ದ. ರಾ. ಬೇಂದ್ರೆ

ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು.  ಅವರ ತಂದೆ ರಾಮಚಂದ್ರ ಪಂತರು.  ತಾಯಿ ಅಂಬೂ ತಾಯಿ.  ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡಕುಟುಂಬ ಆಸರೆ ಪಡೆಯಿತು.  ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು.

ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ ವಯಸ್ಸಿನಲ್ಲಿ ಮಾತೃವಿಯೋಗ, ಮಧ್ಯೆ ಸೊಂಡೂರು ಸಂಸ್ಥಾನದಲ್ಲೂ ಸ್ವಲ್ಪಕಾಲದ ನೌಕರಿ.  ಒಂದು ವರ್ಷ ಅಲೆದಾಟ, 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳ ದುಡಿಮೆ.  ನರಬಲಿ ಕವನದ ಕಾರಣವಾಗಿ 3 ತಿಂಗಳು ಹಿಂಡಲಗಿ ಕಾರಾಗೃಹ ವಾಸ ಶಿಕ್ಷೆ.  ಮತ್ತೆ ಅಲೆದಾಟ, 1935ರಿಂದ 1940ರವರೆಗೆ 5 ವರ್ಷಗಳ ಕಾಲ ನಿರುದ್ಯೋಗ.  ಅನಂತರ ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿ.  ಒಂದು ವರ್ಷ ಗದಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ.  ಮತ್ತೆ ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ.  1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕ ವೃತ್ತಿ.  ಅನಂತರ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ವೃತ್ತಿ.  ಸುಮಾರು 12ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದ ಇವರಿಗೆ 60 ಆಯಿತೆಂದು ಅಲ್ಲಿ ನಿವೃತ್ತಿಯಾಯಿತು.  1956ರಲ್ಲಿ ಆಕಾಶವಾಣಿಯಲ್ಲಿ ಮೊದಲು ಪ್ರೊಡ್ಯೂಸರ್ ಆಗಿ, ಆಮೇಲೆ ಸಲಹೆಗಾರರಾಗಿ ಧಾರವಾಡದಲ್ಲಿ ಮತ್ತೆ ಒಂದು ಉದ್ಯೋಗ.  ಸರ್ಕಾರಕ್ಕೆ ಆಕಾಶವಾಣಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಎಂ. ಲಾಡ್ ಅವರ ಮೂಲಕ ದೊರೆತ ಉದ್ಯೋಗ ಅದು.  ಇಡೀ ಬದುಕಿನ ತುಂಬಾ ಉದ್ಯೋಗ ನಿರುದ್ಯೋಗಗಳ ಚೆಲ್ಲಾಟ.  ಈ ಮಧ್ಯೆಯೂ ಧೃತಿಗೆಡದ ಕವಿಚೇತನ ಬೇಂದ್ರೆಯವರದು.

ಬೇಂದ್ರೆಯವರ ವಿವಾಹವಾದದ್ದು 1919ರಲ್ಲಿ, ಹುಬ್ಬಳ್ಳಿಯಲ್ಲಿ.  ನರಗುಂದದಲ್ಲಿ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ನೌಕರರಾಗಿದ್ದ ಶ್ರೀ ಜೋಗಳೇಕರ ವಾಸುದೇವರಾಯರ ಮಗಳಾದ ರಂಗೂತಾಯಿಯೇ ಇವರ ಮಡದಿ.  ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಅವರ ಹೆಸರು ಲಕ್ಷ್ಮೀಬಾಯಿ.  ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರ ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು.  ಅದರಲ್ಲಿಯೂ ಹುಟ್ಟಿದ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು 2 ಗಂಡು ಮಕ್ಕಳು (ವಾಮನ ಬೇಂದ್ರೆ ಮತ್ತು ಪಾಂಡುರಂಗ ಬೇಂದ್ರೆ) ಮತ್ತು ಒಬ್ಬಳು ಮಗಳು ಶ್ರೀಮತಿ ಮಂಗಳ.  ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿಹೋದಾಗ ಆ ದುಃಖದ ಅನುಭವವನ್ನೂ ಎದೆಯಲ್ಲಿ ತುಂಬಿಕೊಂಡವರು ಅವರು.

ಇಷ್ಟಾದರೂ ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು.  ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು.  ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು.

ಬೇಂದ್ರೆ ಅಥವಾ ‘ಬೇನ್’ರೆ  ಅಂದರೆ ದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರು ಎಂಬ ಅರ್ಥ ಇದೆಯಂತೆ.  ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು.  ಇವರ ಮುತ್ತಜ್ಜ ರಾಮಭಟ್ಟ ಎಂಬುವರು ಕೊನೆಗೆ ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರೆ, ಬೇಂದ್ರೆಯವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ ಪಡೆದಿದ್ದರಂತೆ.  ಇವರು ಸತ್ಯನಾರಾಯಣ ಕಥೆಯನ್ನು ರಚಿಸಿದ್ದರೆಂದು ಹೇಳುತ್ತಾರೆ.

ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರುಗಳನ್ನು ಹೇಳುವುದು ಅಷ್ಟು ಸುಲಭದ ಮಾತಲ್ಲ.  ಅಂಬೂ ತಾಯಿಯೇ ಅವರ ಬದುಕಿನ ಮೊದಲ ಪ್ರೇರಕ ಶಕ್ತಿ.  ಅವರ ಸಂಕೇತವಾಗಿಯೇ ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಮಾಡಿಕೊಂಡರು.  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರು ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು.  ಇನ್ನೊಬ್ಬ ಮಹತ್ವದ ವ್ಯಕ್ತಿಯೆಂದರೆ ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು.  ಬಾಲ್ಯದುದ್ದಕ್ಕೂ ಆಸರೆಯಾಗಿದ್ದವರು ಅವರ ಕಕ್ಕ ಬಂಡೋಪಂತರು.  ಅಧ್ಯಯನ ಬೇಂದ್ರೆಯವರ ಬದುಕಿನ ಒಂದು ಅವಿಭಾಜ್ಯ ಅಂಗ.  ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳನ್ನು ಅಧ್ಯಯನ ಮಾಡಿದವರು ಅವರು.  ಎಲ್ಲಕ್ಕಿಂತ ಅತಿ ಮುಖ್ಯವಾದ ವಿಷಯ ಎಂದರೆ ಇವರ ಬದುಕು ಮರಾಠಿ, ಕನ್ನಡ ದ್ವಿಭಾಷಾ ವಾತಾವರಣದಲ್ಲಿದ್ದುದು.  ಕನ್ನಡದಲ್ಲಿ ಇಂಥ ದ್ವಿಭಾಷಾ, ದ್ವಿಸಂಸ್ಕೃತಿಗಳ ವಾತಾವರಣದಲ್ಲಿ ಮಾಸ್ತಿ, ಡಿ.ವಿ.ಜಿ., ಪು.ತಿ.ನ ಅವರೂ ಇದ್ದವರೇ ಎಂದರೂ ಬೇಂದ್ರೆಯವರ ಕಾವ್ಯದಲ್ಲಿ ಮರಾಠಿ, ಕನ್ನಡ ಭಾಷಾ ಸಂಸ್ಕೃತಿಗಳ ಸಂಗಮದ ಫಲಸಮೃದ್ಧಿಯನ್ನು ಕಾಣಬಹುದಾಗಿದೆ.  ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಜೋತಿಷ್ಯ ಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ, ಕನ್ನಡ ಸಾಹಿತ್ಯ-ಹೀಗೆ ಬಹು ಮುಖ್ಯವಾದ ಅಧ್ಯಯನದಿಂದ ಸಮೃದ್ಧಗೊಂಡ ಚೇತನ ಬೇಂದ್ರೆಯವರದು.  ವಿಶ್ವದ ಮಹಾಕವಿಗಳು, ಹಾಗೆಯೇ ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಇಂಥ ದಾರ್ಶನಿಕರ ಅನುಭವ ಚಿಂತನ ಸಮುದ್ರಗಳನ್ನು ಕುಡಿದ ಅಗಸ್ತ್ಯ ಇವರು.  ಇಂಗ್ಲಿಷ್, ಕನ್ನಡ ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳ ಅತ್ಯಂತ ಆತ್ಮೀಯವಾದ ಒಡನಾಟ ಪಡೆದಿದ್ದ ಈ ವ್ಯಕ್ತಿತ್ವದಲ್ಲಿ ಎರಡು ಭಾಷಾ ಸಂಸ್ಕೃತಿಗಳ ಸಂಗಮವಾಗಿದ್ದಂತೆಯೇ ನಗರ ಹಾಗೂ ಜಾನಪದ ಸಂಸ್ಕೃತಿಗಳು ಸಂಗಮಗೊಂಡಿದ್ದವು.

ಅವರ ಮೊದಲನೇ ಕವನ ಸಂಕಲನವಾದ ‘ಗರಿ’ಯಲ್ಲಿ “ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತಿದೆ.  ಆ ಸಾವಿರ ಬಾಯಿಗಳಲ್ಲಿ ನನ್ನದೊಂದು.  ಅದೇ ನನ್ನ ಧನ್ಯತೆ” ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆಯವರ ಪ್ರತಿಭೆಯ ದ್ಯೋತಕವಾಗಿದೆ.  ಹೀಗಾದುದರಿಂದಲೇ ಕನ್ನಡದ ಎಲ್ಲ ಒಳ್ಳೆಯ ಕಾವ್ಯವು ತನ್ನದೇ ಎನ್ನುವ ನಿರ್ಮತ್ಸರದ ಅಭಿಮಾನ ತಾನೇ ತಾನಾಗಿ ಮೂಡಿತು.  ‘ಗೆಳೆಯರ ಬಳಗ’ ಎಂಬ  ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ. ಶ್ರೀ ಮುಗಳಿಯಂಥ ಕವಿಗಳ ಬಳಗವನ್ನೇ ಕಟ್ಟಿದರು.  ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಇತಿಹಾಸದ ಒಂದು ಜೀವಂತ  ಭಾಗವಾಗಿ ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು.  ಅದಕ್ಕಿಂತ ಮುಖ್ಯವಾದ ಮಾತು ಎಂದರೆ ಕನ್ನಡದ ತಮ್ಮ ಸಮಕಾಲೀನ ಕವಿಗಳನ್ನು ಕುರಿತ ಅವರ ಧೋರಣೆ.  ಯುಗದ ಕವಿಗೆ, ಜಗದ ಕವಿಗೆ ನಮಸ್ಕಾರ ಎಂದು ಕುವೆಂಪು ಅವರನ್ನು ಅಭಿನಂದಿಸುತ್ತ ಅವರ ಚಿತ್ರಾಂಗದಾ ಕಾವ್ಯವನ್ನು ಕುರಿತು ಹೇಳುವಾಗ ಹಿಂದಿನ ಮಹಾಕಾವ್ಯವನ್ನು ಮೀರಿಸಲಿದೆ ಎಂದು ಅಭಿಮಾನಪಟ್ಟಿದ್ದು ಬೇಂದ್ರೆಯವರ ಮುಕ್ತ ಪ್ರಶಂಸೆಯ ಕವಿಹೃದಯವನ್ನು ಪರಿಚಯಿಸುತ್ತದೆ.  ಬೇಂದ್ರೆಯವರ ಸನಿಹಕ್ಕೆ ಹೋದ ಹೆಚ್ಚು ಕನ್ನಡ ಕವಿಗಳ ಭಾವನೆ ಇದೇ ತೆರನಾದದ್ದಾಗಿದೆ.

ರಸ ಋಷಿ, ಶ್ರೇಷ್ಠ ಕವಿ  ಹೀಗೆ ಬಹುವಿಧವಾಗಿ ರಸಿಕರಿಂದ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ.  ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಇಂಥ ನಿಸರ್ಗವನ್ನು ಕುರಿತ ಕವಿತೆಗಳಾಗಲಿ; ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು ಇಂತಹ ಮಾಂತ್ರಿಕ ಕವಿತೆಗಳಾಗಲಿ; ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಇಂಥ ಸಾಮಾಜಿಕ ಕವಿತೆಗಳಾಗಲಿ; ಕೇಳಿರೊಂದು ಸೋಜಿಗದಂಥ ಬದುಕಿನ ಗಹನತೆಯ ಕಡೆಗೆ ಮನಸೆಳೆಯುವ ಕವಿತೆಯಾಗಲಿ; ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಕುರಿತು ಬರೆದ ಕವಿತೆಗಳಾಗಲಿ; ಅನಂತ ಪ್ರಣಯ, ಪ್ರೀತಿ ಇಂಥ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕವಿತೆಗಳಾಗಲಿ ಬೇಂದ್ರೆಯವರ ಕವಿತೆ ತನ್ನ ಸಾಚಾತನದಿಂದ ಮೆರೆಯುತ್ತದೆ.

ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ.  ನೀ ಹಿಂಗ ನೋಡಬ್ಯಾಡ ನನ್ನ, ನಾನೊಂದು ನೆನೆದರೆ, ಸಖೀಗೀತ, ನಾದ ಲೀಲೆ, ಪಾಡು, ಹೋದ ಬುಧವಾರ – ಇಂಥ ಕವಿತೆಗಳು ಅವರ ಬದುಕಿಗೆ ತೀವ್ರವಾದ ಆಘಾತವುಂಟು ಮಾಡಿದ ಮಗನ ಸಾವು, ಸಂಸಾರದ ವಿರಸ, ತನ್ನ ಬದುಕಿನ ಕಥೆ-ವ್ಯಥೆಗಳು, ಮಡದಿ ತನ್ನನ್ನು ಬಿಟ್ಟು ಹೋದದ್ದು, ಇಂಥ ಘಟನೆಗಳಿಂದ ಮೂಡಿದವುಗಳಾಗಿವೆ.  ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು.  ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳನ್ನು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ.  ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ.  ಕನ್ನಡದಲ್ಲಿ ಬೇಂದ್ರೆಯವರಷ್ಟು ವಿಫುಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ.  ಗಂಡು ಹೆಣ್ಣಿನ ಪ್ರೀತಿ ಹಾಗೂ ವಿರಸ ವಿಕೋಪಗಳನ್ನು ತುಂಬಾ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು.

ಬೇಂದ್ರೆಯವರ 27ಕವನ ಸಂಕಲನಗಳು ಪ್ರಕಟವಾಗಿವೆ.  ಈ ಕವನ ಸಂಕಲನಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯದಲ್ಲಿ ಕಂಡಿರಿಸಿದ ಮಹಾ ಪ್ರತಿಭೆಯೊಂದು ನಮಗೆದುರಾಗುತ್ತದೆ.  ವಚನ ಪರಂಪರೆಯಲ್ಲಿ ರಚಿತವಾದ ವಿನೂತನ ಕಾಂತಿಯ ಕರುಳಿನ ವಚನಗಳು, ಮಾಂತ್ರಿಕತೆಯಿಂದ ಕಳಕಳಿಸುವ ಸುನೀತಗಳು ಅಲ್ಲದೆ ಕನ್ನಡದ ಅನುಭಾವ ಪರಂಪರೆಯನ್ನು ಮುಂದುವರೆಸಿರುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.  ಬೆಳಗು ರೀತಿಯ ನಿಸರ್ಗ ಗೀತೆಯಿಂದ ಆರಂಭಿಸಿದ ಜೋಗಿ, ಓಂ ಸಚ್ಚಿದಾನಂದ ಇಂಥ ಕವಿತೆಗಳವರೆಗೆ ಇದರ ಹರವಿದೆ.  ಕನ್ನಡದ ಪರಂಪರೆಯನ್ನು ಹಾಡಿ ಕರ್ನಾಟಕದ ಏಕೀಕರಣದ ಸಂಘಟನೆಯನ್ನು ಇವರ ಕಾವ್ಯ ನಡೆಸಿದ ರೀತಿ ಮುಖ್ಯವಾದದ್ದು.  ಮಾನವನನ್ನು ಸದಾ ಕಾಡುವ ಹಸಿವು, ಬಡತನಗಳು ಕೂಡ ಅನ್ನದೇವರು, ಅನ್ನಬ್ರಹ್ಮದ ದೇಗುಲದಲ್ಲಿ ಇಂಥ ಕವಿತೆಗಳಿಗೆ ಕಾರಣವಾಗಿವೆ.  ಬಂಗಾಳದಲ್ಲಿ ನಡೆದ ಮಾರಣ ಹೋಮವನ್ನು ಕುರಿತು ಬರೆದ ‘ನರಬಲಿ’ ಕವಿಯನ್ನು ಅಂದಿನ ಸರ್ಕಾರದ ಕೋಪಕ್ಕೂ ಗುರಿಯಾಗಿಸಿ ಸೆರೆಮನೆಗೆ ತಳ್ಳಿದ್ದು ಐತಿಹಾಸಿಕ ಘಟನೆ.  ಬದುಕಿನ ಬಡತನ, ಕಷ್ಟ-ಕಾರ್ಪಣ್ಯದ ಮಧ್ಯೆಯೂ ನಿಸರ್ಗದ ಹಾಗೂ ಬದುಕಿನ ಸೌಂದರ್ಯವನ್ನು ಬೊಗಸೆ ಬೊಗಸೆಯಾಗಿ ಸವಿದ, ಹಾಗೆಯೇ ಬದುಕಿದ ಧೀಮಂತ ಪ್ರತಿಭೆ ಬೇಂದ್ರೆಯವರದು.  ನಾದದ ನದಿಯೊಳು ಮಿಂದಾಗ ಸೂಜಿ ಹಿಂದ ದಾರದಾಂಗ ಇಂಥ ಅತ್ಯುತ್ತಮವಾದ ಅನೇಕ ಕಾವ್ಯಪಂಕ್ತಿಗಳನ್ನು ಬೇಂದ್ರೆಯವರ ಕಾವ್ಯದ ತುಂಬಾ ಕಾಣಬಹುದು.  ಅದಕ್ಕೆ ಕಾರಣ ಈ ಪ್ರತಿಭೆ ವಿಶೇಷವಾಗಿ ರೂಪಕಗಳ ಮೂಲಕವೇ ಕ್ರಿಯಾತ್ಮಕವಾಗತೊಡಗುವುದು.  ಉದಾಹರಣೆಗೆ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಕವನವನ್ನೇ ನೋಡಬಹುದು.

ಜೋಗಿಯಂಥ ಹೆಚ್ಚು ಸಂಕೀರ್ಣವೂ, ಕಿಂಚಿದ್ ಸ್ಪಷ್ಟವೂ ಹಾಗೂ ಅಧ್ಯಾತ್ಮಿಕವೂ ಆದ ಕವಿತೆಯನ್ನು ಬಿಟ್ಟು ಇಡೀ ಸಂಜೆಯೇ ಒಬ್ಬ ಸುಂದರ ಪ್ರಣಯಿನಿಯಾಗಿ ಎದ್ದು ಮೂಡಿಬರುವಂತೆ ಚಿತ್ರಿತವಾಗಿರುವ ಮಾಂತ್ರಿಕವಾದ, ರಾಗರತಿಯಂಥ ಕವಿತೆಯನ್ನು ಬಿಟ್ಟು ಸರಳವೂ, ಸಹಜವೂ ಆದರೆ ಬೇಂದ್ರೆಯವರ ಕಾವ್ಯ ಪಡೆಯುವ ಸಾರ್ಥಕ್ಯದ ರೀತಿಯನ್ನು ವ್ಯಂಜಿಸುವಂಥದ್ದು ಆಗಿದೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಸುಂದರವಾಗಿ ಮೂಡುವ’ ಬಡವ ಬಡವಿ ಕವನ.  ಬೇಂದ್ರೆಯವರು ಅನೇಕ  ಕವಿತೆಗಳನ್ನು ಅನುವಾದಿಸಿದ್ದಾರೆ.  ಅವುಗಳಲ್ಲಿ ನಮ್ಮ ಕೊನೆಯ ಶರಣು ಹಾಗೂ ಮೇಘದೂತ ಕವಿತೆಗಳು ಅನುವಾದಗಳು.  ಅರವಿಂದರ ಸಾವಿತ್ರಿಯನ್ನು ಮತ್ತೆ ಕೆಲವು ಕವಿತೆಗಳನ್ನು ಬೇಂದ್ರೆಯವರು ಅನುವಾದಿಸಿದ್ದಾರೆ.  ಅದರಲ್ಲಿ ಬಂಗಾರದ ಹುಡುಗನಂಥ ಕವಿತೆಗಳು ಸ್ವತಂತ್ರ ಕವನವೆಂಬಂತೆ ಗಮನಾರ್ಹವಾಗಿವೆ.

ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ.  ನಾವು ಓದುವ ಕವಿತೆಯಷ್ಟೇ ಅಲ್ಲದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಎಲ್ಲರೂ ಕವಿತೆಯನ್ನು ಸಹೃದಯನ ಹೃದಯಕ್ಕೆ ಮುಟ್ಟಿಸಬೇಕೆಂಬುದು ಅವರ ಸದಾಗ್ರಹ.  ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು.  1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ವಾರಿ ರುಮಾಲು ಸುತ್ತಿದ್ದ ಬೇಂದ್ರೆಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು.  ಇಡೀ ಸಭೆಯ ಎದುರಿಗೆ ಕಾಲ ಪಕ್ಷಿ ಹಾರಿಹೋದ ಅದ್ಭುತ ಅನುಭವವನ್ನು ಸೃಷ್ಟಿಸಿದ ಕಾವ್ಯ ವಾಚನದ ಮಾಂತ್ರಿಕ ಕ್ರಿಯೆ ಅಂದು ನಡೆದುಹೋಯಿತು.  ಇದಲ್ಲದೆ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಬೇಂದ್ರೆ ವಾಚಿಸಿದ್ದ ಗಂಗಾವತರಣ ಕವಿತೆಯ ಅನುಭವ ಎಂಥ ರೋಮಾಂಚನಕರವಾದುದೆಂಬುದನ್ನು ಅನೇಕ ಹಿರಿಯರು ಬಹು ಹಿಗ್ಗಿನಿಂದ ನೆನೆಯುತ್ತಿದ್ದರು.

ಬೇಂದ್ರೆಯವರು 14 ನಾಟಕವನ್ನು ಬರೆದಿದ್ದಾರೆ.  10 ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ.  ಇದಲ್ಲದೆ ಬೇಂದ್ರೆಯವರು ಮರಾಠಿಯಲ್ಲೂ ಕೆಲವು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ.  ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ, ಕೇಂದ್ರ ಸರ್ಕಾರದ ಪದ್ಮಶ್ರೀ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ‘ನಾಕು ತಂತಿ’ ಕವನ ಸಂಕಲನಕ್ಕೆ ಭಾರತದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿ ‘ಜ್ಞಾನಪೀಠ ಪ್ರಶಸ್ತಿ’ ದೊರಕಿತು.  ಎಲ್ಲಕ್ಕಿಂತ ಹೆಚ್ಚಿನದು ಎಂದರೆ ಕರ್ನಾಟಕದಲ್ಲಿ ಬೇಂದ್ರೆಯವರನ್ನು ಕರೆದು ಸತ್ಕರಿಸದ ಊರೇ ಇಲ್ಲ ಎಂಬುದು.  ಬೇಂದ್ರೆಯವರು ಅಕ್ಟೋಬರ್ 26, 1981ರ ದೀಪಾವಳಿಯಂದು ಕೀರ್ತಿಶೇಷರಾದರು.  ಈ ಮಹಾನ್ ಕಾವ್ಯಗಾರುಡಿಗ ಚೇತನಕ್ಕೆ  ನಮ್ಮ ಸಾಷ್ಟಾಂಗ ನಮನ.

(ಆಧಾರ: ಈ ಲೇಖನವು ಡಾ. ಜಿ.ಎಸ್. ಸಿದ್ಧಲಿಂಗಯ್ಯ ಅವರು ದ.ರಾ. ಬೇಂದ್ರೆಯವರ ಕುರಿತು ಬರೆದಿರುವ ಲೇಖನವನ್ನು ಆಧರಿಸಿದೆ.)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)