ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ
ಡಿಸೆಂಬರ್ ೧೯೫೧

ಅಧ್ಯಕ್ಷತೆ: ಎಂ. ಗೋವಿಂದ ಪೈ

೩೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಂ. ಗೋವಿಂದ ಪೈ

ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ – ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩-೩-೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.

ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ಎ. ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ – ವಿದೇಶಗಳ ಭಾಷೆಗಳನ್ನು ಕಲಿತರು. ಸಾಹಿತ್ಯ ರಚನೆ – ಸಂಶೋಧನೆಯಲ್ಲಿ ತೊಡಗಿದರು. ಎಲ್ಲೂ ಉದ್ಯೋಗಕ್ಕೆ  ಸೇರಲಿಲ್ಲ.

ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.

ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.

ಸಾಹಿತ್ಯ ಸೇವೆ:  ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.

ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ೬-೯-೧೯೬೩ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೪

ಅಧ್ಯಕ್ಷರು, ಎಂ. ಗೋವಿಂದ ಪೈ

ದಿನಾಂಕ ೨೬,೨೭,೨೮ ಡಿಸೆಂಬರ್ ೧೯೫೧

ಸ್ಥಳ : ಮುಂಬಯಿ

ಪರಿಷತ್ತು ಕೋಶ ನಿರ್ಮಾಣಕ್ಕೆ ಹಣ ಬೇಡಬೇಕು

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡ ಕೋಶವನ್ನು ನಿರ್ಮಿಸತೊಡಗಿದೆ. ವಿಶ್ವಕೋಶವನ್ನು ನಿರ್ಮಿಸಬೇಕೆಂಬ ಯೋಜನೆಯನ್ನು ತನ್ನ ಗುರಿಯಾಗಿ ಇಟ್ಟುಕೊಂಡಿದೆ. ಇವೆರಡೂ ಕೆಲಸಗಳಿಗೆ ಲಕ್ಷಗಟ್ಟಲೆಯ ಹಣಬೇಕು. ಇದು ಎಲ್ಲಿಂದ ಬರಬೇಕು? ಕಣ್ಣು ಕೈಗಳನ್ನು ಎತ್ತಿ ಆಕಾಶಕ್ಕೆ ತೋರಿಸುವುದಲ್ಲದೆ ಬೇರೆ ಉತ್ತರವಿಲ್ಲ. ಕೊಡಲಾಗುವವರು ಹೇರಳವಿದ್ದಾರೆ. ಅವರಲ್ಲಿ  ಕೊಡುವವರು ಎಷ್ಟು? ಕೊಡುವ ಮನಸ್ಸಿದ್ದರೆ, ಕೊಡುವವರು ಕೊಟ್ಟರೆ, ಹಲವು ಬಲ್ಲವರ ಒಡಗೂಟದಿಂದ ತಾನೆ ನೆರವೇರಬೇಕಾದ ಈ ಕೆಲಸಗಳು ಆ ಒಗ್ಗಟ್ಟನ್ನು ಪೂರ್ಣವಾಗಿ ಸಂಪಾದಿಸುವ ತನಕ ಕೊಂಚ ದುಸ್ಸಾಧ್ಯವೆನಿಸಬಹುದಾದರೂ, ಅವು ಸರ್ವಥಾ ಅಸಾಧ್ಯವಲ್ಲ.

ಕನ್ನಡಕ್ಕೆ ಒಂದು ಅರಸ್ಥಾನವಿದೆ. ಮೂರು ವಿಶ್ವವಿದ್ಯಾಲಯಗಳಿವೆ ಮಾತ್ರ್ರವಲ್ಲ, ಕನ್ನಡ ನಾಡಿನಲ್ಲಿ ಎಷ್ಟೋ ಲಕ್ಷಪತಿಗಳೂ ಇದ್ದಾರೆ. ಅವರೆಲ್ಲ ಮನಸ್ಸು ಮಾಡಿದರೆ, ಈ ಕೋಶಗಳ ನಿರ್ಮಾಣವೆಂದರೆ ಕೇವಲ ಎಡಗೆಯ್ಯಾಟ ತಾನೆ. ಅವರನ್ನು ಬೇಡಬೇಕು ಒಮ್ಮೆ ಬೇಡಿ ಅವರು ಯದೃಚ್ಛಯಾ ನೀಡದಿದ್ದರೆ, ಇಮ್ಮೆ, ಮೂಮೆ, ಕೊನೆಗೆ ಹಲಮೆ. ‘ಭವಾನ್ ಭಿಕ್ಷಾಂ ದದಾತು’ ಎಂಬ ಸಪ್ತಾಕ್ಷರಿಯನ್ನು ಜಪಿಸುತ್ತ ಮನೆ ಮನೆ ತಿರಿವಾತನ ಗೋಪಾಲಬುಟ್ಟಿಯಲ್ಲಿ ಅಲ್ಲಲ್ಲಿ ಏನಿಕೆ ಹಣಕಾಸು ಬೀಳದೆ ಇದ್ದೀತೆ? ಎಂಬ ಆಶೆಯ ಊರುಗೋಲನ್ನು ಹಿಡಿದು ಮುಂದೆ ಸಾಗಬೇಕು.

ಸಮ್ಮೇಳನಗಳು ಮತ್ತು ವಿಜ್ಞಾನಗಳು

ವರ್ಷೇವರ್ಷೇ ಅಲ್ಲಲ್ಲಿ ನಡೆಯತಕ್ಕ ಸಾಹಿತ್ಯ ಸಮ್ಮೇಳನದ ಜತೆಯಲ್ಲಿ ಕನ್ನಡ ನಾಡಿನ ವೈಜ್ಞಾನಿಕ ಸಮ್ಮೇಳನವನ್ನು ಕರೆಯುತ್ತಿರಬೇಕು. ಇದು ಮುಂದಣ ಪ್ರತಿ ವಾರ್ಷಿಕ ಸಾಹಿತ್ಯ ಸಮ್ಮೇಳನವನ್ನು ಕರೆಯಿಸುವ ಆಯಾ ಸ್ಥಳವಂದಿಗರಿಗೆ  ಮಾಡುವ ಸೂಚನೆ, ಅವರಲ್ಲಿ ಮಾಡುವ ವಿಜ್ಞಾಪನೆ ಅಷ್ಟೆ. ಇಂದಿನ ಯುಗವೆಂದರೆ ಯಂತ್ರದ ಯುಗ, ವಿಜ್ಞಾನದ (Science) ಯುಗ, ವಿವಿಧ ಬಾಂಬುಗಳ (bombs) ಯುಗ. ಈ ಯುಗದಲ್ಲಿ ನಾವು ಹತ್ತು ಮಂದಿಯ ಜತೆಯಲ್ಲಿ ಇರಬೇಕಲ್ಲದೆ, ಬೆಕ್ಕಿನ ಬಿಡಾರ ಬೇರೆಯಂತೆ ಲೋಕದಿಂದ ಪೃಥಕ್ಕಾಗಿ ವಿಂಗಡವಾಗಿ ಇದ್ದಿರಲಾರೆವು. ಹಾಗೂ ಈ ಹತ್ತು ಮಂದಿ ವಿಜ್ಞಾನದಲ್ಲಿ ವಿಚಕ್ಷಣರಾಗಿದ್ದು ಅವರ ನಡುವೆ ನಾವು ಅವರಂತೆಯೇ ಸ್ವತಂತ್ರವಾಗಿ ತಲೆಯನ್ನು ಮೇಲೆತ್ತಿ ಬಾಳ ಬೇಕಾದರೆ ನಮಗೆ ಸಾಹಿತ್ಯ ನೆರವಾಗದು, ವಿಜ್ಞಾನ ಬೇಕು. ವಿಜ್ಞಾನವಲ್ಲದೆ ಅನ್ಯಗತಿಯಿಲ್ಲ. ಈ ಕಾರಣ ನಮ್ಮಲ್ಲಿ ಸಾಹಿತ್ಯ ಹತ್ತುವವರು ಸಾಹಿತ್ಯವನ್ನು ಹೇಗೋ ಹಾಗೆ ವಿಜ್ಞಾನ ಹತ್ತುವವರು ವಿಜ್ಞಾನವನ್ನು ಆಶ್ರಯಿಸಬೇಕು. ಹಾಗೆ ಎರಡೂ ದಾರಿಗಳಿಂದ ನಮ್ಮ ಜನ ಮುಂದುವರಿಸಬೇಕು.

ಸರ್ಕಾರಗಳ ಕರ್ತವ್ಯ

ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ, ಸಾಹಿತ್ಯ ಸಮ್ಮೇಳನಗಳನ್ನು ಸರಕಾರದವರು ಜರುಗಿಸಲಿ, ಜರುಗಿಸದಿರಲಿ, ವೈಜ್ಞಾನಿಕ ಸಮ್ಮೇಳನಗಳನ್ನಾದರೂ ಕೇಂದ್ರ ಸರಕಾರದವರಾಗಲಿ, ಆಯಾ ಪ್ರಾಂತಿಕ ಸರಕಾರದವರಾಗಲಿ ಕರೆಯಿಸುತ್ತಿರಬೇಕು.

Tag: Kannada Sahitya Sammelana 34, M. Govinda Pai

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)