ಸಾಹಿತ್ಯ ಸಮ್ಮೇಳನ-೪೭ : ಬೆಂಗಳೂರು
ಡಿಸೆಂಬರ್ ೧೯೭0

ಅಧ್ಯಕ್ಷತೆ: ದೇ. ಜವರೇಗೌಡ

೪೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ದೇ. ಜವರೇಗೌಡ

ಕನ್ನಡಕ್ಕಾಗಿ ಹೋರಾಟ ಮಾಡಿದ ಕುವೆಂಪು ಅವರ ಪರಮಶಿಷ್ಯರಾದ ದೇ.ಜ.ಗೌ(ದೇವೇಗೌಡ ಜವರೇಗೌಡ) ಕೃಷಿಕ ಕುಟುಂಬದಿಂದ ಬಂದವರು. ದೇವೇಗೌಡ- ಚೆನ್ನಮ್ಮ ದಂಪತಿಗಳಿಗೆ ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ ೬-೭-೧೯೧೮ರಲ್ಲಿ ಜನಿಸಿದರು. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ೧೯೪೩ರಲ್ಲಿ ಕುವೆಂಪು ಅವರ ಶಿಷ್ಯರಾಗಿ ಎಂ.ಎ. ಪದವಿ ಗಳಿಸಿದರು.

೧೯೪೪ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಸ್ಥಾನವನ್ನು ೧೯೭0ರಲ್ಲಿ ಅಲಂಕರಿಸಿದರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ದೇಜಗೌ ಟ್ರಸ್ಟ್ಗಳನ್ನು ಸ್ಥಾಪಿಸಿದ ಇವರು ಜನಪದವಸ್ತು ಸಂಗ್ರಹಾಲಯ, ಜನಪದ ಭಾಷಾಂತರ ಡಿಪ್ಲೋಮಾ ತರಗತಿಗಳನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿ ಸದಸ್ಯರಾಗಿ ೧೯೬೭ರಲ್ಲಿ ಶ್ರವಣಬೆಳಗೊಳದಲ್ಲಿ ಸಾಹಿತ್ಯಗೋಷ್ಠಿ ಅಧ್ಯಕ್ಷರೂ ಆಗಿದ್ದರು. ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಕೇಂದ್ರ ಸಾಹಿತ್ಯ ಅಕಾಡೆಮಿಗಳು ವಯಸ್ಕರ ಶಿಕ್ಷಣ ಸಮಿತಿ, ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೭0ರಲ್ಲಿ ೪೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಅದರ ಅಧ್ಯಕ್ಷ ಪಟ್ಟದ ಗೌರವ ಇವರದಾಗಿತ್ತು.

ಟಾಲ್‍ಸ್ಟಾಯ್ ಅವರ ಕಾದಂಬರಿ ಅನುವಾದ ಪುನರುತ್ಥಾನಕ್ಕೆ ಸೋವಿಯಟ್‍ಲ್ಯಾಂಡ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ತಿರುವಾಂಕೂರಿನ ದ್ರಾವಿಡಭಾಷಾ ವಿಜ್ಞಾನ ಸಂಸ್ಥೆಯಿಂದ ಫೆಲೋಷಿಪ್, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಾಯವಾಗಿವೆ. ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಯನ್ನು ೨00೮ರಲ್ಲಿ ಪರಿಷತ್ತು ಇವರಿಗೆ ನೀಡಿತು.

೧೨0ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ದೇಜಗೌ ಅವರ ಕೆಲವು ಮುಖ್ಯ ಕೃತಿಗಳಿವು:

ಕಬ್ಬಿಗರ ಕಾವಂ(ಸಂಪಾದನೆ), ಲೀಲಾವತಿ ಪ್ರಬಂಧ(ಸಂಪಾದನೆ), ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ, ನಂಜುಂಡ ಕವಿ (ವಿಮರ್ಶೆ), ಕಡುಗಲಿ ಕುಮಾರರಾಮ, ವಿದೇಶದಲ್ಲಿ ನಾಲ್ಕು ವಾರ(ಪ್ರವಾಸ), ಧರ್ಮಾಮೃತ ಸಂಗ್ರಹ (ಜೈನಶಾಸ್ತ್ರ), ಹೋರಾಟದ ಬದುಕು (ಆತ್ಮಕಥೆ) ಇತ್ಯಾದಿ.

ದೇಜಗೌ ಅವರು ಏಪ್ರಿಲ್ ೩೦, ೨೦೧೬ರಂದು  ಈ  ಲೋಕವನ್ನಗಲಿದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೭

ಅಧ್ಯಕ್ಷರು: ದೇ.ಜವರೇಗೌಡ

ದಿನಾಂಕ ೨೭,೨೮,೨೯ ಡಿಸೆಂಬರ್ ೧೯೭0                                                 

ಸ್ಥಳ : ಬೆಂಗಳೂರು

 

ಸಮ್ಮೇಳನಗಳ ಮೂಲ

ವಾಸ್ತವವಾಗಿ ಈ ಸಾಹಿತ್ಯ ಸಮ್ಮೇಳನಗಳ ಮೂಲವನ್ನು ಎಂದಿನ ಕಾಲದ ರಾಜಸ್ಥಾನಗಳಲ್ಲಿ ಗುರುತಿಸಬಹುದಾಗಿದೆ; ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನೃಪತುಂಗ; ಪ್ರಜಾಕೋಟಿ ಪ್ರಾರಂಭಿಸಿದ ಪ್ರಪಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಶ್ರೀ ಎಚ್.ವಿ. ನಂಜುಂಡಯ್ಯನವರು. ಕಳೆದ ಐವತ್ತೈದು  ವರ್ಷಗಳಲ್ಲಿ ಈ ಮಹಾಸಮ್ಮೇಳನದ ಅಧ್ಯಕ್ಷ ಸ್ಥಾನಮಾನವನ್ನು ಕನ್ನಡ ನಾಡುನುಡಿಗಳಿಗೆ ನಿಷ್ಠೆಯಿಂದ ನಾನಾರೀತಿಯಿಂದ  ಸಲ್ಲಿಸಿರುವ ಸೇವೆಯನ್ನು ಸಾಹಿತಿಗಳು ಹಾಗೂ ಅಧಿಕಾರಿಗಳು ತುಂಬಿದ್ದಾರೆ. ಆ ಹೆಸರುಗಳಲ್ಲಿ ಒಂದೊಂದೂ ಶಕ್ತಿಯ ಪುಟಕ್ಕೆ ಚೈತನ್ಯದಾಯಿ ಪುಳಕಹುಟ್ಟಿಸುವಂಥದು.

ಪರಿಷತ್ತು ಮತ್ತು ಮೈಸೂರು ವಿಶ್ವವಿದ್ಯಾನಿಲಯ

ಮೈಸೂರು ವಿಶ್ವವಿದ್ಯಾನಿಲಯಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಅತಿಶಯವಾದ ಆತ್ಮೀಯ ಸಂಬಂಧವಿದೆಯೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾಗಿ, ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಹೆಚ್.ವಿ. ನಂಜುಂಡಯ್ಯನವರು ಧರ್ಮ ಕರ್ಮ ಸಂಯೋಗದಿಂದ ಕನ್ನಡ ನಾಡಿನಲ್ಲಿ ಪ್ರಪ್ರಥಮವಾದುದಾಗಿದ್ದು ಭರತಖಂಡದ ಪ್ರಾಚೀನ ಮಹಾವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯದ ಪ್ರಪ್ರಥಮ ಕುಲಪತಿಯಾದದ್ದು ಮಹತ್ವಪೂರ್ಣವೂ ಧ್ವನಿಯುಕ್ತವೂ ಆದ ಮಹಾಘಟನೆಯೆಂದೇ ಹೇಳಬಹುದು. ಒಂದು ದೃಷ್ಟಿಯಲ್ಲಿ ಈ ಎರಡು ಮಹಾಸಂಸ್ಥೆಗಳು ಅವರ ಮಾನಸಶಿಶುಗಳು. ಆ ಪುಣ್ಯಪುರುಷನ ತಪಶ್ಯಕ್ತಿಯಿಂದ ಈ ಎರಡು ಮಹಾಸಂಸ್ಥೆಗಳು ಕನ್ನಡ ನಾಡುನುಡಿಗಳಿಗೆ ಶಂಕರ ಶಕ್ತಿಯಾಗಿ, ಕನ್ನಡಿಗರ ಆಶೋತ್ತರಗಳಿಗೆ ಕಲ್ಪವೃಕ್ಷವಾಗಿ, ಭರತಖಂಡವಷ್ಟೆ ಅಲ್ಲ, ಜಗತ್ತಿನ ಸಂಸ್ತುತಿಗೆ ಪಾತ್ರವಾಗಿ ಗಗನೋಪಮವಾಗಿ ಭವ್ಯವಾಗಿ ಬೆಳೆದು ನಿಂತಿವೆ. ಅಂದಿನಿಂದ ಇಂದಿನತನಕ ಈ ಎರಡು ಮಹಾಸಂಸ್ಥೆಗಳ ನಂಟು ದಿನದಿನಕ್ಕೆ ವರ್ಧಿಸುತ್ತ, ಅದು ಅದ್ವೈತಸಿದ್ಧಿಮುಖವಾಗಿರುವಂತೆ ತೋರುತ್ತದೆ. ಹದಿನೆಂಟು ವರ್ಷದನಂತರ  ಪ್ರೌಢಶಾಲೆಯ ಹಂತದಲ್ಲಿ ಕನ್ನಡ ಮಾಧ್ಯಮ ಯೋಜನೆಯನ್ನು ಜಾರಿಗೆ ತಂದು ನುಡಿಗೆ ಅಚ್ಚುಮೆಚ್ಚುಗಳನ್ನು ತುಂಬಿದ ಧೀಮಂತ ಶಿಕ್ಷಣತಜ್ಞ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಎನ್.ಎಸ್. ಸುಬ್ಬರಾಯರು ಇಪ್ಪತ್ತೊಂದನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದದ್ದು ಈ ಮಾತಿನ ಸತ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಅಲ್ಲಿಂದ ಹದಿನೆಂಟು ವರ್ಷಗಳ ನಂತರ ಕನ್ನಡವನ್ನು ನಾನಾ ಆಯಾಮಗಳಲ್ಲಿ ಬೆಳೆಸಿದ ರಾಷ್ಟ್ರಕವಿ ಕುಲಪತಿ ಕುವೆಂಪು ಅವರು ಮೂವತ್ತೊಂಬತ್ತನೆಯ ಸಮ್ಮೇಳನದ ಅಧ್ಯಕ್ಷರಾಗಿ, ಆ ಬಾಂಧವ್ಯವನ್ನು ಸ್ಥಿರಗೊಳಿಸಿದರು. ಈ ಮಧ್ಯೆ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರೂ ಬೆಳ್ಳಾವೆ ವೆಂಕಟನಾರಣಪ್ಪನವರೂ ಕನ್ನಡದ ಇಬ್ಬರು ಮೂವರು ಪ್ರಾಧ್ಯಾಪಕರೂ ಅಧ್ಯಕ್ಷರಾದದ್ದು ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿಗೆ ಕಲಶವಿಟ್ಟಂತಾಗಿದೆ. ಈಗ ನಾನು ಕೇವಲ ನಿಮಿತ್ತವಾಗಿ ಸಂದಿರುವ ಈ ಅಧ್ಯಕ್ಷಪದವಿಯ ಗೌರವವನ್ನು ಈ ಮಹಾಮಾತೆ ವಿಶ್ವವಿದ್ಯಾನಿಲಯ ಭಗವತಿಯ ಸಿರಿನುಡಿಗಳಿಗೆ ಸಮರ್ಪಿಸುತ್ತೇನೆ.

ಪರಿಷತ್ತು ಮಾತೃಶಕ್ತಿ ಸಂಸ್ಥೆ

ಮಹಾರಕ್ಷೆಯಾಗಿ ಜನತೆಯ ಆಶೋತ್ತರಗಳಿಗೆ ನಾಲಗೆಯಾಗಿ ದಿನಕಳೆದಂತೆಲ್ಲ ಚೈತನ್ಯದಾಯಿಯಾಗಿ ನಿರ್ಗುಣಶಕ್ತಿಯಾಗಿ ಬೆಳೆಯುತ್ತಿದೆ. ಬೆಳ್ಳಾವೆ ವೆಂಕಟನಾರಣಪ್ಪ, ಬಿ.ಎಂ. ಶ್ರೀಕಂಠಯ್ಯ, ಡಿ.ವಿ.ಜಿ., ಮಾಸ್ತಿ, ಶಿವಮೂರ್ತಿ ಶಾಸ್ತ್ರಿ, ಅನಕೃ ಮೊದಲಾದ ಮಹಾನುಭಾವರು ತಮ್ಮ ತನುಮನಧನಗಳನ್ನು ಧಾರೆಯೆರೆದು ಈ ಮಹಾಸಂಸ್ಥೆಯನ್ನು ದೊಡ್ಡದು ಮಾಡಿದ್ದಾರೆ. ಭಾಷಾಸಾಹಿತ್ಯ ಸಂಬಂಧವಾದ ಎಲ್ಲ ಚಟುವಟಿಕೆಗಳಿಗೆ ಅದು ಪರೋಕ್ಷವಾಗಿಯೊ ಪ್ರತ್ಯಕ್ಷವಾಗಿಯೊ ಪ್ರೋತ್ಸಾಹ ನೀಡುತ್ತ ಬಂದಿದೆ. ಅದಕ್ಕೆ ಭವ್ಯವಾದ ಕಟ್ಟಡಗಳಿಲ್ಲ, ಬೃಹತ್ತಾದ ಗ್ರಂಥಾಲಯವಿಲ್ಲ, ಲಕ್ಷಗಟ್ಟಲೆ ನಿಧಿಯಿಲ್ಲ, ಸಿಬ್ಬಂದಿವರ್ಗ ದೊಡ್ಡದಿಲ್ಲ; ಒಟ್ಟಿನಲ್ಲಿ ಅದು ಮೇಲುನೋಟಕ್ಕೆ ಎದ್ದು ಕಾಣುವಂಥದಲ್ಲ. ಆದರೆ ಅದರ ಇತಿಹಾಸದ ಕಡೆಗೆ ಕಣ್ಣುಹಾಯಿಸಿದಾಗ, ಅದರ ಅಭ್ಯುದಯಕ್ಕಾಗಿ ದುಡಿದಿರುವ ಮಹನೀಯರ ಹೆಸರುಗಳನ್ನು ಸ್ಮರಿಸಿಕೊಂಡಾಗ, ಪರಿಷತ್ತೆಂದರೆ ಕಲ್ಲು ಇಟ್ಟಿಗೆ ಗಾರೆಗಳ ಬರಿಯ ಕಟ್ಟಡವಲ್ಲ, ಕನ್ನಡನಾಡಿನ ಏಕೀಕರಣವನ್ನು ಸಾಧಿಸಿ, ಕನ್ನಡ ಜನಮನವನ್ನೊಂದು ಮಾಡಿ ಕರ್ನಾಟಕ ಸಂಸ್ಕೃತಿಯ ಮಹಾಜ್ಯೋತಿಯಾಗಿ ಕ್ಷೇಮಂಕರಿಯಾಗಿ ಕನ್ನಡ ವಿರುವೆಡೆಯಲ್ಲೆಲ್ಲಾ ರಾರಾಜಿಸುವ ಮಹಾಶಕ್ತಿಯೆಂದು ವೇದ್ಯವಾಗದಿರದು. ಅದು ಕನ್ನಡ ಜನತೆಯ ಏಕೈಕ ಪ್ರಾತಿನಿಧಿಕ ಸಂಸ್ಥೆ. ಅದು ಆಗ ಮತ್ತು ಈಗ ತನ್ನ ಮುಂದಿರಿಸಿಕೊಂಡಿರುವ ಧ್ಯೇಯೋದ್ದೇಶಗಳು ಹಲವು; ಅದಕ್ಕೆ ಅವುಗಳನ್ನೆಲ್ಲ ತಾನೇ ಏಕಾಂಗಿಯಾಗಿ ಕಾರ್ಯಗತಗೊಳಿಸಬೇಕೆಂಬ ದೃಷ್ಟಿಯಿರಲಾರದು. ನಾಡುನುಡಿಗಳ ಏಳ್ಗೆಗಾಗಿ ದುಡಿಯುತ್ತಿರುವ ನಾನಾ ಸಂಘಸಂಸ್ಥೆಗಳಿಗೆ ಮಹಾವಿದ್ಯಾಲಯಗಳಿಗೆ ಸಂಪರ್ಕಶಕ್ತಿಯಾಗಿ ಸ್ಫೂರ್ತಿಶಕ್ತಿಯಾಗಿ, ಆ ಮೂಲಕ ತನ್ನ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳುತ್ತ ಮಾತೃಶಕ್ತಿಯಾಗಿ ಮೆರೆಯಬೇಕಾಗಿದೆ.

ಪರಿಷತ್ತಿನ ಸುವರ್ಣಮಹೋತ್ಸವ

ಕಾಲ ಕೂಡಿಬಂದಾಗ ಜಡದಲ್ಲಿ ಚೇತನ ಸಂಚಾರವಾಗುತ್ತದೆ. ತೃಣ ಪರ್ವತವಾಗುತ್ತದೆ, ಮಣ್ಣು ಬಂಗಾರವಾಗುತ್ತದೆ; ಅನುಕೂಲ ವಾತಾವರಣ ತಾನಾಗಿಯೇ ಸೃಷ್ಟಿಯಾಗುತ್ತದೆ, ನಿಮಿತ್ತ ಶಕ್ತಿಗಳನ್ನು ಸೃಷ್ಟಿಸಿಕೊಳ್ಳುತ್ತದೆ; ಆಗ ಎಂಥ ವಿರೋಧಿಶಕ್ತಿಗಳೂ ಸ್ತಬ್ಧವಾಗುತ್ತವೆ, ಅಡ್ಡ ಬಂದ ಪರ್ವತವೇ ಚೂರ್ಣೀಕೃತವಾಗುತ್ತದೆ; ಪ್ರತಿಗಾಮಿ ಶಕ್ತಿಗಳು ನೆರೆಯೊಡನೆ ತೇಲಿದರೆ ಬಚಾವು, ಅದಕ್ಕಭಿಮುಖವಾದರೆ ಸಾವು, ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪೂರ್ವ ಸಿದ್ದತೆಗಳೆಲ್ಲ ಮುಗಿದು, ಸಾಧನೆ ಸಿದ್ಧಿಯಾಗಿ ಪರಿಣಮಿಸುವ ಸುವರ್ಣ ಸಮಯದಲ್ಲಿದ್ದೇವೆ. ಈ ಪರಿಸ್ಥಿತಿಗೆ ಬಹುಮಟ್ಟಿಗೆ ಕಾರಣವಾಗಿ, ಐವತ್ತು ವರ್ಷ ಸಾರ್ಥಕವಾದ ಬದುಕು ನಡೆಸಿ ಸಿದ್ಧಿಯ ಮುಂಬೆಳಗು ಗೋಚರಿಸುವ ಪುಣ್ಯ ಸಂದರ್ಭದಲ್ಲಿ ಪರಿಷತ್ತು ಸುವರ್ಣ ಮಹೋತ್ಸವವನ್ನು ಆಚರಿಸಿ, ಸಮಸ್ತ ಕನ್ನಡಿಗರ ಕೃತಜ್ಞತೆಗೆ ಪಾತ್ರವಾಗಿ, ಏಕಕಾಲದಲ್ಲಿ ಕನ್ನಡ ನಾಡನ್ನೆಲ್ಲ ದಿಟ್ಟಿಸುವಂತೆ, ಕನ್ನಡಿಗರ ಮೇಲೆಲ್ಲಾ ಕೃಪಾದೃಷ್ಟಿಯನ್ನು ಹರಿಸುವಂತೆ ಕೊರಳೆತ್ತಿ ಹೆಮ್ಮೆಯಿಂದ ನಿಂತಿದೆ. ವಾಸ್ತವವಾಗಿ ಇದು ಕನ್ನಡನಾಡಿನ ಕನ್ನಡಿಗನೂ ಆಚರಿಸಬೇಕಾದ ಹಬ್ಬ; ಕನ್ನಡನಾಡಿನ ಪ್ರತಿಯೊಂದು ಸಂಸ್ಥೆಯೂ ಇದಕ್ಕೆ ವಂದನೆಯನ್ನು ಸಲ್ಲಿಸಬೇಕಾದ ಪುಣ್ಯದಿನವಿದು. ಸಿದ್ಧಿಯ ಅರುಣದೋಯಕ್ಕಾಗಿ ಕಾಯುತ್ತಿರುವಾಗಲೇ ಅದನ್ನು ಪ್ರಳಯ ಮೇಘ ಮುಸುಕದ ಹಾಗೆ ಕನ್ನಡಿಗರೆಲ್ಲ ಸದಾ ಜಾಗೃತರಾಗಿ ನೋಡಿಕೊಳ್ಳಬೇಕಾಗಿದೆ; ಪರಿಷತ್ತು ನಿದ್ರಾವಶವಾಗದೆ ಎಚ್ಚರದಿಂದಿರಬೇಕಾಗಿದೆ.

ಪರಿಷತ್ತಿನ ತ್ರೈವಾರ್ಷಿಕ ಯೋಜನೆ

ಕತೆ ಕವಿತೆ ಕಾದಂಬರಿಗಳನ್ನು ಬರೆಯುವುದೇ ಸಾಹಿತಿಯ ಅಳತೆಗೋಲೆಂದರೆ ಶ್ರೀನಾರಾಯಣ  ಸಾಹಿತಿಗಳಲ್ಲ. ನಿರಕ್ಷತೆಯೊಡನೆ ಹೋರಾಟ ಪ್ರಾರಂಭಿಸಿ ಪತ್ರಿಕಾ ಸಂಪಾದಕನ ಹಂತವನ್ನು ದಾಟಿ, ಕನ್ನಡ ಪುಸ್ತಕಗಳನ್ನು ಹೊತ್ತು ಮನೆಮನೆಗೆ ಹೋಗಿ ಮಾರಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನಲಂಕರಿಸಿದ ನಂತರವೂ ಅವರು ಸಾಹಿತಿ ಅಹುದೋ ಅಲ್ಲವೋ ಎಂಬ ಪ್ರಶ್ನೆ ಎತ್ತುವುದಾದರೆ ಅದಕ್ಕಿಂತ ಅಸಂಬದ್ಧತೆ ಇನ್ನೊಂದಿಲ್ಲ ಎನ್ನಬೇಕಾದೀತು. ಈ ಮಾತು ಸತ್ಯಸ್ಯ ಸತ್ಯ.  ಕ್ರಮಬದ್ಧತೆ ಹಾಗೂ ವ್ಯವಸ್ಥೆ ಅವರ ಪ್ರತಿಯೊಂದು ವ್ಯವಹಾರದಲ್ಲಿಯೂ ಎದ್ದು ಕಾಣುವ ಲಕ್ಷಣ; ಅದರ ಯಶಸ್ಸಿಗೆ ಅದೇ ಕಾರಣ. ಇದಕ್ಕೆ ಅವರ ತ್ರೈವಾರ್ಷಿಕ ಯೋಜನೆಯೇ ಸಾಕ್ಷಿ. ಅದು ಅವರ ಮಾನಸಶಿಶು.

ಈ ಯೋಜನೆ ಕೇವಲ ಪತ್ರರೂಪದಲ್ಲಿಯೇ ಉಳಿದಿಲ್ಲ, ಅದರ ಕಾರ್ಯಕ್ರಮಗಳಲ್ಲಿ ಹಲವು ಈಗಾಗಲೇ ಕಾರ್ಯಗತಗೊಂಡಿವೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಶಾಖೆಗಳನ್ನು ತೆರೆದು ಪರಿಷತ್ತು ಸಮಗ್ರ ಕನ್ನಡ ನಾಡಿನ ಏಕೈಕ ಪ್ರಾತಿನಿಧಿಕ ಸಂಸ್ಥೆಯೆನ್ನುವುದನ್ನು ಸ್ಥಿರಪಡಿಸಿದ್ದಾರೆ, ಎಂದೋ ನಡೆಯಬೇಕಾಗಿದ್ದ ಸುವರ್ಣಮಹೋತ್ಸವವನ್ನು ಕನ್ನಡಿಗರಿಗೆಲ್ಲ ತೃಪ್ತಿಯಾಗುವಂತೆ ವಿಜೃಂಭಣೆಯಿಂದ ನಡೆಸಿದ್ದಾರೆ. ರಂಗಮಂದಿರ ಕಟ್ಟಡಕ್ಕೆ ಆಸ್ತಿಭಾರ ಹಾಕಿಸಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ನೂರು ಪುಸ್ತಕಗಳನ್ನಾದರೂ ಹೊರತರಬೇಕೆಂದು ಸಂಕಲ್ಪಿಸಿ, ಈಗಾಗಲೇ ೨೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ನಿಘಂಟಿನ ಕೆಲಸವನ್ನು ತ್ವರಿತಗೊಳಿಸದ್ದಾರೆ. ಉಳಿದ ಕಾರ್ಯಕ್ರಮಗಳೂ ಬೇಗನೆ ಕೈಗೂಡುತ್ತವೆನ್ನುವುದಕ್ಕೆ ಇವಿಷ್ಟು ಸಾಕ್ಷಿ.

ಪರಿಷತ್ತಿನ ಪ್ರಗತಿ ಮಂದಗತಿ

ಕನ್ನಡಕ್ಕೆ ಮನ್ನಣೆಯನ್ನು ದೊರಕಿಸುವ ವಿಷಯದಲ್ಲಿ ಈ ತನಕ ಪರಿಷತ್ತು ಮಂದಗತಿಯಿಂದಲೇ ಸಾಗುತ್ತಿತ್ತೆನ್ನಬಹುದು. ಈ ದಿಶೆಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಢಿಸಿ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳ ಮೇಲೆ ಒತ್ತಾಯ ತರಲು ಪರಿಷತ್ತು ಶ್ರಮಿಸಬೇಕಾಗಿದೆ. ಇಂಥ ಒತ್ತಾಯಕ್ಕೆ ಇದು ಸಕಾಲ. ಕನ್ನಡನಾಡಿನಲ್ಲೆಲ್ಲಾ ಕನ್ನಡ ಪ್ರಜ್ಞೆ ಮೂಡಿದೆ.  ಈ ಕೂಡಲೆ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರುವಂತೆ ಸರ್ಕಾರವನ್ನು ಪ್ರೇರಿಸಬೇಕು. ಈಗ ತಾನೆ ಪಿಯುಸಿ ಮಂಡಲಿ ರಚನೆಯಾಗಿದೆ. ಕನ್ನಡವೇ ಪ್ರಧಾನ ಮಾಧ್ಯಮವಾಗಿರಬೇಕೆಂದು ಪಠ್ಯಕ್ರಮ ನಿಯೋಜನೆಗಾಗಿ ರಚನೆಗೊಂಡಿದ್ದ ಪರಿಣಿತಮಂಡಲಿ ನಿರ್ಧರಿಸಿದೆ. ಆ ನಿರ್ಧಾರದ ವಿರುದ್ಧವಾಗಿ ಅಲ್ಲೊಂದು ಇಲ್ಲೊಂದು ಒಡಕುದನಿ ಕೇಳಿಸುತ್ತಿದೆ. ಆ ನಿರ್ಧಾರ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವಂತೆ ಪರಿಷತ್ತು ತನ್ನೆಲ್ಲಾ ಶಕ್ತಿ ಸಾಮರ್ಥ್ಯಗಳನ್ನು ವಿನಿಯೋಗಿಸಬೇಕಾಗಿದೆ. ಕನ್ನಡ ನುಡಿಯ ಹಾಗೂ ಕನ್ನಡನಾಡಿನ ಉಳಿವಳಿವಿನ ಪ್ರಶ್ನೆ ಇದರ ಜಯಾಪಜಯಗಳನ್ನವಲಂಬಿಸಿದೆ. ಪರಿಷತ್ತು ಪಿಯುಸಿ ಮಂಡಲಿಯ ಹಿಂದೆ ಬಲವಾಗಿ ನಿಂತಲ್ಲಿ ಅದು ಖಂಡಿತ ಯಶಸ್ವಿಯಾಗುತ್ತದೆಂದು ಧೈರ್ಯವಾಗಿ ಹೇಳಬಲ್ಲೆ.

ಪರಿಷತ್ತು ಕನ್ನಡದ ಅಭಿಮಾನವನ್ನು ಬೆಳೆಸಬೇಕು

ಪರಿಷತ್ತಿನ ಯೋಜನೆಗಳಲ್ಲೊಂದು ರಾಜಧಾನಿಯಲ್ಲಿ ಕನ್ನಡದ ಅಭಿಮಾನವನ್ನು ಬೆಳೆಸುವುದು ಈ ಹಿಂದೆ ಶ್ರೀ ಅ.ನ.ಕೃಷ್ಣರಾಯರೂ ಅವರ ಬೆಂಬಲಿಗರೂ ಕೆಲವು ಕಾರ್ಯಕ್ರಮಗಳನ್ನು ಕೈಕೊಂಡು ಮಾರ್ಗದರ್ಶನ ನೀಡಿದ್ದಾರೆ.  ಕನ್ನಡಪಕ್ಷ ಮತ್ತು ಕನ್ನಡ ಚಳುವಳಿಗಾರರು ಈ ದಿಶೆಯಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ಕನ್ನಡನಾಡಿನ ಹೃದಯ ಅದರ ರಾಜಧಾನಿ; ಹೃದಯವೇ ರೋಗಪಿಡಿತವಾದರೆ ದೇಹದ ಗತಿಯೇನು? ಈ ದೇಹಕ್ಷೇಮದ ದೃಷ್ಟಿಯಿಂದ ಹೃದಯಕ್ಕೆ ಚಿಕಿತ್ಸೆ ಈ ಕೂಡಲೆ ನಡೆಯಬೇಕಾಗಿದೆ.

ಉತ್ತಮ ಸಾಹಿತ್ಯಸೃಷ್ಟಿಗನುಕೂಲವಾದ ವಾತಾವರಣವನ್ನು ಸೃಷ್ಟಿಸಬೇಕಾದದ್ದು ಪರಿಷತ್ತಿನ ಧರ್ಮ. ಕನ್ನಡ ಲೇಖಕರ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲವೆನ್ನುವುದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯ. ಲೇಖನ ವ್ಯವಸಾಯವೇ ಪ್ರಧಾನ ವೃತ್ತಿಯಾದವರ ಜೀವನಯಾಪನೆ ಸಲೀಸಾಗಿ ನಡೆಯವಂತೆ ದ್ರವ್ಯಸಹಾಯ ನೀಡಲು ಒಂದು ನಿಧಿಯನ್ನು ಸ್ಥಾಪಿಸಿಸುವುದೊಳ್ಳೆಯದು.  ಲೇಖಕರು ದುಡ್ಡಿಗಾಗಿ ಪ್ರಕಾಶಕರ ಮನೆಗಳಿಗೆ ಅಲೆದಾಡುವಂತಾಗಬಾರದು; ಪಠ್ಯಪುಸ್ತಕ ಸಮಿತಿಯ ಕೃಪಾಭಿಕ್ಷೆಗಾಗಿ ತೊಳಲಾಡುವಂತಾಗಬಾರದು.

ಗಡಿರಕ್ಷಣೆ ಮತ್ತು ಪರಿಷತ್ತು

ಕನ್ನಡನಾಡಿನ ಗಡಿಯ ರಕ್ಷಣೆ ಪರಿಷತ್ತಿನ ಮತ್ತೊಂದು ಮಹತ್ತರ ಕರ್ತವ್ಯ, ಬೆಳಗಾಂ ಎಲ್ಲಿದ್ದರೇನು? ಕಾಸರಗೋಡು ಎಲ್ಲಿದ್ದರೇನು? ತಾಳವಾಡಿ ಎಲ್ಲಿದ್ದರೇನು? ಎಂತಿದ್ದರೂ ಅವು ಭರತಖಂಡದ ಭಾಗ ತಾನೆ? ಎಂದು ಪ್ರಶ್ನಿಸುವ ಲಾಂಗೂಲಚಾಲನ ಪ್ರವೃತ್ತಿಯ ಜನ ನಮ್ಮಲ್ಲಿ ಇಲ್ಲದಿಲ್ಲ, ಹಣ ಎಲ್ಲಿದ್ದರೇನಂತೆ? ನಿನ್ನ ಜೇಬಿನಲ್ಲಿದ್ದರೇನು? ಎಂದು ಕೇಳಿದರೆ ಅವರೇನು ಉತ್ತರ ಹೇಳಿಯಾರೋ ಕಾಣೆ. ಹೊನ್ನಿಗೆ ಅನ್ವಯಿಸುವ ಹೋಲಿಕೆಯನ್ನು ಹೀಗೆಯೇ ಮುಂದುವರಿಸಿದ್ದಾದರೆ ಅಂಥವರು ಬಾಯಿಮುಚ್ಚಿಕೊಂಡಾರು. ಉಭಯ ಪಕ್ಷಗಳ ಸಮ್ಮತಿಯಿಂದ ರಚನೆಗೊಂಡ ಮಹಾಜನ ಆಯೋಗದ ವರದಿಯನ್ನು ಜಾರಿಗೆ ತರದಿರುವುದು ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ; ಕನ್ನಡಿಗರ ಮುಖಕ್ಕೆಸೆದ ಸವಾಲಾಗಿದೆ. ಪಂಜಾಬ್, ಹರಿಯಾಣ ಪ್ರಾಂತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದಿಟ್ಟತನದಿಂದ ಪರಿಹರಿಸಿದ ಪ್ರಧಾನಿಯವರು ಈ ವಿಷಯದಲ್ಲಿ ಹಿಂಜರಿದದ್ದು ವಿಸ್ಮಯವೇ ಸರಿ. ಕನ್ನಡಿಗರು ತಂತಮ್ಮ ಭಿನ್ನತೆಗಳನ್ನು ತೊರೆದು, ಸ್ವಾರ್ಥವನ್ನು ಮರೆತು, ಒಟ್ಟುಗೂಡಿ, ಧೈರ್ಯದಿಂದ ವರ್ತಿಸದಿದ್ದರೆ ಬೆಳಗಾಂ ಕಳಚಿಹೋದೀತು. ಅದರ ಹಿಂದೆ ಒಂದಾದ ಮೇಲೊಂದು ಜಿಲ್ಲೆಗಳು ನಗರಗಳು ಕೈಬಿಟ್ಟಾವು; ಈ ಮಹತ್ಕಾರ್ಯ ಸಾಧನೆಯಲ್ಲಿ ಪರಿಷತ್ತಿನ ಪಾತ್ರ ಮಹತ್ತರವಾದುದಾಗಬೇಕಾಗಿದೆ.

ಪರಿಷತ್ತಿಗೆ ಸರಕಾರದ ಪ್ರೋತ್ಸಾಹ

ಈ ಸಂದರ್ಭದಲ್ಲಿ ಕನ್ನಡನುಡಿಗೆ ಹಾಗೂ ಕರ್ಣಾಟಕದ ಕಲೆಗಳಿಗೆ ಇಂದಿನ ಮೈಸೂರು ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ನೆನೆಯದಿದ್ದರೆ ಕರ್ತವ್ಯ ಚ್ಯುತಿಯ ಆರೋಪಕ್ಕೆ ಗುರಿಯಾಗಬೇಕಾದೀತು. ಶ್ರೀ ವೀರೇಂದ್ರ ಪಾಟೀಲರ ಸಂಪುಟದ ಅರ್ಥಸಚಿವರೂ ವಿದ್ಯಾಸಚಿವರೂ ಸ್ವಯಂ ಕಲಾಭಿಜ್ಞರೂ ಆದದ್ದರಿಂದ, ಕನ್ನಡ ನುಡಿಯ ಮಹತ್ತನ್ನು ಬಲ್ಲವರಾದ್ದರಿಂದ ಕನ್ನಡ ಭಾಷಾಸಾಹಿತ್ಯ ಸಂಬಂಧವಾದ ಯೋಜನೆಗಳಿಗೆ ಕೈಕೊಕ್ಕರಿಸದೆ ಉದಾರವಾಗಿ ದ್ರವ್ಯಸಹಾಯ ನೀಡುತ್ತಿದ್ದಾರೆ. ಇಂತಹ ಯೋಜನೆಗಳಿಗೆ ಅವರೆಂದೂ ಇಲ್ಲ ಎಂದವರಲ್ಲ. ಒಂದೂಕಾಲುಕೋಟಿ ರೂಪಾಯಿ ವೆಚ್ಚತಗಲುವ ಕನ್ನಡ ವಿಶ್ವಕೋಶದ ಬೃಹದ್ಯೋಜನೆ ಹಾಗೂ ಇಪ್ಪತ್ತೈದು ಲಕ್ಷ ವೆಚ್ಚದ ಜ್ಞಾನ ಗಂಗೋತ್ರಿಗೆ ಮಂಜೂರಾತಿ ನೀಡಿದ್ದಾರೆ. ದುಡ್ಡಿನ ಅಭಾವದಿಂದಾಗಿ ವಿಶ್ವವಿದ್ಯಾನಿಲಯಗಳ ಪ್ರಕಟಣಾ ಕಾರ್ಯ ಕುಂಠಿತವಾಗಿಲ್ಲ. ಸಂಗೀತ ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳಿಗೆ ಯಾವ ಕೊಕ್ಕೆಯೂ ಇಲ್ಲದೆ ಧನಸಹಾಯವನ್ನು ಸರಕಾರವು ನೀಡುತ್ತಿದೆ. ಮೇಲಾಗಿ, ಅನೇಕ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ಜೀವಾವಧಿ ವೇತನವನ್ನು ನೀಡುತ್ತಿದೆ. ಈ ಜೀವನಾಂಶ ಯೋಜನೆ ಇನ್ನೂ ವಿಸ್ತೃತವಾಗುವ ಭರವಸೆಯಿದೆ. ಪರಿಷತ್ತಿಗೆ ನೀಡುವ ಸಾಲಿಯಾನ ಸಹಾಯದ್ರವ್ಯ ಐದು ಲಕ್ಷಕ್ಕಾದರೂ ಹೆಚ್ಚಾಗಬೇಕಾದದ್ದು ನ್ಯಾಯ, ಕನ್ನಡ ಶಿಕ್ಷಣ ಹಾಗೂ ಆಡಳಿತ ಮಾಧ್ಯಮವಾಗಬೇಕೆಂಬುದು ಈ ಸರ್ಕಾರದ ಸಂಕಲ್ಪವಾಗಿದೆ; ಪ್ರತಿಗಾಮಿ ಶಕ್ತಿಗಳ ಕಾರಣವಾಗಿ ಆ ಸಂಕಲ್ಪ ಇನ್ನೂ ಈಡೇರದಿರುವುದು ನಾಡಿನ ದುರ್ದೈವ.

Tag: De. Javaregowda, Tag: Kannada Sahitya Sammelana 47

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)