ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮

ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್

goruru-ramaswamy-iyangar

೫೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಇವರು ಗೊರೂರು ಗ್ರಾಮದಲ್ಲಿ ೪-೭-೧೯0೪ರಲ್ಲಿ ಶ್ರೀನಿವಾಸ ಅಯ್ಯಂಗಾರ್-ಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದರು. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು.

ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿಗೆ ಬಂದು ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಅಖಿಲ ಭಾರತ ಚರಖಾ ಸಂಘದ ಖಾದಿ ವಸ್ತ್ರಾಲಯದ ಮಳಿಗೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರೊಂದಿಗೆ ಜಿಲ್ಲಾ ಮಂಡಳಿ ಮತ್ತು ಸ್ಥಳೀಯ ವಿದ್ಯಾಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ೧೯೫೨ರಲ್ಲಿ ವಿಧಾನಸಭೆಗೆ ನಾಮಕರಣಗೊಂಡರು.

೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದರು. ೧೯೬೭ರಲ್ಲಿ ತರೀಕೆರೆಯಲ್ಲಿ ನಡೆದ ಮೊದಲನೇ ಅಖಿಲ ಕರ್ನಾಟಕ ಜನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೬೯ರಲ್ಲಿ ಗೌರವ ಪ್ರಶಸ್ತಿ ನೀಡಿತು. ೧೯೭೧ರಲ್ಲಿ ಹಾಸನಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯ ೧೯೭೯ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಅಮೆರಿಕಾದಲ್ಲಿ ಗೊರೂರು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ೫೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

ಕಥೆ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. ೬0ಕ್ಕೂ ಮೀರಿ ಕೃತಿಗಳನ್ನು ರಚಿಸಿರುವ ಗೊರೂರು ಅವರ ಕೃತಿಗಳು ಜನಪ್ರಿಯವಾಗಿವೆ. ಅವರ ಪ್ರಧಾನ ಕೃತಿಗಳು ಹೀಗಿವೆ :

ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕಥೆಗಳು ಮತ್ತು ಇತರ ಚಿತ್ರಗಳು, ಶಿವರಾತ್ರಿ, ಬೆಸ್ತರ ಕರಿಯ, ಗೋಪುರದ ಬಾಗಿಲು ಇತ್ಯಾದಿ ಗದ್ಯ ಕೃತಿಗಳು. ಹಳ್ಳಿಯ ಹಾಡು, ಹಳ್ಳಿಯ ಬಾಳು, ಜನಪದ ಜೀವನ ಮತ್ತು ದರ್ಶನ ಇತ್ಯಾದಿ ಜಾನಪದ ಕೃತಿಗಳು. ಅಮೆರಿಕಾದಲ್ಲಿ ಗೊರೂರು-ಪ್ರವಾಸ ಗ್ರಂಥ, ಗಾಂಧೀಜಿ ಆತ್ಮಕಥೆ, ಅನುವಾದ.

ಕನ್ನಡ ಸಾಹಿತ್ಯ ಸಮ್ಮೇಳನ-೫೫,

ಅಧ್ಯಕ್ಷರು, ಗೊರೂರು ರಾಮಸ್ವಾಮಿ ಅಯ್ಯಂಗಾರ್

ದಿನಾಂಕ ೨೩, ೨೪, ೨೫, ೨೬ ಡಿಸೆಂಬರ್ ೧೯೮೨

ಸ್ಥಳ : ಶಿರಸಿ

ಗಮಕಕ್ಕೆ ಪ್ರೋತ್ಸಾಹ

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಗಮಕವು ಹೊಂದಿರುವ ಸ್ಥಾನ ಮುಖ್ಯವಾದುದು. ಕಾವ್ಯವನ್ನು ರಾಗವಾಗಿ ವಾಚಿಸುವುದು ನಮ್ಮ ದೇಶದಲ್ಲಿ ಹಿಂದಲಿಂದ ಬಂದ ಪದ್ಧತಿಯಾಗಿದ್ದಿರಬೇಕು. ರಾಜರಿಗೆ ದಂಡನಾಯಕರಿಗೆ ಕಾವ್ಯಗಳನ್ನು ಅರ್ಪಿಸಿದಾಗ ಆಸ್ಥಾನದಲ್ಲಿಯೇ ಕವಿಯಿಂದಲೋ ಅಥವಾ ಗಮಕಿಗಳಿಂದಲೋ ವಾಚನ ನಡೆಯುತ್ತಿದ್ದಿತು. ಕವಿ, ವಾದಿ, ವಾಗ್ಮಿ ಗಮಕಿಗಳು ಆಸ್ಥಾನಗಳ ಭೂಷಣರೆಂಬ ನುಡಿ ಇದೆ. ಗಮಕಿಗಳು ತಮ್ಮ ಕಾರ್ಯಗಳಿಂದ ಈಚಿನ ದಿನಗಳಲ್ಲಿ ಸಾಹಿತ್ಯಕ್ಕೆ ತುಂಬಾ ಸೇವೆ ಸಲ್ಲಿಸಿದ್ದಾರೆ. ನಮ್ಮ ಪ್ರಾಚೀನ ಕಾವ್ಯಗಳು ಸಾಮಾನ್ಯವಾಗಿಯೇ ಹಾಡಲು ಅನುಕೂಲವಾದ ಛಂದಸ್ಸು ಪದಬಂಧಗಳುಳ್ಳವಾಗಿವೆ. ಅವುಗಳನ್ನು ಸಂಗೀತದ ಮಿತಿಯಲ್ಲಿ ಹಾಡಿದರೆ ಶ್ರೋತೃಗಳಿಗೆ ಹಿತವಾಗುವುದಲ್ಲದೆ ಸಾಹಿತ್ಯದ ಸವಿಯ ಅನುಭವವುಂಟಾಗುವುದು. ‘ಕುಮಾರವ್ಯಾಸಭಾರತ’, ‘ಜೈಮಿನಿ ಭಾರತ’, `ಬಸವ ಪುರಾಣ’, ‘ಭರತೇಶ ವೈಭವ’, ‘ಭಾಗವತ’ ಇವೆಲ್ಲ ಗಮಕಿಗಳಿಂದಲೇ ಜನತೆಯಲ್ಲಿ ಪ್ರಚಾರವಾಗಿವೆ. ಪರಿಷತ್ತು ಈ ಕಲೆಗೆ ಪ್ರೋತ್ಸಾಹವನ್ನು ಕೊಡುತ್ತಿದೆ. ಪರಿಷತ್ತಿನ ಸಭಾ ಕಾರ್ಯಗಳಲ್ಲಿಯೂ ಸಮ್ಮೇಳನದ ಸಭಾ ಕಾರ್ಯಗಳಲ್ಲಿಯೂ ಗಮಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಸಲಹೆಯನ್ನು ಪರಿಶೀಲಿಸಬಹುದು. ಈಗ ಶ್ರೀಮಾನ್ ಜಿ. ನಾರಾಯಣರು ಗಮಕ ಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ನಮ್ಮ ಲೇಖಕಿಯರು

ನಮ್ಮ ಸೋದರಿಯರು ಹೆಚ್ಚು ಹೆಚ್ಚಾಗಿ ಸಾಹಿತ್ಯ ರಚನೆಗೆ ಕೈಹಾಕುತ್ತಿರುವುದು ಸಂತೋಷದ ಸಂಗತಿ. ಮೊದಮೊದಲು ಅವರು ಬರಿಯ ಕಥೆ ಕಾದಂಬರಿಗಳನ್ನು ಮಾತ್ರ ಬರೆಯುತ್ತಿದ್ದರು. ಈಗ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ-ಕವನಗಳು, ಪ್ರವಾಸ ಕಥನ, ಸರಳ ರಗಳೆಯ ನಾಟಕಗಳು, ವಿಮರ್ಶೆ ಎಲ್ಲವುಗಳನ್ನೂ ಬರೆಯುತ್ತಿದ್ದಾರೆ. ಈಗ ಲೇಖಕಿಯರ ಸಂಖ್ಯೆಯೂ ಹೆಚ್ಚಿದೆ. ಸಾಹಿತ್ಯ ಪರಿಷತ್ತಿನ ಒಂದು ಪಟ್ಟಿಯಂತೆ ಅವರ ಸಂಖ್ಯೆ ಇನ್ನೂರ ಐವತ್ತನ್ನೂ ದಾಟಿದೆ. ಒಬ್ಬರು ನೂರು ಕಾದಂಬರಿಗಳನ್ನು ಬರೆದಿದ್ದಾರೆಂದು ಕೇಳಿದೆ. ಇದೊಂದು ಗಣನೀಯ ಪ್ರಮಾಣ. ಮಹಿಳೆಯರು ಸಾಹಿತ್ಯವನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಮಹಿಳೆಯರು ಆತ್ಮಾಭಿಮಾನ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಾಧಕವಾದ ಸಾಹಿತ್ಯವನ್ನು ರಚಿಸಬೇಕು. ಈಚಿನ ದಿನಗಳಲ್ಲಿ ಅವರು ಸಮಾಜದಲ್ಲಿ ತುಂಬ ಹೊಣೆಗಾರಿಕೆಯ ಕರ್ತವ್ಯಗಳನ್ನೆಲ್ಲ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರು ಯಾವ ಕೆಲಸವನ್ನೂ ಚೆನ್ನಾಗಿ ಮಾಡಬಲ್ಲರು. ಅವರು ಹೆಚ್ಚು ಹೆಚ್ಚಾಗಿ ಶಿಶುಸಾಹಿತ್ಯವನ್ನೂ ರಚಿಸಬೇಕು. ಮೂಢನಂಬಿಕೆಗಳನ್ನು ನಿರ್ಮೂಲ ಮಾಡಬೇಕು. ಅವರಿಗೆ ಸಮಾನ ಅವಕಾಶವನ್ನು ಮೊದಲು ಕೊಟ್ಟವನು ಭಗವಾನ್ ಬುದ್ಧ. ಈಚಿನ ದಿನಗಳಲ್ಲಿ ಗಾಂಧೀಜಿ. ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಚಳುವಳಿಯಲ್ಲಿ, ತ್ಯಾಗ ಮತ್ತು ಕಷ್ಟಸಹಿಷ್ಣುತೆಯಲ್ಲಿ ಮಹಿಳೆಯರೇ ಪ್ರಧಾನ ಪಾತ್ರ ವಹಿಸಿದ್ದರು. ರಷ್ಯನ್ ಮಹಿಳೆಯೊಬ್ಬಳು ಗಗನಯಾತ್ರಿಯೂ ಆದಳು.

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು

ಸಾಹಿತ್ಯ ಪರಿಷತ್ತು, ಸರ್ಕಾರ, ಪ್ರಜೆಗಳು, ಸದಸ್ಯರು ಇವರ ಸಹಾಯದಿಂದ ನಡೆಯುವ ಸಾರ್ವಜನಿಕ ಸಂಸ್ಥೆ. ಇದಕ್ಕೆ ಒಂದು ಸಂವಿಧಾನವೂ ಇದೆ. ಕಾರ್ಯಕಾರಿ ಸಮಿತಿಯೂ ಇದೆ. ಈಚಿನ ದಿನಗಳಲ್ಲಿ ಇದರ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಸದಸ್ಯರ ಸಂಖ್ಯೆ ಸಾಕಷ್ಟು ಇಲ್ಲ ಎಂಬುದೇ ಹಿಂದಲ ಎಲ್ಲ ಅಧ್ಯಕ್ಷರ ಕೊರಗು ಆಗಿತ್ತು. ಡಿ.ವಿ.ಜಿ.ಯವರು ಸದಸ್ಯರನ್ನು ಹೆಚ್ಚಿಸಿದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳಿದ್ದರು. ಸದಸ್ಯ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸಬೇಕೆಂದು ಹೇಳಿದ ಒಬ್ಬ ಅಧ್ಯಕ್ಷರೂ ಇದ್ದಾರೆ. ಸರ್ಕಾರದ ಧನಸಹಾಯವೂ ಈಗ ಹೆಚ್ಚಾಗಿ ದೊರೆಯುತ್ತಿದೆ. ಶ್ರೀ ಜಿ. ನಾರಾಯಣ, ಶ್ರೀ ಹಂಪ. ನಾಗರಾಜಯ್ಯ ಇವರ ಅಧ್ಯಕ್ಷಗಿರಿಯ ಅವಧಿಯಲ್ಲಿ ಪರಿಷತ್ತಿನ ಕೆಲಸ ಕಾರ್ಯಗಳು ಚಟುವಟಿಕೆ ಎಲ್ಲ ದಾಪುಗಾಲಿನಲ್ಲಿ ನಡೆದು ಅನೇಕ ಕೊಂಬೆಗಳು ಒಡೆದ ಆಲದಮರದಂತೆ ವಿಸ್ತರಿಸಿವೆ. ಬೆಳ್ಳಿ ಬಿಟ್ಟ ಬಳ್ಳಿ ಮಾಲೆಯಲ್ಲಿ ಪ್ರಕಟವಾದ ೧0೧ ಪುಸ್ತಕಗಳು ಕನ್ನಡಿಗರಿಗೆ ಪರಿಷತ್ತಿನ ಬಹುದೊಡ್ಡ ಕೊಡುಗೆಯಾಗಿವೆ.

ಈಚಿನ ದಿನಗಳಲ್ಲಿ ಪರಿಷತ್ತು

ಆದರೆ ಈಚಿನ ದಿನಗಳಲ್ಲಿ ಪರಿಷತ್ತಿನಲ್ಲಿ ವಾತಾವರಣ ಗೊಂದಲಮಯವಾಗಿ ಅಹಿತಕರವೂ ರಾಡಿಯೂ ಆಗಿರುವುದು ಕನ್ನಡಿಗರಿಗೆ ವಿಷಾದದ ವಿಷಯವಾಗಿದೆ. ಸಂವಿಧಾನದಂತೆ ನಡೆದು ಏನನ್ನೂ ಸಾಧಿಸಲು ಎಲ್ಲರಿಗೂ ಅಧಿಕಾರವಿದೆ. ಆದರೆ ಇತರ ವಿಷಯಗಳಲ್ಲಿ ಭಿನ್ನಾಭಿಪ್ರಾಯವುಂಟಾದರೆ, ಸದಸ್ಯರೆಲ್ಲ ಒಟ್ಟಾಗಿ ಸೇರಿ ಚರ್ಚೆಯಿಂದ ಪರಿಹರಿಸಿಕೊಳ್ಳಬೇಕು. ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಬಹಿರಂಗ ಹೇಳಿಕೆ ಕೊಡಬಾರದು. ನ್ಯಾಯಸ್ಥಾನಗಳಿಗೂ ಹೋಗಬಾರದು. ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೂ ಇದು ಸಾಮಾನ್ಯ ನಿಯಮ. ಪರಿಷತ್ತಿನಂಥ ಸಾಂಸ್ಕೃತಿಕ ಸಂಸ್ಥೆಯಲ್ಲಿ ಸದಸ್ಯರೆಲ್ಲ ಇದನ್ನು ಅನುಸರಿಸಬೇಕು. ಪರಿಷತ್ತಿನಲ್ಲಿ ಹಿಂದೆಯೂ ಸಹ ಇಂಥ ವಿಷಯ ತಲೆದೋರಿದೆ. ೩೨ ವರುಷಗಳ ಹಿಂದೆಯೇ          ಶ್ರೀಮಾನ್ ಎಂ.ಆರ್. ಶ್ರೀನಿವಾಸಮೂರ್ತಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ “ಮೊದಲಿನಿಂದಲೂ ಆಕ್ಷೇಪಕರು ಇದ್ದೇ ಇದ್ದಾರೆ. ನಮಗೂ ಪರಿಷತ್ತಿನ ಬಗ್ಗೆ ಅಸಂತುಷ್ಟಿ ಇದೆ. ಅಸಂತೋಷ : ಶ್ರಿಯೋ ಮೂಲಃ ಬೈದವರನ್ನು ಬಂಧುಗಳೆಂಬೆ” ಎಂದು ಸಮಾಧಾನ ತಂದುಕೊಳ್ಳುತ್ತೇವೆ. ಆದರೆ ಸದಸ್ಯರ ಸಂಖ್ಯೆಗಿಂತ ಆಕ್ಷೇಪಕರ ಸಂಖ್ಯೆಯೇ ಹೆಚ್ಚಾಗಿದ್ದರೆ ಫಲವೇನು….ಪರಿಷತ್ತು ಮಾಡಬೇಕಾದ ಕೆಲಸಗಳು ಬಹಳವಾಗಿವೆ. ಅದರ ಸದಸ್ಯರು ನಾಡಿನ ಎಲ್ಲ ಕಡೆಗಳಲ್ಲಿಯೂ ಇದ್ದಾರೆ ಎಂದು ಹೇಳಿದ್ದರು. ಆದುದರಿಂದ ಪರಿಷತ್ತಿನ ಮೇಲೆ ಈಗಷ್ಟೇ ಆಕ್ಷೇಪಣೆ ಬಂದಿದೆಯೆಂದು ಭಾವಿಸಬಾರದು.

ಪರಿಷತ್ತು ಸರಸ್ವತೀ ದೇವಾಲಯ

ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಅರ್ಥದಲ್ಲಿಯೂ ನಮ್ಮ ಸಾರಸ್ವತ ದೇವಾಲಯ. ಅದನ್ನು ಪ್ರಾತಃಸ್ಮರಣೀಯರಾದ ಅನೇಕ ಮಹಾನುಭಾವರು ತಮ್ಮ ಸರ್ವಸ್ವವನ್ನೂ ಅರ್ಪಿಸಿ ಕಟ್ಟಿದ್ದಾರೆ. ಸರಿಯಾಗಿ ನಡೆಸಿದರೆ ಕನ್ನಡಿಗರ ಹಿತವನ್ನು ರಕ್ಷಿಸಬಲ್ಲ ಸಂಸ್ಥೆ ಅದೊಂದೆ. ಅದು ಹಾಗೆ ಮಾಡುತ್ತಲೂ ಬಂದಿದೆ. ನೆರೆ ಪ್ರಾಂತಗಳಲ್ಲಿ ಪರಪ್ರಾಂತಗಳಲ್ಲಿ ಪರದೇಶಗಳಲ್ಲಿ ಕನ್ನಡಿಗರು ಎಲ್ಲಿಯೇ ಇರಲಿ-ಇವರೆಲ್ಲರನ್ನೂ ಒಂದು ಛತ್ರದ ಕೆಳಗೆ ಕೂಡಿಸುವ ಸಂಸ್ಥೆ ಇದೊಂದೆ. ನಾವು ಯಾವ ರೀತಿಯಿಂದಲೂ ಪರಸ್ಪರ ಕಚ್ಚಾಡಿ ಇಂಥ ಉತ್ತಮ ಸಂಸ್ಥೆಯನ್ನು ಹಾಳುಮಾಡಬಾರದು ಇದಕ್ಕೆ ದೀರ್ಘವಾದ ಸತ್ಪರಂಪರೆಯ ಇತಿಹಾಸವಿದೆ. ಹಿರಿಯರು ಬೆಳೆಸಿ ನಮ್ಮ ಕೈಯಲ್ಲಿಟ್ಟಿರುವ ಈ ಸಂಸ್ಥೆಗೆ ನಾವು ವಿಶ್ವಸ್ತರಾಗಿ ಇದನ್ನು ಬೆಳೆಸಿ ಮುಂದಲವರಿಗೆ ವರ್ಗಾಯಿಸಬೇಕು. ಸಂಯಮ ಹೊಂದಾಣಿಕೆ ತ್ಯಾಗ ಇವು ಎಲ್ಲರಲ್ಲಿಯೂ ಇರಬೇಕು. ಪರಸ್ಪರ ಕಾದಾಟ ಆತ್ಮಘಾತುಕವಾಗುವುದು.

Tag: Kannada Sahitya Sammelana 55, Goruru Ramaswamy Iyengar, Gorur

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)