೭೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿ.ಪಿ. ಕೃಷ್ಣಕುಮಾರ್
ಸಿ.ಪಿ.ಕೆ. ಎಂಬ ಮೂರಕ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು ೮-೪-೧೯೩೯ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಸಾಲಿಗ್ರಾಮದಲ್ಲಿ ಪೂರೈಸಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಿ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು.
೧೯೬೧ರಿಂದ ೧೯೬೪ರವರೆಗೆ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿ ೧೯೬೭ರಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೯ರಲ್ಲಿ ನಿವೃತ್ತರಾದರು.
ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ಗ್ರಂಥಪ್ರಕಟನಾ ಅಧ್ಯಕ್ಷರಾಗಿ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ, ಕನಕಪೀಠ ಸಲಹಾ ಸಮಿತಿ ಮೊದಲಾದ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಾಹಿತ್ಯ ಸಮ್ಮೇಳನಗಳ ಗೋಷ್ಠಿ ಅಧ್ಯಕ್ಷರಾಗಿ, ಕಾರ್ಯನಿರ್ವಹಿಸಿದ ಇವರು ೨0೧೧ರಲ್ಲಿ ಗಂಗಾವತಿಯಲ್ಲಿ ನಡೆದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅನೇಕ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಆ ಪೈಕಿ ಕೆಲವು ಹೀಗಿವೆ: ಬಸವ ಸಾಹಿತ್ಯಶ್ರೀ, ವಿದ್ವತ್ ಶಿರೋಮಣಿ, ಹನಿಗವನ ಹರಿಕಾರ, ಜಾನಪದತಜ್ಞ, ನೃಪತುಂಗ ಸಾಹಿತ್ಯ ಪ್ರಶಸ್ತಿ ಇತ್ಯಾದಿ.
ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ. ಚುಟುಕ, ವ್ಯಕ್ತಿಚಿತ್ರ, ಪ್ರಬಂಧ, ಸಂಶೋಧನೆ, ಜಾನಪದ ವಿಮರ್ಶೆ, ಹಾಸ್ಯ ಭಾಷಾಂತರ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಇವರ ಕೆಲವು ಕೃತಿಗಳು: ತಾರಾಸಖ, ಕನ್ನಡ ಚತುರ್ಮುಖ, ಏಳು ಗ್ರೀಕ್ ನಾಟಕಗಳು, ಕನ್ನಡ ಉತ್ತರ ರಾಮಚರಿತೆ, ಗೀತಾಂಜಲಿ, ಅರಣ್ಯ ಪರ್ವ, ಕನ್ನಡ ಛಂದಸ್ಸಿನ ಚರಿತ್ರೆ, ಒಗಟು ಮತ್ತು ಗಾದೆ. ಕನ್ನಡ ಸಂಸ್ಕೃತಿ ಸಂಬಂಧ ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೭೮
ಅಧ್ಯಕ್ಷರು, ಸಿ.ಪಿ. ಕೃಷ್ಣಕುಮಾರ್
ದಿನಾಂಕ ೯, ೧0, ೧೧ ಡಿಸೆಂಬರ್ ೨0೧೧
ಸ್ಥಳ : ಗಂಗಾವತಿ
ಸಮ್ಮೇಳನದ ಲಾಭ
ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳು ಎಂದು ಅನೇಕರು ಟೀಕಿಸುವುದುಂಟು ಟೀಕೆಯನ್ನು ಅಲ್ಲಗಳೆಯಬೇಕಿಲ್ಲ. ಆದರೆ ಜಾತ್ರೆಗಳಿಂದ, ಅಷ್ಟೇ ಅಲ್ಲ, ಸಂತೆಗಳಿಂದ ಕೂಡ ಪ್ರಯೋಜನಗಳುಂಟು ಎಂಬುದನ್ನು ಮರೆಯದಿರೋಣ. ಜಾತ್ರೆ ಎಂಬುದು ‘ಯಾತ್ರೆ’ಯ, ‘ಸಂತೆ’ ಎಂಬುದು ‘ಸಂಸ್ಥೆ’ಯ ತದ್ಭವಗಳಷ್ಟೆ. ಬದುಕು ಆಸತ್ತಿನಿಂದ ಸತ್ತಿನೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಅನಂತ ಯಾತ್ರೆಯಾಗಬೇಕು. ನಾವು ಪ್ರತಿವರ್ಷ ಒಂದು ಕಡೆ ಸೇರುವುದು. ಒಬ್ಬರ ಮುಖವನ್ನೊಬ್ಬರು ನೋಡುವುದು, ಪರಸ್ಪರ ಮಾತನಾಡುವುದು, ಒಟ್ಟಿಗೆ ಉಣ್ಣುವುದು ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೂ ಬೆರೆಯುವುದು ಸಾಮಾನ್ಯ ಲಾಭವಲ್ಲ. “ಸಿನಿಕ”ತನ ಬೇಡ; ಸಕರಾತ್ಮಕವಾಗಿ ಅಲೋಚಿಸೋಣ. ಸಾಹಿತ್ಯ ಎನ್ನುವುದು ಜಾತ್ರೆಯ ನಡುವೆ ಹುಟ್ಟುವುದಿಲ್ಲ. ಅದು ಏಕಾಂತ ಸ್ವಗತ ಪ್ರಕ್ರಿಯೆ ಎಂಬುದು ದಿಟ.
ಸಮ್ಮೇಳನದ ನಿರ್ಣಯಗಳು
ನನ್ನ ಈ ಅಧ್ಯಕ್ಷ ಭಾಷಣದಲ್ಲಿ ಹಿಂದಿನವರು ಹೇಳಿರದ ಹೊಸತೇನನ್ನೂ ಬಹುಶಃ ನಾನು ಹೇಳುತ್ತಿಲ್ಲ. ಹೇಳುವುದು ಸಾಧುವೂ ಇಲ್ಲ. ಇದು ಬಹುತೇಕ ಚರ್ವಿತ ಚರ್ವಣವಾಗುವುದು ಅನಿವಾರ್ಯ ಆದರೆ ಅನುಚಿತವೇನಲ್ಲ. ಹಿಂದಿನ ಸಮ್ಮೇಳನಗಳಲ್ಲಿ ಕೈಕೊಂಡ ಅಥವಾ ಬಾಯ್ಕೊಂಡ ನಿರ್ಣಯಳೆಲ್ಲ ಅನುಷ್ಠಾನಗೊಂಡಿಲ್ಲ ಎಂಬ ವಿಷಾದನೀಯ ಸತ್ಯವನ್ನು ಸ್ಮರಿಸಬೇಕಾಗಿದೆ. ಹಾಗೆ ಅನುಷ್ಠಾನಗೊಂಡಿದ್ದರೆ ಇಷ್ಟರಲ್ಲಿ ಕರ್ನಾಟಕ ಭೂತಲ ಸ್ವರ್ಗವಾಗಬಹುದಿತ್ತು. ಸಮ್ಮೇಳನಾಧ್ಯಕ್ಷ ಭಾಷಣವೂ ಪರೋಕ್ಷವಾಗಿ ನಿರ್ಣಯಗಳ ಸರಣಿಯೇ ಆಗಿರುತ್ತದಲ್ಲವೆ. ಇದೆಲ್ಲ ಕಾರ್ಯರೂಪಕ್ಕೆ ಬರುತ್ತದೆ ಎಂಬ ಭರವಸೆಯಾಗಲಿ ಆಶಾವಾದವಾಗಲಿ ನನಗಿಲ್ಲ. ಆದರೆ ನಿರಾಶೆಯೂ ಅನಗತ್ಯ. ಆಶೆ, ನಿರಾಶೆಗಳ ಹಾಸುಹೊಕ್ಕು ಬದುಕು!
ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವಲ್ಲಿ “ಕನ್ನಡ ಸಾಹಿತ್ಯ” ಎಂಬುದನ್ನು ಈ ಹೊತ್ತು ಏಕಶಬ್ದವಾಗಿ ಗ್ರಹಿಸದೆ, ಕನ್ನಡ, ಸಾಹಿತ್ಯ ಎಂದು ಬಿಡಿಸಿ ಪರಿಭಾವಿಸುವುದು ಯುಕ್ತವೆನಿಸುತ್ತದೆ. ಇದುವರೆಗೆ ‘ಸಾಹಿತ್ಯ’ದ ಮೇಲೆ ಒತ್ತು ಹಾಕುತ್ತ ಬಂದಿದ್ದೇವೆ. ಈಗ ‘ಕನ್ನಡ’ದ ಮೇಲೆ ಒತ್ತು ಹಾಕಬೇಕಾಗಿದೆ. ಭಾಷೆಯಿಲ್ಲದೆ ಸಾಹಿತ್ಯವೆಲ್ಲಿ? ಕನ್ನಡವನ್ನು ಗಟ್ಟಿಗೊಳಿಸಿ ಕಟ್ಟುವ, ತನ್ಮೂಲಕ ಸಮಷ್ಟಿ ಜೀವನವನ್ನು ಕಟ್ಟುವ ಕೆಲಸ ಇನ್ನು ಮುಂದೆ ಹಿಂದೆಂದಿಗಿಂತ ಮಿಗಿಲಾಗಿ ನಡೆಯಬೇಕಿದೆ. ಈ ದೃಷ್ಟಿಯಿಂದ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು `ಕನ್ನಡ ಸಮ್ಮೇಳನ’ ಎಂದಷ್ಟೇ ಕರೆದರೆ ಸಾಕೆನಿಸುತ್ತದೆ!
ಮಹಿಳೆಯರಿಗೆ ಹೆಚ್ಚು ಅವಕಾಶ
ಸಾಹಿತ್ಯ ಸಮ್ಮೇಳನಗಳಲ್ಲಿ ಸ್ತ್ರೀಯರಿಗೆ ಮತ್ತು ದಲಿತರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವುದು ಅಗತ್ಯ. ‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಎಂದು ಕೇಳಿದಳು ಅಕ್ಕ, “ಕಾವಿನಿಂದ ಕಾವ್ಯ” ಎಂದರು ಎ.ಆರ್.ಕೃ. ಮಹಿಳೆಯರ ಮತ್ತು ದಲಿತರ ನೋವು, ಕಾವುಗಳು ಮುಕ್ತವಾಗಿ ಅಭಿವ್ಯಕ್ತವಾಗಬೇಕು.
ರಾಜಕಾರಣಿಗಳ ಪಾತ್ರ
ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಿಣಿಗಳ ಪಾತ್ರವೇನು ಎಂಬುದೊಂದು ಪ್ರಶ್ನೆ. ಅವರೂ ಕನ್ನಡಿಗರೇ ಸಾಹಿತ್ಯ ಸಂಸ್ಕೃತಿಗಳಲ್ಲಿ ಅಸಕ್ತರಾದವರು ಅವರಲ್ಲಿ ಇರಬಾರದೆಂದಿಲ್ಲ. ಅಲ್ಲದೆ, ಸಾಹಿತ್ಯ ಎಲ್ಲರಿಗಾಗಿ. ಆದರೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಸಂಪನ್ಮೂಲಗಳನ್ನು ರೂಢಿಸಿಕೊಂಡು ಸಂಪೂರ್ಣ ಸ್ವಾವಲಂಬಿಯಾದಾಗ, ಸರ್ಕಾರದ ಹಂಗನ್ನು ಹರಿದುಕೊಂಡಾಗ, ರಾಜಕಾರಿಣಿಗಳ ಮೆರೆತವನ್ನು ತಪ್ಪಿಸಬಹುದು. ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು ಮಾತ್ರ ವೇದಿಕೆಯನ್ನು ಅಲಂಕರಿಸುತ್ತಾರೆ. ರಾಜಕಾರಣಿಗಳು ಕೆಳಗೆ ಕುಳಿತುಕೊಳ್ಳುತ್ತಾರೆ ಎಂಬುದು ಕೂತೂಹಲಕಾರಿ ಸಂಗತಿ.
ಉತ್ಸವಮೂರ್ತಿ
ಸಮ್ಮೇಳನಾಧ್ಯಕ್ಷರು ಕೇವಲ ಉತ್ಸವಮೂರ್ತಿಯಾಗಬೇಕೆ. ಅವರನ್ನು ಮೆರವಣಿಗೆ ಮಾಡಿ ಮನೆಗೆ ಕಳುಹಿಸಬೇಕೆ ಎಂಬುದು ವಿಚಾರಯೋಗ್ಯ. ಅವರಿಗೆ ಕ್ರಿಯಾತ್ಮಕವಾದ ಯಾವುದಾದರೂ ಪಾತ್ರವನ್ನು ಕೊಡುವುದು ಒಳ್ಳೆಯದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲವೊಂದು ಕರ್ತವ್ಯಗಳನ್ನು ಅಧಿಕಾರಗಳನ್ನು ಕೂಡ ಸಮ್ಮೇಳನಾಧ್ಯಕ್ಷರಿಗೆ ವಹಿಸಬಾರದೇಕೆ?
Tag: Kannada Sahitya Sammelana 78, C.P. Krishna Kumar, C.P. Krishnakumar
ಪ್ರತಿಕ್ರಿಯೆ