86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಗದಿತ ದಿನಾಂಕಗಳನ್ನು ಮುಂದೂಡುವಂತೆ ಕೋರಿ ಮನವಿ

“86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಗದಿತ ದಿನಾಂಕಗಳನ್ನು ಮುಂದೂಡುವಂತೆ ಕೋರಿ ಬಂದ ಮನವಿಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪತ್ರ”

ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿಸುವ ಕುರಿತಂತೆ, ಸಮ್ಮೇಳನದ ದಿನಾಂಕಗಳನ್ನು ನಿಗದಿಪಡಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 23-04-2022 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಚರ್ಚಿಸಿ, 2022ರ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ ನಡೆಸಲು ಒಮ್ಮತದಿಂದ ನಿರ್ಧರಿಸಲಾಗಿತ್ತು.

ಈ ದಿನಾಂಕಗಳನ್ನು ಮುಂದೂಡುವಂತೆ ಅನೇಕ ಗಣ್ಯರು, ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಸಾರ್ವಜನಿಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ, ಸಮ್ಮೇಳನದ ದಿನಾಂಕಗಳನ್ನು ಮುಂದೂಡುವಂತೆ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಿರಿಗೆರೆಯ ಶ್ರೀ ತರಳುಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪರಿಷತ್ತಿನ ಅಧ್ಯಕ್ಷರಿಗೆ ವೈಯಕ್ತಿಕವಾಗಿ ದೂರವಾಣಿ ಮಾಡಿ ಹಾಗೂ ಪತ್ರ ಕಳಿಸಿ, ಬೃಹನ್ಮಠದ 20ನೆಯ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭವು ಪ್ರತಿವರ್ಷದಂತೆ ಈ ಬಾರಿಯೂ 2022ರ ಸೆಪ್ಟೆಂಬರ್ 23, 24 ರಂದು ನಡೆಯುವುದರಿಂದ ಹಾವೇರಿ, ರಾಣೆಬೆನ್ನೂರು, ರಟ್ಟಿಹಳ್ಳಿ, ಹಿರೇಕೆರೂರು ಹಾಗೂ ಇತರೆ ಭಾಗಗಳಿಂದ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅನಾನುಕೂಲವಾಗುವುದರಿಂದ ಸಮ್ಮೇಳನದ ನಿಗದಿತ ದಿನಾಂಕಗಳನ್ನು ಮುಂದೂಡಬೇಕೆಂದು ಕೋರಿರುತ್ತಾರೆ.

ಈಗ ನಿಗದಿಪಡಿಸಿರುವ 2022ರ ಸೆಪ್ಟೆಂಬರ್ 25 ರಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷದಲ್ಲಿ ಸಮ್ಮೇಳನವನ್ನು ನಡೆಸುವುದು ಸೂಕ್ತವಲ್ಲವಾದ್ದರಿಂದ, ನಾಡಿನಾದ್ಯಂತದಿಂದ ಭಾಗವಹಿಸುವ ಕನ್ನಡಿಗರಿಗೆ ಅನಾನುಕೂಲವಾಗುವ ದೃಷ್ಟಿಯಿಂದ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯು ನಿಂತಿರುವುದಿಲ್ಲ ಮತ್ತು ವಿಧಾನ ಪರಿಷತ್ತು ಚುನಾವಣೆಯ ನಿಮಿತ್ತ ಜೂನ್ 17ರ ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮ್ಮೇಳನದ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಮಂತ್ರಿಗಳು, ಶಾಸಕರು ಸಮ್ಮೇಳನದ ಪೂರ್ವಸಿದ್ಧತಾ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ ಸಮ್ಮೇಳನದ ತಯಾರಿಗೆ ತೊಂದರೆಯಾಗಲಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸ್ವಾಮೀಜಿಗಳ, ಸಾಹಿತಿಗಳ, ವಿದ್ವಾಂಸರ, ಮಾಧ್ಯಮ ಮಿತ್ರರ ಹಾಗೂ ಸಾರ್ವಜನಿಕರ ಅಪೇಕ್ಷೆಗಳನ್ನು ಹಾಗೂ ಮನವಿಗಳನ್ನು ಗೌರವಿಸುವ ಹಿನ್ನೆಲೆಯಲ್ಲಿ ಹಾಗೂ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮನ್ವಯ ತರುವಲ್ಲಿ ವಿಶಿಷ್ಟ ಪಾತ್ರವಹಿಸಿದ, ಹಾವೇರಿ ಜಿಲ್ಲೆಯ ಹೆಮ್ಮೆಯ ದಾಸಶ್ರೇಷ್ಠರಾದ ಶ್ರೀ ಕನಕದಾಸರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸೂಕ್ತ ಗೌರವ ಸಲ್ಲಿಸಲು, ಅವರ ಜಯಂತಿ ದಿನವಾದ ನವೆಂಬರ್ 11ರಂದು ಸರ್ಕಾರಿ ರಜೆ ಇದ್ದು, ಮರುದಿನಗಳಾದ 12ರಂದು ಎರಡನೆಯ ಶನಿವಾರ ಮತ್ತು 13ರಂದು ಭಾನುವಾರವಾದ್ದರಿಂದ ನಾಡಿನಾದ್ಯಂತ ಭಾಗವಹಿಸುವವರಿಗೆ ಅನುಕೂಲವಾಗುವ ಉದ್ದೇಶದಿಂದ, ಈಗ ನಿರ್ಧರಿಸಿರುವ ದಿನಾಂಕಗಳಿಂದ ಸಮ್ಮೇಳನವನ್ನು ಮುಂದೂಡಿ, 2022ರ ನವೆಂಬರ್ 11, 12 ಹಾಗೂ 13 ರಂದು ಜರುಗಿಸಬೇಕೆಂಬ ಮನವಿಯನ್ನು ಪರಿಗಣಿಸಬೇಕೆಂದು ಹಾಗೂ ನವೆಂಬರ್ ಕನ್ನಡ ರಾಜ್ಯೋತ್ಸವ ತಿಂಗಳಾದುದರಿಂದ ಹಾವೇರಿ ಸಮ್ಮೇಳನವನ್ನು ನವೆಂಬರ್ನಲ್ಲಿ ನಡೆಸುವುದು ಸಂಭ್ರಮಕ್ಕೆ ಇಂಬು ಕೊಡುತ್ತದೆ ಎನ್ನುವ ದೃಷ್ಟಿಯಲ್ಲಿ ಸಮ್ಮೇಳನವನ್ನು ಮುಂದೂಡಿ, ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನೆರವೇರದ ಈ ಅಕ್ಷರಜಾತ್ರೆಯನ್ನು ಇನ್ಯಾವುದೇ ಕಾರಣಕ್ಕೂ ಮುಂದೂಡದೇ / ಹಿಂದೂಡದೇ 11, 12 ಹಾಗೂ 13 ನವೆಂಬರ್ 2022 ರಂದು ನಡೆಸಲು ಅಂತಿಮವಾಗಿ ದಿನಾಂಕಗಳನ್ನು ನಿಗದಿಪಡಿಸಬೇಕೆಂದು ಪತ್ರ ಬರೆದಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆಯನ್ನು ಏರ್ಪಡಿಸಿ, ಸಮ್ಮೇಳನದ ಅಂತಿಮ ದಿನಾಂಕಗಳನ್ನು ನಿಗದಿಪಡಿಸಬೇಕೆಂದು ಕೋರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸುನೀಲ್ ಕುಮಾರ್, ಕಾರ್ಮಿಕ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆದ ಶ್ರೀ ಶಿವರಾಮ್ ಹೆಬ್ಬಾರ್ ಮತ್ತು ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಅವರುಗಳಿಗೂ ಪತ್ರ ಬರೆದಿದ್ದಾರೆ.

New Doc 05-13-2022 17.18

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)