ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯

ಅಧ್ಯಕ್ಷತೆ: ಎಲ್. ಬಸವರಾಜು

l-basavaraju

೭೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಲ್. ಬಸವರಾಜು

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ ೭-೧0-೧೯೧೯ರಂದು ಲಿಂಗಪ್ಪ-ಈರಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.

ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಇವರ ಸಾಹಿತ್ಯ ಕೆಲಸಕ್ಕಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ, ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೭), ಕನ್ನಡ ರಾಜ್ಯೋತ್ಸವ ಪ್ರಶಸ್ತಿ(೧೯೯೪), ಚಿದಾನಂದ ಪ್ರಶಸ್ತಿ(೧೯೯೪), ಪಂಪ ಪ್ರಶಸ್ತಿ(೨000), ಚಾವುಂಡರಾಯ ಪ್ರಶಸ್ತಿ(೨00೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೨000) ಇತ್ಯಾದಿಗಳು ಇವರಿಗೆ ಸಂದಿವೆ.

ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು.

ಸರಳ ಪಂಪಭಾರತ(೧೯೯೯), ಪಂಪನ ಆದಿಪುರಾಣ(ಸಂಪಾದನೆ), ರನ್ನನ ಸರಳ ಗದಾಯುದ್ಧ, ಅಲ್ಲಮನ ವಚನ ಚಂದ್ರಿಕೆ(ಸಂಶೋಧನೆ), ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಕೇಶಿರಾಜನ ಶಬ್ದಮಣಿದರ್ಪಣಂ ಇತ್ಯಾದಿಗಳು ಇವರ ಕೃತಿಗಳು.

ಎಲ್. ಬಸವರಾಜು ಅವರು ೨೯-೧-೨0೧೨ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೭೫

ಅಧ್ಯಕ್ಷರು, ಎಲ್. ಬಸವರಾಜು

ದಿನಾಂಕ: ,,, ಜನವರಿ, 00

ಸ್ಥಳ : ಚಿತ್ರದುರ್ಗ

(ಟಿಪ್ಪಣಿ: 00೮ರಲ್ಲಿ ಸಮ್ಮೇಳನ ನಡೆಯಲಿಲ್ಲ) 

ಸರ್ಕಾರ ಕಡೆಗಣಿಸುತ್ತಾ ಬಂದ ಸಂಸ್ಥೆ

ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಗಳು ಆಧುನಿಕ ಕನ್ನಡ ನಾಡು-ನುಡಿ-ಸಾಹಿತ್ಯ ಪರಂಪರೆಯ ಎರಡು ಕಣ್ಣುಗಳು. ಇವುಗಳ  ಮುಖ್ಯ ದೃಷ್ಟಿ ಕರ್ನಾಟಕದ ಏಕೀಕರಣವೆಂಬುದೂ- ಅದು ಸಾಧಿತವಾಗಿರುವುದೂ ಈಗ ಇತಿಹಾಸ. ಆ ಕಾಲದ ಒತ್ತಾಸೆಯಿಂದ ನಾಡಿನ ಮಹನೀಯರು ಕಟ್ಟಿದ ಮಹತ್ವದ ಸಂಸ್ಥೆಗಳಿವು. ಶತಮಾನದ ಸಂಭ್ರಮದ ಅಂಚಿನಲ್ಲಿರುವ ಈ ಮಹಾನ್ ಸಂಸ್ಥೆಗಳು  ಈ ವೇಳೆಗಾಗಲೇ ನಾಡಿನ ಸಾರ್ವಭೌಮ ಸಂಸ್ಥೆಗಳಾಗಿ ಬೆಳೆಯಬೇಕಾಗಿತ್ತು. ಆದರೆ ಜನತೆ- ಮುಖ್ಯವಾಗಿ ಸರಕಾರ ವ್ಯವಸ್ಥಿತವಾಗಿ ಅವನ್ನು ಬೆಳೆಸುವ ಬದಲು ಕಾಲಕ್ರಮೇಣ ಕಡೆಗಣಿಸುತ್ತ ಬಂದದ್ದು ಬಹಳ ಆಶ್ಚರ್ಯಕರವಾದ ಮತ್ತು ದುರದೃಷ್ಟಕರವಾದ ಸಂಗತಿ.

ಹೊಸ ಸಂಸ್ಥೆಗಳ ಉದಯ ಸಾಧನೆ

ಬದಲಾದ ಸನ್ನಿವೇಶಗಳಿಗನುಗುಣವಾಗಿ ಅವನ್ನು ಬಲಪಡಿಸುತ್ತ ಬಂದಿದ್ದರೆ- ಇಂದು ಅವು ಮೂಲೆಗುಂಪಾಗುವ ಸ್ಥಿತಿಗೆ ಬರುತ್ತಿರಲಿಲ್ಲ.  ಅಲ್ಲಿ ಕಾರ್ಯಗತಗೊಳಿಸಬಹುದಾಗಿದ್ದ ಯೋಜನೆಗಳನ್ನು ಸರಕಾರ ಒಂದೊಂದಾಗಿ ತನ್ನ ಕಡೆಗೆ ವರ್ಗಾಯಿಸಿಕೊಳ್ಳುತ್ತ ಬಂದಿದ್ದರಿಂದ- ಹೊಸ ಹೊಸ ಹೆಸರಿನ ಸರಕಾರೀ ಸಂಸ್ಥೆಗಳು ಹುಟ್ಟಿಕೊಂಡಂತಾಯಿತೇ ಹೊರತು- ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳ ವಿಕಾಸ ಸಾಧ್ಯವಾಗಲಿಲ್ಲ. ಅಂದರೆ-ಸರಕಾರ ಹೊಸದಾಗಿ ಹುಟ್ಟುಹಾಕಿದ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಚಟುವಟಿಕೆಗಳು ಸರಕಾರೀಕರಣಗೊಂಡು ಜನದೂರವಾಗಿ  ಕನ್ನಡ ಸಂಬಂಧವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲಾರದೆ ಹೋದವು. ಕೆಲವೇ ಆಯ್ದ ಲೇಖಕರ ಕೃತಿಗಳ ಪ್ರಕಟಣೆ, ಕೆಲವೇ ಬಗೆಯ ವಿಚಾರ ಸಂಕೀರ್ಣ, ಅಪೂರ್ಣ ಗಡಿವೀಕ್ಷಣೆ, ಕನ್ನಡ ಆಡಳಿತ ಭಾಷಾನೀತಿಯ ಅಸಮರ್ಪಕ ನಿರ್ವಹಣೆ, ಅನಿಯಂತ್ರಿತ ಪ್ರಶಸ್ತಿ- ಪುರಸ್ಕಾರ ಪ್ರದಾನ- ಇವಿಷ್ಟೆ ತಾನೆ ಇಲ್ಲಿ ನಡೆಯುತ್ತಿರುವ ಕೆಲಸಗಳು? ಈ ಯೋಜನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ಹಂಚಿಕೊಟ್ಟು ಕನ್ನಡ ಜನತೆಯ ಕೈಗಳನ್ನು ಬಲಪಡಿಸಬಹುದಾಗಿತ್ತು. ಅದರೆ ಹಾಗಾಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ; ಕನ್ನಡದ ಪರಿಚಾರಿಕೆಯನ್ನು ಕೈಗೊಂಡಿರುವ ಸರಕಾರದ ಸಂಸ್ಥೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಲ್ಲಿ ತಂದರೆ ಹೇಗೆ ಎಂಬುದು ಚರ್ಚಾಸ್ಪದವಾಗಿರುವ ಪ್ರಮೇಯವೇ  ಇರುವುದಿಲ್ಲ. ಈ ವಿಲೀನ ಪ್ರಕ್ರಿಯೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ತನ್ನ ತಾನೇ ಹೊಸ ಶಕ್ತಿ ಬಂದಂತಾಗುತ್ತದೆ. ಯೋಜನೆಗಳ ನಿರ್ಬಲೀಕರಣವೂ ತಪ್ಪುತ್ತದೆ. ಸಂಘಗಳಂತಹ ಶುದ್ಧ ಜನಪರ ಸಂಸ್ಥೆಗಳು ತಮ್ಮ ಜಾಯಮಾನದಿಂದಲೇ ಈ ಕನ್ನಡದ ಕಾರ್ಯಗಳನ್ನು ಎಷ್ಟು ನವೋನವ ಉತ್ಸಾಹದಿಂದಲೂ ಜನಸಮ್ಮತಿಯಿಂದಲೂ ನಡೆಸಬಹುದಾಗಿತ್ತೋ ಅದಕ್ಕೆ ಬದಲಾಗಿ ಅನಿರೀಕ್ಷಿತ ಬದಲಾವಣೆ ತಾಳಿ ಜನದೂರ ಕಾರ್ಯ ವೈಖರಿಗಳಿಗೆ ಒಳಗಾಗುವ ಅಪಾಯದಿಂದ ಪಾರಾಗಬಹುದಾಗಿತ್ತು.

ಎರಡು ಸಂಸ್ಥೆಗಳ ಹಿರಿಮೆ

ವಾಸ್ತವವಾಗಿ ನಾವು ವಿಷಯಗಳ ಸಂಬಂಧವಾಗಿಯೇ ಖಾಸಗೀಕರಣ ಮತ್ತು ಉದಾರೀಕರಣ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಆಗ ಕನ್ನಡಿಗರು ಅಧಿಕೃತವಾಗಿ ತಮ್ಮ ಕನಸಿನ ಸಂಸ್ಥೆಗಳಾದ ಪರಿಷತ್ತು, ವಿದ್ಯಾವರ್ಧಕ ಸಂಗಳ ಮೂಲಕ ತಮ್ಮ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಜವಾಬ್ದಾರಿಗಳನ್ನು ತಾವೇ ನೇರವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಕಾರ ವ್ಯವಸಾಯ, ಕಂದಾಯ, ಅಬಕಾರಿ, ಲೋಕೋಪಯೋಗಿ ಮತ್ತಿತರ ವ್ಯಾವಹಾರಿಕ- ಆವಶ್ಯಕ ಕರ್ತವ್ಯಗಳಲ್ಲಿ ತೊಡಗಿರಲಿ. ಹೀಗಾದರೆ ಜನರ ಆಶೋತ್ತರಗಳನ್ನು, ಆವೇಶಗಳನ್ನು ಕನಸು ಮನಸುಗಳನ್ನು ನೋಯಿಸದೆ ನೆರವೇರಿಸಲು ಅನುವಾಗುತ್ತದೆ. ಸರಕಾರ ಪ್ರವೇಶ ಮಾಡಬಾರದಂತಹ, ದೂರನಿಂತು, ಗೌರವದಿಂದ ಪ್ರೋತ್ಸಾಹ ನೀಡಬೇಕಾದಂತಹ ರೀತಿ ಇದಾಗುವುದಿಲ್ಲವೆ. ಸಾಹಿತ್ಯವೆನ್ನುವುದು ಸರಕಾರದಿಂದ ನಿರ್ಣಯವಾಗುವಂಥದ್ದಲ್ಲ, ಅದು ತೀರ ಭಾವನಾತ್ಮಕವಾದ ವಿಚಾರ. ಇದನ್ನೆಲ್ಲ ನೇರವಾಗಿ ಜನತೆ ತನ್ನ ಸಂಘಸಂಸ್ಥೆಗಳ ಮೂಲಕ ತಾನೇ ನಿರ್ವಹಿಸಿಕೊಳ್ಳಬೇಕಾದ್ದು ಹಲವು ಧಾರ್ಮಿಕ ವಿಚಾರಗಳಿಗೆ ಇಂದೂ ಕೂಡ ಸರಕಾರ ಪ್ರವೇಶ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೇ  ಇಂಥ ಭಾವನಾತ್ಮಕ ಆವೇಶಭರಿತ ವಿಷಯಗಳ ಗೊಡವೆಗೆ ಹೋಗದಿರುವುದು ಜನಕ್ಕೂ ಜನಪರ ಅಭಿವೃದ್ಧಿಗಾಗಿ ನಡೆಯುತ್ತಿರುವ ಸರಕಾರಗಳಿಗೂ ಶೋಭೆ ತರುವಂಥದ್ದು, ಈ ಕೆಲಸ ಅಂದರೆ- ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ- ಇವನ್ನೆಲ್ಲಾ ಸರಕಾರ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಿಗೆ ವರ್ಗಾಯಿಸುವುದು ಅಗತ್ಯ. ಈ ಸಂಸ್ಥೆಗಳನ್ನು ಎರಡು ಸ್ವಾಯತ್ತ ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸಲಿ. ಆಗ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ಅಭಿವೃದ್ಧಿ ಇತೋಪ್ಯತಿಶಯವಾಗಿ ನಡೆಯುತ್ತದೆ. ಕಾಲಕ್ರಮದಲ್ಲಿ ಅವು ಸ್ವತಂತ್ರ ಜನತಾ ಸಂಸ್ಥೆಗಳಾಗಿ ಬೆಳೆದು ದೇಶ ವಿದೇಶ, ಇಡಿಯಾಗಿ ವಿಶ್ವದಲ್ಲಿ ಕನ್ನಡ ಭಾಷೆ-ಸಾಹಿತ್ಯ- ಸಂಸ್ಕೃತಿ ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥವಾಗುತ್ತದೆ.

Tag: Kannada Sahitya Sammelana 75, L. Basavaraju

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)