87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಹಾಪೋಷಕ’ರಾಗಿ ಆದಿಚುಂಚನಗಿರಿ ಜಗದ್ಗುರುಗಳಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು
ಬೆಂಗಳೂರು: ಅಕ್ಕರೆಯ ನಾಡು ಸಕ್ಕರೆಯ ಬೀಡು ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜಿತವಾಗಿದ್ದು ಡಿಸಂಬರ್ 20,21,22ರಂದು ಶುಕ್ರವಾರ, ಶನಿವಾರ, ಭಾನುವಾರ ನಡೆಯಲಿದೆ. ಮೂವತ್ತು ವರ್ಷಗಳ ನಂತರ ಮಂಡ್ಯದಲ್ಲಿ ಅಯೋಜಿತವಾಗಿರುವ ಈ ಸಮ್ಮೇಳನದ ಕುರಿತು ಕನ್ನಡಿಗರು ಅಪಾರ ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭವ್ಯ ಇತಿಹಾಸವಿರುವ ಚಾರಿತ್ರಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಲಕ್ಷಾಂತರ ಭಕ್ತರ ನಂಬಿಕೆಯ ನೆಲವೀಡು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಸಮ್ಮೇಳನದ ‘ಮಹಾ ಪೋಷಕ’ರಾಗುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಸಂಶೋಧನಾ ವಿಭಾಗದ ಗೌರವ ಸಂಚಾಲಕರಾದ ಡಾ.ತಲಕಾಡು ಚಿಕ್ಕರಂಗೇಗೌಡ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೃಷ್ಣೇಗೌಡ ಹುಸ್ಕೂರು, ವಿ.ಹರ್ಷ ಪಣ್ಣೆದೊಡ್ಡಿ ಮತ್ತು ಕರ್ನಾಟಕ ಸರ್ಕಾರದ ಪರವಾಗಿ ಮಂಡ್ಯದ ಜಿಲ್ಲಾಧಿಕಾರಿಗಳಾದ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಷೇಕ್ ತನ್ವೀರ್ ಅಸೀಫ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಯತೀಶ್ ಅವರು ಭೇಟಿ ಮಾಡಿ ವಿನಂತಿಸಿ ಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.
ಈ ವಿಷಯವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಶ್ರೀ ಶ್ರೀಗಳು ಇದು ಕನ್ನಡಿರೆಲ್ಲರ ಸಮ್ಮೇಳನ, ತಮ್ಮದು ಕನ್ನಡ ಮಠವಾಗಿದ್ದು ಭವ್ಯ ಇತಿಹಾಸ ಹೊಂದಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳು ಕನ್ನಡದ ಅಸ್ಮಿತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿರುತ್ತದೆ ಎಂದು ಹೇಳಿ, ಕನ್ನಡದಲ್ಲಿ ಸಹಿಯನ್ನು ಕೂಡ ಮಾಡುವ ತಾವು ಅಪ್ಪಟ ಕನ್ನಡ ಪ್ರೇಮಿಯಾಗಿದ್ದು ‘ಮಹಾ ಪೋಷಕ’ರಾಗಿ ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮೂವತ್ತು ವರ್ಷಗಳ ನಂತರ ಅಯೋಜಿತವಾಗಿದೆ. ಮಂಡ್ಯದ ಜನತೆಯು ದೇಶ-ವಿದೇಶಗಳಲ್ಲಿ ನೆಲೆಸಿದ್ದು ಅವರೆಲ್ಲರೂ ಸಮ್ಮೇಳನದಲ್ಲಿ ಭಾಗಿಯಾಗುವ ಉತ್ಸಾಹವನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಮಂಡ್ಯದಲ್ಲಿ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ವೆಂದು ನಾಮಕರಣವಾದ ನಂತರ 1974ರಲ್ಲಿ ನಡೆದ ಮೊದಲ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಐವತ್ತು ವರ್ಷಗಳ ನಂತರ ಈ ನಾಮಕರಣ ಸುವರ್ಣ ಸಂಭ್ರಮದಲ್ಲಿ ಮತ್ತೆ ಮಂಡ್ಯದಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಈಗ ಆದಿಚುಂಚನಗಿರಿಯ ಜಗದ್ಗುರುಗಳು ‘ಮಹಾ ಪೋಷಕ’ರಾಗಲು ಒಪ್ಪಿರುವುದರಿಂದ ಸಮ್ಮೇಳನವು ಐತಿಹಾಸಿಕವಾಗಿ ನಡೆಯುವುದು ಎನ್ನುವ ವಿಶ್ವಾಸ ಮೂಡಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರತಿಕ್ರಿಯೆ