ಡಾ. ಮನು ಬಳಿಗಾರ್, ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡ ಜನತೆಯೊಂದಿಗೆ ಉತ್ತಮವಾದಂತಹ ಸಂವಹನ ಸಂಬಂಧ ಹೊಂದುವ ಮಹದಾಶಯದಲ್ಲಿ ಇದೀಗ ಪರಿಷತ್ತಿನ ನವೀಕೃತ ಅಂತರಜಾಲ ತಾಣ ತಮ್ಮ ಮುಂದಿದೆ. ಈ ಮೂಲಕ ಕನ್ನಡ ನಾಡಿನ ಏಕೀಕರಣ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕಳೆದ ನೂರೊಂದು ವರ್ಷಗಳ ಅವಧಿಯಲ್ಲಿ ಪರಿಷತ್ತು ನಿರ್ವಹಿಸಿರುವ ಮಹತ್ವದ ಪಾತ್ರವನ್ನು ಸಮಗ್ರವಾಗಿ ಕನ್ನಡಿಗರೆದುರು ತೆರೆದಿಡುತ್ತಿರುವ ಧನ್ಯತೆಯನ್ನು ನಾವು ಅನುಭಾವಿಸುತ್ತಿದ್ದೇವೆ. ಕಳೆದ ನೂರೊಂದು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತೇರನೆಳೆಯುವಲ್ಲಿ ನೇತೃತ್ವ ವಹಿಸಿದ ಸಮಸ್ತ ಮಹನೀಯರು, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳು ಹಾಗೂ ಅವರ ಕಾರ್ಯ, ಸಂದೇಶಗಳು ಇವೆಲ್ಲಾ ಅಂತರಜಾಲದಲ್ಲಿ ಒಂದೆಡೆ ಲಭ್ಯವಾಗುತ್ತಿವೆ. ಎಲ್ಲ ರೀತಿಯ ಕಂಪ್ಯೂಟರ್, ಐಪ್ಯಾಡ್ ಮತ್ತು ಮೊಬೈಲ್ ಉಪಕರಣಗಳಲ್ಲಿ ಈ ತಾಣವನ್ನು ವೀಕ್ಷಿಸಲು ಅನುವುಮಾಡಿಕೊಡಲಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಭಾಷೆಯ ಉಳಿವು, ಉಪಯೋಗ ಮತ್ತು ಬೆಳವಣಿಗೆಗೆ, ಆ ಭಾಷೆ ಹೇಗೆ ಅಂತರಜಾಲದಲ್ಲಿ ಲಭ್ಯವಾಗುತ್ತಿದೆ ಎಂಬುದು ಕೂಡಾ ಅತ್ಯಗತ್ಯ ಎಂಬುದನ್ನು ನಾವು ಮನಗಂಡಿದ್ದೇವೆ. ನಮ್ಮ ಕನ್ನಡ ಭಾಷೆಯನ್ನೂ ಅಂತರಜಾಲದಲ್ಲಿ ಹೆಚ್ಚು ಹೆಚ್ಚು ಬಳಸುವತ್ತ ಬಲ ಒದಗಿಸಬೇಕು ಎಂಬ ನಿಟ್ಟಿನಲ್ಲಿ ನಾವು ಶೀಘ್ರಗತಿಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ನೇಮಿಸಿರುವ ‘ಕನ್ನಡಿಗರಿಗೆ ಉದ್ಯೋಗ ಹಾಗೂ ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಆಧುನೀಕರಣ’ದ ಬಗ್ಗೆ ಪ್ರಖ್ಯಾತ ವಿಮರ್ಶಕರು ಹಾಗೂ ಇಂಟೆಲ್, ಸಿಸ್ಕೋ, ನಾವೆಲ್ , ಎಚ್ ಎಮ್ ಟಿ ಮುಂತಾದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರೂ ಆದ ಶ್ರೀ. ಎಸ್. ಆರ್. ವಿಜಯಶಂಕರ್ ಅವರು ಸಂಚಾಲಕರಾಗಿರುವ ವಿಶೇಷ ಸಲಹಾ ಸಮಿತಿಯ ಸಲಹೆ ಸೂಚನೆಗಳನ್ನು ನಾವು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಇದರ ದ್ಯೋತಕವಾಗಿ ನಾವು ನವೀಕರಿಸಿರುವ ಈ ತಾಣದ ಮೂಲಕ ಕನ್ನಡ ಜನ ಸಮೂಹದೊಡಗಿನ ಬಾಂಧವ್ಯವನ್ನು ನಿರಂತರವಾಗಿ ಪೋಷಿಸಿ ಅಭಿವೃದ್ಧಿಪಡಿಸುವುದು ಮತ್ತು ಕನ್ನಡದ ಉಪಯೋಗವನ್ನು ಸಮರ್ಥವಾಗಿ ವಿಸ್ತರಿಸುವುದು ನಮ್ಮ ಅಭಿಲಾಷೆಯಾಗಿದೆ.
ಈಗ ತಮ್ಮ ಮುಂದಿರುವ ಈ ಅಂತರಜಾಲ ತಾಣದಲ್ಲಿ ಪರಿಷತ್ತಿನ ಒಂದು ಶತಮಾನದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಸಕ್ತ ಕಾರ್ಯಚಟುವಟಿಕೆಗಳ ಕುರಿತಾದ ಸಮಗ್ರ ಮಾಹಿತಿಗಳಿವೆ. ಪರಿಷತ್ತಿನ ನಿಯತಕಾಲಿಕಗಳಾದ ‘ಕನ್ನಡ ನುಡಿ’ ಮತ್ತು ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಇಲ್ಲಿ ಲಭ್ಯವಾಗುತ್ತಿದೆ. ನಮ್ಮ ಮಹತ್ವಾಕಾಂಕ್ಷೆಗಳಲ್ಲಿ ಒಂದಾದ ‘ಕನ್ನಡಿಗರಿಗೆ ಉದ್ಯೋಗಾವಕಾಶ’ ಯೋಜನೆಯಡಿಯಲ್ಲಿ ಉದ್ಯೋಗಾಕಾಂಕ್ಷಿ ಕನ್ನಡಿಗರಿಗೆ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ನಾಡಿನಲ್ಲಿರುವ ಸಂಸ್ಥೆಗಳಲ್ಲಿನ ನೌಕರಿಗಳಲ್ಲಿ, ವಿಶೇಷವಾಗಿ ಸಿ ಮತ್ತು ಡಿ ದರ್ಜೆಯ ನೌಕರಿಗಳಿಗೆ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಭರ್ತಿಯಾಗುವಂತೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ನಮ್ಮಲ್ಲಿ ಸ್ವೀಕೃತಗೊಂಡ ಮಾಹಿತಿಗಳನ್ನು ಬಹುರಾಷ್ಟ್ರೀಯ ಸಂಸ್ಥೆಗಳೂ ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರಿಗೆ ರವಾನಿಸಿ, ಆ ಮೂಲಕ ಕನ್ನಡಿಗರಿಗೆ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಲಭ್ಯವಾಗುವಂತೆ ಪ್ರಯತ್ನಿಸುವುದು ನಮ್ಮ ಗುರಿಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟನ್ನು ಡಿಜಿಟಕೀಕರಣಗೊಳಿಸುವ ಕಾರ್ಯದ ಪ್ರಥಮ ಹೆಜ್ಜೆಯಾಗಿ ಪರಿಷತ್ತಿನ ಸಂಕ್ಷಿಪ್ತ ನಿಘಂಟನ್ನು ಈ ಅಂತರಜಾಲ ತಾಣದಲ್ಲಿ ಅಳವಡಿಸಲಾಗಿದೆ. ಹಿಂದಿನ ಶತಮಾನಗಳಲ್ಲಿ ಪ್ರಕಟಗೊಂಡು ಈಗ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ೫೦ ಕೃತಿಗಳನ್ನು ಆಸಕ್ತ ಓದುಗರ ಅನುಕೂಲಕ್ಕಾಗಿ ‘ಮುಕ್ತಜ್ಞಾನ’ ಶೀರ್ಷಿಕೆಯಲ್ಲಿ ಪಿ.ಡಿ.ಎಫ್ ರೂಪದಲ್ಲಿ ಪ್ರಕಟಿಸಿದ್ದೇವೆ.
ಪರಿಷತ್ತು ಪ್ರಕಟಿಸಿರುವ ಪರಿಷತ್ತಿನ ಹಕ್ಕುಸ್ವಾಮ್ಯವುಳ್ಳ ಎಲ್ಲ ಕೃತಿಗಳನ್ನೂ ಕೇಂದ್ರ ಸರ್ಕಾರದ ‘ಭಾರತವಾಣಿ’ ಯೋಜನೆಯ ಮುಖೇನ ಮುಕ್ತವಾಗಿ ಕನ್ನಡ ಓದುಗ ಬಳಗಕ್ಕೆ ಸಮರ್ಪಿಸುವುದಕ್ಕಾಗಿ ನಾವು ಎಲ್ಲಾ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ. ಕನ್ನಡದ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಡಿಜಲೀಕರಣಗೊಳಿಸುವ ನಿಟ್ಟಿನಲ್ಲಿ ಇದು ಪರಿಷತ್ತಿನ ಹೆಜ್ಜೆಯಾಗಿದೆ. ‘ಭಾರತವಾಣಿ’ ಸಹಯೋಗದೊಡನೆ ಪರಿಷತ್ತಿನ ಮೊದಲಹಂತದ ಮೊಬೈಲ್ನಲ್ಲಿ ಬಳಸಬಹುದಾದ ‘ಆ್ಯಾಪ್ (App)’ ಕೂಡಾ ಬಿಡುಗಡೆಯಾಗುತ್ತಿದೆ.
ಮುಂಬರುವ ದಿನಗಳಲ್ಲಿ ಪುಸ್ತಕ ಮಾರಾಟ, ಪರಿಷತ್ತಿನ ಶಿಕ್ಷಣ ವ್ಯವಸ್ಥೆಗಳಿಗೆ ಬೇಕಾದ ಅವಶ್ಯ ಸಂಪರ್ಕಗಳು, ಸದಸ್ಯತ್ವ ಸ್ವೀಕಾರ, ಸಭಾಂಗಣಗಳ ಕಾಯ್ದಿರಿಸುವಿಕೆ, ಮುಂತಾದ ಪರಿಷತ್ತಿನ ವ್ಯವಸ್ಥೆಗಳಿಗೆ ಸಹಾ ಈ ತಾಣ ಅಗತ್ಯ ಸಂಪರ್ಕ ಕಲ್ಪಿಸಲಿದೆ.
ಸಮರ್ಥ ಕನ್ನಡ ಗಣಕೀಕರಣದ ಲಾಭಗಳು ಸಾಹಿತ್ಯ ಮತ್ತು ಸಾಂಸ್ಕ್ರತಿಕ ಲೋಕಕ್ಕೆ ಒದಗಬೇಕು ಹಾಗೂ ಇದಕ್ಕಾಗಿ ಕನ್ನಡವನ್ನು ಅಂತರಜಾಲದಲ್ಲಿ ಬಳಸುತ್ತಿರುವ ಮನಗಳು ಒಂದುಗೂಡಬೇಕು, ಸಾಹಿತ್ಯ ಮತ್ತು ತಂತ್ರಜ್ಞಾನ, ಯುವ ಪೀಳಿಗೆ ಮತ್ತು ಹಿರಿಯ ಪೀಳಿಗೆ ಹೀಗೆ ವಿವಿಧ ಬಾಂಧ್ಯವ್ಯಗಳು ಬೆಸೆಯಬೇಕು ಎಂಬ ಮಹತ್ವದ ಆಶಯದಲ್ಲಿ ಪರಿಷತ್ತು ಸದ್ಯದಲ್ಲೇ ತಜ್ಞರುಗಳ ಭಾಗವಹಿಕೆಯಲ್ಲಿ ಒಂದು ಸಮಾವೇಶವನ್ನೂ ಆಯೋಜಿಸಲಿದೆ.
ಈ ಎಲ್ಲ ಯೋಜನೆಗಳ ಜೊತೆಯಲ್ಲಿ ನಾನು ಕೆಲವು ತಿಂಗಳುಗಳ ಹಿಂದೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಮುಖಗಳಲ್ಲಿ ಕನ್ನಡದ ಕುರಿತಾದ ನಿರಂತರವಾದ ಚಟುವಟಿಕೆಗಳನ್ನು ನಡೆಸುವುದರತ್ತ ಆದ್ಯತೆ ನೀಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸಾರ್ಥಕ ಹಾಗೂ ದಿಟ್ಟ ಹೆಜ್ಜೆಗಳನ್ನಿಡಬೇಕೆಂಬ ಸದುದ್ದೇಶದಿಂದ ಕರೆದ ‘ಗಣ್ಯರ ಸಭೆ’ಗೆ ಆಹ್ವಾನಿಸಲ್ಪಟ್ಟ ಬಹುತೇಕ ಗಣ್ಯರು ಸಭೆಗೆ ಆಗಮಿಸಿ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಈ ಮೌಲಿಕ ಅಭಿಪ್ರಾಯಗಳನ್ನು ಮಾರ್ಗದರ್ಶಿ ಸೂತ್ರಗಳನ್ನಾಗಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂಬುದು ನಮ್ಮ ಹಂಬಲವಾಗಿದೆ. ಗಣ್ಯರ ಸಭೆಯಿಂದ ಸ್ಫೂರ್ತಿ ಪಡೆದು ಕನ್ನಡ ಶಿಕ್ಷಣ ಮಾಧ್ಯಮ ಮತ್ತು ನ್ಯಾಯಾಲಯಗಳ ತೀರ್ಪಿನ ಬಗ್ಗೆ ಸಮಗ್ರವಾಗಿ ಚರ್ಚಿಸಲು ಶಿಕ್ಷಣ ತಜ್ಞರು, ನ್ಯಾಯಾಧೀಶರು ಹಾಗೂ ಹಿರಿಯ ಸಾಹಿತಿಗಳ ಸಭೆ ಆಯೋಜಿಸಲಾಗಿತ್ತು. ನಿವೃತ್ತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಶ್ರೀ ರಾಮಾಜೋಯಿಸ್, ನ್ಯಾಯಮೂರ್ತಿ ಶ್ರೀ. ಎ. ಜೆ. ಸದಾಶಿವ, ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ಸೇರಿದಂತೆ ಹಲವಾರು ಹಿರಿಯ ಗಣ್ಯರು ಈ ಸಭೆಯಲ್ಲಿ ಭಾಗವಹಿಸಿ ಮೌಲಿಕ ಸಲಹೆಗಳನ್ನು ನೀಡಿದ್ದಾರೆ.
ಕನ್ನಡ ಪರಿಷತ್ತಿನಲ್ಲಿ ಹಲವಾರು ಉಪಸಮಿತಿಗಳಿವೆ. ಇದಕ್ಕೆ ಸೇರಿದಂತೆ ಇನ್ನೂ ಹಲವು ಉಪಸಮಿತಿಗಳನ್ನು ರಚಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪ್ರವೇಶ, ಜಾಣ, ರತ್ನ ಪರೀಕ್ಷೆಗಳಿಗೆ ನಿಗದಿಪಡಿಸಿದ ‘ಪಠ್ಯ’ ಪರಿಷ್ಕರಣೆಗೊಳಿಸಲು ಹಿರಿಯ ಕವಿ, ೮೧ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ನಿಬಂಧನೆ ಮತ್ತು ಚುನಾವಣಾ ಸುಧಾರಣಾ ಉಪಸಮಿತಿಗೆ ನಿವೃತ್ತ ಜಿಲ್ಲಾಧಿಕಾರಿ ಶ್ರೀ ಎನ್. ಕೆ. ನಾರಾಯಣ ಅವರು ಗೌರವ ಸಂಚಾಲಕರಾಗಿದ್ದು ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ಪ್ರವೃತ್ತರಾಗಿದ್ದಾರೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಶ್ರೀ ಎಸ್. ಆರ್. ವಿಜಯಶಂಕರ್ ಅವರು ಸಂಚಾಲಕರಾಗಿರುವ ‘ಕನ್ನಡಿಗರಿಗೆ ಉದ್ಯೋಗ ಹಾಗೂ ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಆಧುನೀಕರಣ’ದ ಕುರಿತಾದ ಉಪಸಮಿತಿ ಸಹಾ ಭರದಿಂದ ಕಾರ್ಯನಿರ್ವಹಿಸುತ್ತಿದೆ.
ನೆನೆಗುದಿಗೆ ಬಿದ್ದಿದ್ದ ಶತಮಾನೋತ್ಸವ ಭವನ ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದೆ. ಡಾ. ಎಂ. ಚಿದಾನಂದಮೂರ್ತಿಯವರ ಇತ್ತೀಚಿನ ಹೊಸ ಶೋಧವನ್ನು ಅನಾವರಣಗೊಳಿಸುವ “ಕನ್ನಡಿಗರ ಅಸ್ಮಿತೆಯ ತಲಕಾವೇರಿ ಚಂದ್ರವಳ್ಳಿ ಕಣಿವೆ” ಎಂಬ ವಿಶೇಷ ಉಪನ್ಯಾಸ ನಡೆದಿದ್ದು ಈ ಮಹತ್ವದ ಉಪನ್ಯಾಸವು ಕೃತಿಯ ರೂಪದಲ್ಲೂ ಸದ್ಯದಲ್ಲೇ ಹೊರಹೊಮ್ಮಲಿದೆ. ಕನ್ನಡ ಲೇಖಕಿಯರ ಸಂಘದ ಸಹಯೋಗದೊಂದಿಗೆ ಪರಿಷತ್ತು ‘ಸಾಧಕರೊಡನೆ ಸಂವಾದ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಲೇಖಕಿ , ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಹಿರಿಯ ಸಾಹಿತಿಗಳಾದ ಡಾ. ಲೀಲಾದೇವಿ ಆರ್ ಪ್ರಸಾದ್, ಪ್ರೊ. ಜಿ. ವೆಂಕಟಸುಬ್ಬಯ್ಯ, ಶ್ರೀಮತಿ ವೈದೇಹಿ, ವೈದ್ಯರಾದ ಸಿ.ಎನ್. ಮಂಜುನಾಥ್, ಉಭಯಗಾನ ವಿದುಷಿ ಶ್ಯಾಮಲಾ ಜಿ. ಭಾವೆ , ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸೇವಕರಾದ ಎಚ್.ಎಸ್. ದೊರೆಸ್ವಾಮಿ ಅವರುಗಳೊಂದಿಗಿನ ಸಂವಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಕಳೆದ ವರ್ಷದಲ್ಲಿ ಕಾರಣಾಂತರಗಳಿಂದ ನಡೆಯದ ದತ್ತಿ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷದ ದತ್ತಿ ಕಾರ್ಯಕ್ರಮಗಳೊಂದಿಗೆ ಸೇರಿಸಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದೊಂದಿಗೆ ಸೇರಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕನ್ನಡ ಶಾಸ್ತೀಯ ಪಠ್ಯಗಳ ಓದು-ಅಧ್ಯಯನ ತರಬೇತಿ ಶಿಬಿರ ಆಯೋಜಿಸುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನೂರೊಂದು ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮಬಾರಿಗೆ ಅಕ್ಟೋಬರ್ ೮,೯ ರಂದು ನವದೆಹಲಿಯಲ್ಲಿ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಸಮಾವೇಶಕ್ಕೆ ಅಮರಕಂಟಕದ ಇಂದಿರಾಗಾಂಧೀ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಹಾಗೂ ದೆಹಲಿ ಕರ್ನಾಟಕ ಸಂಘವು ನಮಗೆ ಸಹಕಾರ ನೀಡಿವೆ..
ಸಾಹಿತ್ಯ ಸಾಹಿತ್ಯಕ ಕಾರ್ಯಕ್ರಮಗಳ ಜೊತೆಯಲ್ಲಿ ಭಾವಗೀತೆ, ಜಾನಪದಗೀತೆ, ಕನ್ನಡ ಗೀತೆಗಳಂತಹ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಸಹಾ ಏರ್ಪಡಿಸುವ ಪದ್ಧತಿಯನ್ನು ಜಾರಿಗೊಳಿಸಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯ್ಲಿ ಮತ್ತು ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಗೊ. ರು. ಚನ್ನಬಸಪ್ಪನವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಕರ್ನಾಟಕದಲ್ಲಿನ ಜಿಲ್ಲಾ ಸಮಿತಿಗಳು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನೂ, ವಿವಿಧ ಕಾರ್ಯಕ್ರಮಗಳನ್ನೂ ನಡೆಸುತ್ತಿವೆ.
೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಾ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಇದೀಗ ತಮ್ಮೆಲರ ಸಹಕಾರದೊಂದಿಗೆ ನಡೆಯುತ್ತಿದೆ.
ಹೀಗೆ ಪರಿಷತ್ತು ನಿರತವಾಗಿ ಕನ್ನಡ ಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ. ಉಪಸಮಿತಿ ರಚನೆಗಳಲ್ಲಿ, ವಿವಿಧ ಪ್ರಶಸ್ತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಪ್ರತಿಭಾನ್ಯಾಯ, ಸಾಮಾಜಿಕ-ಪ್ರಾದೇಶಿಕ-ಲಿಂಗ ನ್ಯಾಯವನ್ನು ವ್ರತದಂತೆ ಪಾಲಿಸಲಾಗುತ್ತಿದೆ. ಕನ್ನಡ ಸಾರಸ್ವತ ಲೋಕದ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಅತ್ಯಂತ ಪ್ರೀತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಸಣ್ಣದು, ದೊಡ್ಡದು ಎಂಬ ಭೇದ ಎಣಿಸದೆ ಉಪಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಹತ್ವದ ಸಹಕಾರಕ್ಕಾಗಿ ನಾನು ಸದಾಋಣಿ. ಕನ್ನಡ ಧೀಶಕ್ತಿಗೆ ಶರಣು.
ಈ ಅಂತರಜಾಲ ತಾಣ ಹೆಚ್ಚು ಉಪಯೋಗಿ ಆಗುತ್ತದೆ ಎಂಬ ಸದಾಶಯ ನಮ್ಮದು.
Tag: Adhykshara Nudi, Dr. Manu Baligar
ಪ್ರತಿಕ್ರಿಯೆ