್ತಾ ಡಿಪಿಐ ಕಚೇರಿಯಲ್ಲಿ, ನಾರ್ಮಲ್ ಸ್ಕೂಲಿನಲ್ಲಿ, ರೇಂಜ್ ಹಾಗೂ ಶಿಕ್ಷಣಾಧಿಕಾರಿಗಳಾಗಿ ೧೯೪೭ರಲ್ಲಿ ನಿವೃತ್ತರಾದರು.

ಪರಿಷತ್ತಿಗೆ ವಿಶೇಷ ಸೇವೆ ಸಲ್ಲಿಸಿದವರಲ್ಲಿ ಎಂ ಆರ್‍ ಶ್ರೀ ಒಬ್ಬರು. ೧೯೨0ರಿಂದ ೨0 ವರ್ಷಗಳವರೆಗೆ ಪರಿಷತ್ತಿನ ಕಾರ್ಯಸಮಿತಿ ಸದಸ್ಯರು, ೧೯೩೪ರಲ್ಲಿ ವಿಶೇಷ ಸಾಹಿತ್ಯೋತ್ಸವದ ಕಾರ್ಯದರ್ಶಿಗಳೂ ಆಗಿದ್ದು ೧೯೫0-೫೩ರವರೆಗೆ ಪರಿಷತ್ತಿನ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧ ಕರ್ನಾಟಕ, ಕನ್ನಡ ನುಡಿ, ಮೈಸೂರು ಸ್ಕೌಟ್ ಸಂಘದ ಪತ್ರಿಕೆಗಳಿಗೆ ಸಂಪಾದಕರಾಗಿ ಒಳ್ಳೆಯ ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ – ಕನ್ನಡ ನಿಘಂಟಿಗೆ ಅಮೋಘ ಸೇವೆ ಸಲ್ಲಿಸಿದರು. (೧೯೨೯-೧೯೪೩).

ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಪರಿಷತ್ತು ನೀಡಿ ಪುರಸ್ಕರಿಸಿತು.

ಬಾದಾಮಿ ಶಿವಯೋಗ ಮಂದಿರವು ೧೯೪0ರಲ್ಲಿ ವಚನವಾಙ್ಮಯ ವಿಶಾರದ ಎಂಬ ಪ್ರಶಸ್ತಿಯನ್ನು ಇವರಿಗೆ ನೀಡಿತು.

ಶ್ರೇಷ್ಠ ಶಿಕ್ಷಕರಾಗಿ, ಸಂಶೋಧಕರಾಗಿ ಸಾಹಿತಿಗಳಾಗಿ ಎಂ ಆರ್ ಶ್ರೀ ರಚಿಸಿದ ಕೆಲವು ಮುಖ್ಯ ಕೃತಿಗಳು ಹೀಗಿವೆ:

ಭಕ್ತಿಭಂಡಾರಿ ಬಸವಣ್ಣನವರು, ವಚನಧರ್ಮಸಾರ, ಪ್ರಭುಲಿಂಗಲೀಲೆಯ ಸಂಗ್ರಹ, ಕವಿಯ ಸೋಲು (ಕವನ ಸಂಗ್ರಹ), ನಾಗರಿಕ (ನಾಟಕ), ಧರ್ಮದೂತ (ನಾಟಕ), ಆಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ, ಸಾವಿತ್ರಿ, ರಂಗಣ್ಣನ ಕನಸಿನ ದಿನಗಳು.

ದಕ್ಷ ಆಡಳಿತಗಾರರೂ, ವಿದ್ವಾಂಸರೂ ಆಗಿದ್ದ ಎಂ. ಆರ್. ಶ್ರೀ. ಅವರು ಬೆಂಗಳೂರಿನಲ್ಲಿ ೧೬-೯-೧೯೫೩ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೩

ಅಧ್ಯಕ್ಷರು, ಎಂ.ಆರ್. ಶ್ರೀನಿವಾಸಮೂರ್ತಿ

ದಿನಾಂಕ ೨೪, ೨೫, ೨೬ ಮೇ ೧೯೫0

ಸ್ಥಳ : ಸೊಲ್ಲಾಪುರ

ಪರಿಷತ್ತಿನ ಸಾಧನೆ

ಕನ್ನಡ ಸಾಹಿತ್ಯ ಪರಿಷತ್ತು ಮುವ್ವತ್ತುಮೂರು ವರುಷಗಳಿಂದ ಕನ್ನಡಿಗರಲ್ಲಿ ಒಕ್ಕೂಟವನ್ನು ಬೆಳಸುವುದಕ್ಕಾಗಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಶ್ರಮಿಸಿದೆ. ಆಡಳಿತ ದೃಷ್ಟಿಯಿಂದ ಒಕ್ಕೂಟವಾಗದಿದ್ದರೂ ಸೌಹಾರ್ದವನ್ನೂ ಸೌಭ್ರಾತ್ರವನ್ನೂ ಬೆಳಸಿ ಕುಟುಂಬದ ಒಕ್ಕೂಟವನ್ನು ಸಾಧಿಸಿದೆ. ಕನ್ನಡ ಸಾಹಿತ್ಯದ ಹಳಮೆಯನ್ನೂ ಹಿರಿಮೆಯನ್ನೂ ಉದಾಸೀನರಾಗಿದ್ದ ಕನ್ನಡಿಗರಿಗೆ ಪರಿಚಯ ಮಾಡಿಸಿ ಸಾಹಿತ್ಯ ಪ್ರೇಮವನ್ನು ಅವರಲ್ಲಿ ತುಂಬಿದೆ. ಕನ್ನಡ ನಾಡಿನ ಮುಖ್ಯಮುಖ್ಯ ಪಟ್ಟಣಗಳಲ್ಲಿ-ಅವು ಯಾರ ಆಡಳಿತಕ್ಕೆ ಒಳಪಟ್ಟಿದ್ದರೂ-ಕನ್ನಡಿಗರ ನೆಲೆವೀಡೆಂದು ಭಾವಿಸಿ ಸಮ್ಮೇಳನಗಳನ್ನು ನಡೆಸಿ ತನ್ನ ಧ್ವಜವನ್ನು ಸ್ಥಾಪಿಸಿದೆ. ಈ ಪಟ್ಟಣಗಳ ಸ್ಥಾನಗಳನ್ನು ತಾವು ಗಮನಿಸಿದರೆ ಹೆಚ್ಚು ಕಡಮೆಯಾಗಿ ಕನ್ನಡ ನಾಡಿನ-ಇಂದಿನ ಕನ್ನಡ ನಾಡಿನ-ಸೀಮಾರೇಖೆ ಕಣ್ಣಮುಂದೆ ನಿಲ್ಲದೆ ಹೋಗುವುದಿಲ್ಲ. `ಕಾವೇರಿಯಿಂದ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ನೃಪತುಂಗನ ಭೌಗೋಳಿಕ ಸೂತ್ರ ಈಗ ಸಿದ್ಧಿಸದೇ ಹೋದರೂ ಕೃಷ್ಣಾನದಿಯನ್ನು ದಾಟಿ ಗೋದಾವರಿಯ ಹತ್ತಿರದಲ್ಲಿ ನಾವು ನಿಂತಿರುವುದೇ ಒಂದು ಸೌಭಾಗ್ಯ! ಇಷ್ಟೇ ಅಲ್ಲದೆ ಬೊಂಬಾಯಿ, ಹೈದರಾಬಾದ್ ಮತ್ತು ಮದ್ರಾಸ್ ಎಂಬ ಮಿಶ್ರ ಜನತೆಗಳಿರುವ ಪಟ್ಟಣಗಳಲ್ಲಿ ಕನ್ನಡಿಗರ ಸಂಖ್ಯೆಯು ಅಲಕ್ಷ್ಯ ಮಾಡತಕ್ಕದ್ದಲ್ಲವೆಂದೂ ಅಲ್ಲಿಯೂ ಸಮ್ಮೇಳನ ನಡೆಸುವ ಹಕ್ಕು ನಮಗಿರುವುದೆಂದೂ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದೇವೆ.

ಕನ್ನಡವನ್ನು ಮಾತನಾಡುವವರು, ಕನ್ನಡದ ಅಭಿಮಾನಿಗಳು, ಕನ್ನಡದ ಸೇವೆ ಮಾಡುವವರು-ಎಲ್ಲರೂ ಕನ್ನಡಿಗರೇ; ಅವರು ಎಲ್ಲಿದ್ದರೂ ಅದು ಕನ್ನಡ ನಾಡೇ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಹೀಗೆ ಪರಿಷತ್ತು ಕನ್ನಡಿಗರ ಮತ್ತು ಕನ್ನಡ ಭಾಷೆಯ ಅಭ್ಯುದಯಕ್ಕಾಗಿ ಶ್ರಮಿಸುತ್ತ ಬಂದಿದೆ; ನ್ಯಾಯಕ್ಕಾಗಿ ಹಲವು ಸರ್ಕಾರಗಳೊಡನೆ ಹೋರಾಡಿಯೂ ಇದೆ.

ಪರಿಷತ್ತಿನ ಬಗ್ಗೆ ಔದಾಸೀನ್ಯ

ಹಿಂದೆ ಮದರಾಸ್, ಬೊಂಬಾಯಿ, ಹೈದರಾಬಾದಿನ ಸರ್ಕಾರಗಳೂ, ಜಮಖಂಡಿ, ಸಾಂಗ್ಲಿ ಮೊದಲಾದ ಸಣ್ಣಪುಟ್ಟ ಸಂಸ್ಥಾನಗಳ ಸರ್ಕಾರಗಳೂ ಪರಿಷತ್ತಿನ ವಿಚಾರದಲ್ಲಿ ಮತ್ತು ಕನ್ನಡಿಗರ ವಿಚಾರದಲ್ಲಿ ತೋರಿಸಿದ ಅಕ್ಷಮ್ಯವಾದ ಔದಾಸೀನ್ಯ ಮಾತ್ರವಲ್ಲ, ಪ್ರತ್ಯಕ್ಷ ವಿರೋಧವನ್ನು ನೆನೆಸಿಕೊಂಡರೆ ತಾಳ್ಮೆಯಿಂದಿರುವುದು ಕಷ್ಟ. ಪರಿಷತ್ತಿನ ಕಚೇರಿಯ ನಿಕಟ ಸಂಬಂಧವನ್ನು ಹಲವು ವರ್ಷಗಳಿಂದ ಪಡೆದು ಈ ಪತ್ರ ವ್ಯವಹಾರಗಳನ್ನೆಲ್ಲ ತಿಳಿದವನಾಗಿ ಈ ಮಾತನ್ನು ತಮಗೆ ಹೇಳುತ್ತಿದ್ದೇನೆ. ಆ ಪತ್ರವ್ಯವಹಾರಗಳಲ್ಲಿ ಬಹುಭಾಗ ಶ್ರೀ ಡಿ.ವಿ. ಗುಂಡಪ್ಪನವರು  ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ನಡೆದದ್ದು ಎಂಬುದನ್ನು ತಮ್ಮೆಲ್ಲರ ಸ್ಮರಣೆಗೆ ತರಲು ಬಯಸುತ್ತೇನೆ. ನಾವು ಈಗ ಬಹುಮಟ್ಟಿಗೆ ಎಲ್ಲ ತೊಡಕುಗಳನ್ನು ದಾಟಿಕೊಂಡು ಒಂದಾಗುವ ಸಮುಹೂರ್ತದಲ್ಲಿದ್ದೇವೆ. ಸ್ವಲ್ಪ ತಡವಾದರೂ ಕರ್ಣಾಟಕ ಪ್ರಾಂತ ಬಡವಾಗುವುದಿಲ್ಲ.

ಪರಸ್ಪರ ಸಾಹಿತ್ಯ ವಿನಿಮಯ ಆಗಲಿ

ಕನ್ನಡ ನಾಡು ಪ್ರತಿವರ್ಷವೂ ಆಂಧ್ರ ಪ್ರಾಂತ, ತಮಿಳುನಾಡು, ಮಹಾರಾಷ್ಟ್ರ- ಮೊದಲಾದ ಪ್ರಾಂತಗಳ ಪಟ್ಟಣಗಳಿಗೆ ನಮ್ಮ ಸಾಹಿತಿಗಳನ್ನೂ ವಿದ್ವಜ್ಜರನ್ನೂ ಸಾಹಿತ್ಯ ನಿಯೋಗಿಗಳನ್ನಾಗಿ ಕಳಿಸಿಕೊಟ್ಟು ಆಯಾ ಪ್ರಾಂತದವರಿಗೆ ಆಯಾ ಪ್ರಾಂತ ಭಾಷೆಯಲ್ಲಿಯೇ ನಮ್ಮ ಸಾಹಿತ್ಯದ ವಿಷಯದಲ್ಲಿ ಭಾಷಣಗಳನ್ನೇರ್ಪಡಿಸಬೇಕು. ಹಾಗೆಯೇ ನೆರೆಯ ಪ್ರಾಂತಗಳಿಂದಲೂ ನಿಯೋಗಗಳನ್ನು ಕನ್ನಡನಾಡಿಗೆ ಬರಮಾಡಿಕೊಳ್ಳಬೇಕು. ಈ ಕೆಲಸವನ್ನು ನಮ್ಮ ವಿಶ್ವವಿದ್ಯಾನಿಲಯಗಳೂ ಕನ್ನಡ ಸಾಹಿತ್ಯ ಪರಿಷತ್ತೂ ಕರ್ನಾಟಕ ವಿದ್ಯಾವರ್ಧಕ ಸಂಘವೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಒಂದು ಗೊತ್ತಾದ ಕಾರ್ಯಕ್ರಮದಂತೆ ನೆರೆವೇರಿಸುವುದು ಮೇಲು.

ಪರಿಷತ್ತು ಮತ್ತು ವಿದೇಶಿ ಕರ್ನಾಟಕ ಸಂಘಗಳು

ಈ ಸಂದರ್ಭದಲ್ಲಿ ಅನ್ಯಪ್ರಾಂತಗಳಲ್ಲಿರುವ ಕರ್ಣಾಟಕ ಸಂಘಗಳ ಪಾತ್ರವನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕಾಗಿದೆ. ದೆಹಲಿ, ಕಾಶಿ, ಕಲ್ಕತ್ತ ಮೊದಲಾದ ಮುಖ್ಯ ಪಟ್ಟಣಗಳಲ್ಲಿಯೂ ಈ ಸಂಘಗಳು ಸ್ಥಾಪಿತವಾಗಿರುವುದು ಸಂತೋಷ. ಹೀಗೆಯೇ ಪ್ರಪಂಚದ ಮುಖ್ಯ ಪಟ್ಟಣಗಳಾದ ಲಂಡನ್, ನ್ಯೂಯಾರ್ಕ್, ಪ್ಯಾರಿಸ್, ಬರ್ಲಿನ್, ಮಾಸ್ಕೋ ಮೊದಲಾದವುಗಳಲ್ಲಿಯೂ ಕರ್ಣಾಟಕ ಸಂಘಗಳು ಸ್ಥಾಪಿತವಾಗುವ ಸುಯೋಗ ಕನ್ನಡಕ್ಕೆ ದೊರೆಯಲೆಂದು ಹಾರೈಸುತ್ತೇನೆ. ಆದರೆ ಕರ್ಣಾಟಕ ಸಂಘಗಳು ಈಗ ಇರುವಂತೆ ಅಲ್ಲಿಯ ಕನ್ನಡಿಗರನ್ನು ಒಟ್ಟುಗೂಡಿಸುವುದಕ್ಕೆ ಮಾತ್ರ, ಅವರ ಭಾಷಾಜ್ಞಾನವನ್ನು ಮತ್ತು ಭಾಷಾ ಪ್ರೇಮವನ್ನು ಜೀವಂತವಾಗಿಡುವುದಕ್ಕೆ ಮಾತ್ರ ಉಪಯೋಗವಾಗುತ್ತಿದ್ದರೆ ನನಗೆ ತೃಪ್ತಿಯಿಲ್ಲ. ಅವು ಕನ್ನಡಿಗರ ಸಾಹಿತ್ಯ ಸಂಸ್ಕೃತಿಗಳ ಪ್ರಚಾರ ಕೇಂದ್ರಗಳಾಗಿ ಪರಿವರ್ತನೆ ಹೊಂದಬೇಕೆಂಬುದು ನನ್ನ ಉತ್ಕಟೇಚ್ಛೆ. ಆ ಪಟ್ಟಣಗಳಲ್ಲಿ ನೆಲೆಸಿರುವ ಕನ್ನಡಿಗರು ಆಯಾ ಪ್ರಾಂತ ಭಾಷೆಗಳನ್ನು ಚೆನ್ನಾಗಿ ಕಲಿಯಬೇಕು. ಆಯಾ ಪ್ರಾಂತ ಸಾಹಿತ್ಯ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಮಗೆ ತಿಳಿಸಬೇಕು; ಕನ್ನಡ ಭಾಷೆಯನ್ನು ಅಲ್ಲಿಯ ಜನಗಳಿಗೆ ಕಲಿಸಿ ಕನ್ನಡ ಗ್ರಂಥಗಳನ್ನು ಅವರು ಓದುವಂತೆ ಮಾಡಬೇಕು.

ಎರಡನೆಯದಾಗಿ, ಆ ಸಂಘಗಳಿಗೆ ಆಯಾ ಪ್ರಾಂತದ ಜನರು ಸದಸ್ಯರಾಗುವಂತೆಯೂ ಪ್ರೋತ್ಸಾಹಿಸಬೇಕು; ಉಭಯ ಸಾಹಿತ್ಯಗಳ ಮೇಲೆ ಉಭಯ ಭಾಷೆಗಳಲ್ಲಿ ಉಪನ್ಯಾಸಗಳಾಗುವಂತೆ ಏರ್ಪಾಡು ಮಾಡಬೇಕು; ದ್ವಿಭಾಷೆಗಳಲ್ಲಿ-ಕನ್ನಡ ಮತ್ತು ಆ ಪ್ರಾಂತಭಾಷೆಗಳಲ್ಲಿ-ಲೇಖನಗಳುಳ್ಳ ಮಾಸಪತ್ರಿಕೆಗಳನ್ನು ಪ್ರಕಟಿಸಬೇಕು. ಇಂತಹ ಸಾಹಿತ್ಯ ಕಾರ್ಯಗಳಲ್ಲಿ ಈ ಸಂಘಗಳು ನಿರತವಾದರೆ ಮತ್ತು ಕೇಂದ್ರ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ನಿಕಟ ಸಂಬಂಧವನ್ನು ಬೆಳಸಿಕೊಂಡು ಬಂದರೆ ಕನ್ನಡಿಗರ ಪ್ರಭಾವ ಚೆನ್ನಾಗಿ ಹರಡುತ್ತದೆ.

ಪರಿಷತ್ತು ಮತ್ತು ಸ್ವದೇಶಿ ಕರ್ನಾಟಕ ಸಂಘಗಳು

ಕರ್ಣಾಟಕ ಸಂಘಗಳನ್ನು  ಗ್ರಾಮ ಪಂಚಾಯಿತಿಗಳಂತೆ ಪ್ರತಿಯೊಂದು ಹಳ್ಳಿಯಲ್ಲಿಯೂ ಸ್ಥಾಪಿಸಬೇಕು. ಹೀಗೆ ಹಳ್ಳಿಗಳಲ್ಲಿ ಸ್ಥಾಪಿಸುವ ಮತ್ತು ಬೆಳೆಸುವ ಜವಾಬ್ದಾರಿಯುಳ್ಳ ತಾಲ್ಲೂಕು ಕರ್ಣಾಟಕ ಸಂಘಗಳು ಪ್ರತಿಯೊಂದು ತಾಲ್ಲೂಕು ಸ್ಥಳದಲ್ಲಿಯೂ ಇರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕರ್ಣಾಟಕ ಸಂಘಗಳು ಪ್ರತಿಯೊಂದು ತಾಲ್ಲೂಕು ಸ್ಥಳದಲ್ಲಿಯೂ ಇರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕರ್ಣಾಟಕ ಸಂಘಗಳು ಸ್ಥಾಪಿತವಾಗಿ ತಾಲ್ಲೂಕು ಸಂಘಗಳ ಸಂಬಂಧವನ್ನು ಬೆಳಸಿಕೊಂಡು ಬರಬೇಕು. ಈ ಎಲ್ಲ ಸಂಘಗಳೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂಗಸಂಸ್ಥೆಗಳಾಗಿರಬೇಕು. ಇದೊಂದು ಕನಸಿನ ಮಾತು! ಆದರೂ ನನಸಾಗಬಹುದೋ ಏನೋ ಎಂಬ ಒಂದು ಆಶೆಯಿಂದ ಹೇಳುತ್ತಿದ್ದೇನೆ.

ವಯಸ್ಕರ ಶಿಕ್ಷಣ, ಗ್ರ್ರಾಮ ಪುಸ್ತಕ ಭಂಡಾರಗಳ ಸ್ಥಾಪನೆ, ಮತ್ತು ಗ್ರಾಮ, ಕರ್ಣಾಟಕ-ಸಂಘಗಳ ಪಾಲನೆ-ಇವು ಮೂರು ಗ್ರ್ರಾಮ ಪಂಚಾಯಿತಿಗಳ ಕಡ್ಡಾಯವಾಗದ ಸಾಹಿತ್ಯ ಕಾರ್ಯಗಳಾಗಿ ಎಂದು ಆಚರಣೆಗೆ ಬರುತ್ತವೆಯೋ ಅಂದು ದೇಶ ಉದ್ಧಾರವಾಗುತ್ತದೆ, ಭಾಷೆ ಉದ್ಧಾರವಾಗುತ್ತದೆ, ಜನತೆ ಉದ್ಧಾರವಾಗುತ್ತದೆ.

ಪರಿಷತ್ತಿನ ಪತ್ರಿಕೆ ಹೇಗಿರಬೇಕು?

ಕರ್ಣಾಟಕ ಸಂಘಗಳು ಸಾಹಿತ್ಯ ವಿಚಾರದಲ್ಲಿ ಜನಾಭಿಪ್ರಾಯವನ್ನು ರೂಪಿಸಬೇಕೆಂದು ಹಿಂದೆ ಹೇಳಿದೆನಷ್ಟೆ. ಅದಕ್ಕೆ ಸಹಾಯಕವಾಗಿ ನಾಡಿನಲ್ಲಿ ಪ್ರಕಟವಾಗುತ್ತಿರುವ ಗ್ರಂಥಗಳ ವಿವರಗಳನ್ನೂ ವಿಷಯಗಳನ್ನೂ ಸ್ಥೂಲವಾಗಿ ತಿಳಿಸುವ ತ್ರೈಮಾಸಿಕವೊಂದನ್ನು ನಾವು ಹೊರಡಿಸಬೇಕಾಗಿದೆ.

ಆದರೆ ನಾನು ಉದ್ದೇಶಿಸಿರುವ ತ್ರೈಮಾಸಿಕ ಸಮಗ್ರರೂಪದಲ್ಲಿ ಗ್ರಂಥ ವಿವರಗಳನ್ನು ಕೊಡತಕ್ಕ ನಿಯತಕಾಲಿಕ ಪತ್ರಿಕೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ಇಂತಹ ಪತ್ರಿಕೆಯನ್ನು ಪರಿಷತ್ಪತ್ರಿಕೆಗೆ ಅನುಬಂಧವಾಗಿ ಕೊಡಬಹುದಾಗಿದೆ. ಲೇಖಕರು, ಗ್ರಂಥ ಪ್ರಕಾಶಕರು, ಕರ್ಣಾಟಕ ಸಂಘಗಳು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಈ ಮೂಲಕ ಚೆನ್ನಾಗಿ ಸಂಬಂಧ ಬೆಳೆಸಲು ಅನುಕೂಲವಾಗುತ್ತದೆ. ಪುಸ್ತಕ ಭಂಡಾರಗಳಿಗೆ ಗ್ರಂಥಗಳನ್ನು ಆರಿಸಿಕೊಳ್ಳುವವರಿಗೆ ಇಂತಹ ಪತ್ರಿಕೆಯಿಂದ ಲಾಭವು ಉಂಟು.

ನಿಮ್ಮ ಧೂಮಪಾನ ಅಂಗರಾಗ ಕೇಶಪ್ರಸಾದನಗಳಿಗೆ ವ್ಯಯಮಾಡುವ ಹಣದಲ್ಲಿ ಕಾಲುಭಾಗ, ಕಡೆಗೆ ಹತ್ತರಲ್ಲೊಂದು ಭಾಗವನ್ನು ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳುವುದಕ್ಕೆ ವಿನಿಯೋಗಿಸಿ; ನಿಮ್ಮ ಕಾಫಿ ಕ್ಲಬ್ಬು ಸಿನಿಮಾ ವ್ಯಾಮೋಹಗಳಿಗಾಗಿಯೂ ನಟಿನಟಿಯರ ಭಾವಚಿತ್ರ ಸಂಗ್ರಹಣಕ್ಕಾಗಿಯೂ ವ್ಯಯಮಾಡುವ ಹಣದಲ್ಲಿ ಸ್ವಲ್ಪಭಾಗವನ್ನು ಕನ್ನಡದ ಪುಸ್ತಕಗಳಿಗಾಗಿ ವಿನಿಯೋಗಿಸಿ; ವಿವಾಹ ಕಾಲದಲ್ಲಿ ಮಾವನವರಿಂದ ಹಲವು ಉಡುಗೊರೆಗಳನ್ನು ತೆಗೆದುಕೊಳ್ಳುವಾಗ ಒಂದು ನೂರು ರೂಪಾಯಿಗಳ ಬೆಲೆಯ ಕನ್ನಡ ಪುಸ್ತಕಗಳನ್ನು ರಿಸ್ಟ್‍ವಾಚಿಗೆ ಬದಲಾಗಿ ಸ್ವೀಕರಿಸುವ ಸಂಕಲ್ಪವನ್ನು ಮಾಡಿಕೊಳ್ಳಿ; ನಿಮ್ಮ ಮೆಚ್ಚಿನ ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡಬೇಕಾದರೆ ಕನ್ನಡ ಪುಸ್ತಕಗಳನ್ನು ಮೆಚ್ಚುಗಳಾಗಿ ಕೊಡಿರಿ; ಸ್ನೇಹಿತರ ಮನೆಗಳಿಗೆ ಹೋಗುವಾಗ ಒಂದು ಕನ್ನಡ ಪುಸ್ತಕ ಕಣ್ಣಿಗೆ ಬಿದ್ದರೆ ಎರವಲು ಕೇಳಿ ಆತ್ಮಗೌರವವನ್ನು ಕೆಡಿಸಿಕೊಳ್ಳದೆ ಪೇಟೆಯಲ್ಲಿ ಸ್ವಂತಕ್ಕೆ ಕೊಂಡು ಆತ್ಮಗೌರವವನ್ನುಳಿಸಿಕೊಂಡು ಬೆಳಸುತ್ತ ಹೋಗಿ. ಆಗ ತಾನಾಗಿಯೇ ಕನ್ನಡ ಗ್ರಂಥಗಳಿಗೆ ವಾಚಕಲೋಕ ವಿಸ್ತಾರವಾಗುತ್ತದೆ; ಪಠ್ಯಪುಸ್ತಕಗಳಾಗಿ ಇಡದಿದ್ದರೂ ಗ್ರಂಥಗಳ ಮಾರಾಟ ಕೊಂಚವಾದರೂ ತೃಪ್ತಿಕರವಾಗಿ ನಡೆಯುತ್ತದೆ; ಕನ್ನಡದ ಕೋಟೆ ಬಲಪಡುತ್ತದೆ; ಕನ್ನಡದ ಕೀರ್ತಿಧ್ವಜ ಉನ್ನತವಾಗಿ ಹಾರಾಡುತ್ತದೆ.

ಪರಿಷತ್ತಿನ ಆರ್ಥಿಕ ಸುಧಾರಣೆ ಹೇಗೆ?

ಕೊನೆಯದಾಗಿ, ಪರಿಷತ್ ಸಂಸ್ಥೆಯ ವಿಚಾರದಲ್ಲಿ ಎರಡು ಮಾತನ್ನು ಹೇಳಿ ಈ ನನ್ನ ಭಾಷಣವನ್ನು ಮುಕ್ತಾಯ ಮಾಡುತ್ತೇನೆ. ಪರಿಷತ್ತು ಈಗ ಸುಮಾರು ಮುವ್ವತ್ತುನಾಲ್ಕು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಸಂಸ್ಥೆ. ಈ ದೀರ್ಘಾವಧಿಯಲ್ಲಿ ಅದರ ಶಕ್ತಿ, ಸಂಪತ್ತು ಮತ್ತು ಪ್ರಭಾವ ಎಷ್ಟರಮಟ್ಟಿಗೆ ಬೆಳೆಯಬೇಕೆಂದು ಆಶಿಸಿದ್ದೇವೋ ಅಷ್ಟೊಂದು ಬೆಳೆದಿಲ್ಲ. ಮೊದಲಿಂದಲೂ ಅದಕ್ಕೆ ಧನಬಲ ಮತ್ತು ಜನಬಲಗಳ ಕೊರತೆ ಇದ್ದೇ ಇದೆ. ಮೊದಲಿನಿಂದಲೂ ಆಕ್ಷೇಪಕರು ಇದ್ದೇ ಇದ್ದಾರೆ; ಅದನ್ನು ಟೀಕಿಸುತ್ತಲೇ ಬಂದಿದ್ದಾರೆ. ನಮಗೂ ಪರಿಷತ್ತಿನ ಬಗ್ಗೆ ಅಸಂತುಷ್ಟಿಯಿದೆ. ‘ಅಸಂತೋಷಃ ಶ್ರಿಯೋ ಮೂಲಂ’, ‘ಬೈದವರೆನ್ನ ಬಂಧುಗಳೆಂಬೆ’ ಎಂದು ಸಮಾಧಾನ ತಂದುಕೊಳ್ಳುತ್ತೇವೆ. ಆದರೆ ಸದಸ್ಯರ ಸಂಖ್ಯೆಗಿಂತ ಆಕ್ಷೇಪಕರ ಸಂಖ್ಯೆ ಹೆಚ್ಚಾಗಿದ್ದರೆ ಫಲವೇನು? ಪರಿಷತ್ತು ಮಾಡಬೇಕಾದ ಕೆಲಸಗಳು ಬಹಳವಾಗಿವೆ ನಿಜ. ಕನ್ನಡ ನಾಡಿನ ಮೂಲೆಮೂಲೆಗಳಿಂದ ಕನ್ನಡದ ಮುಂದಾಳುಗಳು ಬೆಂಗಳೂರಿನಲ್ಲಿ ಸೇರಿ ಪರಿಷತ್ತನ್ನು ಸ್ಥಾಪಿಸಿದರು. ಅದರ ಸದಸ್ಯರು ನಾಡಿನ ಎಲ್ಲ ಕಡೆಗಳಲ್ಲೂ ಇದ್ದಾರೆ. ಅದರ ಆಡಳಿತದಲ್ಲಿ ಎಲ್ಲ ಭಾಗಗಳ ಪ್ರತಿನಿಧಿಗಳೂ ಸೇರಿದ್ದಾರೆ. ಈ ದೃಷ್ಟಿಯಿಂದ ಅದು ಕರ್ಣಾಟಕದ ಏಕೈಕ ಪ್ರತಿನಿಧಿ ಸಂಸ್ಥೆ. ಆದರೆ ಪರಿಷತ್ತಿನ ಕಟ್ಟಡ ಮತ್ತು ಕಚೇರಿ ಇರುವುದು ಬೆಂಗಳೂರಿನಲ್ಲಿ! ಆ ಕಟ್ಟಡಕ್ಕಾಗಿ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಸಹಾಯ ದ್ರವ್ಯವನ್ನು ಮೈಸೂರು ಸರ್ಕಾರದವರು ಹಿಂದೆ ಕೊಟ್ಟ ಪಾಪಕ್ಕಾಗಿ ಪ್ರತಿವರ್ಷವೂ ಅದರ ಬಡ್ಡಿಯೆನ್ನುವಂತೆ ಮೂರು ಸಾವಿರ ರೂಪಾಯಿಗಳ ವರ್ಷಾಸನವನ್ನು-ಬೇಕಾದ ಸಹಾಯ ದ್ರವ್ಯವೆಂದು ಕರೆಯೋಣ-ತೆರುತ್ತ ಆ ಸಂಖ್ಯೆಯನ್ನು ಜೀವಂತವಾಗಿ ಉಳಿಸಿದ್ದಾರೆ. ಅವರು ಏನಾದರೂ ನೆಪ ಹೇಳಿ ಈ ದಿನ ಆ ಸಹಾಯವನ್ನು ನಿಲ್ಲಿಸಿದರೆ ನಾಳೆಯೇ ಪರಿಷತ್ತು ಸಾಯುತ್ತದೆ. ಪರಿಷತ್ತು ಎಲ್ಲ ಪ್ರಾಂತಗಳಲ್ಲಿರುವ ಕನ್ನಡಿಗರಿಗೂ ಸೇರಿದ್ದು; ಅದರ ಪೋಷಣೆ ರಕ್ಷಣೆ ಎಲ್ಲ ಕನ್ನಡಿಗರಿಗೂ ಸೇರಿದ್ದು-ಎಂದು ಜಾಗಟೆಯನ್ನು ಬಾರಿಸಿ ಬಾರಿಸಿ ಹೇಳುತ್ತಿದ್ದೇವೆ.

ಎರಡನೆಯದಾಗಿ, ಪರಿಷತ್ತಿನ ಸದಸ್ಯರಾಗಿರಲು ಆತ್ಮಸಂತೋಷದಿಂದಲೋ ಪರಪ್ರೇರಣೆಯಿಂದಲೋ ಒಪ್ಪಿಕೊಂಡು ಅದಕ್ಕೆ ಸೇರಿದವರಲ್ಲಿ ಹಲವರು ತಮ್ಮ ಚಂದಾ ಬಾಕಿಗಳನ್ನು ಸಲ್ಲಿಸುವುದಿಲ್ಲ. ಅವರು ನಿಲ್ಲಿಸಿಕೊಂಡಿರುವ ಸುಮಾರು ಐದು ಸಾವಿರ ರೂಪಾಯಿಗಳಷ್ಟು ಬಾಕಿಯನ್ನು ಶೀಘ್ರದಲ್ಲಿಯೇ ಸಲ್ಲಿಸಿಬಿಟ್ಟರೆ ಹತ್ತುಸಾವಿರ ರೂಪಾಯಿಗಳಷ್ಟು ಕೆಲಸ ಮಾಡಬಹುದು.

ಪರಿಷತ್ತಿನ ಪ್ರಕಟಣೆಗಳು ಮತ್ತು ಧನಸಹಾಯ

ಪರಿಷತ್ತು ಮಾಡಬೇಕಾದ ಕೆಲಸಗಳಲ್ಲಿ ಕೆಲವು ತಾತ್ಕಾಲಿಕ ಪ್ರಯೋಜನಕಾರಿಗಳು; ಇಂಥವು ಸಾಮಾನ್ಯವಾಗಿ ಜನಪ್ರಿಯವಾಗಿರುತ್ತವೆ; ಇವುಗಳಿಂದ ಪರಿಷತ್ತಿನ ಹೆಸರು ಹರಡುತ್ತದೆ. ಆಗ, ಎಲ್ಲರೂ ಪರಿಷತ್ತನ್ನು ಪ್ರಶಂಸೆ ಮಾಡುತ್ತಾರೆ. ಸಾಹಿತ್ಯೋತ್ಸವಗಳು, ಉಪನ್ಯಾಸ ಮಾಲೆಗಳು, ಸ್ಪರ್ಧೆಗಳು ಮೊದಲಾದುವೆಲ್ಲ ಈ ಜಾತಿಗೆ ಸೇರಿದುವು. ಇನ್ನು ಕೆಲವು ಕೆಲಸಗಳು ಶಾಶ್ವತ ಪ್ರಯೋಜನಕಾರಿಗಳು; ಇಂತಹ ಜನಪ್ರಿಯವಾಗಿರುವುದಿಲ್ಲ; ಕೆಲಸ ನಡೆಯುತ್ತಿರುವಾಗ ಜನರ ಕಣ್ಣಿಗೆ ಗೋಚರವಾಗುವುದಿಲ್ಲ. ಆದ್ದರಿಂದ ಪರಿಷತ್ತಿಗೆ ಪ್ರಶಂಸೆ ಸದ್ಯದಲ್ಲಿ ದೊರೆಯುವುದಿಲ್ಲ. ಪೂರ್ವ ಗ್ರಂಥಗಳ ಶಾಸ್ತ್ರೀಯ ಸಂಪಾದನೆ, ಕನ್ನಡ-ಕನ್ನಡ ಕೋಶ ನಿರ್ಮಾಣ, ವಿಶ್ವಕೋಶದ ಪ್ರಯತ್ನ- ಮೊದಲಾದುವೆಲ್ಲ ಈ ಜಾತಿಗೆ ಸೇರಿದುವು.

ಪರಿಷತ್ತು ಹಿಂದೆ ಪಂಪ ರಾಮಾಯಣ, ಪಂಪ ಭಾರತ ಮತ್ತು ಕುಸುಮಾವಳೀ ಕಾವ್ಯಗಳನ್ನು ಸಂಪಾದನೆ ಮಾಡಿ ಪ್ರಕಟಿಸಿತು. ಪಂಪ ರಾಮಾಯಣ, ಪಂಪ ಭಾರತಗಳ ಪ್ರತಿಗಳು ಮುಗಿದು ಹೋಗಿರುವುದರಿಂದ ಅವುಗಳನ್ನು ಪರಿಷ್ಕರಿಸಿ ಮುದ್ರಣ ಮಾಡಬೇಕಾಗಿದೆ. ಕನ್ನಡ-ಕನ್ನಡ ಕೋಶದ ಕಾರ್ಯ ಕಷ್ಟತರವಾದುದು. ಅದಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಹತ್ತಾರು ಜನ ಪಂಡಿತರ ಪೂರ್ಣಕಾಲದ ಪೂರ್ಣ ಸಹಾಯ ಅದಕ್ಕೆ ಅತ್ಯಾವಶ್ಯಕ. ಆ ಕೋಶದ ಸಲುವಾಗಿ ಪ್ರತ್ಯೇಕವಾದ ಕಚೇರಿಯೊಂದನ್ನು ಸ್ಥಾಪಿಸಿ ಪಂಡಿತರುಗಳನ್ನು ವೇತನಗಳನ್ನು ಕೊಟ್ಟು ನೇಮಿಸಿಕೊಳ್ಳಬೇಕಾಗಿದೆ.

ಹಣ ಕೊಡುವ ಪುಣ್ಯಾತ್ಮರು ಯಾರು? ಮೈಸೂರು ಸರ್ಕಾರದವರು ವರ್ಷಕ್ಕೆ  ಎರಡು ಸಾವಿರ ರೂಪಾಯಿಗಳಂತೆ ಐದು ವರ್ಷಗಳಿಗೆ ಧನಸಹಾಯ ನೀಡಿದ್ದಾರೆ. ಈ ಅಲ್ಪ ಸಹಾಯದಲ್ಲಿ ಏನು ಕೆಲಸ ಮುಂದುವರೆದೀತು? ಏನು ಪ್ರಕಾಶಕ್ಕೆ ಬಂದೀತು? ನಾಡಿನಲ್ಲಿರುವ ಶ್ರೀಮಂತರೂ ಇತರ ಸರ್ಕಾರಗಳೂ ನೀಡಿದರೆ ಐದು ವರ್ಷಗಳಲ್ಲಿ ನಿಘಂಟಿನ ಕೆಲಸ ಮುಗಿದೀತು. ಕನ್ನಡದಲ್ಲಿ ಒಂದು ವಿಶ್ವಕೋಶವನ್ನು ಸಿದ್ಧಗೊಳಿಸಬೇಕೆಂಬ ಯೋಜನೆಯೂ ಯೋಚನೆಯೂ ಇವೆ. ಈ ಕೆಲಸಕ್ಕೆ ಹತ್ತು ಹನ್ನೆರಡು ಲಕ್ಷ ರೂಪಾಯಿಗಳೂ ಬೇಕು. ಪ್ರಚಾರೋಪನ್ಯಾಸಗಳ ಏರ್ಪಾಟನ್ನು ಕೈಕೊಂಡು ಚಲನಚಿತ್ರಗಳ ಸಹಾಯದಿಂದ ಜ್ಞಾನ ಪ್ರಚಾರ ಮಾಡಬೇಕೆಂಬ ಹಿರಿಯ ಯೋಜನೆಯೊಂದನ್ನು ಶ್ರೀ ಡಿ.ವಿ. ಗುಂಡಪ್ಪನವರು ತಮ್ಮ ಉಪಾಧ್ಯಕ್ಷ ಅಧಿಕಾರಾವಧಿಯಲ್ಲಿ ಸಿದ್ಧಗೊಳಿಸಿದರು; ಸಹಾಯಕ್ಕಾಗಿ ಪರಿಷತ್ತು ಯಾಚನೆ ಮಾಡಿತು. ‘ದೇಹಿ’ ಎಂದು ಹೊರಟರೆ ‘ನಾಸ್ತಿ’ ಎಂದು ಎಲ್ಲರೂ ಹೇಳುವರೇ!

ಪರಿಷತ್ತು -ಪಾಂಡಿತ್ಯದ ಅಭಾವ

ಪರಿಷತ್ತನ್ನು ಆಕ್ಷೇಪಿಸಲಿ; ಬೇಡವೆನ್ನುವುದಿಲ್ಲ ಅಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಜನ ತಿದ್ದಿಕೊಳ್ಳುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಂತವರಿಗೆ ಕೊರಳಿಗೆ ಹೂವಿನ ಹಾರಗಳು ತಲೆಗೆ ಕಲ್ಲಿನೇಟುಗಳು ಬೀಳುತ್ತವೆ. ಕಲ್ಲು ಬೀರುವವರಲ್ಲಿ ಎಷ್ಟು ಮಂದಿ ಪರಿಷತ್ತಿಗೆ ಧನಸಹಾಯ ಮಾಡುತ್ತಾರೆ; ಅದರ ಕಾರ್ಯಗಳಲ್ಲಿ ನೆರವಾಗುವ ಚೈತನ್ಯವನ್ನು ಪಡೆದಿರುತ್ತಾರೆ? ಹಿಂದಿನ ಕಾಲದಲ್ಲಿ ಪ್ರಸಿದ್ಧರಾದ ಪಂಡಿತರು ದಕ್ಷರಾದ ಕನ್ನಡಿಗರು ನಮ್ಮಲ್ಲಿದ್ದರು. ಪಂಪ ಭಾರತವನ್ನೋ ಶಬ್ದಮಣಿದರ್ಪಣವನ್ನೋ ಕಾವ್ಯಾವಲೋಕನವನ್ನೋ ವಾಚೋವಿಧೇಯವಾಗಿ ಹೇಳಬಲ್ಲ. ಪದಪ್ರಯೋಗಗಳನ್ನು ಹಲವಾರು ಗ್ರಂಥಗಳಿಂದ ನಿಂತಲ್ಲಿಯೇ ಕುಳಿತಲ್ಲಿಯೇ ಉದಾಹರಿಸಬಲ್ಲ ದೊಡ್ಡ ದೊಡ್ಡ ಪಂಡಿತರು ನಮ್ಮಲ್ಲಿದ್ದರು. ಅವರ ಕಾಲವಾಯಿತು. ಅವರ ಅನಂತರದ ತಲೆಮೊರೆಯುವರಲ್ಲಿ ಕೆಲವರು ಉದ್ಧಾಮ ಪಂಡಿತರಿದ್ದಾರೆ. ನಮಗೆ ನೆರವಾಗತಕ್ಕ ಚೈತನ್ಯವಿರುವವರು ಕನ್ನಡನಾಡಿನಲ್ಲೆಲ್ಲಾ ಹತ್ತು ಹದಿನೈದು ಮಂದಿ ದೊರೆಯಬಹುದು. ಅವರಿಗೆಲ್ಲ ಈಗಾಗಲೇ ನಲವತ್ತು ವರ್ಷ ವಯಸ್ಸು ಆಗಿದೆ. ಭಗವಂತನು ಅವರಿಗೆ ದೀರ್ಘಾಯಸ್ಸನ್ನು ಕೊಟ್ಟಿರಲೆಂದು ಪ್ರಾರ್ಥಿಸುತ್ತೇನೆ. ಅವರ ಕೆಳಗಿನ ಪೀಳಿಗೆಯವರನ್ನು ನೋಡಿದರೆ ಕನ್ನಡದ ಬಗ್ಗೆ ನನಗೆ ಬಹಳ ಅಧೈರ್ಯವೂ ಮಹತ್ತರವಾದ ದುಃಖವೂ ಉಂಟಾಗುತ್ತವೆ. ಬಹುಮಟ್ಟಿಗೆ ಏಕಾಂಕ ನಾಟಕದವರು, ಸಣ್ಣಕಥೆಗಳವರು, ಜುಜುಬಿ ಭಾವಗೀತೆಗಳವರು, ಸಣ್ಣಪುಟ್ಟ ಕಾದಂಬರೀಕಾರರು, ಪಠ್ಯಪುಸ್ತಕವಾಗಬೇಕೆಂಬ ಹಂಬಲಿನ ಲೇಖಕರು, ಎಂ.ಎ. ಪ್ರಶಸ್ತಿ ಪತ್ರಧಾರಕರಾದರೂ  ಘನವಾದ ಪಾಂಡಿತ್ಯವಿಲ್ಲದವರು. ಭರತಖಂಡದ ವಿವಿಧ ಭಾಷೆಗಳ ಪರಿಷತ್ತು ಸೇರಿ ವಿವಿಧ ಪ್ರಾಂತಗಳ ಪಂಡಿತ ದಿಗ್ಗಜಗಳು ಅಲ್ಲಿ ನೆರೆದರೆ ನಮ್ಮ ಈ ಪೀಳಿಗೆಯವರಲ್ಲಿ ಯಾರನ್ನು ಕನ್ನಡದ ಧ್ವಜದೊಂದಿಗೆ ಕಳಿಸಬಹುದೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ನಾಲ್ಕು ಜನ ನನ್ನ ಕಣ್ಣಿಗೆ ಬೀಳುವುದಿಲ್ಲ.

ಟೀಕೆಗೆ ಮುಂದಾಗದೆ ನೆರವಿಗೆ ಬನ್ನಿ

ಇಂತಹ ದುಃಸ್ಥಿತಿ ನಮ್ಮನ್ನು ಆವರಿಸಿಕೊಂಡಿದೆ. ನಮ್ಮನ್ನು ಟೀಕಿಸುವವರಲ್ಲಿ ಬಹುಮಂದಿ ರಾಜಕೀಯದ ಗಾಳಿಗೆ ಸಿಕ್ಕಿರುವ ಉತ್ಸಾಹಶಾಲಿಗಳಾದ ಅನನುಭವಿಗಳಾದ ಪಾಂಡಿತ್ಯ ಪ್ರತಿಭೆಗಳಿಲ್ಲದ ತರುಣರು. ಕೆಲಸ ಮಾಡುವುದಕ್ಕೆ ಇಷ್ಟವುಳ್ಳವರು ನೆರವಾಗುವುದಕ್ಕೆ ತವಕ ಪಡುತ್ತಿರುವವರು ಅಗತ್ಯವಾಗಿ ಪರಿಷತ್ತಿಗೆ ಬರಲಿ. ಪರಿಷತ್ತಿನ ಕೆಲಸಗಳಲ್ಲಿ ಭಾಗವಹಿಸಲಿ, ಕೀರ್ತಿಯನ್ನು ಗಳಿಸಲಿ. ಪರಿಷತ್ತು ಮಾಡಬಹುದಾದ ಕೆಲಸಗಳಿಗೆ ಹಲವು ಕಾರಣಗಳಿಂದ ಒಂದು ಮಿತಿಯುಂಟು ಈ ಮಿತಿಯನ್ನು ವಿೂರಿ ಅದು ಕೆಲಸ ಮಾಡಲಾರದು. ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ಅದು ಕೈಹಾಕಲಾರದು. ಅದರ ಉಪಕಾರಿಗಳನ್ನು ಕೃತಜ್ಞತೆಯಿಂದ ಸ್ಮರಿಸದೆ ಕೈಬಿಡಲಾರದು. ಆದ್ದರಿಂದ ಪರಿಷತ್ತಿನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಂಡು ಟೀಕಿಸುವುದು ಮೇಲು; ಪರಿಷತ್ತಿನ ಹಲವು ಕಾರ್ಯಕ್ಷೇತ್ರಗಳಲ್ಲಿ ಪ್ರತ್ಯಕ್ಷವಾಗಿ ನೆರವಾಗುವುದು ಮತ್ತೂ ಮೇಲು. ಪರಿಷತ್ತು ಬೇರೆಯಲ್ಲ ಕನ್ನಡ ಜನ ಬೇರೆಯಲ್ಲ. ಪರಿಷತ್ತು ಕನ್ನಡಿಗರ, ಅವರ ಸಾಹಿತ್ಯ ಸಂಸ್ಕೃತಿಗಳ, ಅವರ ಬದುಕಿನ ಬಾಳಿನ ಪ್ರತೀಕ; ಕನ್ನಡಿಗರ ಆರಾಧನ ಮಂದಿರ. ಕನ್ನಡ ಮಾತೆ ತನ್ನ ಮಕ್ಕಳನ್ನು ಪ್ರೇಮದೃಷ್ಟಿಯಿಂದ ಆದರಿಸುತ್ತಿದ್ದಾಳೆ, ಅವರ ಆಭ್ಯುದಯವನ್ನೇ ಹಾರೈಸುತ್ತಿದ್ದಾಳೆ, ಅವರ ಒಕ್ಕೂಟವನ್ನೇ ಬಯಸುತ್ತಿದ್ದಾಳೆ. ಮಕ್ಕಳು ಕಣ್ಣು ಬಿಟ್ಟು ನೋಡಲಿ! ಆಕೆಯ ಆಶೀರ್ವಾದಕ್ಕೆ ಪಾತ್ರರಾಗಲಿ!

Tag: Kannada Sahitya Sammelana 33, M.R. Sreenivasa Murthy

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)