ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ
ಫೆಬ್ರವರಿ ೧೯೯೪

ಅಧ್ಯಕ್ಷತೆ: ಚದುರಂಗ

chaduranga

೬೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಚದುರಂಗ

ಕನ್ನಡದ ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ೧-೧-೧೯೧೬ರಂದು ಮುದ್ದುರಾಜೇ ಅರಸ್ ಮತ್ತು ಮರುದೇವಿ ಅರಸ್ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ಮೀಡಿಯೇಟ್  ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು, ಖಾದಿವಾರಿಗಳಾದರು. ಹಳ್ಳಿಯ ಉದ್ಧಾರಕ್ಕಾಗಿ ಮೈಸೂರನ್ನು ಬಿಟ್ಟು ಕಲ್ಲಹಳ್ಳಿಗೆ ಹೋಗಿ ಕೃಷಿಕರಾದರು. ಮಾಸ್ತಿ, ಗೊರೂರು, ಅನಕೃ, ತರಾಸು, ಟಾಲ್ಸ್ಟಾಯ್, ಗಾರ್ಕಿ ಮೊದಲಾದ ಸಾಹಿತಿಗಳ ಬರಹಗಳಿಂದ ಪ್ರೇರಿತರಾದ ಇವರು ಸಾಹಿತ್ಯ ಕೃಷಿಗೆ ಇಳಿದರು. ಪುಣೆಯಲ್ಲಿದ್ದಾಗ ಸಿನಿಮಾ ತಂತ್ರದ ಬಗ್ಗೆ ಅಧ್ಯಯನ ಮಾಡಿದ ಚದುರಂಗರು ಚಲನಚಿತ್ರರಂಗದಲ್ಲೂ ದುಡಿದರು. ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಇವರ ವೈಶಾಖ ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು.

ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ :

ಕಾದಂಬರಿಗಳು : ಸರ್ವಮಂಗಳಾ(೧೯೫0), ಉಯ್ಯಾಲೆ(೧೯೬0), ವೈಶಾಖ (೧೯೮೧), ಹೆಜ್ಜಾಲ(೧೯೯೮)

ಕಥಾಸಂಕಲನಗಳು : ಸ್ವಪ್ನ ಸುಂದರಿ(೧೯೪೮), ಶವದ ಮನೆ(೧೯೫0), ಇಣುಕು ನೋಟ(೧೯೫0), ಬಂಗಾರದ ಹೆಜ್ಜೆ(೧೯೫೧), ಮೀನಿನ ಹೆಜ್ಜೆ(೧೯೫೮), ಕ್ವಾಟೆ(೧೯೯೨), ಮೃಗಯಾ(೧೯೯೮) ಇತ್ಯಾದಿ ಕೃತಿಗಳು.

ನಾಟಕಗಳು : ಕುಮಾರರಾಮ(೧೯೬೬), ಇಲಿಬೋನು(೧೯೭೨), ಬಿಂಬ(೧೯೯0).

ಚದುರಂಗರು ೧೯-೧0-೧೯೯೮ರಲ್ಲಿ ದಿವಂಗತರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೬೩

ಅಧ್ಯಕ್ಷರು, ಚದುರಂಗ

ದಿನಾಂಕ ೧೧, ೧೨, ೧೩  ಫೆಬ್ರವರಿ ೧೯೯೪

ಸ್ಥಳ : ಮಂಡ್ಯ

 

ವಿಕೇಂದ್ರೀಕರಣದ ಪರಿಷತ್ತು

೧೯೧೫ರಲ್ಲಿ ಕೆಲವು ಹಿರಿಯ ಚೇತನಗಳು ಒಂದುಗೂಡಿ ಕನ್ನಡದ ಪುರೋಭಿವೃದ್ಧಿಗಾಗಿ ಕಟ್ಟಿ ಬೆಳೆಸಿದ ಕನ್ನಡ ಜನತೆಯ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಇವೆಲ್ಲದರ ಬೆಳವಣಿಗೆ. ಇದು ಶ್ರದ್ಧೆಯಿಂದ ನಿರಂತರವಾಗಿ ದುಡಿಯುತ್ತಾ ಬಂದಿದೆ. ಅಷ್ಟೇ ಅಲ್ಲದೆ ಗಡಿ ವಿವಾದದ ಬಗ್ಗೆಯೂ ಇದು ಹೋರಾಡುತ್ತಾ ಬಂದು, ಮಹಾಜನ ವರದಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯವನ್ನು ಮೇಲಿಂದ ಮೆಲೆ ತರುತ್ತಲೇ ಇದೆ. ಹೊರನಾಡ ಕನ್ನಡಿಗರ ಬಗ್ಗೆಯೂ ಇದು ವ್ಯವಸ್ಥಿತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಕೇಂದ್ರ ಬೆಂಗಳೂರಿನಲ್ಲಿದ್ದರೂ, ಕನ್ನಡ ನಾಡಿನ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಸಮಿತಿಗಳನ್ನು ರಚಿಸಿ, ಪರಿಷತ್ತಿನ ಕೆಲಸ ನಾಡಿನ ಉದ್ದಗಲಕ್ಕೆ ಹರಡುವಂತೆ ಮಾಡಿದೆ. ಹೀಗೆ ಆಡಳಿತವನ್ನು ವಿಕೇಂದ್ರೀಕರಣ ಮಾಡಿಕೊಂಡು ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಿರುವ ಇಂಥ ಸಂಸ್ಥೆ, ಭಾರತದ ಬೇರಾವ ರಾಜ್ಯದಲ್ಲೂ ಬಹುಶಃ ಇಲ್ಲವೆಂದೇ ಹೇಳಬೇಕು.

ಆರ್ಥಿಕ ವಿಚಾರ

ಕನ್ನಡಿಗರ ಈ ಹಿರಿಯ ಸಂಸ್ಥೆ ಪ್ರತಿಯೊಂದಕ್ಕೂ ಸರ್ಕಾರವನ್ನೇ ಕಾಯದೆ ಅದಷ್ಟು ಸ್ವಾವಲಂಬಿಯಾಗಿ ತನ್ನ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವುದು ತೀರಾ ಅಗತ್ಯ. ಈ ದಿಸೆಯಲ್ಲಿ ರಾಜ್ಯ ಸರ್ಕಾರೀ ನೌಕರರ ಮಹಾ ಮಂಡಲವು ಪರಿಷತ್ತಿನ ಮನವಿಗೆ ಮನ್ನಣೆಕೊಟ್ಟು, ತನ್ನ ಸದಸ್ಯರಿಂದ ತಲಾ ಇಪ್ಪತ್ತು ರೂಪಾಯಿಗಳ ಕೊಡುಗೆ ನೀಡುವ ಬಗ್ಗೆ ಒಂದು ಆಜ್ಞೆ ಹೊರಡಿಸಿ ನೌಕರರ ಸಂಬಳದಲ್ಲಿ ಇಪ್ಪತ್ತು ರೂಪಾಯಿಗಳ ಕೊಡುಗೆಯನ್ನು ಪಡೆದುಕೊಳ್ಳುವ  ವ್ಯವಸ್ಥೆ ಮಾಡಿದರೆ ಸುಮಾರು ಐದು ಲಕ್ಷದಷ್ಟಿರುವ ಸರ್ಕಾರಿ ನೌಕರರಿಂದ ಪರಿಷತ್ತಿನ ಅಮೃತ ನಿಧಿಗೆ ಒಂದು ಕೋಟಿ ರೂಪಾಯಿ ನಿಧಿ ಕೂಡಿ ಬರುತ್ತದೆ. ಸರ್ಕಾರ ತುರ್ತಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಪರಿಷತ್ತು ಸ್ವಾವಲಂಬಿಯಾಗುವ ದಿಸೆಯಲ್ಲಿ ದಿಟ್ಟ ಹೆಜ್ಜೆಯಿಟ್ಟಂತಾಗುತ್ತದೆ.

ಪರಿಷತ್ತು ಹೀಗೆ ವ್ಯಾಪಕವಾಗಿ ಕಾರ್ಯಪ್ರವೃತ್ತವಾಗಿದ್ದರೂ, ಕನ್ನಡಕ್ಕಾಗಿ ಮಾಡಬೇಕಾದ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಬೃಹತ್ ಆಗಿ ಬೆಳೆದಿದೆ. ಆದ್ದರಿಂದ ಸರ್ಕಾರದಿಂದ ಹೊಸದಾಗಿ ನಿಯೋಜಿಸಲ್ಪಟ್ಟ ಅನೇಕ ಸಂಸ್ಥೆಗಳು ಕೆಲಸ ಮಾಡಲಾರಂಭಿಸಿದೆ.

ಸಂಸ್ಥೆಗಳು ಸಾಮೂಹಿಕವಾಗಿ ದುಡಿಯಲಿ

ಕನ್ನಡನುಡಿ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಕನ್ನಡ ಜಾಗೃತಿ ವರ್ಷವೆಂದು ಕರೆಯಲಾದ ಈ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಒಳಗೊಂಡಂತೆ ಎಲ್ಲಾ ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ, ಲಲಿತಕಲೆ, ನಾಟಕ, ಜಾನಪದ, ಸಂಗೀತ ಇವುಗಳಿಗೆ ಸಂಬಂಧಪಟ್ಟ ವಿವಿಧ ಅಕಾಡೆಮಿಗಳು ಎಲ್ಲವನ್ನೂ ಒಂದು ಸಮಗ್ರ ನೀಲನಕ್ಷೆಯ ಚೌಕಟ್ಟಿನಲ್ಲಿ  ಕೆಲಸಮಾಡುವಂತೆ ನಿಯೋಜಿಸಿದರೆ ಸಂಪನ್ಮೂಲಗಳನ್ನು ಹೆಚ್ಚು ಫಲಪ್ರದವಾಗಿ ಬಳಸುವುದಕ್ಕೆ ಅನುಕೂಲವಾಗುತ್ತದೆ. ಅಂದರೆ ಕನ್ನಡ ಅಭಿವೃದ್ಧಿಗೆ ಸರಕಾರವು ಸಮಗ್ರ ಯೋಜನೆಯನ್ನು ತಯಾರಿಸುವುದು ಅತ್ಯಾವಶ್ಯಕವಾಗಿದೆ. ಈ ಯೋಜನೆಯು ಎಲ್ಲ ಸಂಸ್ಥೆಗಳು ಯಾವುದನ್ನು ಮಾಡಲು ತಮಗೆ ಸಾಧ್ಯವೋ ಅದನ್ನು ಹರಡಿಕೊಂಡು ಕೆಲಸಮಾಡಿದರೆ ಉಪಯುಕ್ತವಾಗುತ್ತದೆ. ಒಬ್ಬರು ಮಾಡಿದ ಕೆಲಸವನ್ನೇ ಉಳಿದವರು ಮಾಡುವುದು ತಪ್ಪುತ್ತದೆ. ಒಂದು ಗೊತ್ತಾದ ಅವಧಿಯಲ್ಲಿ ಕೆಲಸ ಪೂರೈಸಲೂ ಸಾಧ್ಯವಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ದೃಷ್ಟಿಯಿಂದ ಮಿತವ್ಯಯ ಸಾಧಿತವಾಗಿ ಹಣದ ಸದುಪಯೋಗವೂ ಅದಂತಾಗುತ್ತದೆ. ಈ ಎಲ್ಲ ಸಂಸ್ಥೆಗಳ ಜತೆಗೆ ವಯಸ್ಕರ ಶಿಕ್ಷಣ ಸಮಿತಿ ಸೇರಿದಂತೆ ಉತ್ತಮ ಗ್ರಂಥಗಳನ್ನು ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಜನರು ಆ ಪುಸ್ತಕಗಳನ್ನು ಕೊಳ್ಳಲು ಸಹಾಯವಾಗುತ್ತದೆ.

Tag: Kannada Sahitya Sammelana 63, Chaduranga

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)