ಸಾಹಿತ್ಯ ಸಮ್ಮೇಳನ-೩೬ : ಕುಮಟಾ
ಡಿಸೆಂಬರ್ ೧೯೫೩

ಅಧ್ಯಕ್ಷತೆ: ವಿ. ಸೀತಾರಾಮಯ್ಯ

v-seetharamaiah

೩೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ವಿ. ಸೀತಾರಾಮಯ್ಯ

ಕನ್ನಡದ ಕವಿ, ವಿದ್ವಾಂಸ, ವಿಮರ್ಶಕ, ಸದಭಿರುಚಿಯ ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯನವರ ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೨-೧0-೧೮೯೯ರಲ್ಲಿ ಜನನ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ೧೯೨0ರಲ್ಲಿ ಬಿ. ಎ. ೧೯೨೨ರಲ್ಲಿ ಎಂ. ಎ. ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು.

೧೯೨೩ರಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯರಾದರು. ೧೯೨೮-೧೯೫೮ರವರೆಗೆ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ಇಂಟರ್ ಮೀಡಿಯೇಟ್ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ವಿಭಾಗದ  ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅನಂತರ ಒಂದೆರಡು ವರ್ಷ ಆಕಾಶವಾಣಿಯಲ್ಲಿ ಭಾಷಣ ವಿಭಾಗದ ಮುಖ್ಯಸ್ಥರಾಗಿ ಅನಂತರ ಹೊನ್ನಾವರದ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ೪ ವರ್ಷ ಕಾರ್ಯನಿರ್ವಹಿಸಿದರು.

೧೯೪೩ರಿಂದ ೧೯೪೮ರವರೆಗೆ ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ೧೯೩೬ರಿಂದ ೧೯೪೨ರವರೆಗೆ ಕನ್ನಡ ನುಡಿ, ೧೯೫೫-೫೬ರಲ್ಲಿ ಪರಿಷತ್ಪತ್ರಿಕೆ ಮತ್ತು ಕನ್ನಡ ನುಡಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರಲ್ಲಿ ‘ಕವಿಕಾವ್ಯ ಪರಂಪರೆ’ ಕಾವ್ಯ ಮಾಲೆಗೆ ಸಂಪಾದಕರಾಗಿದ್ದರು. ೧೯೩೪ರಿಂದ ೧೯೩೯ರವರೆಗೆ ಪರಿಷತ್ತಿನ ಕೋಶಾಧಿಕಾರಿಗಳಾಗಿದ್ದರು.

೧೯೫೩ರಲ್ಲಿ ೩೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರಿಗೆ ಪ್ರಾಪ್ತವಾಗಿತ್ತು. ೧೯೫೪ರಲ್ಲಿ ಮುಂಬಯಿ ಪ್ರಾಂತ ಭಾಷಾ ಸಮ್ಮೇಳನಕ್ಕೆ ಅಧ್ಯಕ್ಷರಾದರು. ೧೯೭0ರಲ್ಲಿ ಮಹನೀಯರು ಕೃತಿಗೆ ಪ್ರಶಸ್ತಿ ಲಭ್ಯವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ‘ಅರಲು ಬರಲು’ ಕವನ ಸಂಕಲನಕ್ಕೆ  ದೊರಕಿತು. ಇವರಿಗೆ ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು. ೧೯೭೮ರಲ್ಲಿ ಕೃಷ್ಣಚಾರಿತ್ರ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಗೀತಗಳು, ದೀಪಗಳು, ನೆಳಲು ಬೆಳಕು, ಅರಲು-ಬರಲು ಮೊದಲಾದ ಕವನಸಂಗ್ರಹಗಳನ್ನೂ, ಪಂಪಾಯಾತ್ರೆ, ಹಣ ಪ್ರಪಂಚ, ಶ್ರೀಶೈಲಶಿಖರ, ವಾಲ್ಮೀಕಿ ರಾಮಾಯಣ, ಹಿರಿಯರು ಗೆಳೆಯರು, ಸಂವಿಧಾನ ಕಾನೂನು ಮೊದಲಾದ ಗದ್ಯಕೃತಿಗಳನ್ನೂ, ಪಂಜೆ ಮಂಗೇಶರಾವ್, ತ್ಯಾಗರಾಜ, ಬಂಗಾಳಿ ಸಾಹಿತ್ಯ ಚರಿತ್ರೆ, ಪುರಂದರದಾಸ, ಪಿಗ್ಮೇಲಿಯನ್ ಮೊದಲಾದ ಕೃತಿಗಳ ಅನುವಾದಗಳನ್ನು ಮಾಡಿರುವ ವಿ.ಸೀ. ಅವರು ಡಿ.ವಿ. ಗುಂಡಪ್ಪ, ಪಂಜೆ, ಕೆ. ವೆಂಟಕಪ್ಪ ಮೊದಲಾದವರ ಕೃತಿಗಳನ್ನು ಇಂಗ್ಲಿಷಿಗೆ ಪರಿವರ್ತಿಸಿದ್ದರು. ಅಂಕಣಕಾರರಾಗಿ ಕನ್ನಡ, ಇಂಗ್ಲಿಷಿನಲ್ಲಿ ನಿಯತಕಾಲಿಕೆಗಳಿಗೆ ಬರೆಯುತ್ತಿದ್ದ ವಿ.ಸೀ. ಅವರು ೧೯೮೩ ಸೆಪ್ಟಂಬರ್ ೪ರಂದು ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೬,

ಅಧ್ಯಕ್ಷರು: ವಿ. ಸೀತಾರಾಮಯ್ಯ

ದಿನಾಂಕ ೨೬, ೨೭, ೨೮ ಡಿಸೆಂಬರ್ ೧೯೫೩

ಸ್ಥಳ : ಕುಮಟಾ

ಪರಿಷತ್ತಿನ ಹುಟ್ಟಿಗೆ ಕಾರಣ

ಕನ್ನಡ ನಾಡು ನುಡಿ ಸಂಸ್ಕೃತಿಗಳ ಬಗೆಗೆ  ದೊಡ್ಡ ಸೇವೆಯನ್ನು ಸಲ್ಲಿಸಬೇಕು ಈ ನಾಡಿನ ಮಕ್ಕಳು ಒಂದಾಗಬೇಕು. ಈ ಜನ ಸೌಹಾರ್ದದಿಂದ ಬೆಳೆದು ಆಡಳಿತದಲ್ಲಿ ಒಟ್ಟು ಒಂದು ರಾಜ್ಯವಾಗಬೇಕು; ಸಾಹಿತ್ಯ, ಕಲೆ, ಶಾಸ್ತ್ರಜ್ಞಾನ, ಧರ್ಮ, ಬದುಕಿನ ನಯಗಳಲ್ಲಿ ಈ ಮುಂಚೆ ಈ ಜನ ಏನೇನು ಸಾಧಿಸಿ ಗಣ್ಯತೆ ಪಡೆಯಿತೋ ಅದರ ಸಮಗ್ರ ಪರಿಚಯವನ್ನು ಒಳಗೂ ಹೊರಗೂ ಮಾಡಿಕೊಟ್ಟು, ಈ ಕಾಲದಲ್ಲಿಯೂ ಅವೇ ರಂಗಗಳಲ್ಲಿ ಉತ್ಸಾಹವನ್ನೂ ಸಾಧನಸಂಪನ್ನತೆಯನ್ನೂ ಬೆಳಸಬೇಕು; ಇಂದು ಸಲ್ಲಿಸುವ ಕಾಣಿಕೆ, ಶಕ್ಯವಾದರೆ, ಹಿಂದಿನದಕ್ಕಿಂತ ಉತ್ತಮವಾಗಬೇಕು; ಮಾನ್ಯರಾದ ಸಾಹಿತಿಗಳಿಗೆ ಪ್ರೋತ್ಸಾಹವನ್ನೂ ಪ್ರತಿಫಲವನ್ನೂ ಸಲ್ಲಿಸಿ ವಿಶ್ವಾಸ ತೋರಿಸಬೇಕು; ಹಳೆ ಹೊಸ ಗ್ರಂಥಗಳ ಪ್ರಕಟನೆಯನ್ನು ಕೈಕೊಳ್ಳಬೇಕು-ಎಂದು ಕನ್ನಡ ಸಾಹಿತ್ಯ ಪರಿಷತ್ತು ಬಯಸಿತು. ಹುಟ್ಟಿ, ಈಗ್ಗೆ ಮೂವತ್ತೆಂಟು ವರ್ಷಗಳಾದರೂ ಮಾಡಬಹುದಾಗಿದ್ದಷ್ಟು ಸೇವೆಯನ್ನು ಸಲ್ಲಿಸಲು ಅದಕ್ಕೆ ಸಾಧ್ಯವಾಗಿಲ್ಲ. ಅದು ಸಂಸ್ಥೆಯ ಮೇಲೆ ಮಾತ್ರ ಹೊಂದಿದ್ದಲ್ಲ; ಜನಬಲ, ಧನಬಲ, ರಾಜ್ಯಶಕ್ತಿಯ ಬಲ ಸಾಕಷ್ಟು ಇಲ್ಲವಾದರೆ ಇಂತಹ ಕಾರ್ಯ ನೆರವೇರದು. ಅಲ್ಲದೆ ಅಖಿಲ ಕರ್ನಾಟಕ ಸಂಸ್ಥೆಯೆಂದು ಹೆಸರಿಟ್ಟುಕೊಂಡ ಕಾರಣದಿಂದ ಅನುಕೂಲ ಪ್ರತಿಕೂಲ ಎರಡೂ ಉಂಟಾದವು. ಇದರ ಕಾರ್ಯರಂಗ, ಹೊಣೆಗಾರಿಕೆ ಹರಡಿದವು; ಉಪಪತ್ತಿ ಆ ಪ್ರಮಾಣಕ್ಕೆ ಏರದಾಯಿತು. ಸ್ವಂತ ಶಕ್ತಿಯೂ ಅಭಿಲಾಷೆಯೂ ಸಿದ್ಧಿಯೂ ಹೇಗೇ ಇರಲಿ ಸಮಸ್ತ ಕರ್ನಾಟಕ ವ್ಯಾಪ್ತಿ ಉಳ್ಳ ಸಂಸ್ಥೆ ಇದೊಂದೇ, ಇದರ ಕ್ರಿಯಾಶಕ್ತಿಯನ್ನು ಜನರು ಎಷ್ಟು ಹೆಚ್ಚಿಸಿದರೆ ಇದು ಅಷ್ಟು ದೊಡ್ಡದಾಗಲುಳ್ಳದ್ದು. ಎಲ್ಲ ಕನ್ನಡಿಗರ ಸಾಂಸ್ಕೃತಿಕ ಆಶೋತ್ತರಗಳನ್ನೂ ರೂಪಿಸಿ, ಅವರ ವಾಣಿಯಾಗಬೇಕೆಂಬ ಆಸೆಯಿಂದ ನಡೆಯುತ್ತಿರುವ ಈ ಸಂಸ್ಥೆಯ ಮಹೋತ್ಸವವೊಂದರಲ್ಲಿ ನಾವು ಈ ಪುನಃ ನಿಯೋಜಿತರಾಗಿದ್ದೇವೆ.

ಸಮ್ಮೇಳನ ಹೇಗೆ ನಡೆಯಬೇಕು?

ಇಂಥ ವಾರ್ಷಿಕ ಸಮ್ಮೇಳನಗಳ ಕಾರ್ಯವಿವರ ಈ ೩೮ ವರ್ಷಗಳಲ್ಲಿ  ಬಗೆ ಬಗೆಯಾಗಿ ವಿರಚಿತವಾಗಿದೆ. ಮೊದಲು ಒಂದೇ ಪ್ರಧಾನ ಸಮ್ಮೇಳನವಾಗಿ  ಇರುತ್ತಿದ್ದದ್ದು ಕಾಲಕ್ರಮದಲ್ಲಿ ಇತರ ಗೋಷ್ಠಿಗಳನ್ನು ಒಳಗೊಳ್ಳತೊಡಗಿತು. ಆದರೆ ಎಲ್ಲ ಸಮ್ಮೇಳನಗಳಿಗೂ ಸಾಧಾರಣವಾದ ಒಂದು ಗೋಷ್ಠಿ ವ್ಯವಸ್ಥೆ ಏರ್ಪಡಲು ಆದ ಹಾಗೆ ಕಾಣಲಿಲ್ಲ. ಆದರೂ ಸಮ್ಮೇಳನಕ್ಕೆ ಗೋಷ್ಠಿಗಳ ವಿಶೇಷ ಉತ್ಸಾಹವೂ ಸೇರುವಂತಾದುದು ಒಂದು ದೊಡ್ಡ ಗಳಿಕೆ; ಸಂತೋಷ. ಹಿಂದಿನ ಒಬ್ಬ ಅಧ್ಯಕ್ಷರು ಹೇಳಿದಂತೆ, ಆ ಎಲ್ಲಾ ಒಂದು ಸಾಧಾರಣ ವ್ಯವಸ್ಥೆಗೆ ಒಂದು ಆಲ್ ಇಂಡಿಯಾ ಓರಿಯೆಂಟಲ್ ಕಾನ್‍ಫರೆನ್ಸ್, ಸೈನ್ಸ್ ಕಾಂಗ್ರೆಸ್, ಫಿಲೊಸಾಫಿಕಲ್ ಕಾನ್‍ಫರೆನ್ಸ್ ಮುಂತಾದವುಗಳಲ್ಲಿನಂತೆ ಶಾಖೆಗಳಾಗಿ, ಉಪಾಂಗಗಳಾಗಿ ಏರ್ಪಟ್ಟು ಒಂದು ಕ್ರಮ, ಸಂಪ್ರದಾಯಗಳ ನಿರಂತರ ಸಂತತಿಯಂತೆ ನಡೆದರೆ ಮಾತ್ರ ಸಮ್ಮೇಳನದ ಕಾರ್ಯ ಇನ್ನಷ್ಟು ಫಲಕಾರಿಯಾಗಬಲ್ಲದು. ಉತ್ಸವ, ಆರಾಧನೆ, ಮರ್ಯಾದೆಗಳ ಜೊತೆಗೆ ನಾಲ್ಕಾರು ಶಾಖೆಗಳಲ್ಲಿ ಕೆಲಸಮಾಡುವ ಸಾಹಿತಿಗಳೂ ವಿದ್ವಾಂಸರೂ ಸೇರಿ ವರ್ಷ ವರ್ಷವೂ ಮುಖ್ಯವಾದ ತತ್ವಗಳನ್ನೂ ವಾದಗಳನ್ನೂ ಪ್ರಯೋಗಗಳನ್ನೂ ಮಂಡಿಸಿ ವಿದ್ವಜ್ಜನರಲ್ಲಿ ಒಂದು ವಿದ್ಯಾಸಂಭ್ರಮವನ್ನು ಕಲ್ಪಿಸುವುದು ಅಂತಹ ಸಮ್ಮೇಳನ ಮಹಾಕಾರ್ಯ. ಆದರೆ ಈ ಸಮ್ಮೇಳನ ಅವುಗಳಂತೆ ಕೇವಲ ವಿದ್ವಜ್ಜನರ ಸಭೆಯಲ್ಲ. ತಿಂಗಳು ಎರಡು ತಿಂಗಳ ಮುಂಚೆಯೇ ಸಮ್ಮೇಳನದ ಸದಸ್ಯತ್ವದ ಚಂದಾ ಸಲ್ಲಿಸಿ, ಲೇಖನಗಳನ್ನು ಬರೆದು ಕಳಿಸಿ, ನಾವು ಈ ವಿಭಾಗಗಳಲ್ಲಿ ಭಾಗವಹಿಸಲುಳ್ಳವರೆಂದು ಹೊಣೆಗಾರಿಕೆ ಹೊತ್ತು ಬರುವ ವಿದ್ವಾಂಸವರ್ಗ ಮಾತ್ರವೇ ಅಲ್ಲ, ಇಲ್ಲಿ ಸೇರುವುದು. ಆದರೆ ಸ್ವಂತ ಖರ್ಚಿನಿಂದ ಎಲ್ಲ ದೊಡ್ಡ ವಿದ್ವಾಂಸರೂ ಸಮ್ಮೇಳನಕ್ಕೆ ಬರುವ ವಾಡಿಕೆಯನ್ನು ನಮ್ಮಲ್ಲಿ ಏರ್ಪಡಿಸುವುದು ಹೇಗೆ? ವಿದ್ವಾಂಸರು ತಮ್ಮ ವಿಷಯ ಭಾಗವನ್ನು  ಕುರಿತು ಭಾಷಣ ಮಾಡುವಾಗ ಸಭೆಯಲ್ಲಿ ೨0 ಜನರಾದರೂ ಕುಳಿತಿರುವಂತೆ ನಂಬಿಕೆ ಕೊಡಬಲ್ಲವರು ಯಾರು? ಹಿಂದೆ ಇಂಥ ಅನುಭವಗಳು ಸಾಕಷ್ಟು ಉಂಟಾಗಿವೆ.

ನಾನಾ ಭಾಗಗಳಿಂದ ಬರುವ ಸಾಹಿತಿಗಳಿಂದಲೂ ವಿದ್ವಾಂಸರಿಂದಲೂ ಜನಸಾಮಾನ್ಯರ ಪ್ರಯೋಜನಕ್ಕಾಗಿ ಸಂಜೆ ಉಪನ್ಯಾಸಗಳನ್ನೇರ್ಪಡಿಸಿ ಜನದ ಜ್ಞಾನಾಭಿವೃದ್ಧಿಗೂ, ಮನರಂಜನೆಯ ಸಂತೋಷಕ್ಕೂ ಈಗಿನಂತೆ ಅವಕಾಶ ಕಲ್ಪಿಸಬಹುದು. ಆಯಾ ಸಮ್ಮೇಳನದ ಅಧ್ಯಕ್ಷರು ಸಾಹಿತ್ಯದ ಯಾವ ಶಾಖೆಯ ವಿದ್ವಾಂಸರಿಗೂ ಆ ಶಾಖೆಯನ್ನು ಬೇಕೆನಿಸಿದರೆ ಬಿಟ್ಟು, ಉಳಿದ ಶಾಖೆಗಳನ್ನು ನಡೆಸುವುದು ಮೇಲು. ಇದು ಸ್ವಾಗತ ಸಮಿತಿಗಳ ಅನುಕೂಲಕ್ಕೆ ಹೊಂದಿಕೊಳ್ಳುವುದರಿಂದ ಪರಿಷತ್ತು ನೇರವಾಗಿ ಏನನ್ನಾದರೂ ಮಾಡಲಾಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಸಮ್ಮೇಳನಗಳಲ್ಲಿ ಬಹುಮಟ್ಟಿಗೆ ಎಲ್ಲರಂತೆ ಸಾಹಿತ್ಯ ಪರಿಷತ್ತೂ ಅತಿಥಿ. ಅತಿಥಿಗಳಾದವರು ಆತಿಥ್ಯ ಮಾಡುವವರನ್ನು ಕ್ಲೇಶಗೊಳಿಸಲಾಗದೆಂಬುದನ್ನು ಮರೆಯಬಾರದು. ಸ್ವಾಗತ ಸಮಿತಿಯವರು ಶಕ್ತಿಮೀರಿ ಸೌಕರ್ಯಗಳನ್ನು ಕಲ್ಪಿಸುವರಾದರೂ ಸಮ್ಮೇಳನಕ್ಕೆ ಬಂದವರೆಲ್ಲರಿಗೂ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ದೊರೆಯದಿರುವುದು ಶಕ್ಯ. ಸಮ್ಮೇಳನಕ್ಕೆ ಯಾವ ಯಾವ ವಿದ್ವಾಂಸರು ಬರುವರೆಂದು ಮುಂಚಿತವಾಗಿ ಗೊತ್ತಾದರೆ, ನಮ್ಮ ಇನ್ನು ಕೆಲವರನ್ನೂ, ವಿಶೇಷವಾಗಿ ಒಬ್ಬಿಬ್ಬರು ನೆರೆಯ ಭಾಷೆಗಳ ಪ್ರತಿನಿಧಿಗಳನ್ನೂ ಈ ಸಮಾರಂಭಕ್ಕೆ ಕರೆಸಿಕೊಳ್ಳುವಂತಾದರೆ, ಈ ಕೆಲಸ  ಇನ್ನೂ ಯಶಸ್ವಿಯಾದೀತು. ಇಂಥ ಸಮ್ಮೇಳನದಲ್ಲಿ ಮರಾಠಿ, ತೆಲುಗು, ತಮಿಳು, ಮಲೆಯಾಳದ ವಿದ್ವಾಂಸರು ಆಹೂತರಾಗಿ ಬರುವುದೂ ತಮ್ಮ ಭಾಗದಲ್ಲಿ ಏನು ಕೆಲಸ ಹೇಗೆ ನಡೆಯುತ್ತಿದೆ ಎಂದು ತಿಳಿಸುವುದೂ ಅದನ್ನು ಸಾವಧಾನವಾಗಿ ಕೇಳಿ ನಾವು ಆದರಿಸವುದೂ ಒಂದು ಸಂಪ್ರದಾಯವಾದರೆ ಬಹು ಚೆನ್ನ. ಇಲ್ಲಿಗೆ ದಯಾಮಾಡಿಸಿರಬಹುದಾದ ಅಂತಹ ಮಾನ್ಯರಿಗೆ ಸ್ವಾಗತವಿದೆ. ಬಂದ ಕನ್ನಡ ವಿದ್ವಾಂಸರು ಯಾರೆಂದು ತಿಳಿಯದೆ ಅವರಲ್ಲಿ ಮುಖ್ಯರಿಂದ ಕೂಡ ಪ್ರಯೋಜನ ಪಡೆದುಕೊಳ್ಳಲಾಗದೆಯೇ ಸಮ್ಮೇಳನಗಳು ಮುಗಿದು ಹೋಗಿರುವುದುಂಟು. ಈ ಸಂಬಂಧದಲ್ಲಿ ಯಾರನ್ನು ಹೊಣೆಮಾಡುವುದು?

ಸಮ್ಮೇಳನ ಭಾಷಣಗಳ ಸಂಪುಟ ಪ್ರಕಟವಾಗಲಿ

ಈವರೆಗಿನ ಅಧ್ಯಕ್ಷರು ತಮ್ಮ ವಿಶೇಷ ಪರಿಶ್ರಮದಿಂದ ಯಾವ ಯಾವ ವಿಷಯಗಳಲ್ಲಿ ನಿಷ್ಣಾತರೊ ಆ ವಿಷಯಗಳನ್ನು ಪ್ರತಿಪಾದನೆಮಾಡಿ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಪುನರುಕ್ತಿಗಳನ್ನು ಬಿಟ್ಟು ಉಳಿದ ಭಾಗಗಳನ್ನು ಸೇರಿಸಿ ನಾಲ್ಕಾರು ಸಂಪುಟಗಳಲ್ಲಿ ಆ ಎಲ್ಲ ಭಾಷಣಗಳನ್ನೂ ಪ್ರಕಟಿಸಿದರೆ ನಾಡಿಗೆ ವಿಶೇಷ ತಿಳಿವಳಿಕೆ ದೊರೆವುದು. ಆ ಹಿಂದಿನವರ ಪಾಂಡಿತ್ಯವಾಗಲಿ ಅನುಭವವಾಗಲಿ ಸ್ಪೂರ್ತಿ, ದಕ್ಷತೆ ಆಗಲಿ ನನಗಿಲ್ಲ. ಜೀವನದ ಹಲವಾರು ರಂಗಗಳಲ್ಲಿ ತಮ್ಮ ಕೀರ್ತಿಯನ್ನು, ಕಾರ್ಯಶಕ್ತಿಯನ್ನು ಸ್ಥಾಪಿಸಿ ನಾಡಿನ ತಲೆಮಣಿಗಳಂತಿದ್ದ ನನ್ನ ಗುರುಹಿರಿಯರು ಈ ಸ್ಥಾನವನ್ನಲಂಕರಿಸಿ ಬೆಳಗಿದರು. ಅವರಂತೆ ಅಧಿಕಾರದಿಂದ ನುಡಿವ ಶಕ್ತಿ ನನಗಿಲ್ಲ. ಕನ್ನಡ ಭಾಷಾಸಾಹಿತ್ಯಗಳ ಪ್ರಾಚೀನತೆಯನ್ನಾಗಲಿ, ಶಾಸ್ತ್ರ, ಕಲೆ ಇತಿಹಾಸ ಪರಿಶೋಧನೆಗಳನ್ನು ಕುರಿತಾಗಲಿ, ವಿವರಗಳನ್ನು ಹೇಳಲೂ ಇದು ಸಮಯವಲ್ಲ. ನನಗಿಂತ ವಿದ್ವಾಂಸರಾದವರು ಅವನ್ನು ಹಿಂದಿನ ಭಾಷಣಗಳಲ್ಲಿ ಹಲವರೂ ಬೇರೆ ರೀತಿಯಲ್ಲಿ ಕೆಲವರೂ ಹೇಳಿದ್ದಾರೆ.

ಪರಿಷತ್ತಿನ ಹುಟ್ಟು

ಮೊನ್ನೆ ಮೊನ್ನೆಯವರೆಗೂ ಮೈಸೂರಿನಲ್ಲಿ ಕನ್ನಡಕ್ಕೆ, ಪ್ರಧಾನ ಗೌರವ ಹೋಗಲಿ, ಸಾಮಾನ್ಯ ಪ್ರಭಾವ ಕೂಡ ಇರಲಿಲ್ಲ. ಇಂದೂ ಎಷ್ಟಿದೆಯೋ ಕಾಣೆ. ಮಾತಿನಲ್ಲಿ ಕೆಲವರು ಸಹಾನುಭೂತಿ ತೋರಿಸಿ ಪ್ರೋತ್ಸಾಹವನ್ನೂ ಅಲ್ಪ ಸ್ವಲ್ಪ ನೆರವನ್ನೂ ಕೊಟ್ಟುದುಂಟು. ಸರ್. ಎಂ.ವಿಶ್ವೇಶ್ವರಯ್ಯನವರ ಮತ್ತು          ಎಚ್.ವಿ. ನಂಜುಂಡಯ್ಯನವರ ದೂರದರ್ಶನದಿಂದ ಪರಿಷತ್ತಿನಂತಹ ಸಂಸ್ಥೆ ಹುಟ್ಟಿತು. ಮೈಸೂರು ಮಹಾರಾಜರು ಕನ್ನಡಿಗರ ಆದರ್ಶಕ್ಕೂ ಏಳಿಗೆಗೂ ಪ್ರೋತ್ಸಾಹ ಕೊಟ್ಟರು. ಕನ್ನಡದ ಅಭಿವೃದ್ಧಿಯಾಗಬೇಕೆಂಬ ಅಭಿಮಾನದಿಂದ ವಿಶ್ವವಿದ್ಯಾನಿಲಯದಲ್ಲಿ ಕೂಡ ಪ್ರಚಾರ ಕಾರ್ಯ ನಡೆಯಬೇಕೆಂದು ನಿರ್ದೇಶನ ಮಾಡಿದರು. ಆಗಾಗ ಎಲ್ಲೊ ಕೆಲವು ದೊಡ್ಡ ಅಧಿಕಾರಿಗಳೂ ನೆರವು ಪ್ರೋತ್ಸಾಹಗಳನ್ನು ಕೊಟ್ಟುದುಂಟು. ಆದರೆ ಮೈಸೂರಿನ ಜನ ಇಂಗ್ಲಿಷಿಗೂ ಅಖಿಲ ಭಾರತ ಪ್ರಯೋಜನವೆಂಬ ಮತ್ತು ಅಂತರ್‍ರಾಷ್ಟ್ರೀಯವೆಂಬ ಮಾತುಗಳಿಗೂ ಹೆಚ್ಚು ಒಲೆದು, ಇದು ತಪ್ಪಲ್ಲ, ಆದರೆ-ಪ್ರಾಂತಭಾಷೆಯನ್ನು ಉಪೇಕ್ಷೆಮಾಡಿದರು. ಸ್ವಾಭಿಮಾನವಿಲ್ಲದ ಜನಕ್ಕೆ ಇನ್ನಾವ ಮಾನ ದೊರಕೀತು? ಅವರು ಇನ್ನೊಬ್ಬರಿಗೆ ದುಡಿವ ಜನವಾದರು. ಗಳಿಸಿದ ನಮ್ಮದನ್ನು ಇನ್ನೊಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಂದ ನಾವು ಬೆಲೆಯನ್ನು ಕೊಳ್ಳಬಹುದು. ಇಲ್ಲವಾದರೆ ಅವರ ಕೈಂಕರ್ಯವೇ ನಮಗೆ ಸಿದ್ಧಿ. ಇಂದಿಗೂ ತಿಳಿದವರೆಂಬ ಇಲ್ಲಿನ ಹಲವರ ಮಾತಿನಲ್ಲಿ ಬಹುಮಟ್ಟಿಗೆ ಆ ಮನಸ್ಸೇ ಉಳಿದು ಕನ್ನಡಕ್ಕೆ ಇನ್ನೂ ಕೀಳ್ಮೆಯೇ ಇದೆ.

ಪರಿಷತ್ತು ಮತ್ತು ಏಕೀಕರಣ

ಈಗ ಒಂದು ವರ್ಷದಿಂದೀಚೆಗೆ ನಮ್ಮ ಆಡಳಿತದ ಮುಖಂಡರ ಧೀರವಾದ ಮುನ್ನುಗ್ಗಿನಿಂದ ಕನ್ನಡದ ಕೆಲಸಕ್ಕೆ ಚಮಕೂ ಜೀವಕಳೆಯೂ ಬಂದಿವೆ. ಕನ್ನಡದ ಒಕ್ಕೂಟ ವಿಷಯದಲ್ಲಿ ಒಂದು ಮುಖವಿಲ್ಲ; ಒಂದು ಕೊರಲಿಲ್ಲ. ಪರಿಷತ್ತೂ ಇತರ ಅನೇಕ ಸಂಸ್ಥೆ ಸಮ್ಮೇಳನಗಳೂ ಏಕೀಕರಣದ ಅಗತ್ಯವನ್ನು ಒತ್ತಿ ಹೇಳಿವೆ. ನಾಡಿಗೆ ಬಿಡುಗಡೆ ಬರುವ ಮುಂಚೆ ಕಾಂಗ್ರೆಸಿನವರೇ ಭಾಷಾ ಪ್ರಾಂತ ತತ್ವವನ್ನು ಒಪ್ಪಿದರು. ಆಮೇಲೆ ಇದ್ದಕ್ಕಿದ್ದಂತೆ ಪಕ್ಷದ ಕರ್ನಾಟಕ ಪ್ರಾಂತ ಸಮಿತಿಯನ್ನೇ ಒಡೆದು ಎರಡು ಹೋಳು ಮಾಡಿಬಿಟ್ಟರು. ಈಚೆಗೆ ಕಾಂಗ್ರೆಸಿಗೆ ವಿರೋಧ ಪಂಥಗಳವರು ಏಕೀಕರಣ ವಾದವನ್ನು ಹಿಡಿದು ಕನ್ನಡದ ಕೂಗನ್ನು ಬಲಪಡಿಸಿದ್ದಾರೆ. ಆಳುವ ಪಕ್ಷಕ್ಕೆ ಮನಸ್ಸು ಪ್ರಾಂತಗಳಲ್ಲಾಗಲಿ, ಕೇಂದ್ರದಲ್ಲಾಗಲಿ ಸುಮಾರು ಸೆಡದೇ ಇದೆ. ಆದರೆ ಶಾಸನ ಸಭೆಗಳಿಗೆ ನಾಳೆಯ ಹೊಸ ಚುನಾವಣೆ ಆಗುವಾಗ ಬೇರೆ ಪಕ್ಷದವರ ಕೈ ಈ ಕಾರಣದಿಂದ ಮೇಲಾಗದಂತೆ ಎಚ್ಚರದಿಂದಿರಲು ಇದನ್ನು ಹಾಗೆ ಹೀಗೆ ಒಪ್ಪುತ್ತೇವೆಂದಾದರೂ ಆಡುತ್ತಿರಬೇಕಾಗಿದೆ. ಅದೂ ನಮಗೆ ಒಂದು ಮೇಲೇ.

ಪರಿಷತ್ತಿನ ಸ್ಥಾನ ನೆರವಿನ ವಿಚಾರ

ಈ ಎಲ್ಲ ಸಂಬಂಧಗಳಲ್ಲಿಯೂ ಪರಿಷತ್ತನ್ನು ಬಳಸಿಕೊಳ್ಳುವ ಉಪಕಾರ ಲೇಖಕರದು, ಸಮಾಜದ್ದು, ಸರ್ಕಾರದ್ದು, ಹೊರಗೆ ನಿಂತು ಟೀಕೆ ಮಾಡುವುದಕ್ಕಿಂತ ಒಳಗೆ ಬಂದು ಈ ಎಲ್ಲ ಕೆಲಸಗಳನ್ನೂ ನಿರ್ವಹಿಸಲು ನೆರವು ಕೊಟ್ಟರೆ ಪರಮೋಪಕಾರವಾದೀತು. ಸಾರ್ವಜನಿಕ ಸಂಸ್ಥೆಗಳ ಕೆಲಸ ಶಕಾರರ ಕಾಟಕ್ಕಿಡಾದ ವಸಂತಸೇನೆಯರ ನಾಡಿನದು. ತಮ್ಮ ಕಾಲವನ್ನೂ-ಕೆಲವೇಳೆ ಹಣವನ್ನೂ- ವೆಚ್ಚಮಾಡಿಕೊಂಡು ಕಾರ್ಯದರ್ಶಿಗಳೂ ಅಧ್ಯಕ್ಷರೂ ಆ ಹೊಣೆಯನ್ನು ಒಪ್ಪಿದ ತಪ್ಪಿಗಾಗಿ, ಅವರನ್ನು ಹಿಂದಿನ ಸಂಜೆ ‘ಸರ್ವಾನುಮತ’ದಿಂದ ಬೇಡಿ ಒಪ್ಪಿಸಿದ ಜನ ಮರುದಿನದಿಂದ ಎಲ್ಲರೂ ತಮ್ಮ ಬಾಣಗಳಿಗೆ ಗುರಿಮಾಡುವುದು ಸಭ್ಯವೋ ಕಾರ್ಯಸಾಧಕವೊ ನಾನು ಕಾಣೆ. ಕೆಲವು ಸಲ ಸಂಸ್ಥೆಯ ಮೇಲೂ ಅಂಥವರ ಮೇಲೂ ಬರುವ ಕಿರು ಕುಚೋದ್ಯಗಳಿಗಂತೂ ಲಂಗಿಲ್ಲ ಲಗಾಮಿಲ್ಲ. ಎಲ್ಲರೂ ಸೇರಿ ವಿಶ್ವಾಸದಿಂದ ನಡೆಸಿದರೆ ಯಾವುದೂ ಒಂದು ಸಂಸ್ಥೆ. ಇಲ್ಲಿಗೆ ಎಲ್ಲ ಬಗೆಯವರೂ ಸದಸ್ಯರಾಗಬಹುದು; ಎಲ್ಲ ವರ್ಗದವರ ಮನಸ್ಸನ್ನೂ ಸಂಸ್ಥೆ ಒಲಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಬೇರೆ ಬಗೆಯ, ಆವೇಶದ, ಅಭಿನಿವೇಶದ ಸಾಹಿತಿಗಳೂ ಲೇಖಕರೂ ಇದಕ್ಕೆ ವಿಮುಖರಾದರೆ, ದುರಧರಾಧ್ಯರಾದರೆ ಸಾರ್ವಜನಿಕವಾದ ಸಂಸ್ಥೆ ಪರಸ್ಪರ ವಿರೋಧ ಧರ್ಮವುಳ್ಳ ಎಲ್ಲರಿಗೂ ಹೇಗೆ ಉತ್ತರಕೊಟ್ಟೀತು? ಹೊಂದಲಾದೀತು? ಹತ್ತಾರು ಜನರ ತೃಪ್ತಿಯನ್ನು ಸಾಧಿಸುವ ಕಷ್ಟ ಅಲ್ಲಿ ಕೆಲಸಮಾಡಿದವರಿಗೆ ಮಾತ್ರ ಗೊತ್ತು. ಸಾವಿರಾರು ಮಂದಿ ಸದಸ್ಯರಾಗಿ, ಸಭೆ ಸೇರಿ ಬೇಕಾದ ಕೆಲಸಗಳನ್ನು ಬೇಕಾದ ವಿಚಕ್ಷಣೆಯಿಂದ ಮಾಡಿಸಿಕೊಳ್ಳಲಿ. ಹಳಗನ್ನಡ ಕೃತಿಗಳನ್ನು ತಿದ್ದಿ ಅಚ್ಚುಮಾಡಿಸಲು ಹಣಬೇಕು, ಕಾಲ ಬೇಕು, ಸಿಬ್ಬಂದಿ ಬೇಕು, ಸ್ಥಳ ಬೇಕು. ಸಂಪಾದಕ ವರ್ಗ, ಸಲಹೆಗಾರರ ವಿದ್ವಜ್ಜನ ವರ್ಗಬೇಕು. ಹೊಸಕೃತಿಗಳನ್ನು ತಾನೇ ನೇರವಾಗಿ ಆಯುವುದು ಪರಿಷತ್ತಿಗೆ ಕಷ್ಟ; ಪಕ್ಷಪಾತಗಳ ಆರೋಪಣೆ ಸುಲಭ.  ಜೊತೆಗೆ ಎದುರಿಗೆ ಸುತ್ತಲೂ ಇರುವ ಜೀವಂತ ಕೃತಿಕಾರರಲ್ಲಿ ಯಾರದನ್ನು ಪ್ರಕಟಿಸುವುದು? ಯಾರನ್ನು ಬಿಡುವುದು? ಎಲ್ಲರ ಎಲ್ಲವನ್ನೂ ಪ್ರಕಟಿಸುವುದು ಯಾರಿಗೂ ಅಶಕ್ಯ. ಇನ್ನು ಪ್ರೋತ್ಸಾಹ, ಪ್ರಶಸ್ತಿಕೊಡುವ ರೀತಿ: ಅದಕ್ಕೆ ಪುನಃ ದ್ರವ್ಯೋಪಪತ್ತಿಬೇಕು. ಇಂಥ ಸಮಾರಂಭಗಳು ನಡೆಯುವಾಗ ಬಹುಮಾನ ಹಂಚಲಾಗುವಂತೆ ದತ್ತಿಗಳೂ, ಇತರ ಖಚಿತವಾದ ನಿಧಿಗಳೂ, ಸಹಾಯ ದ್ರವ್ಯಗಳೂ ಏರ್ಪಡುವಂತಾದರೆ ಹೊಸಕಾಲದ ಒಂದೊಂದು ಗ್ರಂಥಕ್ಕೂ ಬೇಕೆನ್ನುವಷ್ಟು ಬಹುಮಾನಗಳನ್ನು ಕೊಡಬಹುದು. ಕೊಡುವ ಬಹುಮಾನ ರೂ. ೫00-೧000ಕ್ಕೆ ಕಡಮೆಯಿಲ್ಲದಿರಲಿ. ಇಂಥ ಪ್ರೋತ್ಸಾಹಕ್ಕೆ ಮಿತಿಯೆಲ್ಲಿ? ಯೋಗ್ಯತಾ ನಿರ್ಣಯಕ್ಕೆ ಬೇಕಾದರೆ ಪರಿಷತ್ತನ್ನು ನಿಯಮಿಸಿ: ಇಲ್ಲವಾದರೆ, ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು, ವಿದ್ಯಾಇಲಾಖೆಯವರು, ಪರಿಷತ್ತಿನ ಪ್ರತಿನಿಧಿಗಳು ದಾತೃಮಂಡಲದ ಒಬ್ಬ ಪ್ರತಿನಿಧಿ ಸಲಹೆಗಾರರಾಗಲಿ. ಸ್ವಾಗತ ಸಮಿತಿಗಳವರ ದ್ರವ್ಯಾನುಕೂಲ ಧಾರಾಳವಾದಾಗ ತಮ್ಮ ಮಸೂಲಿಯ ಹತ್ತರಲ್ಲಿ ಒಂದಂಶವನ್ನು ಇಂಥ ಪುರಸ್ಕಾರಕ್ಕೆ ಮುಡಿಪು ಮಾಡಿದರೆ ಅವರವರ ಊರಲ್ಲಿ ವರ್ಷದ ಒಂದು ಉತ್ತಮ ಕೃತಿಗೆ ಪುರಸ್ಕಾರ ಮಾಡಿದ ಕೀರ್ತಿ ಬರುವುದು. ಈ ನಾನಾ ಬಗೆಯ ಆಶ್ರಯ ನೆರವುಗಳನ್ನು ಕಲ್ಪಿಸುವ ಪುಣ್ಯವನ್ನು ಕಟ್ಟಿಕೊಳ್ಳುವುದು ಎಲ್ಲ ಹಣವಂತ ಶ್ರದ್ಧಾಳುಗಳಿಗೂ ಬರಬಲ್ಲದು. ಕನ್ನಡ-ಕನ್ನಡಕೋಶಕ್ಕಾಗಿ ಒಂದು ಲಕ್ಷ ರೂಪಾಯಿ ದಾನವನ್ನು ಪರಿಷತ್ತಿಗೆ ಒದಗಿಸಿದ ಮೈಸೂರು ಮುಖ್ಯಮಂತ್ರಿಗಳ ಧಾರಾಳ ಇಂಥದಕ್ಕೆ ಮೊದಲಾಗಲಿ.

Tag: Kannada Sahitya Sammelana 36, V. Seetharamaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)