೪೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ಜಿ. ಕುಂದಣಗಾರ
ಕನ್ನಡ ಸಂಶೋಧನೆ, ಜೈನ ಸಾಹಿತ್ಯ, ವೀರಶೈವ ಸಾಹಿತ್ಯಗಳಲ್ಲಿ ಅದ್ವಿತೀಯ ಪಂಡಿತರಾಗಿದ್ದ ಕೆ. ಜಿ. ಕುಂದಣಗಾರರು ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದಲ್ಲಿ ಗಿರಿಮಲ್ಲಪ್ಪ-ಶಾಕಾಂಬರಿ ದಂಪತಿಗಳಿಗೆ ಮೂರನೇ ಮಗನಾಗಿ ೧೪-೮-೧೮೮೫ರಲ್ಲಿ ಜನಿಸಿದರು. ಬೆಳಗಾವಿ ಧಾರವಾಡಗಳಲ್ಲಿ ಶಾಲಾ ಶಿಕ್ಷಣ ಪೂರೈಸಿದರು. ೧೯0೯ರಲ್ಲಿ ಮೆಟ್ರಿಕ್ ಮುಗಿಸಿದರು. ೧೯೧೯ರಲ್ಲಿ ಬಿ.ಎ. ಪದವಿಧರರಾದ ಮೇಲೆ ೧೯೨೫ರಲ್ಲಿ ಎಂ.ಎ. ಪದವೀಧರರಾದರು.
ಗಳಿಕೆಯೊಂದಿಗೆ ಕಲಿಕೆ ಎಂಬಂತೆ ಶಿಕ್ಷಕರಾಗಿದ್ದುಕೊಂಡೇ ಬಿ.ಎ. ಮುಗಿಸಿದ ಅವರು ಎಂ.ಎ. ಮಾಡಿದ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿ ೧೯೨೭ರಲ್ಲಿ ಕೆಲಸದಿಂದ ಬಿಡುಗಡೆ ಹೊಂದಿದರು. ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಚ್ಯವಸ್ತು ವಿಭಾಗದಲ್ಲಿದ್ದುಕೊಂಡೇ ಸಂಶೋಧನೆ, ಕನ್ನಡ ವಿಭಾಗ ಬೆಳೆಸುವ ಕಾರ್ಯ ಮಾಡಿದರು. ೧೯೪೮ರಲ್ಲಿ ನಿವೃತ್ತರಾದರು.
ಮುಂಬೈ, ಕರ್ನಾಟಕ ವಿಶ್ವವಿದ್ಯಾಲಯಗಳ ಸೆನೆಟ್ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್. ಡಿ. ಮಾರ್ಗದರ್ಶಕರಾಗಿದ್ದರು. ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪಾದಕ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಕೊಲ್ಲಾಪುರದಲ್ಲಿ ಕರ್ನಾಟಕ ಸಂಘ ಸ್ಥಾಪಿಸಿದರು. ಬ್ರಹ್ಮಪುರಿ ಪಂಚಗಂಗಾ ತೀರಗಳಲ್ಲಿ ಉತ್ಖನನ ಕೈಗೊಂಡಿದ್ದರು. ನಾಣ್ಯಶಾಸ್ತ್ರದ ವಿಚಾರಗೋಷ್ಠಿಗಳಲ್ಲಿ ಅಪೂರ್ವ ಪ್ರಬಂಧಗಳನ್ನು ಮಂಡಿಸಿದ್ದರು.
೧೯೬೨ರಲ್ಲಿ ಗದುಗಿನಲ್ಲಿ ನಡೆದ ೪೩ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಇವರು ಅಲಂಕರಿಸಿದ್ದರು. ಮುಂಬೈಯಲ್ಲಿ ೧೯೪೬ರಲ್ಲಿ ನಡೆದ ಅಖಿಲ ಭಾರತ ಓರಿಯಂಟಲ್ ಕಾನ್ಫರೆನ್ಸ್‍ನಲ್ಲಿ ಕನ್ನಡ – ದ್ರಾವಿಡ ವಿಭಾಗದ ಗೋಷ್ಠಿಯ ಅಧ್ಯಕ್ಷರಾಗಿದ್ದರು.
ಸಂಶೋಧನಾತ್ಮಕ, ಐತಿಹಾಸಿಕ, ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿ ಎತ್ತಿದ ಕೈ ಕುಂದಣಗಾರರದು. ಅವರ ಹತ್ತಾರು ಕೃತಿಗಳು ಅನುಪಲಬ್ಧ. ಉಪಲಬ್ಧ ಕೃತಿಗಳಲ್ಲಿ ಕೆಲವು ಹೀಗಿವೆ :
ಪಂಪನ ಆದಿಪುರಾಣ (೧೯೫೩ ಸಂಪಾದನೆ), ಪೂರ್ವಪುರಾಣಂ (೧೯೪೩), ಕುಮುದೇಂದು ರಾಮಾಯಣ (೧೯೩೬), ಲೀಲಾವತಿ ಪ್ರಬಂಧಂ (೧೯೪೬), ಹರಿಹರದೇವ ಪ್ರಶಸ್ತಿ(೧೯೩೭), ಮಹಾದೇವಿಯಕ್ಕ (ಚರಿತ್ರೆ) ೧೯೩೭, ಗದ್ಯಮಂಜರಿ (ಪಠ್ಯ ೧೯೫೪), ಚಿನ್ಮಯಿ ಚಿಂತಾಮಣಿ (೧೯೩0).
ಕುಂದಣಗಾರರು ೨೨-೮-೧೯೬೫ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೩
ಅಧ್ಯಕ್ಷರು: ಕೆ.ಜಿ. ಕುಂದಣಗಾರ
ದಿನಾಂಕ ೨೭,೨೮,೨೯ ಡಿಸೆಂಬರ್ ೧೯೬೧
ಸ್ಥಳ : ಗದಗ
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಾಹಿತ್ಯ ಸಂಸ್ಕೃತಿಗಳ ಸಂವರ್ಧನೆಗೆ ಮೈವೆತ್ತ ಸಂಸ್ಥೆಗಳಲ್ಲಿ ಹಿರಿಯ ಸಂಸ್ಥೆ. ಅದು ತನ್ನ ಪಾಲಿನ ಕರ್ತವ್ಯವನ್ನು ಕಾಲಕಾಲಕ್ಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತ ಬಂದಿದೆ. ಏಕೈಕ ಕರ್ನಾಟಕ ಅಸಾಧ್ಯವೆಂದು ಅನೇಕರ ಮನದಲ್ಲಿದ್ದಾಗ, ಪರಿಷತ್ತು ಅದರ ಕನಸು ಕಂಡು, ಕೊನೆಗೆ ಅದು ನಿರ್ಮಾಣಗೊಂಡುದನ್ನೂ ಕಂಡಿತು! ನಾಡಿನ ಪುಣ್ಯದ ಪೂರ್ವದಿಂಗತದಲ್ಲಿ ನವರಾಜ್ಯಭಾನು ಉದಯವಾದನು. ರಾಜ್ಯೋದಯವಾದ ಮೇಲೆ ಪರಿಷತ್ತು ತನ್ನ ಕರ್ತವ್ಯವನ್ನು ಇನ್ನೂ ಹೆಚ್ಚು ದಕ್ಷತೆಯಿಂದ ನೆರೆವೇರಿಸುತ್ತಿದೆ ಎಂಬುದಕ್ಕೆ ಅದು ಕೈಕೊಂಡು ಕೆಳಗಿನ ಯೋಜನೆಗಳೇ ಸಾಕ್ಷಿ.
ಕನ್ನಡ-ಕನ್ನಡ ಕೋಶ
ಕನ್ನಡ ವಾಙ್ಮಯದ ಅಭ್ಯಾಸಕ್ಕೆ ಒಂದು ಸಮರ್ಪಕ ಕೋಶದ ಅವಶ್ಯಕತೆ ವಿಶೇಷವಾಗಿದೆಯೆಂದು ಪಂಡಿತರೆಲ್ಲರ ನಿದರ್ಶನಕ್ಕೆ ಬಂದ ಮಾತು. ರೆ. ಕಿಟಲ್ ಅವರ ಕನ್ನಡ-ಇಂಗ್ಲಿಷ್ ಕೋಶ, ಭಾರತೀಯ ಭಾಷೆಗಳಲ್ಲಿದ್ದ ಕೋಶಗಳಲ್ಲಿಯೇ ಅತ್ಯಂತ ಗಣನೀಯವಾದುದಾಗಿದ್ದರೂ ಅದು ಇನ್ನೂ ಅಸಮರ್ಪಕವಾಗಿದೆ. ಕಿಟೆಲ್ಲರ ಕಾಲಕ್ಕೆ ಅನೇಕ ಕನ್ನಡ ಗ್ರಂಥಗಳಿನ್ನೂ ಪ್ರಕಟವಾಗಿರಲಿಲ್ಲ. ಉದಾಹರಣೆಗಾಗಿ, ಪಂಪಭಾರತ, ವಚನ ವಾಙ್ಮಯದಂತಹ ಸಾಹಿತ್ಯ ಕೃತಿಗಳನ್ನು ಅಳವಡಿಸಿಕೊಳ್ಳುವ ಯೋಗ ಆ ಕಾಲಕ್ಕೆ ಬಂದಿರಲಿಲ್ಲ. ಕಳೆದ ೭೫ ವರುಷಗಳ ಅವಧಿಯಲ್ಲಿ ಅನೇಕ ಕನ್ನಡದ ಉದ್ಗ್ರಂಥಗಳು ಬೆಳಕುಕಂಡಿವೆ; ಭಾಷಾಶಾಸ್ತ್ರದ ಪ್ರಗತಿಯಾಗಿದೆ. ಆದುದರಿಂದ ಆಧುನಿಕ ತತ್ತ್ವಗಳನ್ನು ಅಳವಡಿಸಿಕೊಂಡು ಶಬ್ದಗಳ ನಿಷ್ಪತ್ತಿ, ಅರ್ಥವಿಶೇಷ, ಪ್ರಯೋಗ ಮೊದಲಾದವುಗಳನ್ನು ಒಳಗೊಂಡ ಒಂದು ಕೋಶವನ್ನು ನಿರ್ಮಿಸಬೇಕೆಂಬ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಎರಡು ದಶಕಗಳ ಹಿಂದೆಯೇ ಕೈಕೊಂಡಿತು. ಆ ಯೋಜನೆ ಮೊನ್ನೆ ಮೊನ್ನೆಯವರೆಗೆ ಬಹು ಮಂದಗತಿಯಿಂದ ಸಾಗಿದ್ದಿತು. ಪರಿಷತ್ತು ವಿಶ್ವ ಪ್ರಯತ್ನ ಮಾಡಿ ಈ ಕೋಶದ ಮಹತ್ವವನ್ನು ಸರಕಾರದ ಅವಗಾಹನೆಗೆ ತಂದುಕೊಟ್ಟು, ಅದರಿಂದ ೧೫ ಲಕ್ಷರೂಪಾಯಿಗಳ ಸಹಾಧನವನ್ನು ಪಡೆದಿದೆ. ಕೋಶದ ಕೆಲಸ ಈಗ ಬಹುವೇಗದಿಂದ ನಡೆದಿದೆ. ನಾಡಿನ ನಾನಾ ಭಾಗದ ಗಣ್ಯವಿದ್ವಾಂಸರನ್ನು ಕೋಶದ ಸಂಪಾದಕ-ಮಂಡಲಿಯಲ್ಲಿ ಸೇರಿಸಿಕೊಂಡು, ಕೋಶದ ಕಾರ್ಯಕ್ರಮವನ್ನು ಶಾಸ್ತ್ರೀಯವಾಗಿಯೂ ತೀವ್ರವಾಗಿಯೂ ಮುಂದುವರೆಸಿರುವುದು. ೫ ಲಕ್ಷದಷ್ಟು ಪಟ್ಟಿಕೆಗಳು ಈಗಾಗಲೇ ಸಿದ್ಧವಾಗಿವೆ. ಪ್ರಕಟವಾಗಿರುವ ಪ್ರತಿಯೊಂದು ಹಳಗನ್ನಡ ಗ್ರಂಥವನ್ನೂ ಅಚ್ಚಾಗದೆ ಇರುವ ಅನೇಕ ತಾಳೆಯೋಲೆಯ ಗ್ರಂಥಗಳನ್ನೂ ಸಹಸ್ರಾರು ಶಾಸನಗಳನ್ನೂ ಇದಕ್ಕಾಗಿಯೇ ಉಪಯೋಗಿಸಿಕೊಂಡಿರುವದು ಈ ಕೋಶದ ವೈಶಿಷ್ಟ್ಯ. ಈ ಕೋಶಕ್ಕಾಗಿಯೇ ಹೊಸ ಅಚ್ಚುಕೂಟವೊಂದನ್ನು ಪರಿಷತ್ತು ಕೊಂಡಿದೆ. ಮೊದಲಿನ ೯೬ ಪುಟಗಳು ಈ ಮಾರ್ಚದೊಳಗಾಗಿಯೇ ತಪ್ಪದೆ ಅಚ್ಚಾಗಲಿವೆ. ಮುಂದಿನ ಕಾರ್ಯ ಭರದಿಂದ ನಡೆದು ೫000 ಪುಟಗಳ ನಾಲ್ಕು ಸಂಪುಟಗಳು ಬಹುಬೇಗನೆ ಪ್ರಕಟವಾಗಲಿರುವುವು. ಇದಕ್ಕಾಗಿ ವಿದ್ಯಾಸಚಿವರಾದ ಶ್ರೀ ಗಣಮುಖಿ ಅಣ್ಣಾರಾಯರನ್ನು ಪರಿಷತ್ತಿನ ಅಧ್ಯಕ್ಷರಾದ ಪಂಡಿತರತ್ನಂ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳನ್ನು, ಕೋಶ ಸಮಿತಿಯ ಸಂಪಾದಕ ಮಂಡಲಿಯನ್ನು, ಪರಿಷತ್ತಿನ ಕಾರ್ಯಕಾರಿ ಮಂಡಳಿಯನ್ನು, ಇದಕ್ಕೆ ಸಂಬಂಧಪಟ್ಟ ಇನ್ನಿತರ ಸರಕಾರಿ ಅಧಿಕಾರಿಗಳನ್ನೂ, ಹೃತ್ಪೂವರ್ಕವಾಗಿ ಅಭಿನಂದಿಸುತ್ತೇನೆ.
ಗ್ರಂಥ ಪ್ರಕಟನೆ
ಕರ್ನಾಟಕ ಕವಿಚರಿತೆಗಳು ನಮ್ಮ ಸಾಹಿತ್ಯದ ಅಮೌಲ್ಯ ಕೃತಿಗಳು. ಕಳೆದ ಅನೇಕ ವರ್ಷಗಳಿಂದ ಅವು ದೊರೆಯದಾಗಿದ್ದುವು. ಅದರಿಂದ ಸಾಹಿತ್ಯಾಭ್ಯಾಸಿಗಳಿಗೂ ಸಂಶೋಧಕರಿಗೂ ವಿಶೇಷ ತೊಂದರೆಯಾಗಿದ್ದಿತು. ಪರಿಷತ್ತು ಈ ಕೊರತೆಯನ್ನು ಪೂರೈಸಲು ಮುಂದೆ ಬಂದು ಕರ್ನಾಟಕ ಕವಿಚರಿತೆಗಳನ್ನು ಪ್ರಕಟಿಸುವ ಯೋಜನೆಗೆ ಅಣಿಯಾಗಿದೆ. ಈಗಾಗಲೇ ಕವಿಚರಿತೆಯ ಪ್ರಥಮ ಸಂಪುಟ ಪ್ರಕಟವಾಗಿದೆ. ಅದು ಮೊದಲಿನ ಕವಿಚರಿತೆಯ ವಿಷಯದೊಡನೆ ಈಚೆಗೆ ಬಂದ ಹೊಸ ವಿಷಯಗಳನ್ನು ಒಳಗೊಂಡಿದೆ. ದ್ವಿತೀಯ ಸಂಪುಟವೂ ಅಚ್ಚಿನಲ್ಲಿದೆ. ಇದಲ್ಲದೆ ಪರಿಷತ್ತು ವಿವೇಕಚಿಂತಾಮಣಿ, ಸೂಕ್ತಿಸುಧಾವರ್ಣದಂತಹ ಉದ್ಗ್ರಂಥಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನಿಟ್ಟು ಕೊಂಡಿರುವುದು ಸ್ತುತ್ಯವಾಗಿದೆ. ಈ ಕಾರ್ಯವನ್ನು ಅದು ತೀವ್ರಗೊಳಿಸಲಿ.
ಸಾಹಿತ್ಯ ಸಮ್ಮೇಳನಗಳು
ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ನಾನಾ ಭಾಗಗಳಲ್ಲಿ ೪೨ನೇ ಸಾಹಿತ್ಯ ಸಮ್ಮೇಳನಗಳನ್ನು ಜರುಗಿಸಿ ಈಗ ೪೩ನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗಿ ನಿಂತಿದೆ. ಹಿಂದೆ ಕನ್ನಡಿಗರು ಇನ್ನೂ ಜಾಗೃತವಾಗಿರದ ಕಾಲದಲ್ಲಿ ಅವರನ್ನು ಬಡಿದೆಬ್ಬಿಸುವ ಮಹತ್ಕಾರ್ಯವನ್ನು ಸಮ್ಮೇಳನಗಳು ಮಾಡುತ್ತಿದ್ದವು. ಉತ್ಸಾಹಿ ಯುಗದಲ್ಲಿ, ಸಂಭ್ರಮ, ಸನ್ಮಾನ, ಮೆರವಣಿಗೆ ಮುಂತಾದುವೆಲ್ಲ ನಡೆದುವು. ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಗೌರವಿಸಿ ಅವರನ್ನು ಸತ್ಕರಿಸಿದುದೂ ಆಯಿತು. ಸಮ್ಮೇಳನಗಳನ್ನು ನೆರವೇರಿಸುವುದು ಒಂದು ದೃಷ್ಟಿಯಿಂದ ನೋಡಿದರೆ ಬಹು ಸುಲಭವಾದ ಕಾರ್ಯವಲ್ಲ. ಅದಕ್ಕಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಮಾಡಬೇಕಾಗುತ್ತದೆ; ಕಾರ್ಯಕರ್ತರಲ್ಲಿ ಸಂಘಟನೆ ಮೂಡಬೇಕಾಗುತ್ತದೆ. ಪರಿಷತ್ತು ಹಾಗೂ ಸ್ವಾಗತ ಸಮಿತಿಗಳೂ ೪-೬ ತಿಂಗಳೂ ಇದೇ ಕಾರ್ಯವನ್ನು ಮಾಡಬೇಕಾಗುತ್ತದೆಯೆಂದರೂ ಸಲ್ಲುವುದು. ಸಂಭ್ರಮ ಸನ್ಮಾನಗಳ ಹೊರತಾಗಿ ಇದರ ಫಲಶೃತಿ ಏನು ಎಂಬುದನ್ನು ವಿಚಾರಿಸುವ ಕಾಲ ಈಗ ಸಂಪ್ರಾಪ್ತವಾಗಿದೆ. ಇದು ಬುದ್ಧಿಮತ್ತೆಯ ಯುಗ. ಭಾವನಾಪ್ರಧಾನವಾದ ಉತ್ಸವ ಯುಗ ನಿಂತುಹೋಗಿದೆ. ಇನ್ನು ಮುಂದೆ ನಮ್ಮ ಸಮ್ಮೇಳನಗಳ ಬೌದ್ಧಿಕಮಟ್ಟ ಮೇಲಕ್ಕೇರಬೇಕು. ನಮ್ಮ ನಾಡಿನಲ್ಲಿ ಸಂಶೋಧನೆ, ಲಲಿತವಾಙ್ಮಯ ಇವು ಯಾವ ಯಾವ ದಿಸೆಯಲ್ಲಿ ನಡೆದಿವೆಯೆಂಬುದರ ಮಾಪನವಾಗಿ, ಅವುಗಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುವ ಯೋಜನೆ ಸಮ್ಮೇಳನಗಳ ಕಾಲದಲ್ಲಿ ನಡೆಯಬೇಕು. ಸಂಶೋಧಕರು, ಬರೆಹಗಾರರು ಸುಸಂಘಟಿತವಾಗಿ ನಮ್ಮ ಜ್ಞಾನದ ಪ್ರತಿಯೊಂದು ಕ್ಷೇತ್ರದ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ೨ ವರ್ಷಕ್ಕೊಮ್ಮೆ ನಡೆಯುತ್ತಿರುವ ಅಖಿಲ ಭಾರತ ಪ್ರಾಚ್ಯ ಸಮ್ಮೇಳನವನ್ನು ನೆನಪಿಗೆ ತಂದುಕೊಳ್ಳಬಹುದು ಎರಡು ವರ್ಷಗಳ ಪೂರ್ವದಲ್ಲಿಯೇ ಮುಂದಿನ ಸಮ್ಮೇಳನದ ಸ್ಥಳ ಅಧ್ಯಕ್ಷರ ಆಯ್ಕೆ ಯಾವ ಗಲಭೆಯಿಲ್ಲದೆ ಆಗಿಹೋಗುತ್ತದೆ. ಸಮ್ಮೇಳನದ ಅಂಗವಾಗಿ ನಡೆದು. ಇಂಥ ಶಾಖೆಗಳನ್ನು ಅವುಗಳ ಅಧ್ಯಕ್ಷರನ್ನೂ ಭಾಷಣಕಾರರನ್ನೂ ಮೊದಲೇ ಗೊತ್ತುಮಾಡಿರುತ್ತಾರೆ. ಎರಡು ವರ್ಷಗಳ ಅಭ್ಯಾಸ ಸಮೀಕ್ಷಣಗಳ ಬಲದಿಂದ ಆ ಸಮ್ಮೇಳನವು ಕೆಲಮಟ್ಟಿಗೆ ಶಾಶ್ವತವಾದ ಫಲಗಳನ್ನು ಒದಗಿಸಿಕೊಡುತ್ತದೆ. ನಮ್ಮ ಸಾಹಿತ್ಯ ಸಮ್ಮೇಳನಗಳೂ ಹೀಗೆ ನೆರವೇರಬಹುದೇ? ಸಂಬಂಧಪಟ್ಟವರು ಸಮಾಲೋಚನೆ ಮಾಡಿ ಸೂಕ್ತ ಕ್ರಮಗಳನ್ನು ಕೈಕೊಂಡರೆ ಈಗ ಅನವಶ್ಯ ಏಳುತ್ತಿರುವ ಯಾವ ಗಲಭೆಗಳಿಗೂ ಮುಂದೆ ಅಸ್ಪದವಾಗಲಿಕ್ಕಿಲ್ಲ ವೆನಿಸುತ್ತದೆ.
Tag: Kannada Sahitya Sammelana 43, K.G. Kundanagara
ಪ್ರತಿಕ್ರಿಯೆ