ಸಾಹಿತ್ಯ ಸಮ್ಮೇಳನ-೩೯ : ಧಾರವಾಡ
ಮೇ ೧೯೫೭

ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ

kuvempu

೩೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕೆ.ವಿ. ಪುಟ್ಟಪ್ಪ

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೯-೧೨-೧೯0೪ರಲ್ಲಿ ಜನಿಸಿದರು. ೧೯೧೬ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ೧೯೨೯ರಲ್ಲಿ ಎಂ.ಎ. ಪದವಿ ಗಳಿಸಿದರು.

೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬0ರಲ್ಲಿ ನಿವೃತ್ತರಾದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು.  ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.

೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ  ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.

ಅವರ ಕೆಲವು ಪ್ರಸಿದ್ಧ ಕೃತಿಗಳು ಇವು:

ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು ೧೧-೧೧-೧೯೯೪ರಲ್ಲಿ ಮೈಸೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೯,

ಅಧ್ಯಕ್ಷರು: ಕೆ.ವಿ. ಪುಟ್ಟಪ್ಪ

ದಿನಾಂಕ: ೭, ೮, ೯ ಮೇ ೧೯೫೭

ಸ್ಥಳ : ಧಾರವಾಡ

ಪರಿಷತ್ತಿಗೂ ಪ್ರಾಂತರಚನೆಗೂ ಏನು ಸಂಬಂಧ?

ನಾವಿಂದು ಇಲ್ಲಿ ಏಕೀಕೃತ ಅಖಂಡ ಕರ್ಣಾಟಕದ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ವಾರ್ಷಿಕ ಸಮ್ಮೇಳನೋತ್ಸವದಲ್ಲಿ ಭಾಗಿಗಳಾಗಲು ಬಂದಿದ್ದೇವೆ. ನಾವು ನಿಜವಾಗಿಯೂ ಭಾಗ್ಯಶಾಲಿಗಳಲ್ಲವೆ? ಧನ್ಯರಲ್ಲವೆ?

ಹೌದು, ಅದರೆ ಏಕೆ ಧನ್ಯರು? ಏನು ಧನ್ಯತೆ? ಶಾಶ್ವತ ಪ್ರಯೋಜನರೂಪವಾದ ಯಾವ ಪುರುಷಾರ್ಥ ದೊರೆಕೊಂಡಿದೆ? ಅಥವಾ ಅಂತಹ ಪುರುಷಾರ್ಥ ಸಾಧನೆಗೆ ಹಾದಿಯಾದರೂ ಸಿದ್ಧವಾಗಿದೆಯೆ?

ಸಂಸ್ಕೃತಿ ಸಾಹಿತ್ಯ ಮತ್ತು ಕಲೆಯ ಭೂಮಿಕೆಯಲ್ಲಿ ವ್ಯವಹರಿಸುವ ಸಾಹಿತ್ಯ  ಪರಿಷತ್ತಿಗೂ ಈ ಪ್ರಾಂತರಚನೆಯ ರಾಜಕೀಯಕ್ಕೂ ಏನು ಸಂಬಂಧ? ಕನ್ನಡ ಜನತೆಯ ಸಹೃದಯದಲ್ಲಿ ಅಂತರ್ಗತವಾಗಿದ್ದ ಯಾವ ಮೂಕ ಆಶಯವನ್ನು ವಾಙ್ಮಯವನ್ನಾಗಿ ಮಾಡಲು ಪ್ರಯತ್ನಿಸಿ ಸಾಹಿತ್ಯ ಪರಿಷತ್ತು ಕಳೆದ ಮೂವತ್ತೆಂಟು ವರ್ಷಗಳಿಂದ ವರುಷ ವರುಷವೂ ನಾಡಿನ ಕೇಂದ್ರದಲ್ಲಿ ನೇಮಿಯಲ್ಲಿ ಗಡಿಮೂಲೆಗಳಲ್ಲಿ ವಾರ್ಷಿಕ ಸಮ್ಮೇಳನೋತ್ಸವವನ್ನು ನೆರಪಿ ಜನಚೇತನಕ್ಕೆ ನವೋತ್ಸಾಹವನ್ನು ತುಂಬಿ, ನಾಡಿನ ಮಕ್ಕಳನ್ನು ಮತ್ತೆ ಮತ್ತೆ ಎಚ್ಚರಿಸಿ ದೀಕ್ಷಾಬದ್ಧರನ್ನಾಗಿ ಮಾಡುತ್ತಿತ್ತೊ ಆ ಮೂಕ ಆಶಯವೆ ಕಳೆದ ಮೂವತ್ತು ನಾಲ್ವತ್ತು ವರ್ಷಗಳಿಂದಲೂ ನಮ್ಮ ನಾಡಿನ ಕವಿಗಳಲ್ಲಿ, ಲೇಖಕರಲ್ಲಿ ವಿದ್ವಾಂಸರಲ್ಲಿ, ಸಾರ್ವಜನಿಕ ಮುಂದಾಳುಗಳಲ್ಲಿ, ರಾಜಕೀಯ ಆಂದೋಲನಕಾರರಲ್ಲಿ, ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿ, ಕರ್ಣಾಟಕ ಸಂಘಗಳಂತಹ ಸಂಸ್ಥೆಗಳಲ್ಲಿ, ದೇಶಭಾಷೆಯ ಪತ್ರಿಕೆಗಳಲ್ಲಿ  ನಾನಾರೂಪಗಳಿಂದ ಅನೇಕ ಮುಖವಾಗಿ ಅಭಿವ್ಯಕ್ತವಾಗಿ ಸ್ವಯಂ ಕ್ರಿಯಾಸಮರ್ಥವಾದ ಕರ್ತೃಶಕ್ತಿಯಾಗಿ ಏಕೀಕೃತ ಅಖಂಡ ಕರ್ಣಾಟಕವಾಗಿ ಪರಿಣಮಿಸಿತು. ವಾಸ್ತವವಾಗಿ ಈ ಏಕೀಕರಣ ಮತ್ತು ಆಝಂಡತೆ ಹೊಚ್ಚಹೊಸದಾಗಿ ಸೃಷ್ಟಿಯಾದುದೇನೂ ಅಲ್ಲ. ಸಾಂಸ್ಕೃತಿಕವಾಗಿ ದೇಶದ ಮನೋಮಂಡಲದಲ್ಲಿ ಯಾವುದು ಅನೇಕ ಶತಮಾನಗಳಿಂದಲೂ  ಅಚ್ಯುತವಾದ ಭಾವಸತ್ಯವಾಗಿದ್ದಿತೊ ಅದು ಈಗ ಭೌಗೋಲಿಕವಾಗಿಯೂ ಸಿದ್ಧವಾಯಿತೆಷ್ಟೋ ಅಷ್ಟೆ.

ಸಮ್ಮೇಳನೋಚಿತ ವಿಚಾರಗಳು

ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಈ ವಿಷಯವಾಗಿ ಇಷ್ಟು ದೀರ್ಘವಾಗಿ ಸಮಾಲೋಚನೆ ಮಾಡಿದುದರ ಅರ್ಥವೇನು? ಉದ್ದೇಶವೇನು? ಸಾಹಿತ್ಯದ ವಿಚಾರವಾಗಿಯೊ ಕವಿಕಾವ್ಯವನ್ನು ಕುರಿತೊ, ಪ್ರತಿಭೆರಸಾಸ್ವಾದಾದಿ ಅಲೌಕಿಕಾನುಭವಗಳನ್ನೊ ಸಾಹಿತ್ಯ ವಿಮರ್ಶೆಯ ಅಥವಾ ಕಾವ್ಯ ವಿೂಮಾಂಸೆಯ ತತ್ತ್ವಗಳನ್ನೊ ಸ್ವಾರಸ್ಯವಾಗಿ ಪ್ರಸ್ತಾವಿಸುತ್ತಾ ಹೋಗದೆ ಭಾಷೆ, ಶಿಕ್ಷಣ ಮಾಧ್ಯಮ, ಪಾರಿಭಾಷಿಕ ಪದಸಮಸ್ಯೆ ಇತ್ಯಾದಿ ಶಿಕ್ಷಣಶಾಸ್ತ್ರ ಸಮ್ಮೇಳನೋಚಿತ ಎನಿಸಬಹುದಾದ ವಿಷಯಗಳ ಪ್ರವೇಶಕ್ಕೆ ಇಲ್ಲಿ ಅಗತ್ಯವೇನಿತ್ತು?

ಯಾರ ಮನಸ್ಸಿನಲ್ಲಾದರೂ ಅಂತಹ ಪ್ರರ್ಶನಾರ್ಥಕ ಚಿಹ್ನೆ ಹೆಡೆಯೆತ್ತಿದ್ದರೆ ಅಥವಾ ಆಶ್ಚರ್ಯ ಚಿಹ್ನೆ ನಿಮಿರಿ ನಿಂತಿದ್ದರೆ ಅದಕ್ಕೆ ಉತ್ತರ ಇಷ್ಟೆ! ಕೇರಳದಲ್ಲಿ ಮಲೆಯಾಳಿಯಂತೆ ಆಂಧ್ರದಲ್ಲಿ ತೆಲುಗಿನಂತೆ ತಮಿಳು ನಾಡಿನಲ್ಲಿ ತಮಿಳಿನಂತೆ ಕರ್ಣಾಟಕದಲ್ಲಿ ಕನ್ನಡ ಪ್ರಥಮಭಾಷೆಯಾಗದಿದ್ದರೆ ಕನ್ನಡವೆ ಶಿಕ್ಷಣ ಮಾಧ್ಯಮವಾಗದಿದ್ದದ್ದರೆ ಕನ್ನಡಿಗರ ಬಾಳು ಕುಂಠಿತವಾಗುತ್ತದೆ; ನಮ್ಮ ತಾಯಿಗೆ ನಮ್ಮ ಮನೆಯಲ್ಲಿಯ ವರಾಂಡದಲ್ಲಿ ಮಲಗಿಕೊಳ್ಳಲು ತಾಣವೂ ಅಲ್ಲ, ನಿಲ್ದಾಣ ಕೊಡಬೇಕಾಗುತ್ತದೆ; ನಮ್ಮ ಜನಸಾಮಾನ್ಯರ ಸರ್ವಾಂಗೀಣವಾದ ನ್ಯಾಯಬದ್ಧವಾದ ವಿಕಾಸಕ್ಕೆ ಅಡಚಣೆ ಒದಗುತ್ತದೆ; ನಮ್ಮ ಸಾಹಿತ್ಯವೂ ಸಮೃದ್ಧವಾಗಿ ಪುಷ್ಟವಾಗಿ ಬಹುಮುಖವಾಗಿ ಸರ್ವತೋಮುಖವಾಗಿ ಬದುಕಿನ ಮತ್ತು ವಿದ್ಯೆಯ ಸರ್ವಶಾಖೆಗಳಲ್ಲಿಯೂ ಚೈತನ್ಯಮಯವಾದ ಜನಜೀವನದ ನೆಲದಿಂದ ಹೊಮ್ಮದೆ ಪ್ರದರ್ಶನಕ್ಕಾಗಿ ತೂಗುಹಾಕಿರುವ ಕುಂಡಗಳಲ್ಲಿ ಬೆಳೆಯುವ ಲಘುಮನೋರಂಜನೆಯ ವಸ್ತುವಾಗುತ್ತದೆ. ಅಂತಹ ದುಃಖದ ಅಮಂಗಳದ ದುರಂತದ ಪರಿಸ್ಥಿತಿಗೆ ಕಾರಣವಾಗುವವರೆಲ್ಲರೂ, ವ್ಯಕ್ತಿಗಳಾಗಲಿ ಸಂಸ್ಥೆಗಳಾಗಲಿ, ಚಿರಂತನವಾಗಿ ಶಾಪಗ್ರಸ್ತರಾಗುತ್ತ್ತಾರೆ; ಕವಿ ಪ್ರವಾದಿಯೂ ಆಗುತ್ತಾನೆ.

ಆದರೆ ಹಾಗಾಗುವುದಿಲ್ಲ. ನಮ್ಮ ಜನ ಹಾಗೆ ಆಗಗೊಡಲು ಬಿಡುವುದಿಲ್ಲ. ಒಂದು ವೇಳೆ ಕನ್ನಡಿಗರ ದೌರ್ಬಲ್ಯೋಪಮವಾದ ಅತ್ಯೌದಾರ್ಯದಿಂದಲೋ ಅತಿ ದಾಕ್ಷಿಣ್ಯದಿಂದಲೋ ಅವರು ಔದಾಸೀನ್ಯವನ್ನಲಂಬಿಸಿದರೆ ತೆಲುಗು ತಮಿಳು ಮಲೆಯಾಳಿ ಮರಾಠಿ ಬಂಗಾಳಿ ಮೊದಲಾದ ಭಾರತೀಯ ಭಾಷೆಗಳ ನಮ್ಮ ನೆರೆಯ ಸಹೋದರರು ತಮ್ಮ ತಮ್ಮ ಭಾಷೆಗಳಿಗೆ ತಮ್ಮ ತಮ್ಮ ನಾಡುಗಳಲ್ಲಿ ಸರಿಯಾದ ಸ್ಥಾನಮಾನಗಳನ್ನು ಕಲ್ಪಿಸುವುದರಿಂದಲೆ ನಮ್ಮನ್ನು ಸರಿಯಾದ ದಾರಿಗೆ ಅನಿವಾರ್ಯವಾಗಿಯೆ ತಳ್ಳುವುದರಲ್ಲಿ ಸಂದೇಹವಿಲ್ಲ, ಆದ್ದರಿಂದಲೆ ನಾನು ಸಂಪೂರ್ಣ ಆಶಾವಾದಿಯಾಗಿದ್ದೇನೆ.

ಪರಿಷತ್ತಿನ ಮುಂದಿನ ಗುರಿ

ಕನ್ನಡ ಜನರ ಆಶೋತ್ತರ ಮತ್ತು ಕರ್ಣಾಟಕ ಸಂಸ್ಕೃತಿಯ ಪ್ರತಿನಿಧಿಯಾದ ಕನ್ನಡ ಸಾಹಿತ್ಯ ಪರಿಷತ್ತು ಸದ್ಯಕ್ಕೆ ನಮ್ಮ ಅಭ್ಯುದಯಕ್ಕೆ ಆವಶ್ಯಕವಾದ ಭೌಗೋಲಿಕ ಚೌಕಟ್ಟನ್ನು ಸಾಧಿಸಿದೆ. ನವಮೈಸೂರು ರಾಜ್ಯದ ಆ ಚೌಕಟ್ಟಿನ ಮೇಲೆ ನಮ್ಮ ಸಂಸ್ಕೃತಿಯ ಆದರ್ಶದ ‘ಕರ್ಣಾಟಕ’ವನ್ನು ಕಟ್ಟಬೇಕಾಗಿದೆ. ಇದುವರೆಗೆ ಪರಿಷತ್ತಿನ ವಾರ್ಷಿಕ ಸಮ್ಮೇಳನ ಸ್ವಲ್ಪ ಹೆಚ್ಚು ಕಡಮೆ ಉತ್ಸವರೂಪದ ಪ್ರಚ್ಛನ್ನ ರಾಜಕೀಯ ಚಳುವಳಿಯಾಗಿಯೆ ಸಾಗುತ್ತಿತ್ತು. ಇನ್ನು ಮೇಲೆ ಈ ವಾರ್ಷಿಕ ಸಮ್ಮೇಳನ ಮಾತ್ರವಾಗಿ ಪರ್ಯವಸಾನ ಹೊಂದುವುದರಲ್ಲಿ ಔಚಿತ್ಯವಿಲ್ಲ, ಇದು ಸಾಹಿತ್ಯಕ್ಷೇತ್ರದ ಶ್ರಮಜೀವಿಗಳ ಮತ್ತು ಕಲಾಸಾಧಕರ ವಾರ್ಷಿಕ ಸಾಹಸಸಿದ್ಧಿಗಳ ಪರೀಕ್ಷೆಯ ನಿಕಷವೇದಿಕೆಯಾಗಿ ಪರಿಣಮಿಸಬೇಕು. ನಮ್ಮ ನೆರೆಯ ಸೋದರ ಭಾಷಾಸಾಹಿತ್ಯಗಳೊಡನೆ ಹೆಚ್ಚು ಹೆಚ್ಚು ಸಂಪರ್ಕ ಬೆಳೆಯಲು ಪರಸ್ಪರ ಹೃದಯ ಪರಿಚಯದ ಮೈತ್ರಿ ಸಾಧನೆಯ ರಂಗವಾಗಿ ಪರಿವರ್ತಿತವಾಗಬೇಕು. ಅಖಿಲ ಭಾರತೀಯವಾದ ಯಾವ ಮಹೋದ್ದೇಶದಿಂದ ಸಾಹಿತ್ಯ ಅಕಾಡೆಮಿ ಪ್ರೇರಿತವಾಗಿ ವಿವಿಧ ಕಾರ್ಯಗಳಲ್ಲಿ ಪ್ರವೃತ್ತವಾಗಿದೆಯೊ ಅದರ ಪ್ರಾದೇಶಿಕ ಪ್ರತಿನಿಧಿಯಾಗಬೇಕು. ಕರ್ಣಾಟಕದ ವಿವಿಧ ಸಂಸ್ಥೆಗಳಲ್ಲಿ ವಿವಿಧ ಸಂಘಗಳಲ್ಲಿ ವಿವಿಧ ವ್ಯಕ್ತಿಗಳಲ್ಲಿ ರೂಪುಗೊಳ್ಳುತ್ತಿರುವ ಮತ್ತು ಅಭಿವ್ಯಕ್ತವಾಗುತ್ತಿರುವ ಪುರೋಗಾಮಿಗಳಾದ ಹೃದಯದ ಮತ್ತು ಬುದ್ಧಿಯ ಶಕ್ತಿಗಳನ್ನೆಲ್ಲ ಕ್ರೋಢೀಕರಿಸಿ, ಅವುಗಳನ್ನು ತಾತ್ಕಾಲಿಕತೆಯ, ವಿಫಲತೆಯ, ಅಲ್ಪ ಮನೋರಂಜನೆಯ, ವಿಕೃತ ಕಲ್ಪನೆಯ, ಶೀಘ್ರಕೀರ್ತಿಯ, ಅಲ್ಪಪ್ರಯೋಜನದ ವ್ಯರ್ಥಸಾಹಸೋದ್ಯಮದಿಂದ ವಿಮುಖವನ್ನಾಗಿ ಮಾಡಿ, ರಕ್ಷಿಸಿ, ಮಹೋದ್ದೇಶದ ಹಾಗೂ ಚಿರಂತನ ಪ್ರಯೋಜನದ ಕಡೆಗೆ ತಿರುಗಿ ಶಿಷ್ಟಸಂಕಲ್ಪನಿಷ್ಠವನ್ನಾಗಿ ಮಾಡಬೇಕು.

ಪರಿಷತ್ತಿನ ಸಾಧನೆ ಏನು

ಈ ಮೂವತ್ತು ನಲ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಧಿಸಿರುವ ಸಂಪತ್ತು, ಪರಿಷತ್ತು ಸಕಾರಣವಾಗಿ ನಿಸ್ಸಂಕೋಚವಾಗಿ ಹೆಮ್ಮೆಪಟ್ಟುಕೊಳ್ಳುವಷ್ಟು ವೈಭವಪೂರ್ಣವಾಗಿದೆ, ವೈವಿಧ್ಯಪೂರ್ಣವಾಗಿದೆ, ಶ್ರೀಮಂತವಾಗಿದೆ. ಲೋಕ ಸಾಹಿತ್ಯದ ವಿಚಾರವಾಗಿ ಹಿಂದೆ ಹೇಳಿದುದಕ್ಕಿಂತಲೂ ನೂರುಮಡಿ ಹೆಚ್ಚಾಗಿ ಹೇಳಬಹುದು. ಭಾಷಾಸಾಹಿತ್ಯದ  ವಿಚಾರವಾಗಿ. ಉದ್ದಾರಕ್ಕೆ ಎಲ್ಲೆ ಇದೆಯೆ? ಮಹಚ್ಚೇತನದ ಅಭೀಪ್ಸೆ ನಿಖರವಾದುದಲ್ಲವೆ? “ಉತ್ಸರ್ಪಿಣೀ ಖಲು ಮಹಾತಾಂ ಪ್ರಾರ್ಥನಾ!” ಉದ್ಧಾರದ ಕೊನೆ ಮುಟ್ಟಿದೆವು ಎಂದುಕೊಳ್ಳುವುದೆ ಪತನಕ್ಕೆ ಮೊದಲ ಹೆಜ್ಜೆಯಾದೀತು! ಆದ್ದರಿಂದ ನಮ್ಮ ಉದ್ಧಾರದ ವಿಷಯದಲ್ಲಿ ಸ್ವಲ್ಪ ಅತೃಪ್ತಿಯಿರಬೇಕಾದ್ದು ಪ್ರಗತಿಗೆ ಆವಶ್ಯಕ. ಆದರೆ, ಆ ಅತೃಪ್ತಿ ಆತ್ಮಧಿಕ್ಕಾರದ ಮಟ್ಟಕ್ಕೇರಿ, ಸಾಧಿಸಿರುವ ಕಾರ್ಯದ ಅವಹೇಳನದ ರೂಪಕ್ಕೂ ತಿರುಗಿ ದೋಷೈಕದೃಷ್ಟಿಯಾಗಿ ಉತ್ತಮಾಂಶವನ್ನೆಲ್ಲಾ ಅಸೂಯಾಜನ್ಯವಾದ ನಿಂದಾಗ್ನಿಯಲ್ಲಿ ಹೋಮಮಾಡುವಂತಾದರೆ ಅಂತಹ ಅತೃಪ್ತಿಯನ್ನು ಮನೋವಿಕಾಸ ಸಂಭೂತವಾದ ಒಂದು ರೋಗವನ್ನಾಗಿ ಭಾವಿಸಬೇಕಾಗುತ್ತದೆ. ಅಂತಹ ರೋಗದಿಂದ ವಿಮುಕ್ತರಾಗಿ ಪೂರ್ವಗ್ರಹದೂರವಾದ ಅಧಿಕಾರ ಬುದ್ಧಿಯಿಂದಲೂ ಅನೇಕ ಸಾಹಿತ್ಯಾಧ್ಯಯನದಿಂದ ಸಿದ್ಧವಾದ ನಿಷ್ಪಕ್ಷಪಾತ ವಿಮರ್ಶೆಯ ದೃಷ್ಟಿಯಿಂದ ಸಮೀಕ್ಷಿಸಿದರೆ ಕನ್ನಡ ಸಾಹಿತ್ಯ ಈ ಮೂವತ್ತು ನಾಲ್ವತ್ತು ವರ್ಷಗಳಲ್ಲಿ ಅದ್ಭುತವನ್ನೆ ಸಾಧಿಸಿದೆ ಎಂದು ಹೇಳಬೇಕಾಗುತ್ತದೆ.

Tag: Kannada Sahitya Sammelana 39, K.V. Puttappa, Kuvempu

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)