ಸಾಹಿತ್ಯ ಸಮ್ಮೇಳನ-೪೮ : ಮಂಡ್ಯ
ಮೇ-ಜೂನ್ ೧೯೭೪

ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ

jayadevi-tayi-ligade

೪೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಜಯದೇವಿತಾಯಿ ಲಿಗಾಡೆ 

ಕರ್ನಾಟಕದ ಏಕೀಕರಣಕ್ಕೆ ಗಡಿನಾಡ ಕನ್ನಡಿಗರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಕವಯಿತ್ರಿ ಜಯದೇವಿತಾಯಿ ಲಿಗಾಡೆ ಅವರು ಚೆನ್ನಬಸಪ್ಪ ಮಡಕಿ-ಸಂಗವ್ವ ಮಡಕಿ ದಂಪತಿಗಳ ಪುತ್ರಿಯಾಗಿ ೨೩-೬-೧೯೧೨ರಲ್ಲಿ ಸೊಲ್ಲಾಪುರದಲ್ಲಿ ಜನಿಸಿದರು. ಸೊಲ್ಲಾಪುರದಲ್ಲಿ ಮರಾಠಿ ಶಾಲೆಯಲ್ಲಿ ಇವರ ಶಿಕ್ಷಣ ಆರಂಭವಾಯಿತು. ೧೪ನೇ ವಯಸ್ಸಿನಲ್ಲಿ ವಿವಾಹವಾದ ನಂತರ ಇವರು ಕನ್ನಡ ಕಲಿತು ಕನ್ನಡಿಗರ ಜಾಗೃತಿಗಾಗಿ ಶ್ರಮಿಸತೊಡಗಿದರು.

ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷತೆ ವಹಿಸಿದ ಹೆಗ್ಗಳಿಕೆ ಇವರದು. ೧೯೫೨ರಲ್ಲಿ ಬೇಲೂರಿನಲ್ಲಿ ನಡೆದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ದಿಟ್ಟತನದಿಂದ ಮಾತಾಡಿದರು. ೧೯೫0ರಲ್ಲಿ ಮುಂಬಯಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾಗೋಷ್ಠಿಯ ಅಧ್ಯಕ್ಷೆ ಆಗಿದ್ದರು. ಮಂಡ್ಯದಲ್ಲಿ ನಡೆದ ೪೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷಿಣಿ ಎಂಬುದು ಈಕೆಯ ಹೆಗ್ಗಳಿಕೆಯಾಗಿದೆ.

ಜಯದೇವಿತಾಯಿ ಲಿಗಾಡೆ ಅವರ ಸಿದ್ಧರಾಮೇಶ್ವರ ಪುರಾಣ ಕಾವ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದೇವರಾಜ ಬಹಾದ್ದೂರ್ ಬಹುಮಾನ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸ್ತ್ರೀ ಹೃದಯದ ರಸಾನುಭವದ ಸಂಪತ್ತಿನ ಅಭಿವ್ಯಕ್ತಿಯಾಗಿ ಇವರು ರಚಿಸಿರುವ ಕಾವ್ಯ ಕವಿತೆಗಳು ಜಾನಪದದ ಸೊಗಡಿನಿಂದ ಕೂಡಿವೆ.

ಜಯಗೀತ, ತಾಯಿಯ ಪದಗಳು, ತಾರಕ ತಂಬೂರಿ, ಸಿದ್ಧರಾಮೇಶ್ವರ ಪುರಾಣ (ಕನ್ನಡದ ಮಹಾಕಾವ್ಯಗಳಲ್ಲಿ ಒಂದಾಗಿದೆ) ಇವು ಇವರ ಕೆಲವು ಕನ್ನಡ ಕೃತಿಗಳಾಗಿವೆ. ಸಿದ್ಧರಾಮ, ಸಿದ್ಧವಾಣಿ, ಬಸವದರ್ಶನ, ಮಹಾಯೋಗಿನಿ, ಸಮೃದ್ಧ ಕರ್ನಾಟ ಶಾರದೆ, ಬಸವವಚನಾಮೃತ ಮುಂತಾದವು ಇವರ ಮರಾಠಿ ಕೃತಿಗಳಾಗಿವೆ.

ಜಯದೇವಿತಾಯಿ ಅವರು ೨೪-೭-೧೯೮೬ರಲ್ಲಿ ಕೈಲಾಸವಾಸಿಗಳಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ-೪೮,

ಅಧ್ಯಕ್ಷರು, ಜಯದೇವಿತಾಯಿ ಲಿಗಾಡೆ

ದಿನಾಂಕ ಮೇ ೩೧, ಜೂನ್ ೧,೨, ೧೯೭೪

ಸ್ಥಳ : ಮಂಡ್ಯ

[ಟಿಪ್ಪಣಿ ೧೯೭೧, ೧೯೭೨, ೧೯೭೩ ಸಮ್ಮೇಳನ ನಡೆಯಲಿಲ್ಲ]

ನೀವು ರೂಪಿಸಿರುವ ಈ ಸಾಹಿತ್ಯ ಸಮ್ಮೇಳನದ ವೇದಿಕೆಯು ಕನ್ನಡದ “ನಾನಾ” ಸಮಸ್ಯೆಗಳನ್ನು ಬಿಚ್ಚು ಮನಸ್ಸಿನಿಂದ ಚರ್ಚಿಸಿ, ನಮ್ಮಲ್ಲಿ ಕನ್ನಡದ ಪ್ರಜ್ಞೆಯನ್ನು ಒಡಮೂಡಿಸಿ, ಮತ್ತಷ್ಟು ಬಲಗೊಳಿಸಲು ನೆರವಾಗುವುದೆಂದು ನಂಬಿದ್ದೇನೆ. ಇದಕ್ಕೆ ಒಂದು ಸದಾವಕಾಶವನ್ನು ನೀವು ಒದಗಿಸಿಕೊಟ್ಟಿದ್ದೀರಿ. ಇದು ನಿಮ್ಮ ವಾತ್ಸಲ್ಯ, ನಿಮ್ಮ ಪ್ರೀತಿ.

ಪರಿಷತ್ ಅಧ್ಯಕ್ಷ ಜಿ. ನಾರಾಯಣರ ಸೇವೆ

ಕನ್ನಡದ ಸರ್ವತೋಮುಖವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಲವನ್ನು ತಂದುಕೊಟ್ಟು ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಭದ್ರ ನೆಲೆಗಟ್ಟಿನ ಮೇಲೆ ನಿಲ್ಲಿಸಿ; ಕನ್ನಡ ಸಾಹಿತ್ಯವನ್ನು ಮನೆಮನೆಗೂ ಮುಟ್ಟಿಸುವ ಧೀರ ಸಂಕಲ್ಪವನ್ನು ತಾಳಿ, ಅವಿರತವಾಗಿ ದುಡಿಯುತ್ತಿರುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋದರ ಜಿ. ನಾರಾಯಣ ಅವರು ಇದೇ ಜಿಲ್ಲೆಯವರು ಎನ್ನುವುದು ಹೆಮ್ಮೆಯ ಮಾತು. ಅವರ ಸೇವೆ ಇನ್ನೂ ಕನ್ನಡಕ್ಕೆ ಲಭಿಸುವಂತಾಗಲಿ.

ನಿಷ್ಕ್ರಿಯವಾಗಿದ್ದ ಪರಿಷತ್ತು

ಅಖಂಡ ಕರ್ನಾಟಕದ ದಿವ್ಯ ಸ್ವಪ್ನವನ್ನು ಹೃದಯದಲ್ಲಿ ಹೊತ್ತುಕೊಂಡು ಜನತೆ ಮುನ್ನಡೆದಾಗ, ಅಂದು ಸಾಹಿತ್ಯ ಪರಿಷತ್ತು ಕೂಡ ರಾಜಕೀಯ ದೌರ್ಬಲ್ಯ ಮತ್ತು ಒತ್ತಡಕ್ಕೆ ಒಳಗಾಗಿತ್ತು. ೧೯೫೨ರ ಬೇಲೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅಖಂಡ ಕರ್ನಾಟಕದ ಒಂದು ಗೊತ್ತುವಳಿಯನ್ನು ಕೂಡ ಮಂಡಿಸಿ, ಅದನ್ನು ನಿರ್ಣಯಿಸಲಾಗದಷ್ಟು ಅದು ನಿಷ್ಕ್ರಿಯವಾಗಿತ್ತು. ಅಂಥ ಮಬ್ಬು ಮಸುಕಿದ ಕಾಲದಲ್ಲಿ ಕಣ್ಣೀರಿನಿಂದ ಬೇಲೂರಿನ ಚೆನ್ನಕೇಶವನ ಪಾದ ತೊಳೆದು, ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಖಂಡ ಕರ್ನಾಟಕದ ಗೊತ್ತುವಳಿಯನ್ನು ಮಂಡಿಸಿ, ‘ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು?’ ಎಂದ ಕನ್ನಡ ಕವಿಯ ಸವಾಲಿಗೆ ‘ಗಂಡುಸಾದರೆ ನನ್ನ ಬಲಿ ತೆಗೆದುಕೊಳ್ಳುವಿರಾ?’ ಎಂದು ನಾನು ಮೊರೆಯಿಸಬೇಕಾಯಿತು. ಅದೇ ಸಮಯದಲ್ಲಿ ಮುಂದುವರೆದು ಮಾತನಾಡುತ್ತಾ, ಅಖಂಡ ಕರ್ನಾಟಕದ ಈ ಹೋರಾಟವನ್ನು ಯಾವುದೇ ಆಶೆಗಳನ್ನಿಟ್ಟುಕೊಂಡು ನಾವು ಕೈಗೆತ್ತಿಕೊಂಡಿಲ್ಲ. ಇದಕ್ಕೆ ಸೊನ್ನಲಿಗೆಯ ಸಿದ್ಧರಾಮನೇ ಸಾಕ್ಷಿ. ಪಂಪಾಪತಿ ವಿರೂಪಾಕ್ಷ, ಬೇಲೂರಿನ ಚೆನ್ನಕೇಶವ, ಶ್ರವಣಬೆಳಗೊಳದ ಗೊಮ್ಮಟೇಶ್ವರರೇ ಸಾಕ್ಷಿ. ಕರ್ನಾಟಕ ಒಂದುಗೂಡುವುದು ನಿಶ್ಚಿತ. ಇದು ಅಂತಃಕರಣದ ಬಯಕೆ, ಇದು ಆಗಲೇಬೇಕು” ಎಂದು ಬಿನ್ನವಿಸಿದೆ. ನನ್ನ ಕೇಳಿಕೆ ಅಂದಿನ ನನ್ನ ಅಣ್ಣಂದಿರ, ಸೋದರಿಯರ ಮನಮುಟ್ಟಿತು. ಉದ್ರಿಕ್ತ ವಾತಾವರಣ ತಿಳಿಯಾಗಿ ಅಖಂಡ ಕರ್ನಾಟಕದ ಗೊತ್ತುವಳಿ ಅವಿರೋಧವಾಗಿ ಪಾಸಾಯಿತು”.

ಪರಿಷತ್ತು ಮತ್ತು ಭಾಷಾ ಸಾಮರಸ್ಯ

ಜೀವಮಾನದುದ್ದಕ್ಕೂ ಹಗಲಿರುಳು ಹಂಬಲಿಸಿ, ನೂರು ಯಾತನೆಗಳನ್ನು ನುಂಗಿ, ಭಾಷಾವಾರು ಪ್ರಾಂತ ರಚನೆಗೆ ಹಲುಬಿದೆವು; ವಿಧವಿಧದ ಪರಿಶ್ರಮ ಹೋರಾಟಗಳನ್ನು ನಡೆಸಿದೆವು. “ನೊಂದ ನೋವ ನೋಯದವರೆತ್ತ ಬಲ್ಲರು?” ಎಂದು ಕನ್ನಡ ತಾಯಿ ಇಂದು ಮಿಡುಕುವಂತಾಗಿದೆ. ಒಮ್ಮೊಮ್ಮೆ ಈ ಭಾಷಾವಾರು ಪ್ರಾಂತ ರಚನೆಯಾದದ್ದು ತಪ್ಪಾಯಿತೇನೋ ಎನ್ನುವ ವಿಚಾರ ನನ್ನಲ್ಲಿಯೂ ಸುಳಿದು ಹೋಗುತ್ತದೆ. ದೇಶದಲ್ಲಿ ಇಂಥ ಒಂದು ಪರಿಸ್ಥಿತಿಯುಂಟಾಗಲು ಮೂಲ ಕಾರಣ ಭಾಷಾ ದುರಭಿಮಾನ; ಮತ್ತು ರಾಷ್ಟ್ರೀಯ ಮನೋಭಾವದ ಕೊರತೆ. ಈ ಭಾಷಾ ಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕಾಗಿದೆ. ಮರಾಠಿಯ ನನ್ನ ಬಂಧುಗಳಿಗೂ ಅನೇಕ ಸಲ ಈ ಮಾತನ್ನು ಭಾಷಣ ಬರಹಗಳ ಮೂಲಕ ತಿಳಿಸಿ ಹೇಳಿದ್ದೇನೆ. ಮರಾಠಿ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ನಾನು ಮಾತನಾಡಿ ಈ ವಿಷಯಗಳನ್ನು ವಿವರಿಸಿದಾಗ, “ನೀವು ಕನ್ನಡದಲ್ಲಿ ಮಾತಾಡಿ, ನಾವು ಕೇಳಲು ಸಿದ್ಧರು” ಎಂದು ಕೂಗಿದ್ದುಂಟು. ಪುಣೆಯಲ್ಲಿ, ಮರಾಠಿ ಸಾಹಿತ್ಯ ಪರಿಷತ್ತಿನಲ್ಲಿ ಈ ಪ್ರತಿಕ್ರಿಯೆಯನ್ನು ನಾನು ಕಂಡಿದ್ದೇನೆ. ಮರಾಠಿ ಸಾಹಿತಿಯೊಬ್ಬನು ಬಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತನಾಡಿದಾಗ, “ಮರಾಠಿಯಲ್ಲಿ ಮಾತನಾಡಬಹುದು” ಎನ್ನುವ ಮಾತನ್ನು ನಾನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಕೇಳಬಯಸುತ್ತೇನೆ ಎಂದು ಅವರಿಗೆ ಹೇಳಿದೆನು. ಭಾಷೆಯು ಪಟ್ಟಭದ್ರ ರಾಜಕೀಯ ಜನರ ಕೈಗೆ ಸಿಕ್ಕಾಗ, ಒಂದು ಮಾರಕ ಅಸ್ತ್ರವಾಗಿ ಪರಿಣಮಿಸುತ್ತದೆ. ಆದರೆ ಅದೇ ಭಾಷೆ, ಸಾಹಿತಿಗಳ ಸೃಜನಶೀಲತೆಯಿಂದ ಜನ-ಜನರನ್ನು ಒಂದುಗೂಡಿಸುವ, ಹೃದಯ-ಹೃದಯಗಳಲ್ಲಿ ಬೆಸೆಯುವ ಭಾವಸೇತುವೆಯಾಗುತ್ತದೆ.

ಪರಿಷತ್ತು ದಾರಿ ತೋರಬೇಕು

ಈ ಒಂದು ಸೌಹಾರ್ದ ಮೈತ್ರಿಗಳು ಬೌದ್ಧಿಕ ಮಟ್ಟದಲ್ಲಿ, ಸಾಹಿತ್ಯದ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ ಎನ್ನುವ ಭಾವನೆಯಿಂದ ಈ ವಿಷಯಗಳನ್ನು ವಿವರಿಸುತ್ತಿದ್ದೇನೆ. ಒಂದು ವೇಳೆ ರಾಜ್ಯದ ಸೂತ್ರಗಳು ಸರಿಯಾದ ಮಾರ್ಗದಲ್ಲಿ ರಾಷ್ಟ್ರಹಿತ ದೃಷ್ಟಿಯಲ್ಲಿ ಮುನ್ನಡೆಯದಿದ್ದರೆ ಸಾಹಿತಿಗಳು, ಸಾಹಿತ್ಯ ಪರಿಷತ್ತಿನಂತಹ ಸಾಂಸ್ಕೃತಿಕ ಸಂಸ್ಥೆಗಳು  ಅವುಗಳನ್ನು ಸರಿಯಾದ ಹಾದಿಗೆ ತರಲು ಯತ್ನಿಸಬೇಕು. ಹಾಗೂ ಸರಕಾರವು ಕೂಡ ಇಂಥ ಜನದಿಂದ, ಸಂಸ್ಥೆ  ನಿರ್ದೇಶನ ಸೂತ್ರಗಳನ್ನು ಪಡೆಯಬೇಕಾಗುತ್ತದೆ. ಇದನ್ನು ಸರಕಾರಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ.

ಪರಿಷತ್ತು ಅಂದಿನಿಂದ ಇಂದಿನವರೆಗೆ

೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಲ್ಪಟ್ಟಿತು. ಆಗ ಕನ್ನಡ ಮಾತನಾಡುವ ಜನರು ಆಂಗ್ಲ ಮತ್ತು ದೇಶೀಯ ಆಳರಸರ ಇಪ್ಪತ್ತೆರಡು ಆಡಳಿತಕ್ಕೆ ಒಳಪಟ್ಟಿದ್ದರು. ಅಲ್ಲದೆ ಅವರಿಗೆ ಕಡ್ಡಾಯವಾಗಿ ಇಂಗ್ಲೀಷ್, ಮರಾಠಿ, ಉರ್ದು, ತಮಿಳು, ತೆಲುಗು, ಮಲೆಯಾಳ ಇತ್ಯಾದಿ ಭಾಷೆಗಳನ್ನು ಕಲಿಯಬೇಕಾಗುತ್ತಿತ್ತು. ಮತ್ತೆ ಅವರಿಗೆ ಪ್ರಾದೇಶಿಕ ಉಡುಗೆ  ತೊಡಿಗೆ, ರೀತಿ ನೀತಿಗಳೊಡನೆ ಹೊಂದಿಕೊಂಡು ಹೋಗಬೇಕಾಗುತ್ತಿತ್ತು. ಈ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ಕನ್ನಡದ ಲಿಪಿಯ ಪರಿಚಯ ಸಹಾ ಇರಲಿಲ್ಲ. ಆದರೆ ಅವರೆಲ್ಲರಿಗೂ ಸಾಮಾನ್ಯವಾದ ಒಂದು ಸಂಪರ್ಕಭಾಷೆ ಕನ್ನಡವೇ ಆಗಿತ್ತು. ಇವರೆಲ್ಲರನ್ನೂ ಒಂದುಗೂಡಿಸಿ, ಒಂದೇ ಆಡಳಿತದ ಸೂತ್ರಕ್ಕೆ ಒಳಪಡಿಸಿ, ಕನ್ನಡವನ್ನು ಉಳಿಸಿ, ಬೆಳೆಸಿ ನಾವೆಲ್ಲರೂ ಕನ್ನಡಿಗರು ಎಂಬ ಭಾವೈಕ್ಯವನ್ನು ಸಾಧಿಸುವ ಮಹೋದ್ದೇಶವೇ ಕನ್ನಡ ಸಾಹಿತ್ಯ ಪರಿಷತ್ತಿನ ಗುರಿಯಾಯಿತು. ಅಂದಿನಿಂದ ಪರಿಷತ್ತಿನ ಕನ್ನಡದ ಹಿರಿಯರು ಮುಂದಾಲೋಚನೆಯಿಂದ ಪರಿಷತ್ತನ್ನು ಪರಿಣಾಮಕಾರಿಯಾಗಿ ಸಂಘಟಿಸುವಲ್ಲಿ ತನು-ಮನ-ಧನಗಳನ್ನು ಸವೆಯಿಸಿದರು. ಕನ್ನಡ ಜನರನ್ನು ಒಂದುಗೂಡಿಸಲು ಏಕಮೇವ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಕನ್ನಡ ಜನರಿಗೆ ಅರಿವಾಯಿತು. ಅಂದಿನಿಂದ ಕನ್ನಡ ನಾಡನ್ನು ಒಂದುಗೂಡಿಸುವ ಹೋರಾಟದಲ್ಲಿ ತನ್ನ ನಿಲುವನ್ನು ಬದಲಿಸದೆ, ಕನ್ನಡ ಸಾಹಿತ್ಯ ಪರಿಷತ್ತು ದುಡಿಯುತ್ತಾ ಬಂದಿದೆ. ಕನ್ನಡ ಸಾಹಿತ್ಯವನ್ನು ಬೆಳೆಸಿ, ಕನ್ನಡದ ಪ್ರಜ್ಞೆಯನ್ನು ಕನ್ನಡದ ಜನಾಂಗಕ್ಕೆ ನೀಡಿದ ಆ ಪರಿಷತ್ತಿನ ಹಿಂದಿನ ಅಧ್ಯಕ್ಷರುಗಳ ಹಾಗೂ ಅಭಿಮಾನಿಗಳ ಸೇವೆಯನ್ನು ನಾವಿಂದು ಸ್ಮರಿಸಬೇಕು. ಎಚ್.ವಿ. ನಂಜುಂಡಯ್ಯ, ಕರ್ಪೂರ ಶ್ರೀನಿವಾಸರಾಯರು, ಅವರೇ ಆದಿಯಾಗಿ ಜಿ. ನಾರಾಯಣ ಅವರವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಮುಖವಾಗಿ ಬೆಳೆಯುತ್ತ ಬಂದಿದೆ. ಈಗ ಕನ್ನಡ ಸಾಹಿತ್ಯ ಪರಿಷತ್ತು ತ್ರೈವಾರ್ಷಿಕ ಯೋಜನೆಯನ್ನು ಪೂರ್ತಿಗೊಳಿಸಿ, ಕನ್ನಡ-ಕನ್ನಡ ನಿಘಂಟಿನ ಕಾರ್ಯವನ್ನು ಮುಂದುವರಿಸಿ, ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿ, ಅದರ ಸ್ಮರಣಾರ್ಥವಾಗಿ ಭವ್ಯ ಕಟ್ಟಡವನ್ನು ಕಟ್ಟಿಸಿ ಕರ್ನಾಟಕಕ್ಕೆ ಗೌರವವನ್ನು ತಂದಿದೆ. ಈಗ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿ, ಪ್ರಾಚೀನ ಹಳೆಗನ್ನಡ ಕಾವ್ಯವನ್ನೆಲ್ಲಾ ಹೊಸಗನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಕಾರ್ಯ ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕನ್ನಡ-ಕನ್ನಡ ಶಬ್ದಕೋಶವನ್ನು ಪರಿಷತ್ತು ಸಿದ್ಧಗೊಳಿಸುತ್ತಿರುವುದು ಸಂತೋಷದ ಸಂಗತಿ. ಮತ್ತು ಪ್ರಾಚೀನ ತಾಳೆಯೋಲೆ ಗ್ರಂಥಗಳನ್ನು, ತಾಮ್ರ ಶಾಸನಗಳ ಮತ್ತು ಶಿಲಾಶಾಸನಗಳ ಪ್ರತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಪರಿಷತ್ತು ಕೈಗೊಂಡಿರುವುದು ಕನ್ನಡ ಸಂಸ್ಕೃತಿಯ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಕನ್ನಡ ನಾಡಿನ ಜನ ಒಂದುಗೂಡಬೇಕು, ಮುನ್ನಡೆಯಬೇಕೆಂಬ ದೃಷ್ಟಿಯಿಂದ ಕರ್ನಾಟಕವಾಗಲು ಕಾರಣವಾಯಿತು. ವಿಭಿನ್ನ ಪ್ರದೇಶಗಳ ಜನರು ಒಂದೇ ಆಡಳಿತ ಸೂತ್ರಕ್ಕೆ ಒಳಪಟ್ಟರು. ಇವರಲ್ಲಿ ಭಾವೈಕ್ಯವನ್ನು ಒಡಮೂಡಿಸುವ ಹೊಣೆ ಸರಕಾರ ಮತ್ತು ಸಾಹಿತಿಗಳ ಮೇಲೆ ಇದೆ. ಆದರೆ ಕೆಲವು ಪ್ರದೇಶದ ಸಾಹಿತಿಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎನ್ನುವ ಧ್ವನಿ ಕೇಳಿಬರುತ್ತಿದೆ. ನಾಡಿನ ಭದ್ರತೆಯ ದೃಷ್ಟಿಯಿಂದ ಸರಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳು ಇದನ್ನು ಗಮನಿಸಬೇಕು.

ರಿಷತ್ತು ಮಾಡಬೇಕಾದ ಚಳವಳಿ

ನಾವು ಜನತೆಗೆ ಮೊದಲು ಅನ್ನ, ಅರಿವೆ, ಆಸರೆ, ಅಕ್ಷರ, ಔಷಧ ಈ ಐದು ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನು ಆಡಿ ಕೇವಲ ಸಾಹಿತ್ಯಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ನಮ್ಮ ಕವಿತೆಗಳ ಹಿಂದೆ ಸಂವೇದನೆಗಳಿರುವಂತೆ ಹಸಿದವನ ಹೊಟ್ಟೆಯಲ್ಲಿ ವೇದನೆ ಇದೆ. ಆ ವೇದನೆಯನ್ನು ಅವನು ಹೊರಗೆಡವಲು ನಾಲ್ಕು ಜನಗಳ ಮುಂದೆ ಹೇಳುವಂತೆ ಆಗಲು ಅಕ್ಷರದ ಅಸ್ತ್ರ ಅವರಿಗೆ ಬೇಕು. ಈ ಸಮಸ್ಯೆಯನ್ನು ಕುರಿತು ಬಹಳಷ್ಟು ಆಲೋಚನೆ ಮಾಡಿದಾಗಲೆಲ್ಲ ನನಗೆ ಈ ಅನ್ನ ಅಕ್ಷರ ಇತ್ಯಾದಿಗಳನ್ನು ಕುರಿತು ಅವುಗಳ ನಿವಾರಣೆಯಲ್ಲಿ ನಮ್ಮ ಸಾಹಿತ್ಯವು ಎಷ್ಟರ ಮಟ್ಟಿಗೆ ಮೂಡುತ್ತದೆ. ನಮ್ಮ ದೇಶದಲ್ಲಿ ಇಂದು ಹಸಿರು ಕ್ರಾಂತಿಯಾಗಬೇಕು ಎಂಬ ಆಂದೋಲನವನ್ನು ಪ್ರಾರಂಭಿಸಿದಂತೆ ಅಕ್ಷರ ಕ್ರಾಂತಿಯ ಆಂದೋಲನವನ್ನು ಪ್ರಾರಂಭಿಸಬೇಕು. ಸಾಹಿತಿಗಳ, ಕವಿಗಳ, ಸಾಹಿತ್ಯ ಪರಿಷತ್ತುಗಳ, ಸಾಂಸ್ಕೃತಿಕ ಸಂಘ ಸಂಸ್ಥೆಗಳ, ಧಾರ್ಮಿಕ ಮಠಮಾನ್ಯಗಳ ಹೊಣೆಯು ದೊಡ್ಡದಾಗಿದೆ. ಸರ್ಕಾರವು ಸಾಧಿಸಲಾರದ್ದನ್ನು ಸಾಹಿತಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಕೈಗೆತ್ತಿಕೊಂಡು

ಮುನ್ನಡೆದು, ಸರ್ಕಾರವನ್ನು ಜೊತೆಯಲ್ಲಿ ಕೊಂಡೊಯ್ದು, ಒಂದು ಸಾಂಸ್ಕೃತಿಕ ಹಾಗೂ ಬೌದ್ಧಿಕ ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂಬುದಾಗಿ ನಾನು ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಇದರಲ್ಲಿ ಸಾಹಿತ್ಯದ ಸತ್ವ-ಪುಸ್ತಕಗಳ ಪ್ರಚಾರ-ಪತ್ರಿಕೆಗಳ ಪ್ರಸಾರ ಇವು ಅಡಕವಾಗಿವೆಯೆಂದೇ ಇಷ್ಟೆಲ್ಲ ವಿವರಣೆ.

Tag: Kannada Sahitya Sammelana 48, Jayadevi Tayi Ligade, Jayadevi Thayi Ligade

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)