ಬೆಳ್ಳಾವೆ ವೆಂಕಟನಾರಣಪ್ಪ

Bellave

ಕನ್ನಡದ ಮಹಾನ್ ವಿದ್ವಾಂಸರೂ, ಸಾಹಿತಿಗಳೂ, ಅದರಲ್ಲೂ ಕನ್ನಡದ ಪ್ರಥಮ ವಿಜ್ಞಾನ ಬರಹಗಾರರು ಎಂದು ಪ್ರಸಿದ್ಧಿ ಪಡೆದ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ  ಪ್ರಧಾನ ಪಾತ್ರಧಾರಿಗಳಾದ ಬೆಳ್ಳಾವೆ ವೆಂಕಟನಾರಣಪ್ಪನವರು ಫೆಬ್ರವರಿ 10, 1872ರ ವರ್ಷದಲ್ಲಿ ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು.  ತಂದೆ ವೆಂಕಟಕೃಷ್ಣಯ್ಯನವರು ಮತ್ತು ತಾಯಿ ಲಕ್ಷ್ಮೀದೇವಮ್ಮನವರು.  ತಮ್ಮ ಪೂರ್ವಿಕರ ಮನೆಮಾತು ತೆಲುಗು ಆದರೂ ತಮ್ಮ ವ್ಯಾವಹಾರಿಕ ಭಾಷೆಯಾದ  ಕನ್ನಡದ ಮೇಲೆ ಬೆಳ್ಳಾವೆ ವೆಂಕಟನಾರಣಪ್ಪನವರಿಗೆ ಅಪಾರವಾದ ಪ್ರೀತಿ.

ಬೆಳ್ಳಾವೆಯವರ ವಿದ್ಯಾಭ್ಯಾಸ ಪ್ರಾರಂಭವಾದುದು ಕೂಲಿ ಮಠದಲ್ಲಿ. ಪ್ರೌಢಶಾಲೆಗೆ ಸೇರಿದ್ದು ತುಮಕೂರಿನಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಫ್. ಎ ಪದವಿ ಮತ್ತು ಬಿ.ಎ ಪದವಿಗಳನ್ನು ಉನ್ನತ ದರ್ಜೆಯ ಸಾಧನೆಗಳೊಂದಿಗೆ  ಗಳಿಸಿಕೊಂಡರು.  ಪ್ರಿನ್ಸಿಪಾಲರಾಗಿದ್ದ ಜಾನ್ ಕುಕ್ ಇವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಅಧ್ಯಾಪಕರಾಗಿ ಆಯ್ಕೆ ಮಾಡಿಕೊಂಡರು. ಹದಿನಾಲ್ಕು ವರ್ಷ ಎಫ್. ಎ ತರಗತಿಗಳಿಗೆ ‘ಮಾನವ ಶರೀರಶಾಸ್ತ್ರ’ವನ್ನು ಬೋಧಿಸಿದರು.  ಮುಂದೆ 1903ರ ವರ್ಷದಲ್ಲಿ  ಅವರು ಮದ್ರಾಸು ವಿಶ್ವ ವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ  ಎಂ.ಎ ಪದವಿಯನ್ನು ಗಳಿಸಿದರು. ಆ ನಂತರದಲ್ಲಿ ಅವರು ಸೆಂಟ್ರಲ್ ಕಾಲೇಜಿನಲ್ಲಿಯೇ  ಭೌತಶಾಸ್ತ್ರದ ಅಧ್ಯಾಪಕರಾದರು. ತರಗತಿಯಲ್ಲಿ ಕಟ್ಟುನಿಟ್ಟಿನ ಅಧ್ಯಾಪಕರೆಂದು ಹೆಸರಾಗಿದ್ದರೂ ಅವರು ಅಷ್ಟೇ ಹೃದಯವಂತರು. ಶಿಸ್ತು, ಪ್ರಾಮಾಣಿಕತೆ, ನಿಷ್ಪಕ್ಷಪಾತ, ಸಜ್ಜನಿಕೆ ಇವರ ಗುಣಗಳಾಗಿದ್ದುವು.

ಬೆಳ್ಳಾವೆ ವೆಂಕಟನಾರಣಪ್ಪನವರು  ಪವನಶಾಸ್ತ್ರದ ಪರೀವಿಕ್ಷರಾಗಿದ್ದ ದಿ. ನುಂಗಿಪುರಂ ವೆಂಕಟೇಶ ಅಯ್ಯಂಗಾರ್ಯರ ಜೊತೆಗೂಡಿ ‘ವಿಜ್ಞಾನ ಪ್ರಚಾರಿಣಿ’ ಎಂಬ ಸಂಘಟನೆಯೊಂದನ್ನು ಸ್ಥಾಪಿಸಿದ್ದರು. ಅದರ ವತಿಯಿಂದ ‘ವಿಜ್ಞಾನ’ ಎಂಬ ಕನ್ನಡ ಮಾಸಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು.  ತಾವೂ ಬರೆದರು.  ಇತರರಿಗೂ ಪ್ರೋತ್ಸಾಹ ನೀಡಿದರು.   ಹಲವಾರು ಉಪನ್ಯಾಸಗಳನ್ನು ನೀಡಿದರು.  ‘ಜೀವವಿಜ್ಞಾನ’ ಎಂಬುದು ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಬರೆದುಕೊಟ್ಟ ಬೃಹತ್ ಗ್ರಂಥ.   ಹೀಗಾಗಿ ಅವರನ್ನು ಕನ್ನಡದ ಪ್ರಥಮ ವಿಜ್ಞಾನ ಬರಹಗಾರರೆಂದು ಕನ್ನಡ ನಾಡು ಗೌರವದಿಂದ ಸ್ಮರಿಸುತ್ತದೆ.   ಇತ್ತೀಚಿನ ವರ್ಷದಲ್ಲಿ  ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರಿನ ಉದಯಭಾನು ಕಲಾ ಸಂಘದ ಸಹಕಾರದಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು  ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯ ಅವರು 1918 ಮತ್ತು 1919ರಲ್ಲಿ ಪ್ರಕಟಿಸಿದ ‘24 ಸಂಚಿಕೆಗಳ ಬೃಹತ್ ವಿಜ್ಞಾನ’ ಸಂಪುಟಗಳ ಸಂಕಲನವನ್ನು  ಬಿಡುಗಡೆ ಮಾಡಿದೆ.  “1918 ಮತ್ತು 1919ರಲ್ಲಿ ಮುದ್ರಣ ವ್ಯವಸ್ಥೆ ಇಲ್ಲದಿದ್ದ ಸಮಯದಲ್ಲಿ ಕೃತಿ ರಚನೆಯನ್ನು ಈ ಲೇಖಕರು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ವಿಜ್ಞಾನದ ಪರಿಭಾಷೆ ರವಾನಿಸುವ ಕಾರ್ಯದಲ್ಲಿ ಲೇಖಕರು ಶ್ರಮವಹಿಸಿದ್ದಾರೆ. ಮೂಲ ಕೃತಿಯನ್ನು ಈ ಮಹನೀಯ ಲೇಖಕರು ಕನ್ನಡ ಭಾಷೆಯಲ್ಲಿ ರಚಿಸಿರುವುದು ಕನ್ನಡ ಭಾಷೆಯ ಮೇಲೆ ಲೇಖಕರು ಹೊಂದಿರುವ ಪ್ರೀತಿ ವ್ಯಕ್ತಪಡಿಸುತ್ತದೆ” ಎಂದು ಈ ಕೃತಿಗಳನ್ನು ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಕೊಂಡಾಡಿದ್ದಾರೆ.

ವಿಜ್ಞಾನದ ಅಧ್ಯಾಪಕರಾದರೂ ಬೆಳ್ಳಾವೆಯವರು ಕನ್ನಡ ನಾಡು ನುಡಿಯ ಮೇಲಿದ್ದ ಅಭಿಮಾನದಿಂದ 1918ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ‘ಕರ್ನಾಟಕ ಸಂಘ’ವನ್ನು ಸ್ಥಾಪಿಸಿದರು. ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಗಳಾಗಿ, ಪರಿಷತ್ಪತ್ರಿಕೆಯ ಮಂಡಳಿಯ ಸದಸ್ಯರಾಗಿ ಅಹರ್ನಿಶಿ ದುಡಿದರು.  ಪರಿಷನ್ಮಂದಿರದ ನಿರ್ಮಾಣ ಕಾರ್ಯದಲ್ಲಿ ಬೆಳ್ಳಾವೆಯವರ ಕೊಡುಗೆ ಅಪಾರವಾದದ್ದು.

ಪ್ರಾಧ್ಯಾಪಕ ವೃತ್ತಿಯಿಂದ ಉಂಟಾದ ಮನಃಕ್ಲೇಶದಿಂದ ಬೆಳ್ಳಾವೆಯವರು ತಮ್ಮ ಕೆಲಸಕ್ಕೆ  ರಾಜೀನಾಮೆ ನೀಡಿ ಕೆಲಕಾಲ ವ್ಯವಸಾಯ ವೃತ್ತಿ ಹಿಡಿದಿದ್ದರು. ಅದೂ ಬೇಸರವಾಗಿ ಪುನಃ ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಗುಡಿಯ ಜೀರ್ಣೋದ್ಧಾರಕ್ಕೆ ಕಾರಣರಾದರು. ಇದಲ್ಲದೆ ದೊಡ್ಡ ಬಸವಣ್ಣ, ದೊಡ್ಡ ಗಣಪತಿ, ಚಾಮರಾಜಪೇಟೆಯ ರಾಮೇಶ್ವರನ ಗುಡಿ, ಗವಿಗಂಗಾಧರೇಶ್ವರನ ದೇವಸ್ಥಾನಗಳಿಗೂ ಧರ್ಮದರ್ಶಿಯಾಗಿದ್ದರು. ಬಸವನ ಗುಡಿಯಲ್ಲಿ ಬಸವನಗುಡಿ ಯೂನಿಯನ್ ಕ್ಲಬ್ ಪ್ರಾರಂಭಿಸಿದರು. ಅದು ಈಗ ಬಸವನಗುಡಿ ಯೂನಿಯನ್ ಅಂಡ್ ಸರ್ವೀಸಸ್ ಕ್ಲಬ್ ಎಂದಾಗಿದೆ. ಇಷ್ಟೇ ಅಲ್ಲದೆ ಮುಲಕನಾಡು ಸಂಘದ ಅಧ್ಯಕ್ಷರಾಗಿ, ಅಗ್ರಿಕಲ್ಚರ್ ಅಂಡ್ ಎಕ್ಟಿಪ್ಮೆಂಟ್ ಯೂನಿಯನ್ ಸದಸ್ಯರಾಗಿ, ಮೈಸೂರು-ತಮಿಳುನಾಡಿನ ಕಾವೇರಿ ನೀರಿನ ಹಂಚಿಕೆಯ ನಿಷ್ಪಕ್ಷಪಾತ ತೀರ್ಪು ಕೊಡಲು ನೇಮಿಸಿದ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ, ಕರ್ನಾಟಕ ವಿಜ್ಞಾನ ಪ್ರಚಾರಿಣಿ ಸಮಿತಿಯ ಕಾರ್ಯದರ್ಶಿಯಾಗಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಮಾಗಡಿ ಕರಣಿಕರ ವೈದಿಕ ಧರ್ಮ ಶಾಲೆಯ ನಿರ್ದೇಶಕರಾಗಿ, ಮುಲಕನಾಡು ಸಭೆಯ ಅಧ್ಯಕ್ಷರಾಗಿ ಹೀಗೆ ನಾನಾವಿಧದಲ್ಲಿ ಅನುಪಮ  ಸೇವೆ ಸಲ್ಲಿಸಿದರು.

ಬೆಳ್ಳಾವೆ ವೆಂಕಟನಾರಣಪ್ಪನವರ ಬರಹಗಳಲ್ಲಿ  ಕನ್ನಡ ಐದನೆಯ ಪುಸ್ತಕ, ಗುಣಸಾಗರ, ಜೀವ ವಿಜ್ಞಾನ ಮುಂತಾದವು  ಸ್ವತಂತ್ರ ಕೃತಿಗಳು.  ಶಬ್ದಮಣಿ ದರ್ಪಣ,  ಪಂಪ ರಾಮಾಯಣ, ಸೋಮೇಶ್ವರ ಶತಕ, ಪಂಪ ಭಾರತ ನಿಘಂಟು, ಚಾವುಂಡರಾಯ ಪುರಾಣ, ಕುಸುಮಾವಳಿ ಕಾವ್ಯ ಮುಂತಾದವು  ಸಂಪಾದಿತ ಕೃತಿಗಳು.

ಈ ಮಹಾನ್ ವಿದ್ವಾಂಸರೂ,  ಕನ್ನಡದ ಮಹಾನ್ ಸೇನಾನಿಗಳೂ ಆದ  ಬೆಳ್ಳಾವೆ ವೆಂಕಟನಾರಣಪ್ಪನವರನ್ನು, ಕನ್ನಡ ನಾಡು 1937ರ ವರ್ಷದಲ್ಲಿ ಜಮಖಂಡಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸುವುದರ ಮೂಲಕ ಗೌರವ ಸಲ್ಲಿಸಿತು.   1940ರ ವರ್ಷದಲ್ಲಿ ಮೈಸೂರು ಮಹಾರಾಜರು ಈ ಹಿರಿಯರನ್ನು ರಾಜಸೇವಾಸಕ್ತ ಬಿರುದಿನ ಮೂಲಕ ಸನ್ಮಾನಿಸಿದರು.

ಎಲ್ಲ ಶ್ರೇಷ್ಠತೆಗಳೇ ಕೂಡಿದ್ದರೂ ದೇಹವೆಂಬ ಈ ಬದುಕಿಗೆ ಅಂತ್ಯವಿದೆ ಎಂಬುದನ್ನು ಸಾರುವಂತೆ, ಈ ಮಹಾನ್ ಸಾಧಕ ಬೆಳ್ಳಾವೆ ವೆಂಕಟನಾರಣಪ್ಪನವರು  ಆಗಸ್ಟ್ 3, 1943ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಿಧನರಾದರು.  ಕನ್ನಡ ನಾಡಿಗೆ ತಾವು ಕೊಟ್ಟ ಅನನ್ಯ ಕೊಡುಗೆಗಳಿಂದಾಗಿ,   ಅವರು ಈ ನಾಡಿನ ಆಂತರ್ಯದ ಚೇತನದೊಂದಿಗೆ ನಿರಂತರವಾಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಆಧಾರ: ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಗ್ರಂಥ, ಕಣಜ ಹಾಗೂ ವಿವಿಧ ಮೂಲಗಳು

ಚುಕ್ಕಿ ಚಿತ್ರ ಕೃಪೆ: ಮೋಹನ್ ವರ್ಣೇಕರ್

Tag: Bellave Venkatanaranappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)