ಟಿ.ವಿ. ವೆಂಕಟಾಚಲಶಾಸ್ತ್ರಿ

ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಒಬ್ಬ ಮಹತ್ವದ ಕನ್ನಡ ಸಾಹಿತ್ಯ ಪ್ರಕಾರದ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಉತ್ಕೃಷ್ಟ ಸಂಪಾದಕರಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ.

ವೆಂಕಟಾಚಲ ಶಾಸ್ತ್ರಿಗಳು, ೨೬ ಆಗಸ್ಟ್, ೧೯೩೩ ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು  ತಾಯಿ ಸುಬ್ಬಮ್ಮನವರು.  ಎಂ.ಎ. ಮತ್ತು ಪಿ.ಎಚ್.ಡಿ. ಪದವಿಗಳನ್ನು ಪಡೆದ ಬಳಿಕ  ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿ ಕೆಲಸಮಾಡಿದರು. ಮುಂದೆ, ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿಯೂ  ಕಾರ್ಯನಿರ್ವಹಿಸಿದರು.

ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ನಾಟಕ, ಪಬಂಧ, ಇವೇ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.  ಹಳಗನ್ನಡ ಸಾಹಿತ್ಯ ಪರಂಪರೆಯ ಕೊಂಡಿಯೆಂದೇ ಇಂದಿಗೂ ಸಾಹಿತ್ಯವಲಯದಲ್ಲಿ ಅವರು ಚಿರಪರಿಚಿತರಾಗಿದ್ದಾರೆ. ಪೂಜ್ಯ ಡಿ.ಎಲ್. ನರಸಿಂಹಾಚಾರ್ ಅವರ ಆಪ್ತ ಶಿಷ್ಯರಾದ ಇವರು, ಆಚಾರ್ಯರ ನಂತರ  ಆ ಜಾಗವನ್ನು ತುಂಬಿಕೊಟ್ಟರು ಎಂದು ಪ್ರೊ. ಜಿ. ಬ್ರಹ್ಮಪ್ಪನವರು ವ್ಯಕ್ತಪಡಿಸಿರುವ ಅಭಿಪ್ರಾಯ ಕೇವಲ ಹೊಗಳಿಕೆಯ ಮಾತೆನಿಸದು.

ಪ್ರೊ. ಶಾಸ್ತ್ರಿಗಳ ಸಂಶೋಧನಾ ಕೃತಿಗಳಲ್ಲಿ ‘ಕನ್ನಡ ನೇಮಿನಾಥ ಪುರಾಣ, ತೌಲನಿಕ ಅಧ್ಯಯನ’ (೧೯೭೩), ‘ಜೈನ ಸಾಹಿತ್ಯ, ಜೈನ ಭಾಗವತ ಭಾರತಗಳು-ಒಂದು ಸಮೀಕ್ಷೆ’-(೧೯೮೦), ‘ಹರಿವಂಶ ಪುರಾಣ ಸಾರ’ (೧೯೮೭) ಕರ್ಣ ಪಾರ‍್ಯ, ‘ನೇಮಿನಾಥ ಪುರಾಣ ಕಥಾಸಾರ’ ೨೦೦೧, ‘ಅರ್ಧ ನೇಮಿನಾಥ ಪುರಾಣ ಕಥಾಸಾರ ವಸ್ತು ವಿಮರ್ಶೆ’ (೨೦೦೦), ‘ಕನ್ನಡ ಜೈನ ಪುರಾಣಗಳಲ್ಲಿ ಸಿದ್ಧಾಂತ ವಿಷಯ’, ‘ಜೈನ ಭಾರತ ಕಥೆ ಮತ್ತು ಸ್ವರೂಪ ಜೈನ ಧರ್ಮ ಮತ್ತು ಕನ್ನಡ ಸಾಹಿತ್ಯ’ : ‘ಕಾವ್ಯ ಮೀಮಾಂಸೆ’, ‘ಕನ್ನಡ ಚಿತ್ರ ಕಾವ್ಯ'(೧೯೮೭), ‘ಶಾಸ್ತ್ರೀಯ : ೨ ಸಂಪುಟಗಳು’, ‘ಮಹಾಕಾವ್ಯ ಲಕ್ಷಣ’ ಮುಂತಾದವು ಸೇರಿವೆ.

ಛಂದಃಶಾಸ್ತ್ರದಲ್ಲಿ ಅವರ ‘ಕನ್ನಡ ಛಂದ ಸ್ವರೂಪ;’ ‘ವ್ಯಾಕರಣ’ಗಳು ಸೇರಿವೆ.

ನಿಘಂಟು ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ನಿಘಂಟು ಕಾರ್ಯದಲ್ಲಿ ನೀಡಿರುವ ಬೃಹತ್ ಕೊಡುಗೆ ಅಲ್ಲದೆ ‘ದರ್ಪಣ ವಿವರಣ’ ಕೃತಿಯೂ ಸೇರಿದೆ.

ಅವರ ಗ್ರಂಥ ಸಂಪಾದನೆಗಳಲ್ಲಿ ‘ಆದಿಪುರಾಣ’, ‘ಛಂದೋಂಬುಧಿ’, ‘ಶಬ್ದಮಣಿ ದರ್ಪಣ’, ‘ಮುದ್ರಾ ಮಂಜೂಷ’, ‘ಗೊಮ್ಮಟ ಜಿನಸ್ತುತಿ’, ‘ಪಂಪ ಸಂಪುಟ’, ‘ಸಮಯ ಪರೀಕ್ಷೆ’ ಮುಂತಾದ ಬೃಹತ್ ಕೃತಿಗಳು ಸೇರಿವೆ.  ಇದಲ್ಲದೆ ಗ್ರಂಥ ಸಂಪಾದನೆಯ ಪಾರಿಭಾಷಿಕ ಕೋಶವನ್ನೂ ಅವರು ಸೃಜಿಸಿದ್ದಾರೆ.

ಶಾಸ್ತ್ರಿಗಳು ರಚಿಸಿರುವ ಜೀವನ ಚರಿತ್ರೆಗಳಲ್ಲಿ ‘ಶ್ರೀ ಸಹಜಾನಂದ ಭಾರತಿ ಸ್ವಾಮಿಗಳು’ (೨೦೦೬) ಮತ್ತು ‘ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು’ (೨೦೦೪) ಕೃತಿಗಳು ಸೇರಿವೆ.

‘ಮೆಲುಗಾಳಿಯ ಮಾತುಗಳು’ ಎಂಬುದು ಶಾಸ್ತ್ರಿಗಳ ಪ್ರಬಂಧ ಸಂಗ್ರಹ.

ಈ ಮೇಲ್ಕಂಡ ಕೃತಿಗಳೇ ಅಲ್ಲದೆ ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ಮುಂತಾದ ಅನೇಕ ಪ್ರಸಿದ್ಧ ಕೃತಿಗಳನ್ನೂ ಅವರು ರಚಿಸಿದ್ದಾರೆ.

ಪ್ರೊ. ವೆಂಕಟಾಚಲಶಾಸ್ತ್ರಿಗಳಿಗೆ ಅನೇಕ ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ತೀನಂ’ಶ್ರೀ ಸ್ಮಾರಕ ಬಹುಮಾನ, ಶಂಭಾ ಜೋಶಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು  2015 ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಗಳು ಸಂದಿವೆ.

Tag: Prof. T.V. Venkatachala Shastri

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)