ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮

ಅಧ್ಯಕ್ಷತೆ: ಜಿ.ಪಿ. ರಾಜರತ್ನಂ

0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಜಿ.ಪಿ. ರಾಜರತ್ನಂ 

ಕನ್ನಡದಲ್ಲಿ ರತ್ನನ ಪದಗಳಿಂದ ಜನಪ್ರಿಯರಾಗಿದ್ದ ಮಕ್ಕಳ ಸಾಹಿತ್ಯದಿಂದ ಹೆಸರುಗಳಿಸಿರುವ ಜಿ.ಪಿ.ರಾಜರತ್ನಂ ಅವರು ಮೈಸೂರಿನ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್ ಅವರ ಪುತ್ರರಾಗಿ ೮-೧೨-೧೯0೮ರಲ್ಲಿ ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ (ಕ್ಲೋಸ್‍ಪೇಟೆ) ಜನಿಸಿದರು.

ರಾಜರತ್ನಂ ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ., ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೬೪ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.

ಕವಿ, ನಾಟಕಕಾರ, ಮಕ್ಕಳ ಸಾಹಿತ್ಯರಚಕರಾಗಿ ಕನ್ನಡ ಸಾಹಿತ್ಯದ ಪರಿಚಾರಿಕೆ ಮಾಡಿದ ಜಿ.ಪಿ.ರಾಜರತ್ನಂ ಅವರು ರಚಿಸಿದ ರತ್ನನ ಪದಗಳು, ಬುದ್ಧವಚನ ಪರಿಚಯ ಕೃತಿಗಳಿಗೆ ದೇವರಾಜ ಬಹಾದ್ದೂರ್ ಪ್ರಶಸ್ತಿ ದೊರಕಿತು. ೧೯೬೯ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡಿದೆ. ೧೯೭0ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಿಲಿಟ್ ಪದವಿ ನೀಡಿತು. ೧೯೭೮ರಲ್ಲಿ ದೆಹಲಿಯಲ್ಲಿ ನಡೆದ ೫0ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಗೌರವ ಇವರಿಗೆ ಲಭ್ಯವಾಯಿತು.

ಪರಿಷತ್ತಿನ ನಿಕಟವರ್ತಿಗಳಾದ ರಾಜರತ್ನಂ ಅವರು ಪರಿಷತ್ತಿನ ಗೌರವ ಕೋಶಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವನ್ನು ಪುನಶ್ಚೇತನಗೊಳಿಸಿದರು. ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕರ ಗೋಷ್ಠಿ (೧೯೩೮), ರಬಕವಿಯಲ್ಲಿ ನಡೆದ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ(೧೯೪೪), ಕಾರ್ಕಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆ ಸಾಹಿತ್ಯ ಸಮ್ಮೇಳನ(೧೯೭೨), ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿ(೧೯೭೯), ಮೊದಲಾದ ಗೋಷ್ಠಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಚಿಕ್ಕ ಹೊತ್ತಿಗೆಗಳನ್ನು ದೊಡ್ಡವರಿಗಾಗಿ ದೊಡ್ಡ ಹೊತ್ತಿಗೆಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಬುದ್ಧ ಸಾಹಿತ್ಯ, ಜೈನ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಚೀನಾದೇಶದ ಬೌದ್ಧಯಾತ್ರಿಕರು ಮೊದಲಾದ ೨0 ಬೌದ್ಧ ಸಾಹಿತ್ಯ ಕೃತಿಗಳು, ರತ್ನನ ಪದಗಳು, ಶಾಂತಿ, ನಾಗನ ಪದಗಳು, ಪುರುಷ ಸರಸ್ವತಿ(ಕಾವ್ಯ), ಗಂಡುಗೊಡಲಿ(ನಾಟಕ), ಹೊಸಗನ್ನಡ, ಯಶೋಧರ ಚರಿತ್ರೆ ಕೈಗನ್ನಡಿ, ಶ್ರೀಕವಿಪಂಪ, ತುತ್ತೂರಿ ಚುಟುಕ ಕಡಲೇಪುರಿ, ಗುಲಗಂಜಿ ಇತ್ಯಾದಿ ಮಕ್ಕಳ ಸಾಹಿತ್ಯ. ಜೈನಸಾಹಿತ್ಯಕ್ಕೆ ಸಂಬಂಧಿಸಿದ ಶ್ರೀ ಗೊಮ್ಮಟೇಶ್ವರ ಭಗವಾನ್ ಮಹಾವೀರ, ಅಲ್ಲದೆ ವಿಚಾರರಶ್ಮಿ, ನಿರ್ಭಯಾಗ್ರಫಿ ಇತ್ಯಾದಿ ಇವರ ವಿಮರ್ಶಾ ಕೃತಿಗಳು.

ಜಿ.ಪಿ.ರಾಜರತ್ನಂ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಿಂದ ಹಿಂದಿರುಗಿದ ಒಂದೆರಡು ದಿನಗಳಲ್ಲೇ ಅಂದರೆ ದಿನಾಂಕ ೧೩-೩-೧೯೭೯ರಂದು ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೫0

ಅಧ್ಯಕ್ಷರು, ಜಿ.ಪಿ. ರಾಜರತ್ನಂ

ದಿನಾಂಕ ೨೩, ೨೪, ೨೫ ಏಪ್ರಿಲ್ ೧೯೭೮

ಸ್ಥಳ : ನವದೆಹಲಿ

[ಟಿಪ್ಪಣಿ : ೧೯೭೭ರಲ್ಲಿ ಸಮ್ಮೇಳನ ನಡೆಯಲಿಲ್ಲ]

ಕನ್ನಡ ಸಾಹಿತ್ಯ ಪರಿಷತ್ತೂ ನಾನೂ

ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಹೊರಗಿನವನಲ್ಲ. ೧೯೩0ರಲ್ಲಿ ನಾನು ಮೊದಲನೇ ಎಂ.ಎ., ತರಗತಿಯಲ್ಲಿ ಓದುತ್ತಿದ್ದಾಗ ಪರಿಷತ್ತು ನಡೆಸಿದ ೧೬ನೇ ಸಾಹಿತ್ಯ ಸಮ್ಮೇಳನದಲ್ಲಿ ನನಗೂ ನಾಲ್ಕಾರು ರೀತಿಯ ಪರಿಚಾರಿಕೆಗಳನ್ನು ಮಾಡುವುದಕ್ಕೆ ಅವಕಾಶ ಲಭಿಸಿತ್ತು. ಅಂದಿನಿಂದ ಪರಿಷತ್ತಿಗೂ ನನಗೂ ಅವಿಚ್ಛಿನ್ನವಾದ ಅಂಟು, ಗಂಟು, ನಂಟು. ನಾನೂ ಹತ್ತಾರು ವರ್ಷ ಪರಿಷತ್ತಿನ ಒಳಗೆ ಇದ್ದು, ಅಲ್ಲಿ ನನ್ನ ಪಾಲಿಗೆ ಹಿರಿಯರು ವಹಿಸಿದ ಭಾರಗಳನ್ನು ನನ್ನ ಕೈಲಾದಷ್ಟು ನಿರ್ವಹಿಸಿದ್ದೇನೆ. ಮುಂದೆ ಇತರ ಕಾರ್ಯಗೌರವಗಳ ಒತ್ತಡದಿಂದ  ಪರಿಷತ್ತಿಗೆ ಬಂದುಹೋಗಲು ನನಗೆ ಬಿಡುವು ಆಗದಿದ್ದರೂ ನಾನು ಇಂದಿನವರೆಗೂ ಪರಿಷತ್ತಿನೊಂದಿಗೇ ಇದ್ದೇನೆ. ನಮ್ಮ ನಾಡಿನ ಜನರ ಏಳಿಗೆಗಾಗಿ ಪರಿಷತ್ತು ಏನೇನು ಮಾಡುತ್ತಿದೆಯೋ ಅದಕ್ಕೆ ಪೂರಕವಾಗುವ ಹಾಗೆ ನಾನು ನನ್ನ ಕೈಲಾದಷ್ಟು ಪರಿಚಾರಿಕೆ ಮಾಡುತ್ತಿದ್ದೇನೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ೫0 ವರ್ಷ ತುಂಬಿದಾಗ ನಾನು ಬರೆದು ಪ್ರಕಟಿಸಿದ ‘ಕನ್ನಡ ಸೇತುವೆ’ ಎಂಬ ಸಣ್ಣ ಹೊತ್ತಿಗೆಯಲ್ಲಿ ಪರಿಷತ್ತಿಗೂ ನನಗೂ ಬೆಸೆದು ಬಂದಿರುವ ಬಾಂಧವ್ಯವನ್ನು ಸೂಚಿಸಿದ್ದೇನೆ.

ಪರಿಷತ್ತಿನ ಗುರಿ

೬೪ ವರ್ಷಗಳ ಹಿಂದೆ ನಮ್ಮ ನಾಡಿನ ಹಿರಿಯರು ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದಾಗ ತಮ್ಮ ಮುಂದೆ ಎರಡು ಗುರಿಗಳನ್ನು ಇಟ್ಟುಕೊಂಡಿದ್ದರು: ೧. ಕನ್ನಡ ನುಡಿ ಬೆಳೆಯಬೇಕು, ಕನ್ನಡ ಸಾಹಿತ್ಯ ಬೆಳೆಯಬೇಕು, ಕನ್ನಡ ನಾಡು ಒಂದಾಗಬೇಕು, ಕನ್ನಡ ಜನ ಮುಂದುವರಿಯಬೇಕು; ೨. ಭಾರತವು ಸ್ವತಂತ್ರವಾಗಬೇಕು. ಭಾರತವು ಸ್ವತಂತ್ರವಾದ ಹೊರತು ಕರ್ಣಾಟಕ ಏಕೀಕರಣ ಸಾಧ್ಯವಾಗದು ಎಂಬುದನ್ನು ಅಂದಿನ ಹಿರಿಯರು ತಿಳಿದಿದ್ದರು. ಆ ಸ್ವಾತಂತ್ರ್ಯ ಬರುವವರೆಗೂ ಏಕೀಕರಣದ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕೆಂದು, ಕನ್ನಡದ ಮೂಲಕವಾಗಿ ಎರಡನ್ನೂ ಏಕಕಾಲದಲ್ಲಿ ನಡೆಸಿಕೊಂಡು ಹೋದರು. ಅವರ ತಪಸ್ಸಿನ ಫಲವಾಗಿ, ಅವರಿಗೆ ವಿಧೇಯರಾಗಿ ನಡೆದವರ ಪ್ರಯತ್ನಗಳ ಪರಿಣಾಮವಾಗಿ, ೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು, ಅದರ ತರುವಾಯ ಕರ್ಣಾಟಕ ಒಂದಾಯಿತು. ಆದರೆ, ದೇಶ ಸ್ವತಂತ್ರವಾದ್ದರಿಂದ ದೇಶದ ಜನರಿಗೆ ಏನು ಬಂತು? ಕನ್ನಡ ನಾಡು ಒಂದಾದ್ದರಿಂದ ಕನ್ನಡಿಗರಿಗೆ ಏನು ಬಂತು? ಇದು ನಾನು ಕೇಳುತ್ತಿರುವ ಪ್ರಶ್ನೆಯಲ್ಲ. ದೇಶಕ್ಕೆ ದೇಶವೇ ನಾಡಿಗೆ ನಾಡೇ ಈ ಪ್ರಶ್ನೆಯನ್ನು ಕೇಳುತ್ತಿದೆ. ಇದಕ್ಕೆ ಉತ್ತರವನ್ನು, ಅದಕ್ಕೆ ಪರಿಹಾರವನ್ನು ಹುಡುಕಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದರಲ್ಲೂ ಮಾತಿನ ಶಕ್ತಿಯನ್ನು ಬಲ್ಲವನಾದ ಸಾಹಿತಿಯ ಹೊಣೆಗಾರಿಕೆ ಈ ಸಂದರ್ಭದಲ್ಲಿ ಮಿಕ್ಕವರಿಗಿಂತ ಹೆಚ್ಚಾಗಿರುತ್ತದೆ.

ಕರ್ತವ್ಯಪರರಾಗಿರಬೇಕು

ಒಳಗೆ ಅಡಿಗೆ ಮಾಡುವವರು ಹದಿನೈದು ಮಂದಿ. ಊಟಕ್ಕೆ ಕುಳಿತವರು ಸಾವಿರಾರು. ಬಡಿಸುವವರು ತಕ್ಕಷ್ಟು ಸಂಖ್ಯೆಯಲ್ಲಿ ಇಲ್ಲದೆ ಹೋದರೆ, ಮಾಡಿದ ಅಡುಗೆ ವ್ಯರ್ಥ, ಊಟಕ್ಕೆ ಕುಳಿತವರಿಗೆ ಅರೆಹೊಟ್ಟೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭ ಮಾಡಿದ ಕಾಲಕ್ಕೆ ನಮ್ಮ ಹಿರಿಯರು ಯಾವ ಎರಡು ಘನವಾದ ಉದ್ದೇಶಗಳನ್ನು ತಮ್ಮ ಮುಂದೆ ಇರಿಸಿಕೊಂಡು ತೊಡಗಿದರೋ ಅದು ಇನ್ನೂ ಸಮರ್ಪಕವಾಗಿ ಈಡೇರಿಲ್ಲ. ಅದು ನೆರವೇರುವವರೆಗೂ ನಾವು ಅಪ್ರಮತ್ತರಾಗಿ ಕರ್ತವ್ಯಪರರಾಗಿರಲೇಬೇಕು.

ಸಮ್ಮೇಳನದ ಚರ್ಚೆಗಳು

‘ಶಬ್ದಪಾರಮಾರ್ಗಮಶಕ್ಯಂ’ ಎಂದು ಕೇಶಿರಾಜ ಹೇಳಿದ ಹಾಗೆ, ಎಲ್ಲರೂ ಎಲ್ಲಾ ಭಾಷೆಗಳನ್ನೂ ಕಲಿಯಬೇಕಾದ್ದಿಲ್ಲ. ಕಲಿತ ಕೆಲವರು ಪುಣ್ಯವಂತರು ತಾವು ಕಲಿತದ್ದನ್ನು ನಮಗೆ ಕನ್ನಡದಲ್ಲಿ ತಂದು ತಿಳಿಸಿದರೆ ನಾವು ಧನ್ಯರು.

ಈ ಕೆಲಸ ಸಾವಿರ ವರ್ಷಗಳ ಉದ್ದಕ್ಕೂ ನಮ್ಮಲ್ಲಿ ನಡೆಯುತ್ತಲೇ ಇದೆ. ಆದರೆ ಎಷ್ಟು ಮುಂದುವರಿದಿದ್ದೇವೆಯೋ ಅಷ್ಟೇ ಊಧ್ರ್ವಮುಖಿಗಳಾಗುತ್ತಿದ್ದೇವೆಯೆ ಎಂಬುದು ವಿಚಾರ ಮಾಡಬೇಕಾದ ವಿಷಯ. ಅದಕ್ಕೋಸ್ಕರವಾಗಿಯೇ ಸಮ್ಮೇಳನದ ಮೂರು ದಿವಸಗಳಲ್ಲಿ ಬೇರೆ ಬೇರೆ ಗೋಷ್ಠಿಗಳು ಸೇರಿ ಚರ್ಚೆ ಮಾಡುವುದರಿಂದ ಅದನ್ನು ಕುರಿತು ಮಾತನಾಡಲು ನನಗೆ ಇದು ಸ್ಥಳವೂ ಅಲ್ಲ, ನನಗೆ ಇಲ್ಲಿ ಸಮಯವೂ ಇಲ್ಲ.

Tag: Kannada Sahitya Sammelana 50, G.P. Rajaratnam

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)