ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0

ಅಧ್ಯಕ್ಷತೆ: ಆರ್.ಸಿ. ಹಿರೇಮಠ

೫೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆರ್.ಸಿ. ಹಿರೇಮಠ 

ಕನ್ನಡದ ಭಾಷಾವಿಜ್ಞಾನಿ, ವಚನಶಾಸ್ತ್ರಕೋವಿದ ಸಂಶೋಧಕ ಆಗಿದ್ದ ಆರ್.ಸಿ. ಹಿರೇಮಠರು ರೋಣ ತಾಲ್ಲೂಕಿನ ಕುರುಡಗಿಯಲ್ಲಿ ಚಂದ್ರಯ್ಯ-ವೀರಮ್ಮ ದಂಪತಿಗಳಿಗೆ ೧೫-೧-೧೯೨0ರಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾಂಗಳಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ೧೯೪0ರಲ್ಲಿ ಕನ್ನಡ ಎಂ.ಎ.ಪದವಿ ಗಳಿಸಿದರು.

ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ೧೯೫೧ರಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ಕೊನೆಗೆ ೧೯೭೫ರಿಂದ ೧೯೮0ವರೆಗೆ ಕುಲಪತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಗತಿಗೆ ಶ್ರಮಿಸಿದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ಕುಲಪತಿಗಳಾಗಿ ನಿವೃತ್ತರಾದ ಅನಂತರ ತಿರುವನಂತಪುರದ ಅಂತರರಾಷ್ಟ್ರೀಯ ದ್ರಾವಿಡ ಭಾಷಾವಿಜ್ಞಾನದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ನಿಕಟ ಸಂಬಂಧವನ್ನು ಹೊಂದಿದ್ದ ಇವರು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

೧೯೯0ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೫೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾದ ಇವರು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ವಿದ್ವತ್‍ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದರು.

ಭಾಷಾಶಾಸ್ತ್ರ, ವೀರಶೈವ ಸಾಹಿತ್ಯ, ವಚನ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್‍ಪೂರ್ಣ ಗ್ರಂಥಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದು.

ಸುಮನಾಂಜಲಿ, ಮೌನ ಸ್ಪಂದನ, ಸಾಹಿತ್ಯ ಸಂಸ್ಕೃತಿ, ಕವಿ ಪದ್ಮಣಾಂಕ, ತಥಾಗತ ಚಾರಿತ್ರ್ಯ(ಅಪೂರ್ಣ ಕಾವ್ಯ). ಇವು ಇವರು ರಚಿಸಿದ ಕೃತಿಗಳು.

ಬಸವ ಪುರಾಣ, ಪದ್ಮರಾಜಹುರಾನಿ, ರಾಜಶೇಖರ ವಿಳಾಸ, ರಾಮಚಂದ್ರಚರಿತ ಪುರಾಣ, ಅಮೃತ ಬಿಂದುಗಳು ಇತ್ಯಾದಿಗಳು ಇವರು ಸಂಪಾದಿಸಿದ ಕಾವ್ಯ ಗ್ರಂಥಗಳು

ಲಿಂಗ್ವಿಸ್ಟಿಕ್ ಇನ್ವೆಸ್ಟಿಗೇಷನ್ ಆಫ್ ಸಂಪ್ಲಾಬ್ಲಂಸ್ ಆನ್ ದಿ ರಿಲೇಷನ್‍ಷಿಪ್ ಆಫ್ ಇಂಡೋ-ಆರ್ಯನ್ ಅಂಡ್ ದ್ರವಿಡಿಯನ್ ಲ್ಯಾಂಗ್ವೇಜಸ್(ಪಿಎಚ್.ಡಿ ಗ್ರಂಥ), ಪ್ಲೇಸ್ ನೇಮ್ಸ್ ಇನ್ ಕರ್ನಾಟಕ, ದಿ ಸ್ಟ್ರಕ್ಚರ್ ಆಫ್ ಕನ್ನಡ, ಕಾಂಪೌಂಡ್‍ವರ್ಡ್ಸ್ ಇನ್ ಕನ್ನಡ ಇತ್ಯಾದಿ ಕೃತಿಗಳು ಇಂಗ್ಲಿಷ್‍ನಲ್ಲಿ ರಚಿತವಾಗಿವೆ.

ಸಿದ್ಧರಾಮೇಶ್ವರ ವಚನಗಳು, ಬಸವಣ್ಣನವರ ವಚನಗಳು, ನೀಲಮ್ಮ ಮತ್ತು ಲಿಂಗಮ್ಮನ ವಚನಗಳು, ಇಪ್ಪತ್ತೇಳು ಶಿವಶರಣೆಯರ ವಚನಗಳು, ಷಟ್‍ಸ್ಥಲ ಜ್ಞಾನಸಾರಾಮೃತ ವೀರಶೈವ ಚಿಂತಾಮಣಿ, ಚೆನ್ನಬಸವಣ್ಣನವರ ವಚನಗಳು ಮೊದಲಾದವು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿಗಳು.

ಆರ್.ಸಿ. ಹಿರೇಮಠರು (ರುದ್ರಯ್ಯ, ಚಂದ್ರಯ್ಯ ಹಿರೇಮಠ) ಅವರು ಧಾರವಾಡದಲ್ಲಿ ೨-೧೧-೧೯೯೮ರಲ್ಲಿ ಕೈಲಾಸವಾಸಿಗಳಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೫೯

ಅಧ್ಯಕ್ಷರು, ಆರ್.ಸಿ. ಹಿರೇಮಠ

ದಿನಾಂಕ ೧೬, ೧೭, ೧೮ ಫೆಬ್ರವರಿ ೧೯೯0

ಸ್ಥಳ : ಹುಬ್ಬಳ್ಳಿ

(ಟಿಪ್ಪಣಿ ೧೯೮೮,೧೯೮೯ರಲ್ಲಿ ಸಮ್ಮೇಳನ ನಡೆಯಲಿಲ್ಲ)

ಕನ್ನಡ ಸಾಹಿತ್ಯ ಪರಿಷತ್ತು

ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಈ ಸಂಸ್ಥೆಗಳು ಕನ್ನಡಿಗರ ತಪಸ್ಸಿನ ಫಲವಾಗಿ ಮೂಡಿ ಬಂದಿವೆ. ಕನ್ನಡಿಗರ ಸರ್ವತೋಮುಖ ಏಳ್ಗೆ ಈ ಸಂಸ್ಥೆಗಳ ಉದ್ದೇಶ. ಘನವಾದ ಈ ಉದ್ದೇಶ ಸಾಧನೆಯತ್ತ ಪರಿಷತ್ತು ನಿರಂತರ ಪ್ರಯತ್ನ ನಡೆಸಿದೆ. ಪರಿಷತ್ತು, ತನ್ನ ಪ್ರಕಟನೆ, ಕಮ್ಮಟ, ಜಾನಪದ ವಸ್ತುಸಂಗ್ರಹ, ಶಾಸನಶಾಸ್ತ್ರ, ಲಿಪಿಶಾಸ್ತ್ರ, ಬೋಧನೆ ಮುಂತಾದ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೊಯ್‍ಕೆಯ್ ಎನಿಸುವಂತೆ ಕೆಲಸ ಮಾಡುತ್ತಿದ್ದಿತು. ಅದು ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಪಡೆಯುವ ಹಂತದಲ್ಲಿದ್ದಿತು. ಅಮೃತ ಮಹೋತ್ಸವ ಜೈತ್ರಯಾತ್ರೆ ನಡೆದು ಸಾರ್ವಜನಿಕರಿಂದ ಒಂದು ಕೋಟಿ ರೂಪಾಯಿ ನಿಧಿ ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದಿತು. ಇಂತಹ ಸಮಯದಲ್ಲಿ ಸರಕಾರ ಹಠಾತ್ತನೆ, ಪೂರ್ವಭಾವಿ ಸೂಚನೆ ಕೊಡದೆ ಪರಿಷತ್ತಿನ ಆಡಳಿತ ಮಂಡಳವನ್ನು ರದ್ದುಪಡಿಸಿ ಹಸ್ತಕ್ಷೇಪ ಮಾಡಿದುದು ಪರಿಷತ್ತಿನ ಬೆಳವಣಿಗೆಗೆ ಅಘಾತವಾದಂತಾಯಿತು. ಅದರಿಂದ ಇನ್ನೂ ಪರಿಷತ್ತು ಚೇತರಿಸಿಕೊಂಡಿಲ್ಲ. ಸುಶಿಕ್ಷಿತರೂ ಸುಸಂಸ್ಕೃತರೂ ಆದ ಪರಿಷತ್ತಿನ ಸದಸ್ಯ ಸಾಹಿತ್ಯಿಕರು ಇದನ್ನು ಗಂಭೀರವಾಗಿ ಸಮಾಲೋಚನೆ ಮಾಡಬೇಕು.

ಕನ್ನಡ-ಕನ್ನಡ-ನಿಘಂಟು

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಂಭೀರವಾದ ಸಾಹಿತ್ಯಿಕ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಇಂತಹ ಕಾರ್ಯಗಳಲ್ಲಿ ಕನ್ನಡ-ಕನ್ನಡ ನಿಘಂಟಿನ ರಚನೆಯ ಕಾರ್ಯವೊಂದು ಅತ್ಯಂತ ಮಹತ್ವವಾದುದು. ನಿಘಂಟು ರಚನಾ ಶಾಸ್ತ್ರದಲ್ಲಿ ಬಲ್ಲಿದರಾದ ಸಿಬ್ಬಂದಿಯವರು ಈಗ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಘಂಟಿನ ಕಾರ್ಯ ಕನ್ನಡ-ಕನ್ನಡ ನಿಘಂಟನ್ನು ಮುಗಿಸಿದೊಡನೆಯೇ ಮುಗಿಯಲಾರದೆ, ಪುನಃ ಅದರ ಪರಿಷ್ಕರಣ ಕಾರ್ಯ ಮುಂದುವರಿಯಬೇಕು. ಇದು ಮುಗಿದೊಡನೆ ಶಬ್ದಗಳನ್ನು ರೋಮನ್ ಲಿಪಿಯಲ್ಲಿ ಬರೆಯುವುದು, ಅರ್ಥವನ್ನು ಇಂಗ್ಲಿಷಿನಲ್ಲಿ ವಿವರಿಸುವುದು ಅವಶ್ಯವೆನಿಸಿದೆ. ಆದ್ದರಿಂದ  ಈ ಕೋಶದ ವ್ಯಾಪ್ತಿ, ಉಪಯುಕ್ತತೆ ಹೆಚ್ಚುತ್ತದೆ. ರೋಮನ್ ಲಿಪಿಗೆ ಪರಿವರ್ತನ, ಆಂಗ್ಲಭಾಷೆಯ ಅರ್ಥವಿವರಣೆ ಕೊಟ್ಟರೆ ಕನ್ನಡ ಬಾರದೆ ಇದ್ದವರೂ ಸಹ ಇದನ್ನು ಉಪಯೋಗಿಸಬಹುದು. ಇದರ ಸಂಕ್ಷಿಪ್ತ ಅವೃತ್ತಿಗಳನ್ನು ತರಬಹುದು. ಜಾನಪದ ಶಬ್ದಕೋಶ ಸಿದ್ಧಪಡಿಸಬಹುದು. ಇನ್ನೂ ಹತ್ತೆಂಟು ಬಗೆಯ ಕೋಶಗಳ ಆವಶ್ಯಕತೆ ಕನ್ನಡಕ್ಕಿದೆ. ಇದನ್ನು ಮನಗೊಂಡು ಕೇರಳ ವಿಶ್ವವಿದ್ಯಾಲಯ ನಿಘಂಟು ವಿಭಾಗವೆಂಬ ಶಾಶ್ವತ ವಿಭಾಗವನ್ನೇ ಪ್ರಾರಂಭಿಸಿ ಮಲಯಾಳಂ ಶಬ್ದಕೋಶವನ್ನು ಸಿದ್ಧಪಡಿಸುತ್ತಿದೆ. ಅಂದರೆ ನಿಘಂಟಿಗಾಗಿ ಒಂದು ಸ್ವತಂತ್ರ ವಿಭಾಗದ ಆವಶ್ಯಕತೆ ಇದೆಯೆಂಬುದರಲ್ಲಿ ಸಂದೇಹವಿಲ್ಲ. ಕಾರಣ ಸರಕಾರವು ಇದನ್ನು ಒಂದು ಶಾಶ್ವತ (ಖಾಯಂ) ವಿಭಾಗವೆಂದು ಪರಿವರ್ತಿಸಿ, ಸಿಬ್ಬಂದಿಯವರಿಗೆ ಸರಕಾರಿ ನೌಕರರ ಸವಲತ್ತುಗಳನ್ನೆಲ್ಲ ಕೊಟ್ಟು ಪರಿಷತ್ತಿನಲ್ಲಿ ಈ ಕಾರ್ಯವನ್ನು ಮುಂದುವರಿಸಬೇಕು.

Tag: Kannada Sahitya Sammelana 59, R.C. Hirematha, R.C. Hiremath

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)