೫೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಪು.ತಿ ನರಸಿಂಹಾಚಾರ್
ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಪುತಿನ ಅವರು (ಪುರೋಹಿತ ತಿರುನಾರಾಯಣ ನರಸಿಂಹಾಚಾರ್) ತಿರುನಾರಾಯಣ ಅಯ್ಯಂಗಾರ್-ಶಾಂತಮ್ಮ ದಂಪತಿಗಳ ಪುತ್ರರಾಗಿ ೧೭-೩-೧೯0೫ರಲ್ಲಿ ಮೇಲುಕೋಟೆಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ ೧೯೩೮ರಲ್ಲಿ ವ್ಯವಸ್ಥಾಪಕರಾಗಿಯೂ ೧೯೪೫ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದರು. ಅನಂತರ ೧೯೫೨ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆದರು. ೧೯೬೩ರಿಂದ ೧೯೬೬ವರೆಗೆ ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರರಾಗಿ, ೧೯೬೬ರಿಂದ ೧೯೭೧ವರೆಗೆ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದರು. ಹೀಗೆ ನಿರಂತರವಾಗಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೂ, ಕವಿಯಾಗಿ ಅನೇಕ ಕೃತಿಗಳನ್ನು ರಚಿಸುತ್ತಾ ಬಂದು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿದರು.
ಇವರು ರಚಿಸಿದ ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯಾ ಅಕಾಡೆಮಿ ಬಹುಮಾನವೂ, ೧೯೬೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವೂ ಲಭಿಸಿದವು. ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಆದರು. ೧೯೯0ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್, ೧೯೯೧ರಲ್ಲಿ ಇವರ ಸೃಜನಶೀಲ ಕೃತಿ ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ದೊರೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯದ ಗೌರವಕ್ಕೂ ಪಾತ್ರರಾಗಿದ್ದಾರೆ.
ಕನ್ನಡ, ತಮಿಳು, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದ ವಿದ್ವಾಂಸರಾದ ಪು.ತಿ.ನ. ಅವರು ಗೇಯಕಾವ್ಯ ನಾಟಕ ಪ್ರಬಂಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಪ್ರಸಿದ್ಧ ಕೃತಿಗಳು ಹೀಗಿವೆ : ಗೋಕುಲ ನಿರ್ಗಮನ, ಸತ್ಯಾಯನ ಹರಿಶ್ಚ್ಚಂದ್ರ, ಹಂಸದಮಯಂತಿ ಮತ್ತು ಇತರ ರೂಪಕಗಳು, ಅಹಲ್ಯೆ, ಶ್ರೀರಾಮ ಪಟ್ಟಾಭಿಷೇಕ ಮೊದಲಾದ ಗೀತ ರೂಪಕಗಳು, ರಥ ಸಪ್ತಮಿ ಮತ್ತು ಇತರ ಚಿತ್ರಗಳು (೧೯೪೫), ಈಚಲು ಮರದ ಕೆಳಗೆ (೧೯೪೯), ಧೇನುಕ ಪುರಾಣ (೧೯೪೭), ಇತ್ಯಾದಿ ಪ್ರಬಂಧಗಳು, ಕಾವ್ಯಕುತೂಹಲ, ರಸಪ್ರಜ್ಞೆ, ದೀಪರೇಖೆ ಇತ್ಯಾದಿ ವಿಮರ್ಶಾ ಗ್ರಂಥಗಳು, ಹತ್ತಾರು ವರ್ಷಗಳ ಪರಿಶ್ರಮದಿಂದ ರಚಿಸಿದ ಅನುವಾದಗಳು- ಕನ್ನಡ ಭಗವದ್ಗೀತೆ, ಸಮಕಾಲೀನ ಭಾರತೀಯ ಸಾಹಿತ್ಯ.
ಪು.ತಿ.ನ. ಅವರು ಬೆಂಗಳೂರಿನಲ್ಲಿ ೧೩-೧0-೧೯೯೮ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೩,
ಅಧ್ಯಕ್ಷರು, ಪು.ತಿ. ನರಸಿಂಹಾಚಾರ್
ದಿನಾಂಕ ೧೩, ೧೪, ೧೫ ಮಾರ್ಚ್ ೧೯೮೧
ಸ್ಥಳ : ಚಿಕ್ಕಮಗಳೂರು
ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿ
ಅರವತ್ತಾರು ವರ್ಷಗಳ ಹಿಂದೆ ಈ ಪರಿಷತ್ತು ನಾಡುನುಡಿಗಳ ಭಕ್ತಶ್ರೇಷ್ಠರಿಂದ ಸ್ಥಾಪಿತವಾಗಿದ್ದು ಇಂದಿನವರೆಗೂ ವರುಷವರುಷಕ್ಕೆ ಬಲಗೊಂಡು ಬೆಳೆಯುತ್ತಾ ಬರುತ್ತಿದೆ. ನಾಡಿನ ಮತ್ತು ನುಡಿಗಳ ಪ್ರಗತಿಗೆ ಎದುರು ಹಾಯುತ್ತಿದ್ದ ಅಸತ್ ಪ್ರವೃತ್ತಿಗಳನ್ನು ಪ್ರತಿಭಟಿಸುವ ಸಲುವಾಗಿ ಆ ಸತ್ಪುರುಷರಿಂದ ಈ ಪರಿಷತ್ತು ನಿರ್ಮಾಣವಾಯಿತು. ಅಂಥವರು ತಮ್ಮ ಸೂಕ್ಷ್ಮ ಸಂವೇದನೆಗಳಿಂದ ಗುರುತಿಸಿದ್ದ ಹಾನಿಕರವಾದ ಓಲುವೆಗಳು ಇಂದಿಗೂ ನಾಶಹೊಂದಿಲ್ಲ. ಅದಕ್ಕೆ ಬದಲು ವರ್ಧಿಸುತ್ತಿರುವಂತೆಯೇ ತೋರುತ್ತಿದೆ. ೧೯೧೫ರಲ್ಲಿ ಪರಿಷತ್ತಿನ ಸಂಸ್ಥಾಪಕರಾದ ಶ್ರೀಮಾನ್ ಎಚ್.ವಿ. ನಂಜುಂಡಯ್ಯನವರು ಆರಂಭದಲ್ಲೇ ಇಂಗ್ಲಿಷಿನ ವ್ಯಾಮೋಹದಿಂದ ಕನ್ನಡಕ್ಕೆ ಉಂಟಾಗಬಹುದಾದ ಕೇಡನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಸಂಸ್ಕೃತದಿಂದ ಕನ್ನಡಕ್ಕೆ ಆಗುವ ಉಪಕಾರವೂ ಅಷ್ಟರಲ್ಲೇ ಇದೆ ಎಂದು ಹೇಳಿ ಸಂಸ್ಕೃತದ ವಿದ್ವಾಂಸರು ಕನ್ನಡದ ವಿಷಯದಲ್ಲಿ ತಳೆದಿದ್ದ ತಾತ್ಸಾರ ಭಾವವನ್ನು ತಿವಿದಿದ್ದಾರೆ.
ಕಾಸರಗೋಡು ಸಮಸ್ಯೆ
ಇನ್ನು ನಮ್ಮ ಪರಿಷತ್ತಿನ ಮತ್ತೊಂದು ಧ್ಯೇಯವಾದ ಕನ್ನಡಿಗರೆಲ್ಲರೂ ಒಂದು ಅಖಂಡ ರಾಜ್ಯದಲ್ಲಿ ಒಂದುಗೂಡುವ ಬಯಕೆ ಪೂರ್ಣವಾಗಿ ನೆರವೇರಿದೆಯೇ ಎಂಬುದನ್ನು ಸ್ವಲ್ಪ ಆಲೋಚಿಸೋಣ. ನಮ್ಮ ಪರಿಷತ್ತು ಆರಂಭದಿಂದಲೇ ನುಡಿಯ ಜೊತೆಗೆ ನಾಡಿನ ವಿಷಯವನ್ನೂ ತಲೆಗೆ ಹಚ್ಚಿಕೊಂಡಿದೆ. ಅನ್ಯರಾಜ್ಯಗಳಲ್ಲಿ ಖಂಡತುಂಡವಾಗಿ ಚೆದರಿಹೋಗಿದ್ದ ಕನ್ನಡಿಗರ ನೆಲೆಗಳನ್ನು ಒಂದೇ ಒಂದು ಆಡಳಿತ ವ್ಯವಸ್ಥೆಗೆ ತರುವ ಹಂಬಲವನ್ನು ಅರವತ್ತಾರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ತಳೆದಿದೆ. ಈ ಆಸೆ ತೀರಿ ಚೆದರಿದ ಕನ್ನಡ ಭಾಗಗಳು ರಭಸದಿಂದ ಒಂದುಗೂಡುತ್ತಿರುವಾಗ ಕೆಲವು ಚೂರುಗಳು ಕಿತ್ತುಹೋಗಿ ಇದ್ದಲ್ಲೆ ಉಳಿದುಕೊಂಡಿವೆ. ಆ ಗಾಸಿಯ ವೇದನೆಯನ್ನು ಅವು ಹಾಗೂ ಒಟ್ಟು ನಾಡು ಪಡುತ್ತಿವೆ. ತಜ್ಞರ ಪರಿಹಾರ ಸೂತ್ರ ಕಾರ್ಯಗತವಾಗಿಲ್ಲ. ಇದರಲ್ಲಿ ಯಾವ ರಾಜಕೀಯ ರಹಸ್ಯವಡಗಿದೆಯೋ ನಮಗೆ ಗೊತ್ತಿಲ್ಲ ಮೇಲುನೋಟಕ್ಕೆ ಇದು ಸರಳವಾಗಿ ಕಾಣುತ್ತಿದೆ. ಕನ್ನಡ ನೆಲೆಗಳು ಒಂದಾದಾಗಿನಿಂದ ಇದುವರೆಗೂ ಕಾಸರಗೋಡು ಕರ್ನಾಟಕದೊಂದಿಗೆ ಸೇರಿಕೊಳ್ಳಬೇಕೆಂಬ ಹೆಬ್ಬಯಕೆಯನ್ನು ಅನೇಕಬಾರಿ ಇಂಥ ಅನೇಕ ಸಮ್ಮೇಳನಗಳಲ್ಲಿ ತೋಡಿಕೊಂಡಿದೆ. ಯಾವ ಪ್ರಭಾವಕ್ಕೆ ಮರುಳಾಗಿ ಕೇಂದ್ರ ಸರ್ಕಾರ ಕಾಸರಗೋಡನ್ನು ಕೇರಳದಲ್ಲೇ ಪ್ರಾರಂಭದಲ್ಲಿ ಉಳಿಸಿತೋ, ಈಗೇಕೆ ಮಹಾಜನ ವರದಿಯ ತೀರ್ಮಾನವನ್ನು ಸ್ಥಗಿತಗೊಳಿಸಿದೆಯೋ ಕಾಣೆವು. ಈ ಪ್ರಭಾವ ಮೊದಲಿನಷ್ಟೆ ಈಗಲೂ ಶಕ್ತಿಯುತವಾಗಿದೆಯೇ ಆ ಪ್ರಭಾವವನ್ನು ಯಾವ ಪ್ರತಿಪ್ರಭಾವದಿಂದ ದುರ್ಬಲಗೊಳಿಸಿ ಆ ಕೀರ್ತಿವೆತ್ತ ಭಾಗದವರ ಮಹದಾಶಯವನ್ನು ಈಡೇರಿಸಬಹುದು? ಕಾಸರಗೋಡನ್ನು ತುಂಬಿರುವ ಕನ್ನಡ ಜನ ತಾವು ಕೇರಳದಲ್ಲಿ ಬಯಲು ಬಂದೀಖಾನೆಯಲ್ಲಿರುವಂತಿರಬಾರದಷ್ಟೆ. ಸ್ವತಂತ್ರ ಭಾರತಕ್ಕೆ ಇದು ಭೂಷಣವೇ? ನಮ್ಮ ಮುಖ್ಯಮಂತ್ರಿಗಳು ಈ ದಿಶೆಯಲ್ಲಿ ತಟಸ್ಥರಾಗಲಾರರು. ಅವರ ಹೇಳಿಕೆಗಳು ತುಂಬ ಆಶಾದಾಯಕವಾಗಿವೆ. ಪ್ರಭಾವಶಾಲಿಗಳೂ ಚತುರರೂ ಆದ ಇವರು ನ್ಯಾಯವಾಗಿ ನಮಗೆ ಸಂದಿರುವುದನ್ನು ಯಾವ ಸಂಶಯಕ್ಕೂ ಎಡೆಕೊಡದೆ ಉಳಿಸಿಕೊಂಡು ನ್ಯಾಯವಾಗಿ ಬರಬೇಕಾದ ಭಾಗಗಳನ್ನು ಗಳಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ಪೂಣ್ಕೆಯನ್ನು ಸಲ್ಲಿಸುತ್ತಾರೆಂದು ನನಗನ್ನಿಸುತ್ತದೆ. ನ್ಯಾಯದ ವಿಷಯದಲ್ಲಿ ದಿಟ್ಟತನದ ನಿಲುವು, ಜತೆಗೆ ಸ್ನೇಹಹಸ್ತ, ಇಲ್ಲಿದೆ ನಮ್ಮ ರಾಜನೀತಿಯ ನೈಪುಣ್ಯ.
ಕನ್ನಡದಲ್ಲಿ ವೈಜ್ಞಾನಿಕ ಜ್ಞಾನಪ್ರಸರಣ
ವೈಜ್ಞಾನಿಕ ಜ್ಞಾನ ಬೆಳೆದಂತೆಲ್ಲ ಬಾಹ್ಯ ಜಗತ್ತಿಗೂ ಮಾನವ ಜೀವಿತಕ್ಕೂ ಇರುವ ಅನಿವಾರ್ಯ ಸಂಬಂಧಗಳಲ್ಲಿ ಅಂಧಶ್ರದ್ಧೆ ಕಡಿಮೆಯಾಗಿ ಅಂತರಾತ್ಮೋಪಾಸನೆ ಬೆಳೆಯುತ್ತದೆ ನಮ್ಮ ಜನದಲ್ಲಿ. ಈ ವೈಜ್ಞಾನಿಕ ಜ್ಞಾನವನ್ನು ಕನ್ನಡನುಡಿಗೆ ತುಂಬಿ ಜನರ ಇಂಗ್ಲಿಷ್ ವ್ಯಾಮೋಹವನ್ನು ತಪ್ಪಿಸುವಲ್ಲಿ ನಮ್ಮ ವಿದ್ವಾಂಸರು ಪ್ರವೃತ್ತರಾಗಿರುವುದು ತುಂಬ ನೆಮ್ಮದಿಯ ಸಂಗತಿ. ಕನ್ನಡ ನಾಡಿನ ಮೇಲ್ಮೆಗೆ ದುಡಿಯುತ್ತಿರುವ ಈ ಸಾಹಿತ್ಯ ಪರಿಷತ್ತು ಈ ಕೆಲಸಗಳನ್ನು ತನ್ನ ಗಮನಕ್ಕೆ ತಂದುಕೊಳ್ಳುವುದೂ ಜನರಲ್ಲಿ ಪ್ರಸಾರ ಮಾಡುವುದೂ ಆವಶ್ಯಕ.
ಪರಿಷತ್ತು ಸಂಪರ್ಕ ಮಾಧ್ಯಮ ಆಗಬೇಕು
ಕನ್ನಡವನ್ನು ವಿದ್ಯಾಭ್ಯಾಸದ ಎಲ್ಲ ಸ್ತರಗಳಲ್ಲೂ ಮಾಧ್ಯಮವಾಗಿ ತರಲು ಇವು ತಕ್ಕ ಮಾನಸಿಕ ಪರಿಸರವನ್ನು ಸೃಜಿಸುತ್ತಿವೆ. ಕನ್ನಡ ನಾಡು ಮಿಕ್ಕ ಸ್ವತಂತ್ರ ದೇಶಗಳಂತೆ, ತನ್ನ ಬದುಕಿಗೆ ಬೇಕಾದ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳನ್ನು ಸ್ವತಂತ್ರ ದೇಶಗಳಂತೆ, ತನ್ನ ಬದುಕಿಗೆ ಬೇಕಾದ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳನ್ನು ಸ್ವತಂತ್ರವಾಗಿ ತಮ್ಮ ತಾಯಿ ನುಡಿಯಲ್ಲೇ ಚಿಂತಿಸಬಲ್ಲ ವೈಜ್ಞಾನಿಕರನ್ನು ಪಡೆಯಬೇಕು. ತಿಳಿವಳಿಕೆಯ ವಿಷಯದಲ್ಲಿ ಆಮದೂ ರಫ್ತೂ ಸಮವಾದ ಹೊರತು ಕನ್ನಡನಾಡು ಪ್ರೌಢ ದೇಶಗಳ ನಕ್ಷೆಗೆ ಸೇರಲಾರದು. ಈ ದಿಸೆಯಲ್ಲಿ ವಿಜ್ಞಾನಿಗಳು ಸ್ಫೂರ್ತಿಯನ್ನು ಪಡೆಯಬೇಕಾದರೆ ಗ್ರಾಮಸ್ಥರೊಡನೆ ಸರಾಗವಾಗಿ ಮಿಳಿತರಾಗಬೇಕು. ಸಾಹಿತ್ಯ ಪರಿಷತ್ತು ಇಂಥ ಸಂಪರ್ಕ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿದರೆ ನಾಡಿಗೆ ತುಂಬ ಉಪಕಾರವಾಗುತ್ತದೆ. ಇದಕ್ಕುಪಾಯ ಆದಷ್ಟು ಮಂದಿ ಪ್ರೌಢವಿಜ್ಞಾನಿಗಳನ್ನು ತನ್ನ ಸದಸ್ಯತ್ವಕ್ಕೆ ಸೇರಿಸಿಕೊಳ್ಳುವುದು.
ಕಸುಬಿನವರ ಪದಕೋಶ
ಸಾಹಿತ್ಯ ಪರಿಷತ್ತು ಈ ದೆಸೆಯಲ್ಲಿ ಮಾಡಬಹುದಾದ ಮತ್ತೊಂದು ಕೆಲಸ ನನಗೆ ಮುಖ್ಯವೆನಿಸುತ್ತದೆ. ಹಿಂದಿನ ನಮ್ಮ ಭಾರತದ ಐಶ್ವರ್ಯವೆಲ್ಲ ಕಸುಬುದಾರರಿಂದ ಸಂಪಾದಿತವಾದದ್ದು. ನಾವು ಈಗ ವಿದೇಶೀಯರಿಗೆ ಮೆರೆಸುತ್ತಿರುವುದೂ ಗುಡಿ ಗೋಪುರ ವಿಗ್ರಹಾದಿಗಳ ಆ ಮಹಾ ಸಂಪತ್ತನ್ನೇ. ಈಗ ಪರಿಷತ್ತು ಗ್ರಂಥಸ್ಥವಾಗಿರುವ ಕನ್ನಡ ಪದಗಳ ಬೃಹತ್‍ಕೋಶವನ್ನು ಸಂಪಾದಿಸಿ ಪ್ರಕಟಿಸುತ್ತಿದೆ. ಇದರ ಜತೆಗೆ ಕಸಬುದಾರರ ಪದಕೋಶವೊಂದನ್ನು-ಅಕ್ಕಸಾಲೆ, ಬಡಗಿ, ಕಂಚುಗಾರ, ಕಮ್ಮಾರ, ಕುಂಬಾರ, ಕೃಷಿಕ, ನೂಲುಗಾರ, ನೇಯ್ಗೆಯವ, ಬಳೆಗಾರ, ದರ್ಜಿ, ಗೌಳಿಗ, ಮೇದರವ, ಕ್ಷೌರಿಕ, ವಾದ್ಯಗಾರ ಮುಂತಾದವರು ಉಪಯೋಗಿಸುವ ವಸ್ತುಗಳ ಕ್ರಿಯೆಗಳ ಬೋಧನಾಕ್ರಮ ಮೊದಲಾದುವುಗಳಲ್ಲಿ ಬಳಸುವ ಮಾತುಗಳ ಹಾಗೂ ಆಧುನಿಕ ಯಂತ್ರಗಳೊಡನೆ ಸರಸವಾಡುವ ಕಾರ್ಮಿಕರು ಉಪಯೋಗಿಸುವ ತದ್ಭವಗಳ ಪಟ್ಟಿಗಳನ್ನು ಅಗತ್ಯ ಸಂಗ್ರಹಿಸಿ ಕೋಶಗಳನ್ನು ತಯಾರಿಸಿದರೆ ಒಂದು ಅಪರಿಚಿತವೂ ಅದ್ಭುತವೂ ಜೀವಪೂರ್ಣವೂ ಆದ ಜಗತ್ತು ನಮಗೆ ಗೋಚರಿಸಿತು. ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆ ವೃತ್ತಿಪದಕೋಶವನ್ನು ರಚಿಸಲು ತೊಡಗಿದೆ ಎಂದು ಕೇಳಿ ಹರ್ಷಿತನಾದೆ. ಪರಿಷತ್ತೂ ಇದರಲ್ಲಿ ಭಾಗಿಯಾದರೆ ಒಳ್ಳೆಯದು. ಜತೆಗೆ ಸಂಗೀತಗಾರರೂ ವೀಣಾ ವೇಣು ಮೃದಂದಗಾದಿ ವಾದ್ಯಪಟುಗಳೂ ತಮ್ಮ ಶಿಷ್ಯರಿಗೆ ಕಲಿಸುವಾಗ ಉಪಯೋಗಿಸುವ ದೇಶೀ ಪಾರಿಭಾಷಿಕ ಶಬ್ದಗಳೂ ಇವುಗಳಲ್ಲಿ ಬರಬಹುದು. ಈ ಕೆಲಸದ ಹರಹು ತುಂಬ ಹೆಚ್ಚು. ಕ್ಷೇತ್ರಗಳನ್ನು ವಿಭಾಗಿಸಿಕೊಂಡು ಪರಿಷತ್ತು ಹಾಗೂ ಅಧ್ಯಯನ ಸಂಸ್ಥೆಗಳು ಈ ಕೆಲಸಕ್ಕೆ ತೊಡಗಬಹುದು. ಇದರಿಂದ ಅವುಗಳ ಕೀರ್ತಿಯೂ ವ್ಯಾಪ್ತಿಯೂ ಹೆಚ್ಚುತ್ತದೆ. ಅಲ್ಲದೆ ಗ್ರಾಮಸ್ಥರೊಡನೆ ವ್ಯವಹರಿಸುವಾಗ ಇಂಗ್ಲಿಷೊಂದನ್ನೇ ಆಶ್ರಯಿಸಿರುವ ಆಧುನಿಕ ವಿಜ್ಞಾನಿಗಳಿಗೆ ತಮ್ಮ ಬೋಧನೆಗೆ ತಕ್ಕ ಪಾರಿಭಾಷಿಕ ಶಬ್ದಗಳೂ ಸಿಕ್ಕುತ್ತವೆ.
ವಿಮರ್ಶಾ ಮಂಡಲಿ
ಈ ವಿಷಯವನ್ನು ಕುರಿತು ಚಿಂತಿಸುವಾಗ ಗೋಪಾಲಕೃಷ್ಣ ಅಡಿಗರ ಒಂದು ಸಲಹೆ ನೆನಪಿಗೆ ಬರುತ್ತದೆ. ಸದ್ಗ್ರಂಥಗಳ ಗುಣ ಮೌಲ್ಯಗಳ ನಿಷ್ಕರ್ಷೆಗಾಗಿ ಒಂದು ವಿದ್ವನ್ಮಂಡಲಿ ಇರಬೇಕೆಂದು ಅವರು ಅಪೇಕ್ಷೆ ಪಡುತ್ತಾರೆ. ಆದರೆ ಕಟ್ಟೀಮನಿಯವರು ಇಂಥ ಹೊಸ ಮಂಡಲಿ ಬೇಡ ಎನ್ನುತ್ತಾರೆ. ನನ್ನ ಅಭಿಪ್ರಾಯವೂ ಕಟ್ಟೀಮನಿಯವರತ್ತ ವಾಲುತ್ತದೆ. ಕವಿಗಳೂ ಕೃತಿಕಾರರೂ ಯಾವ ವಿದ್ವನ್ಮಂಡಲಿಯ ಅಥವಾ ಸಂಘಸಂಸ್ಥೆಗಳ ಪ್ರಭಾವಕ್ಕೂ ಒಳಗಾಗಬಾರದು. ಅವರ ಸ್ವಾತಂತ್ರ್ಯ ಕೆಡುತ್ತದೆ. ಸೃಜನಶಕ್ತಿ ಕುಗ್ಗುತ್ತದೆ. ಪ್ರತಿಭಾಶಾಲಿಗಳು ಎಲ್ಲ ಸಂಘ ಸಂಸ್ಥೆಗಳಿಂದಲೂ ಹೊರಗುಳಿಯುವುದು ಒಳಿತು. ಮಾನವ ಸಹಜವಾಗಿಯೇ ಗುಣ ಪಕ್ಷಪಾತಿ. ಆ ನಂಬಿಕೆಯಲ್ಲಿ ಸಾಹಿತಿಗಳು ನಡೆದರೆ ಅವರಿಗೂ ಕುಶಲ, ನುಡಿಗೂ ಸಿರಿವಂತಿಕೆ.
ಕನ್ನಡದ ಸುಪುತ್ರರಿಬ್ಬರ ಜನ್ಮಶತಾಬ್ದಿ
ಕಳೆದ ವರ್ಷ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ಸಂಸ್ಥೆಗಳೂ ಅಕಾಡೆಮಿಯೂ ಇತರ ಸಂಘಸಂಸ್ಥೆಗಳೂ ಕನ್ನಡನಾಡಿನ ಮಹಾಮಹಿಮರಾದ ಇಬ್ಬರು ಸುಪುತ್ರರ ಜನ್ಮಶತಾಬ್ದಿಯನ್ನು ಸಡಗರದಿಂದ ಆಚರಿಸಿ ಧನ್ಯವಾಯಿತು. ಶ್ರೀ ಆಲೂರು ವೆಂಕಟರಾಯರು ಅಸಾಮಾನ್ಯ ಪುರುಷರು. ಶ್ರೀ ಹಳಕಟ್ಟಿಯವರು ವಚನಗಳ ಪ್ರಕಟನೆಯಲ್ಲಿ ತೋರಿಸಿದ ತ್ಯಾಗ, ಸಹನೆ, ತಪೋನಿಷ್ಠೆಗಳು ಅಸಾಧಾರಣವಾದವು. ವಚನಗಳ ಸಂಪಾದನೆ ಮತ್ತು ಪ್ರಕಟನೆ ಬಹು ಮಹತ್ವದ ಕೆಲಸ. ಅವುಗಳ ಪ್ರಭಾವದಿಂದ ಎಷ್ಟೊಂದು ಹುಲುಸಾಗಿದೆ ಕನ್ನಡ ಸಾಹಿತ್ಯ! ನವ್ಯಕಾವ್ಯದ ಛಂದಸ್ಸಿಗೆ ಅವು ಮೂಲ ಮಾತೃಕೆಗಳೆನ್ನಬಹುದು.
ಪರಿಷತ್ತಿನ ಪ್ರಾಮುಖ್ಯತೆ
ಕನ್ನಡ ಸಾಹಿತ್ಯವನ್ನೂ ಕಲೆಗಳನ್ನೂ ಸಂಸ್ಕೃತಿಯನ್ನೂ ಬೆಳೆಸಿ ಕಾಪಾಡಲು ವಿಶ್ವವಿದ್ಯಾನಿಲಯಗಳ ಅಧ್ಯಯನ ಸಂಸ್ಥೆಗಳು, ಪ್ರಸಾರಾಂಗಗಳು, ರಾಜ್ಯದ ಸಾಹಿತ್ಯ ಸಂಗೀತಕಲಾ ಅಕಾಡೆಮಿಗಳು ಜಾನಪದ ಅಕಾಡೆಮಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಕರ್ನಾಟಕ ನವೋದಯ, ವಿದ್ಯಾವರ್ಧಕ ಸಂಘ, ಕುವೆಂಪು ಟ್ರಸ್ಟ್ ಇನ್ನೂ ಮುಂತಾದ ಅನೇಕ ಸಂಸ್ಥೆಗಳು ತೊಡಗಿವೆ. ಸರ್ಕಾರಿಯಲ್ಲದ ಸಾರ್ವಜನಿಕ ಸಂಸ್ಥೆಗಳಲ್ಲಿ ಪರಿಷತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಯೆಂದು ನನ್ನೆಣಿಕೆ. ಸರ್ಕಾರದ ಬೆಂಬಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಂದ ಸಹಕಾರ ಸಹಾಯಗಳು ಇದಕ್ಕೆ ದೊರೆಯಬೇಕೆಂಬುದು ನನ್ನ ಆಶಯ. ಇದರ ಸದಸ್ಯತ್ವದಲ್ಲಿ ಪ್ರೌಢವಿದ್ವಾಂಸರ ಸಂಖ್ಯೆ ಹೆಚ್ಚಬೇಕು. ಇದರ ವೇದಿಕೆಯ ಮೇಲೆ ಅನೇಕ ವಿಜ್ಞಾನಿಗಳು ಭಾಷಣ ಮಾಡಬೇಕು. ಶ್ರೀ ಜಿ. ನಾರಾಯಣ ಮತ್ತು ಶ್ರೀ ಹಂಪ ನಾಗರಾಜಯ್ಯನವರ ಉತ್ಸಾಹಪೂರ್ಣವಾದ ನೇತೃತ್ವದಲ್ಲಿ ಪರಿಷತ್ತು ಎಂದೂ ಕಾಣದಷ್ಟು ಅಭಿವೃದ್ಧಿ ಹೊಂದಿದೆ, ಪರಿಷತ್ತು ತನ್ನ ಚಟುವಟಿಕೆಗಳನ್ನು ಕುರಿತು ಹೊರಡಿಸಿರುವ ಪುಸ್ತಿಕೆಗಳಲ್ಲಿ ಈ ಬೆಳವಣಿಗೆ ಪ್ರಮಾಣ ಗೋಚರಿಸುತ್ತದೆ. ಇದರ ಮುನ್ನಡೆಯನ್ನು ವಿಷಯ ನಿಯಾಮಕ ಚರ್ಚಿಸಿ ಸೂಕ್ತ ಸಲಹೆಗಳನ್ನು ಸಭೆಯ ಮುಂದಿಡಲಿರುವುದರಿಂದ ಆ ವಿಷಯ ಕುರಿತು ಇಲ್ಲಿ ಹೆಚ್ಚು ಪ್ರಸ್ತಾಪಿಸುವುದಿಲ್ಲ.
ಗಮಕ ಕಲೆ ಮತ್ತು ಪರಿಷತ್ತು
ಪರಿಷತ್ತು ಹಳಗನ್ನಡ, ನಡುಗನ್ನಡ ಕಾವ್ಯಗಳನ್ನು ರಾಗವಾಗಿ ಹಾಡುವ ಗಮಕ ಕಲೆಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದೆ. ಆದರೆ ಗಮಕ ಎಂದರೆ ಇಷ್ಟಕ್ಕೆ ಮುಗಿಯುವುದಿಲ್ಲ. ವಾಚನಕಲೆ ಎಂಬುದೊಂದುಂಟು. ಈ ಕಲೆ ವಾಚನ ಧ್ವನಿಯ ಏರಿಳಿತಗಳನ್ನು ಎಂದರೆ ‘ಕಾಕು’ಗಳನ್ನು ಉಚಿತ ಅಂಗಾಭಿನಯವನ್ನೂ ಒಳಗೊಂಡಿದೆ. ಈ ಕಲೆಗೆ ಪರಿಷತ್ತು ಅಗತ್ಯವಾಗಿ ಗಮನಕೊಟ್ಟು ಶಿಕ್ಷಣ ಶಿಬಿರಗಳನ್ನು ಏರ್ಪಡಿಸಬೇಕೆಂಬುದು ನನ್ನ ಸಲಹೆ. ಹರಿಕಥೆಗಳನ್ನು ಪ್ರೋತ್ಸಾಹಿಸಿ ಅವಕ್ಕೆ ಇಂಥ ಸಮ್ಮೇಳನಗಳ ಮನರಂಜನೆಯ ಕಾರ್ಯಕ್ರಮಗಳಲ್ಲಿ ಸ್ಥಳ ಕೊಡಬೇಕೆನಿಸುತ್ತದೆ. ಅದೊಂದು ವಿಶಿಷ್ಟ ಕಲೆ. ದಿ. ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಇದರಲ್ಲಿ ಪರಿಣಿತರಾಗಿದ್ದರು. ಈಗ ಇದು ಖಿಲವಾಗುತ್ತಿದೆ.
ಕನ್ನಡ ಪ್ರಾಚೀನ ಕಾವ್ಯಗಳ ಸರಳಾನುವಾದ
ಪ್ರಾಚೀನ ಕಾವ್ಯಗಳ ಭಾಷೆ ಈಗ ಸಾಮಾನ್ಯವಾಗಿ ಯಾರಿಗೂ ಅರ್ಥವಾಗುವುದು ಕಷ್ಟ. ಆ ಕಾವ್ಯಗಳನ್ನು ಹೊಸಗನ್ನಡದ ಗದ್ಯಕ್ಕೆ ಅನುವಾದಿಸುವ ಯೋಜನೆಯೊಂದನ್ನು ಪರಿಷತ್ತು ಹಾಕಿಕೊಂಡಿರುವಂತಿದೆ. ಶ್ರೀ ಗೋಪಾಲಕೃಷ್ಣ ಅಡಿಗರು ಇದನ್ನು ಕೈಬಿಡಬೇಕೆಂದು ಕೋರಿದ್ದಾರೆ. ಅವರ ಕೋರಿಕೆಗೆ ನಾನೂ ಕೈಜೋಡಿಸುತ್ತೇನೆ. ಇದು ನಿಷ್ಪ್ರಯೋಜಕವಾದ ಕೆಲಸ. ಪಂಪಭಾರತಕ್ಕೆ ಶ್ರೀ ದೊಲನ ಅವರು ಮಾಡಿರುವ ವ್ಯಾಖ್ಯಾನದಂತೆ, ಬೇಕಾದರೆ ಉತ್ಕೃಷ್ಟ ಹಳಗನ್ನಡದ ಕಾವ್ಯಗಳಿಗೆ ವಿದ್ವಾಂಸರು ಪ್ರತಿ ಪದಾರ್ಥದೊಡನೆ ಟೀಕೆಗಳನ್ನು ಬರೆದು ಪರಿಷತ್ತು ಅವನ್ನು ಪ್ರಕಟಿಸುವುದು ಒಳಿತು.
ಭಾಷಾಂತರ ಕಾರ್ಯಕ್ಕೆ ಸೂಚನೆ
ಅನ್ಯಭಾಷೆಗಳ ಉದ್ಗ್ರಂಥಗಳನ್ನು, ಮುಖ್ಯವಾಗಿ ಸಂಸ್ಕೃತದ ದರ್ಶನಶಾಸ್ತ್ರಗಳನ್ನೂ ಪಾಶ್ಚಾತ್ಯದರ್ಶನಗಳ ಸಾರವತ್ತಾದ ಗ್ರಂಥಗಳನ್ನೂ ಒಳ್ಳೆಯ ದೇಸೀ ಕನ್ನಡಕ್ಕೆ ಅನುವಾದಿಸುವ ಯತ್ನವನ್ನು ಪರಿಷತ್ತು ಕೈಗೊಳ್ಳಬೇಕೆಂದು ಸೂಚಿಸುತ್ತೇನೆ. ಪ್ರಸಾರಾಂಗಗಳು ಮತ್ತು ಅಕಾಡೆಮಿಗಳೊಡನೆ ಸಮಾಲೋಚಿಸಿ ಗ್ರಂಥಗಳನ್ನು ಹಂಚಿಕೊಂಡು ಈ ಕೆಲಸವನ್ನು ನೆರವೇರಿಸಬಹುದು. ಕನ್ನಡದಲ್ಲಿ ಹುರುಳಾದ ಜ್ಞಾನವನ್ನು ತುಂಬಲು ಇದು ತುಂಬ ಸಹಕಾರಿಯಾಗುತ್ತದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಗೋಚರಿಸುವ ಕನ್ನಡದ ಭಾಷಾಂತರಗಳು ಬಹು ಚೆನ್ನಾಗಿವೆ. ಇಂಥ ಭಾಷಾಂತರಕಾರರು ಪರಿಷತ್ತಿಗೆ ದೊರೆತರೆ ಆ ಸಂಸ್ಥೆಗೆ ತುಂಬ ಲಾಭ ಎನಿಸುತ್ತದೆ.
ಉಪಸಂಹಾರ
ಬಂಧುಗಳೇ, ಕನ್ನಡನಾಡನ್ನೂ ನುಡಿಯನ್ನೂ ಜ್ಞಾನಾನಂದಗಳಿಂದ ಸಂಪನ್ನಗೊಳಿಸುವ ಸುಕಾಲ ಈಗ ನಮಗೆ ದೇವರ ದಯದಿಂದ ಒದಗಿ ಬಂದಿವೆ. ಖ್ಯಾತಿ ಲಾಭ ಪೂಜೆಗಳನ್ನು ಗೌಣವಾಗಿ ಎಣಿಸಿ ಈಗ ಈ ಕೆಲಸದಲ್ಲಿ ನಾವೆಲ್ಲ ತೊಡಗುವುದೊಳಿತು. ಇಂಥ ಕಾಲ ಬೇರೆ ಬಾರದು. ಕನ್ನಡದ ಜನವನ್ನು ಕನ್ನಡದ ನೆಲ ಚೆನ್ನಾಗಿ ಬಾಳಿಸಲಾಗದಿದ್ದರೆ ಅವರನ್ನು ಮತ್ತಾವ ನೆಲ ಭಾವಿಸೀತು, ಬಾಳಿಸೀತು? ನಾವು ಕಳಪೆ ಜನವಾಗಬಾರದು. ಕಳಪೆ ಜನವನ್ನು ಕಳಪೆಯವರು ಆಳುತ್ತಾರೆ, ಘನವಂತರಿಗೆ ಘನವಂತರ ಆಡಳಿತ ದೊರೆಯುತ್ತದೆ ಎಂಬ ಮಿಲ್ ಮಹಾಶಯನ ಉಕ್ತಿಯನ್ನು ಹಿಂದೆ ದಿ. ದೇಶಭಕ್ತ ವೆಂಕಟಕೃಷ್ಣಯ್ಯನವರು ಎತ್ತಿ ಹೇಳಿದ್ದಾರೆ. ಅದನ್ನು ನಾನು ಮರಳಿ ತಮ್ಮ ನೆನಪಿಗೆ ತರುತ್ತಿದ್ದೇನೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ತಾನು ಹುಟ್ಟಿದಾಗಿನಿಂದ ಕನ್ನಡನಾಡು ನುಡಿಗಳನ್ನು ಕೀಳ್ಮೆಗೊಳಿಸುವ ಎಲ್ಲ ಪ್ರವೃತ್ತಿಗಳನ್ನೂ ಪ್ರತಿಭಟಿಸುತ್ತಿರುವ ಸಂಸ್ಥೆ, ದೇಶ ದಾಸ್ಯದಲ್ಲಿರುವಾಗಲೇ ನಾಡನ್ನು ಎಚ್ಚರಿಸುವ ಕೆಲಸದಲ್ಲಿ ಅದು ತೊಡಗಿತ್ತು. ಈಗ ನಾವು ಸ್ವತಂತ್ರರು. ಆದುದರಿಂದಲೇ ಘನವಂತರು ನಮ್ಮ ಬದುಕಿನ ಎಲ್ಲ ಸ್ತರದಲ್ಲೂ ಈ ಘನವಂತಿಕೆ ಮೆರೆಯಬೇಕು. ಅದು ಗ್ರಾಮಗಳಲ್ಲಿ ಪ್ರಾರಂಭವಾಗಿ ರಾಜಧಾನಿಗಳನ್ನು ವ್ಯಾಪಿಸಬೇಕು. ವಿಜ್ಞಾನದಿಂದ ವಸ್ತು ಸಮೃದ್ಧಿ; ಸಾಹಿತ್ಯಾದಿ ಕಲೆಗಳಿಂದ ಭಾವನಾ ಸಮೃದ್ಧಿ. ನಾಡುನುಡಿಗಳ ಈಗಿನ ಬಡತನಕ್ಕೂ ಜಡತೆಗೂ ಯಾರು ಹೊಣೆ, ನಾವಲ್ಲದೆ ಮತ್ತಾರು? ಇದಕ್ಕೆ ನಾವು ನಾಚಿಕೆಪಡಬೇಕು, ಕಾರ್ಯಪ್ರವೃತ್ತರಾಗಬೇಕು. ವಿಜ್ಞಾನಿಗಳಲ್ಲಿ ಹೃದಯಸಂಪನ್ನತೆಯನ್ನೂ ಸಾಹಿತಿಗಳಲ್ಲಿ ಜ್ಞಾನಾನಂದಸಂಪನ್ನತೆಯನ್ನೂ ನಾಡು ಈಗ ಎಂದಿಗಿಂತ ಹೆಚ್ಚಾಗಿ ಬಯಸುತ್ತದೆ. ಜ್ಞಾನದ ತಳದಲ್ಲಿ ಅರಿಷಡ್ವರ್ಗದ ಸೆಳೆತಗಳ ಗಾಢವಾದ ತಿಳಿವಳಿಕೆಯಿದೆ; ಆನಂದದ ಮೂಲದಲ್ಲಿ ಅನುಕಂಪೆಯ ಸೆಲೆಯಿದೆ. ಆರೋಗ್ಯ ದೃಢಕಾಯರಾದ ಶ್ರೀಮಂತರ ಆಹಾರ ವಿಹಾರ ನಿಯಮಗಳು ಬೇರೆ, ತೇರಿಕೊಳ್ಳುತ್ತಿರುವ ದುರ್ಬಲರ ನಿಯಮಾವಳಿಗಳು ಬೇರೆ. ನಮ್ಮ ಬದುಕನ್ನು ನಮ್ಮ ಭಾಷೆ ಬಿಂಬಿಸುತ್ತದೆ. ಅದಕ್ಕೆ ಪರಭಾಷೆಗಳ ಪೀಡೆ ತಪ್ಪಬೇಕು, ಪುಷ್ಟಿತುಷ್ಟಿಗಳು ದೊರೆಯಬೇಕು. ಗಣರಾಜ್ಯದಲ್ಲಿ ನ್ಯಾಯವೊಂದೇ ಸಾಮ್ರಾಟ್. ನಿರ್ಮಲವಾದ ಗಾಳಿ, ನೀರು, ಪುಷ್ಟಿಕರವಾದ ಅನ್ನ ಇವುಗಳಂತೆ ನ್ಯಾಯ ಎಲ್ಲರಿಗೂ ಲಭಿಸುವಂತಾದ ಹೊರತು ನಾಡು ಚೇತರಿಸಿಕೊಳ್ಳದು, ಅದರಂತೆಯೇ ನುಡಿಯೂ ಸಹ. ಅನ್ಯೋನ್ಯ ಅಬಾಧಾವಿಧಿಯೇ ನ್ಯಾಯ ಎಂಬುದನ್ನು ನಾವು ಮರೆಯಬಾರದು.
ಪ್ರತಿಕ್ರಿಯೆ