ಸಾಹಿತ್ಯ ಸಮ್ಮೇಳನ-೩೫ : ಬೇಲೂರು
ಮೇ ೧೯೫೨

ಅಧ್ಯಕ್ಷತೆ: ಶಿ.ಚ. ನಂದೀಮಠ

nandeemata

೩೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಶಿ.ಚ. ನಂದೀಮಠ

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ ಪ್ರಾಕೃತ ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.

ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೫

ಅಧ್ಯಕ್ಷರು, ಶಿ.ಚ. ನಂದೀಮಠ

ದಿನಾಂಕ ೧೬,೧೭,೧೮ ಮೇ ೧೯೫೨

ಸ್ಥಳ : ಬೇಲೂರು

ಪ್ರಾಚೀನ ಗ್ರಂಥಗಳ ಪ್ರಕಟಣೆ

ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಮೈಸೂರು ಮದ್ರಾಸ್ ಸರ್ಕಾರಗಳು, ಧಾರವಾಡದ ವಿದ್ಯಾವರ್ಧಕ ಸಂಘ ಹಾಗೂ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಕಾವ್ಯ ಕಲಾನಿಧಿಮಾಲೆ ಇವೇ ಮೊದಲಾದವು ಅನೇಕ ಗ್ರಂಥಗಳನ್ನು ಪ್ರಕಟಿಸಿ ಮಹದುಪಕಾರ ಮಾಡಿವೆ. ಆದರೆ ಈಗ ಅವುಗಳಲ್ಲಿ ಅನೇಕ ಗ್ರಂಥಗಳು ದೊರೆಯದಾಗಿವೆ, ಮೇಲಾಗಿ, ಈ ಗ್ರಂಥಗಳನ್ನು ಸಶಾಸ್ತ್ರೀಯವಾಗಿ ಶುದ್ಧವಾದ ಮೂಲ, ಮಹತ್ವದ ಪಾಠಾಂತರ, ಟಿಪ್ಪಣಿಗಳು ಉಪಯುಕ್ತವಾದ ಪ್ರಸ್ತಾವನೆ ಮೊದಲಾದವುಗಳೊಂದಿಗೆ ಅಂದವಾಗಿ ಮುದ್ರಿಸಲು ಆವಶ್ಯಕತೆ ಬಹಳವಾಗಿದೆ. ಈ ಕಾರ್ಯವನ್ನು ವಿಶ್ವವಿದ್ಯಾನಿಲಯದವರೂ ಪರಿಷತ್ತಿನವರೂ ಸಮರ್ಥವಾದ ಮತ್ತಿತರ ಸಂಸ್ಥೆಗಳೂ ಕೈಕೊಳ್ಳಬೇಕು.

ಕನ್ನಡ ನಿಘಂಟು

ಕನ್ನಡ ಸಾಹಿತ್ಯ ಪರಿಷತ್ತಿನವರು ಕನ್ನಡ-ಕನ್ನಡ-ನಿಘಂಟುವಿನ ರಚನೆಯನ್ನು ಕೈಗೊಂಡಿರುವುದು ಎಲ್ಲರಿಗೂ ವಿದಿತವಿದೆ. ಕಳೆದ ೮-೯ ವರ್ಷಗಳಿಂದ ಈ ಕಾರ್ಯ ನಡೆಯುತ್ತಲಿದೆ. ಇದು ಬಹಳ ದೊಡ್ಡ ಕೆಲಸ. ಇದಕ್ಕೆ ಪಂಡಿತರ ಹಾಗೂ ಹಣದ ಸಹಾಯ ಬಹಳ ಬೇಕಾಗುವುದು. ಕರ್ನಾಟಕದ ಮಹಾ ಜನಗಳು ಪರಿಷತ್ತಿಗೆ ಈ ಕಾರ್ಯದಲ್ಲಿ ಸರ್ವವಿಧದಿಂದಲೂ ನೆರವು ನೀಡಿ ಕೋಶವು ಆದಷ್ಟು ತೀವ್ರ ಸಿದ್ಧವಾಗುವಂತೆ ಪ್ರೋತ್ಸಾಹಿಸಬೇಕು.

ಕನ್ನಡ ಭಾಷಾ ನಿರ್ಮಾಣ ಹೇಗೆ?

ಸಂಸ್ಕೃತದಲ್ಲಿ ಎಷ್ಟೋ ಕೋಶಗಳಿದ್ದರೂ ಹೊಸ ಕೋಶವೊಂದನ್ನು ನಿರ್ಮಿಸಲು ಡೆಕ್ಕನ್ ಕಾಲೇಜು ಸಂಶೋಧನ ಸಂಸ್ಥೆಯವರು ದೇಶವಿದೇಶಗಳಿಂದ ಧನಸಹಾಯ, ಪ್ರೋತ್ಸಾಹಗಳನ್ನು ಪಡೆದು ಮುಂದೆ ಬಂದಿರುವುದು ಸ್ತುತ್ಯ. ಉತ್ತಮವಾದ ಕೋಶ ನಿರ್ಮಾಣವು ಎಷ್ಟು ಬಿಕ್ಕಟ್ಟಿನದು, ಎಷ್ಟು ವೆಚ್ಚದ್ದು ಎಂಬುದನ್ನು ತೋರಿಸಲು ಈ ಉದಾಹರಣೆಯನ್ನು ಕೊಟ್ಟುದಾಗಿದೆ.

ಈ ಕನ್ನಡ ಕೋಶಕ್ಕೆ ಕನ್ನಡ ವಿಷಯವನ್ನು ಕಲಿಸುತ್ತಿರುವ ನಮ್ಮ ಸುತ್ತು ಮುತ್ತಲಿನ ವಿಶ್ವವಿದ್ಯಾನಿಲಯಗಳೂ ಆಯಾ ಪ್ರಾದೇಶಿಕ ಸರ್ಕಾರದವರೂ ಸಹಾಯ ಮಾಡಿದರೆ ಈ ಕಾರ್ಯವು ಸುಗಮವಾಗುವುದು. ಪರಿಷತ್ತಿನವರು ಈ ದಿಶೆಯಲ್ಲಿ ಕಾರ್ಯಮಾಡಬೇಕೆಂದು ನಮ್ಮ ಸೂಚನೆ.

ಚಿಕ್ಕಮಕ್ಕಳಿಗಾಗಿ ಬರೆದ ಪಠ್ಯಪುಸ್ತಕಗಳು ಅಂದವಾದ ಮುದ್ರಣ, ಚೆಂದಚೆಂದದ ಚಿತ್ರಗಳಿಂದ ಚಿತ್ತಾಕರ್ಷಕವಾಗಿರಬೇಕು. ಇದು ಮಕ್ಕಳ ಪಠ್ಯಪುಸ್ತಕಗಳ ಮಾತಾಯಿತು. ಇದರಂತೆ ಮಾಧ್ಯಮಿಕ ಮತ್ತು ಉಚ್ಛಶಿಕ್ಷಣ ಕ್ರಮದಲ್ಲಿಯೂ ಸರಿಯಾದ ಪಠ್ಯಪುಸ್ತಕಗಳಿರುವುದು ಅತ್ಯವಶ್ಯ. ಪ್ರತಿಯೊಂದು ವಿಷಯವನ್ನೂ ಬೇರೆ ಬೇರೆ ವರ್ಗಗಳಲ್ಲಿ ಕನ್ನಡದಲ್ಲಿ ಬೋಧಿಸಲು ಅನುಕೂಲವಾಗುವಂತಹ ಪಠ್ಯಪುಸ್ತಕಗಳಿರುವುದು ಕನ್ನಡ ಬೋಧ ಭಾಷೆಯಾಗಬೇಕೆನ್ನುವ ಈ ಕಾಲದಲ್ಲಿ ತೀರ ಅವಶ್ಯ. ಈ ದಿಶೆಯಲ್ಲಿ ವಿದ್ಯಾಖಾತೆಯವರೂ ವಿಶ್ವವಿದ್ಯಾನಿಲಯದವರೂ ಪರಿಷತ್ತಿನಂತಹ ಪ್ರಾತಿನಿಧಿಕ  ಸಂಸ್ಥೆಗಳವರೂ ಮುಂದೆ ಬಂದು ಕಾರ್ಯ ಮಾಡಬೇಕಾಗಿದೆ. ಇದರಿಂದ ನಮ್ಮ ನಾಡಿನಲ್ಲಿ ಸರಿಯಾದ ಶಿಕ್ಷಣ ಪ್ರಸಾರವಾಗಿ ಸಾಹಿತ್ಯಕ್ಕೂ ಪ್ರೋತ್ಸಾಹ ದೊರೆಯುವುದು.

Tag: Kannada Sahitya Sammelana 34, S.C. Nandhimatha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)