ವೈದೇಹಿ

ವೈದೇಹಿ ಅವರು ಕನ್ನಡ ನಾಡಿನ ಸಮಕಾಲೀನ ಬರಹಗಾರರಲ್ಲಿ ವಿಶಿಷ್ಟರಾಗಿದ್ದಾರೆ.  ಕುಂದಾಪುರದ  ಎ.ವಿ.ಎನ್. ಹೆಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ದಂಪಂತಿಗಳ ಮಗಳಾಗಿ 12ನೆ ಫೆಬ್ರವರಿ 1945ರಂದು ಜನಿಸಿದ ವೈದೇಹಿಯವರ ನಿಜನಾಮ ಜಾನಕಿ.  ಅವರು ಬಿ.ಕಾಂ ಪದವೀಧರೆಯಾಗಿ ಸುತ್ತಮುತ್ತಲಿನವರಿಗೆ ಪರಿಚಯವಾದದ್ದು ಜಾನಕಿ ಹೆಬ್ಬಾರ್ ಎಂದು.  ಆ ಹಂತದಲ್ಲಿ ‘ನೀರೆಯರ ದಿನ’ ಎಂಬ ಒಂದು ಲೇಖನ ಬರೆದದ್ದು ಸುಧಾ ಪತ್ರಿಕೆಯಲ್ಲಿ ಪ್ರಕಟಿಸುವಾಗ ಪತ್ರಿಕೆಯವರು ಇವರಿಗೆ ಕೊಟ್ಟ ಕಾವ್ಯ ನಾಮ ‘ವೈದೇಹಿ’.

ವೈದೇಹಿಯವರು ಪ್ರಜ್ಞಾವಂತ ಲೇಖಕಿಯಾಗಿ ವಿಕಸನಗೊಂಡ ಬಗ್ಗೆ ವೈದೇಹಿಯವರ ಮಾತುಗಳಲ್ಲೇ ಅವರ ಅನುಭಾವವನ್ನು ಗ್ರಹಿಸುವುದು ಸೂಕ್ತವೆನಿಸುತ್ತದೆ.  “ನನ್ನೊಳಗಿನ ಓದುಗಳು, ಒಂದರ್ಥದಲ್ಲಿ, ನಾ ಹೇಳುವುದನ್ನು ಆಲಿಸುವವಳು ಮತ್ತು ವಿಮರ್ಶಿಸುವವಳು, ಏಳಬೇಕಾದರೆ ನಾನು ಆ ಎಲ್ಲ ಪರಿಸರವನ್ನು ಬಿಟ್ಟು, ಮದುವೆಯಾಗಿ ನೇರ ಬದುಕಿನ ಒಳಗೆ ಬಂದು ನಿಂತುಕೊಳ್ಳಬೇಕಾಯಿತು.  ಮದುವೆ ಎಂಬುದು ನನ್ನ ಪಾಲಿಗೆ ನನ್ನನ್ನು ನಿದ್ದೆಯಿಂದ ಎಚ್ಚರಿಸಿದ ಘಟನೆ.  ಬಸಿರು ಬಾಣಂತನಗಳ ನಡುವೆಯೇ ಇದ್ದಿದ್ದರೂ, ಆ ಕುರಿತ ಪಿಸುಮಾತುಗಳನ್ನೆಲ್ಲ ಆಲಿಸುತ್ತಿದ್ದರೂ, ನನಗೆ ಬಸಿರು ಹೇಗೆ ಆಗುತ್ತದೆ ಮತ್ತು ಮಗು ಬರುವ ದಾರಿ ಯಾವುದು ಎಂದೇ ಗೊತ್ತಿರಲಿಲ್ಲ  ಎಂಬುದನ್ನು ನಂಬಿ, ನನ್ನಾಣೆ.  ಮಾತೇನೋ ಎಲ್ಲ ಗೊತ್ತಿತ್ತು.  ಜ್ಞಾನವೇ ಇರಲಿಲ್ಲ.  ಅವೆಲ್ಲ ತಿಳಿಯುವುದೆಂದರೆ ಅಥವಾ ಅವುಗಳನ್ನು ಕುರಿತು ಓದಿಕೊಳ್ಳುವುದೆಂದರೆ ಹಾಳಾದಂತೆಯೇ ಎಂಬ ಭಾವನೆಯಲ್ಲಿದ್ದೆ.  ಈ ರೀತಿ, ಮುಗ್ಧವಾಗಿದ್ದು ಎಲ್ಲ ತಿಳಿದಿರುವವಳ ಸೋಗು ಹಾಕಿಕೊಂಡು ಮದುವೆಯಾಗಿ ಬಂದೆ.  ಬಂದವಳಿಗೆ ಮದುವೆಯ ನಂತರ ನನಗೆ ಸಿಕ್ಕಿದ ಅತ್ತೆಮನೆ ನನ್ನನ್ನು ಗಂಭೀರವಾಗಿಸಿತು.  ನನ್ನ ಅಂತರ್ಮುಖತೆಯನ್ನು ಹೆಚ್ಚಿಸಿತು.  ನನಗೆ ಬರವಣಿಗೆಯ ಅನಿವಾರ್ಯತೆಯನ್ನು ತಂದುಬಿಟ್ಟಿತು.  ಅಷ್ಟರಲ್ಲಿ ನನಗೆ ಎರಡು ಮಕ್ಕಳೂ ಆಗಿ, ಅವು ನನ್ನ ದಿನಗಳು ಪೂರ್ತಿ ಕೆಡದಂತೆ ಕಾಪಾಡಿದವು.  ಎರಡು ಬಸಿರು, ಬಾಣಂತನ ಮತ್ತು ಮಕ್ಕಳ ಸುಖವನ್ನು ನಾನು ಹನಿಬಿಡದೆ ಅನುಭವಿಸಿದೆ.  ಈಗಲೂ ಹೇಳುತ್ತೇನೆ.  ನನ್ನ ಜೀವನದ ಅತ್ಯಂತ ಸುಖಗಳಲ್ಲಿ ಒಂದಾಗಿ ಅವು ಉಳಿದಿವೆ.”

ಮನಸ್ಸಿನ ಒಳತೋಟಿಗೆ, ದುಗುಡಕ್ಕೆ ಹೇಗಾದರೂ ಉಪಶಮನ ಪಡೆವ ಹಂಬಲದಲ್ಲಿ ಹೀಗೆ ಬರವಣಿಗೆಗೆ ತೊಡಗಿದ ವೈದೇಹಿ ಅವರಿಗೆ ತುಂಬಾ ಧೈರ್ಯ ಕೊಟ್ಟವರು ಅವರ ಮಾವನವರು.  ಪತಿ ಶ್ರೀನಿವಾಸಮೂರ್ತಿಯವರು.  ಸಮಾರಂಭಗಳಿಗೆ ಜೊತೆಯಲ್ಲಿ ಕರೆದೊಯ್ದು, ವೈದೇಹಿಯವರ ಭಾವನಾಲೋಕ, ಲೋಕಾನುಭವಗಳು ಹೆಚ್ಚಲು ನೆರವಾದರು.  ಶಿವಮೊಗ್ಗ ನಗರದಲ್ಲಿ ಅವರು ನೆಲೆಸಿದ್ದಾಗ ಬರಹಕ್ಕೆ ಅಗತ್ಯವಾದ ಸಾಂಸ್ಕೃತಿಕ ವಾತಾವರಣದ ಬೆಂಬಲವೂ ದೊರೆಯಿತು.  ಹೆಸರಾಂತ ಲೇಖಕರನ್ನು ಓದಿಕೊಳ್ಳುವ ಅವಕಾಶ.  ಅನಂತಮೂರ್ತಿ, ಅಡಿಗ, ಕೆ.ವಿ.ಸುಬ್ಬಣ್ಣ, ಲಂಕೇಶರಂಥವರು ತಮ್ಮ ಪ್ರಮುಖ ಕೃತಿಗಳನ್ನು ಸೃಷ್ಟಿಸುತ್ತಿದ್ದ ಕಾಲದಲ್ಲಿ ಈ ಸಾಹಿತಿಗಳ ಪರಿಚಯ, ಅದರಲ್ಲೂ ಲಂಕೇಶ್ ಮತ್ತು ಸುಬ್ಬಣ್ಣನವರ ಬೆಂಬಲ, ಪ್ರೋತ್ಸಾಹಗಳು ವೈದೇಹಿಯವರ ಬರಹದ ಬದುಕಿಗೆ ಹೆಚ್ಚಿನ ಒತ್ತಾಸೆ, ತೀವ್ರತೆಗಳನ್ನು ಇತ್ತವು.  ಅನುಪಮಾ ನಿರಂಜನರಂಥ ಹಿರಿಯ ಲೇಖಕಿ, ತಮ್ಮ ಕಿರಿಯ ಪೀಳಿಗೆಯವರೆಲ್ಲರಲ್ಲೂ ಪ್ರೇರಣೆ ಉತ್ಸಾಹಗಳನ್ನು ತುಂಬುತ್ತಿದ್ದು, ವೈದೇಹಿಯವರಲ್ಲೂ ಅಂಥ ಬರೆಯುವ ಉಮೇದು ಬೆಳೆಯಲು ಕಾರಣವಾಯಿತು.

ಕೌಟುಂಬಿಕ ಜಗತ್ತಿನ ನಾಲ್ಕು ಗೋಡೆಗಳ ಒಳಗೇ ಬಹುಪಾಲು ಹೆಂಗಸರೊಂದಿಗೆ ನಿಕಟವಾಗಿ ಬದುಕುವುದನ್ನು ಆಯ್ದುಕೊಂಡ ವೈದೇಹಿ, ಈ ಹೆಂಗಸರ ಬವಣೆ, ಕ್ರೌರ್ಯ, ತಮ್ಮೊಳಗೇ ಒಬ್ಬರೊಬ್ಬರಿಗೆ ತೋರುವ ಹಿಂಸೆಗಳ ಒಳ, ಹೊರಮುಖಗಳನ್ನು ಹತ್ತಿರದಿಂದ ಕಂಡವರು.  ಈ ಸ್ತ್ರೀ ಲೋಕದ ಅನುಭವದ ಮೂಲಕವೆ ಬದುಕಿನ ಅರ್ಥಗಳನ್ನು ಜಾಲಿಸಲು ಹೊರಟವರು.  ಹೀಗಾಗಿ ಹೆಣ್ಣುಮಕ್ಕಳ ಸಾಮಾಜಿಕ ಸ್ಥಿತಿಯಿಂದ ಅವರು ಯಾವ ರೀತಿ ಬದುಕುತ್ತಿದ್ದಾರೆಂದು ಬರವಣಿಗೆಯಲ್ಲಿ ಕಂಡು ಕಾಣಿಸಿಕೊಡುವ ಸಾಕ್ಷಿಪ್ರಜ್ಞೆಯ ರೀತಿಯಲ್ಲಿ ಅವರು ಬರಹಕ್ಕೆ ತೊಡಗುತ್ತಾರೆ,  ಬದುಕನ್ನು ಇಡಿಯಾಗಿ ಹಿಡಿಯಬೇಕು, ಎಲ್ಲ ನಿಜಗಳನ್ನೂ ಕಹಿಗೊಳ್ಳದೆಯೇ ಹೇಳಬೇಕು, ಜಗತ್ತಿಗೆಲ್ಲ ಅವಶ್ಯಕವಾಗಿರುವ ಪ್ರೀತಿಯನ್ನು ಉಳಿಸಿಕೊಳ್ಳುವಂಥ ಬಲ, ಆತ್ಮ ಶಕ್ತಿಗಳನ್ನು ಬಲಗೊಳಿಸುವತ್ತ ಬರಹ ತುಡಿಯಬೇಕೆಂಬುದು ತಮ್ಮ ಮನದ ಆಶೆಯೆಂದು ವೈದೇಹಿಯವರು ಒಂದು ಕಡೆ ಹೇಳಿದ್ದಾರೆ.  ಈ ಹಿರಿಯಾಸೆಯನ್ನು ತುಂಬಾ ನಿರಾಡಂಬರವಾಗಿ, ತನಗೆ ಬರಹದ ಬಗ್ಗೆ ಭ್ರಮೆಗಳೇನೂ ಇಲ್ಲವೆಂದು ವಿನಮ್ರವಾದ ಧ್ವನಿಯಿಂದ ನುಡಿಯುವ ವೈದೇಹಿ ಕೊಂಚ ಸಂಕೋಚದಿಂದ ತಮ್ಮ ವಿಚಾರಗಳನ್ನು ಮತ್ತು ನಂಬಿಕೆಗಳನ್ನು ಹೇಳುತ್ತಾರೆ.

ಮರ್ಯಾದೆ ತೆಗೆಯುವ ಪುರುಷನಿಂದ ರಕ್ಷಣೆ ಪಡೆಯಲು ಮತ್ತೊಬ್ಬ ಪುರುಷನೇ ಹೆಣ್ಣಿಗೆ ಕಾವಲಾಗುವ ನಮ್ಮ ಸಮಾಜದ ವಿರೋಧಾಭಾಸಗಳ ಬಗ್ಗೆ ತುಂಬಾ ಗಂಭೀರವಾಗಿ ಹಾಗೂ ಅಷ್ಟೇ ಹಾಸ್ಯದೊಂದಿಗೆ ಹೇಳುವ ಮಾತಿದು:  “ಪುರುಷನೆಂಬವ ಹಾಗೆ ನೋಡಿದರೆ ವಿರೋಧಾಭಾಸಗಳ ಮೊತ್ತ” ಹಾಯುವವನೂ ಅವನೇ ಕಾಯುವವನೂ ಅವನೇ.  ಅಂದು ಸುರತ್ಕಲಿನಲ್ಲಿ ಘಟನೆ ಆಯಿತಲ್ಲ.  ಹೆಂಗಸರೇ ಎಲ್ಲ ಸೇರಿ ಒಬ್ಬ ಧೂರ್ತನನ್ನು ಚಚ್ಚಿ ಹಾಕಿದ ಘಟನೆ.  ಇಂಥಹ ಪುರುಷರ ವಿರುದ್ಧ ಸತ್ಯವಾಗಿ ನೋಡಿದರೆ ರಿವೊಲ್ಟ್ ಮಾಡಬೇಕಾದವರು ಗಂಡಸರು.  ಗಂಡು ಸಂತತಿಗೇ ಅವಮಾನ ತರುವ ಗಂಡಸರ ವಿರುದ್ಧ.  ದುರದೃಷ್ಟವಶಾತ್ ಅವರು ಕಾವಲಿಗೆ ನಿಂತಾರು ಹೊರತು ತಮ್ಮ ವಿರುದ್ಧ ತಾವೇ ಪ್ರತಿಭಟಿಸುವುದಿಲ್ಲವಲ್ಲ!  ಹಾಗೆ ಪ್ರತಿಭಟಿಸಿ ಪ್ರಜ್ಞಾವಂತ ವಾತಾವರಣ ಮೂಡಿಸುವವರಾದರೆ ಕಾವಲು ಯಾಕೆ ಬೇಕು?  ಎಲ್ಲ ವಿಚಿತ್ರವಾಗಿ ಕಾಣುತ್ತದೆ”

ಹೆಣ್ಣು, ಎಂದಿನಿಂದಲೂ ತನ್ನನ್ನು ತಾನು ಅಡಗಿಸಿಕೊಳ್ಳುತ್ತ ಬಂದಿರುವುದು ಹಾಡು, ಹಸೆ, ಕಸೂತಿ, ಕತೆಗಳಲ್ಲಿ.  ಆಕೆ ಒಂದು ಹಕ್ಕಿಯ ಚಿತ್ರವನ್ನು ನೂಲಿನಲ್ಲಿ ತುಂಬುವುದು ಎಂದರೆ, ಹಾಗೆ ಮಾಡುತ್ತ ತನ್ನೊಳಗೆ ಸಂಚರಿಸುತ್ತ, ತನ್ನದೇ ಆದ ತರ್ಕ, ವಿತರ್ಕ, ಒಳನೋವು, ನಲಿವುಗಳನ್ನೆಲ್ಲಾ ಧ್ಯಾನಿಸುವ ಪ್ರಕ್ರಿಯೆಯಾಗಿರುತ್ತದೆ.  ಅಕ್ಷರದ ಲೋಕದಿಂದ ಬಹುಕಾಲ ದೂರವುಳಿದ ಹೆಣ್ಣಿಗೆ, ಈ ಅಮೂರ್ತ, ಮೂರ್ತತೆಗಳ ನೇಯ್ಗೆಯಾದ ಹೆಣ್ಣಿಗೆ ಕಸೂತಿಗಳು, ಹಾಡುಗಳೇ ತಾಣಗಳು.  ಬರಹ ಹೆಚ್ಚು ತಲುಪುವ ಮತ್ತು ತಲುಪಿಸಬೇಕಾದ ಕಲೆಯಾದ್ದರಿಂದ ಬರಹದೊಳಗೆ ಅವಳ ಪ್ರವೇಶ ತಡವಾಯಿತು ಎನ್ನುವಲ್ಲಿ ವೈದೇಹಿ ಸಂಗೀತದಂಥ ಕಲೆಯಲ್ಲಿ ತನ್ನನ್ನು ತೋಡಿಕೊಳ್ಳುವುದಕ್ಕೂ ಸಾಹಿತ್ಯದ ಮೂಲಕ ತೋಡಿಕೊಳ್ಳುವುದಕ್ಕೂ ಇರುವ ಅಗಾಧ ವೆತ್ಯಾಸವನ್ನು ಸೂಚಿಸುತ್ತಾರೆ.

ಗಂಡಸರು ತಮ್ಮನ್ನು ತಾವೇ ಪ್ರಧಾನರೆಂದು ಭ್ರಮಿಸುತ್ತ, ತಮ್ಮ ನಿಜವಾದ ಮಹತ್ವ ಯಾವುದೆಂಬುದನ್ನು ಮರೆತು ಮರೆಯುತ್ತಾ, ಹೆಂಗಸರೂ ತಮ್ಮನ್ನು ಹಾಗೆಯೇ ನಂಬಬೇಕೆಂದು ಒತ್ತಾಯಿಸುತ್ತಾರೆ.  ಗಂಡು ಗಂಡುತನವನ್ನು ಮರೆತರೂ ಪರವಾಗಿಲ್ಲ, ಹೆಣ್ಣುತನವನ್ನು ಮರೆಯಬಾರದೆಂದು ಮರೆಯದೇ ಬುದ್ಧಿಹೇಳುವ ದಡ್ಡ ಅಹಂಕಾರ, ಕೆಟ್ಟ ಯಜಮಾನಿಕೆಗಳು ನಿಜವಾದ ಆತ್ಮಾಭಿಮಾನದ ಸತ್ಯಕ್ಕಿಂತ ದೂರವಾದದ್ದು.  ಆದ್ದರಿಂದ ಅಂಥ ಸತ್ಯವನ್ನು ಗಳಿಸಿಕೊಳ್ಳುವ ಗತ್ತನ್ನು ನಿಜವಾಗಿ ಗಂಡಸರು ಪಡೆದದ್ದೇ ಆದರೆ, ಅವರು ಸ್ತ್ರೀಕುಲಕ್ಕೆ ನಿಜವಾದ ಮಿತ್ರರಾಗುತ್ತಾರೆ.  ಹಣ ಸಂಪಾದನೆಯಿಂದ ಆರ್ಥಿಕವಾಗಿ ನಾವು ಸ್ವಾವಲಂಬಿಗಳಾಗಬಹುದು, ಲೌಕಿಕ ಸುಖ, ಅನುಕೂಲಗಳೂ ಹೆಚ್ಚಬಹುದು.  ಆದರೆ ಅದರಿಂದ ಅಸಮಾನತೆ ತೊಲಗುವುದೆಂಬ ಭ್ರಮೆ ಬೇಕಿಲ್ಲ.  ಲೌಕಿಕ ಕಾನೂನಿನ ದೃಷ್ಟಿಯಿಂದ ಸ್ತ್ರೀ ಪುರುಷರು ಸರಿಸಮಾನರೆ.  ಆದರೆ ತಾತ್ವಿಕವಾಗಿ ಅಲ್ಲ.  ಅದರಲ್ಲೂ ಪುರುಷರು ಸ್ತ್ರೀಯರಿಗೆ ಸಮರಲ್ಲ ಎನ್ನುವುದು ವೈದೇಹಿ ಅವರ ನಿಲುವು.

ಪತಿ, ಮಕ್ಕಳು, ಮೊಮ್ಮಕ್ಕಳು  ಹೀಗೆ ವಿಸ್ತಾರಗೊಂಡಿರುವ ವೈದೇಹಿ ಕುಟುಂಬ ಜೀವನದ ಎಲ್ಲ ಸುಂದರ ಅಂಶಗಳ ಸವಿಯೊಳಗೆ, ಎಲ್ಲ ಸಂಕಷ್ಟಗಳ ಬಿಸಿ ಝಳದೊಳಗೆ ಹದಗೊಂಡವರು.  ವಿಷಾದ, ವಿನೋದ, ಗಾಂಭೀರ್ಯಗಳನ್ನು ದುಡಿಸಿಕೊಳ್ಳುತ್ತ ಸಮಕಾಲೀನ ಮಹಿಳಾ ಸಾಹಿತ್ಯದಲ್ಲಿ ಒಂದು ದೃಢವಾದ ಸುಮಧುರವಾದ ಧ್ವನಿಯನ್ನು ಮೂಡಿಸಿ ಬೆಳೆಸುತ್ತಿರುವ ಲೇಖಕಿಯಾಗಿದ್ದಾರೆ.

ವೈದೇಹಿ ಅವರ ಬರಹದ ಸ್ವರೂಪ ವೈವಿಧ್ಯದಿಂದ ಕೂಡಿದೆ.  1979ರಲ್ಲಿ ಮೂಡಿದ ‘ಮರ ಗಿಡ ಬಳ್ಳಿ’ಯಿಂದ ಮೊದಲುಗೊಂಡು, ಅಂತರಂಗದ ಪುಟಗಳು, ಗೋಲ,  ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿ ಎಂಬ ನೆನಪು, ಹಗಲು ಗೀಚಿದ ನೆಂಟ, ಕ್ರೌಂಚ ಪಕ್ಷಿಗಳು ಇವು ಅವರ ಪ್ರಮುಖ ಕಥಾಸಂಕಲನಗಳು

ಕಮಲಾದೇವಿ ಚಟ್ಟೋಪಾಧ್ಯಾಯ ಅವರ ‘Indian women’s freedom struggle’ ಕೃತಿಯನ್ನು ‘ಭಾರತೀಯ ಮಹಿಳೆಯರ ಸ್ವಾತ್ರಂತ್ರ ಹೋರಾಟ’, ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ ‘Silver Shakles’ ಕೃತಿಯನ್ನು ‘ಬೆಳ್ಳಿಯ ಸಂಕೋಲೆ’, ಸ್ವಪ್ನ ದತ್ತರ ‘Sun Fairies’ ಕೃತಿಯನ್ನು ‘ಸೂರ್ಯ ಕಿನ್ನರಿಯರು’ ಎಂದು ಕನ್ನಡಕ್ಕೆ ತಂದುಕೊಟ್ಟಿದ್ದಾರೆ.  ಭಾಸ್ಕರ ಚಂದಾವರ್ಕರ ಅವರ ಟಿಪ್ಪಣಿಗಳಿಂದ ಆಯ್ದ ‘ಸಂಗೀತ ಸಂವಾದ’ ಕೂಡಾ ಈ ನಿಟ್ಟಿನಲ್ಲಿ ಪ್ರಮುಖವಾದುದು.

‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಎಂಬುದು ಕೊ. ಲ. ಕಾರಂತರ ಜೀವನದ ಅನುಭವಗಳ ಸ್ಮೃತಿ ಚಿತ್ರಣವಾಗಿದೆ.  ಹಾಗೆಯೇ ‘ಸೇಡಿಯಾಪು ಕೃಷ್ಣ ಭಟ್ಟ’ರ ಕುರಿತ ‘ಸೇಡಿಯಾಪು ನೆನಪುಗಳು’ ಮತ್ತು ಬಿ.ವಿ.ಕಾರಂತರ ಕುರಿತ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ವೈದೇಹಿ ಅವರು ಸೃಷ್ಟಿಸಿರುವ ನೆನಪಿನ ಚಿತ್ರಗಳಾಗಿವೆ.  ‘ಬಿಂದು ಬಿಂದಿಗೆ’ ಮತ್ತು ‘ಪಾರಿಜಾತ’ ಕವನ ಸಂಕಲನಗಳು.

‘ಅಸ್ಪೃಶ್ಯರು’ ಎಂಬ ಕಾದಂಬರಿ ಮತ್ತು  ‘ಮಲ್ಲಿನಾಥ ಧ್ಯಾನ’, ‘ಮೇಜು ಮತ್ತು ಬಡಗಿ’ ಎಂಬ ಲಲಿತ ಪ್ರಬಂಧಗಳ ಸಂಕಲನಗಳನ್ನು ವೈದೇಹಿಯವರು ಪ್ರಕಟಿಸಿದ್ದಾರೆ.   ಮಕ್ಕಳ ಸಾಹಿತ್ಯದಲ್ಲಿ ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಗೊಂಬೆ ಮ್ಯಾಕ್ ಬೆಥ್, ಢಣಾಡಂಗೂರ, ನಾಯಿಮರಿ ನಾಟಕ, ಕೋಟು ಗುಮ್ಮ, ಜುಂ ಜಾಂ ಆನೆ ಮತ್ತು ಪುಟ್ಟ, ಸೂರ್ಯ ಬಂದ, ಅರ್ಧಚಂದ್ರ ಮಿಠಾಯಿ, ಹಕ್ಕಿ ಹಾಡು, ಸೋಮಾರಿ ಓಳ್ಯಾ ಪ್ರಕಟಗೊಂಡಿವೆ. ವೈದೇಹಿಯವರ ಹಲವಾರು ಕೃತಿಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.

‘ಕರ್ನಾಟಕ ಲೇಖಕಿಯರ ಸಂಘ’ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ (ಅಂತರಂಗದ ಪುಟಗಳು ಮತ್ತು ಬಿಂದು ಬಿಂದಿಗೆ ಕೃತಿಗಳಿಗೆ), ‘ವರ್ಧಮಾನ ಪ್ರಶಸ್ತಿ ಪೀಠ’, ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಗೊಲ ಕೃತಿಗೆ), ‘ಕಥಾ ಆರ್ಗನೈಝೆಶನ್’ ನವದೆಹಲಿ ಯಿಂದ ಕಥಾ ಪುರಸ್ಕಾರ (ಹಗಲು ಗೀಚಿದ ನೆಂಟ ಕೃತಿಗೆ), ‘ಕರ್ನಾಟಕ ಲೇಖಕಿಯರ ಸಂಘ’ದಿಂದ ಅನುಪಮಾ ಪುರಸ್ಕಾರ (ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಗೆ ಕೃತಿಗೆ), ‘ಕರ್ನಾಟಕ ಸಂಘ’ ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ (ಅಸ್ಪೃಶ್ಯರು ಕೃತಿಗೆ), ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ (ಐದು ಮಕ್ಕಳ ನಾಟಕಗಳು ಕೃತಿಗೆ), ‘ಅತ್ತಿಮಬ್ಬೆ ಪ್ರತಿಷ್ಠಾನ’ ದಿಂದ ಅತ್ತಿಮಬ್ಬೆ ಪುರಸ್ಕಾರ, ಸಾಹಿತ್ಯ ಅಕೆಡಮಿ ಪುರಸ್ಕಾರ (ಮಲ್ಲಿನಾಥನ ಧ್ಯಾನ ಕೃತಿಗೆ), ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಮತ್ತು  ‘ಕ್ರೌಂಚ ಪಕ್ಷಿಗಳು’ ಎಂಬ  ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಹೀಗೆ ಹಲವಾರು ಗೌರವಗಳು ವೈದೇಹಿ ಅವರನ್ನು ಅರಸಿ ಬಂದಿವೆ.  ಇವರ ಕಥೆ ಆಧರಿಸಿದ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಗುಲಾಬಿ ಟಾಕೀಸು ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಾದೇಶಿಕ ಚಲನಚಿತ್ರಕ್ಕೆ ನೀಡುವ 2009 ವರ್ಷದ ರಾಷ್ಟ್ರೀಯ ಪ್ರಶಸ್ತಿ,  ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

ವೈದೇಹಿಯವರು ಬರೆದಿರುವ ಬಹುತೇಕ ಕಥಾ ಸಂಕಲನಗಳಲ್ಲಿ ಹೆಣ್ಣನ್ನೇ ಕೇಂದ್ರವಾಗಿ ಇಟ್ಟುಕೊಳ್ಳುವ ಮತ್ತು ಹೆಣ್ಣಿನ ಅನುಭವದ ನೆಲೆಯಿಂದ ಬದುಕಿನತ್ತ ಪರಿಶೀಲನಾತ್ಮಕವಾಗಿ ನೋಡುವ ಕಾಳಜಿಯೊಂದು ಪ್ರಮುಖ ಆಸಕ್ತಿಯಾಗಿ ಕಾಣಿಸಿಕೊಂಡಿದೆ.  ಈ ಸ್ತ್ರೀವಿಶಿಷ್ಟ ದೃಷ್ಟಿಕೋನದಿಂದ ಒಂದು ರೀತಿಯ ಅನನ್ಯತೆಯೂ ಅವರ ಕೃತಿಗಳಿಗೆ ಉಂಟಾಗಿದೆ.  ಆದರೆ ಮನುಷ್ಯರನ್ನು ಕಪ್ಪುಬಿಳುಪುಗಳಲ್ಲಿ ಇಲ್ಲವೇ ಢಾಳಾದ ಬಣ್ಣಗಳಲ್ಲಿ ಸರಳವಾಗಿ ವ್ಯಾಖ್ಯಾನಿಸುವುದರ ಬದಲಾಗಿ ಎಲ್ಲ ದಿಕ್ಕಿನಿಂದ ಅವರನ್ನು ಅರ್ಥ ಮಾಡಿಕೊಳ್ಳುವ ಕಳಕಳಿ ಹಾಗೂ ಈ ನಿಟ್ಟಿನ ವಿಶಿಷ್ಟವಾದ ಎಚ್ಚರ ಈ ಕಥೆಗಳಿಗಿವೆ.  ಇದರಿಂದ ಉಂಟಾಗುವ ದೃಷ್ಟಿ ವೈಶಾಲ್ಯದಿಂದಾಗಿ ವ್ಯಂಗ್ಯ, ಸಿಟ್ಟು, ಸಿನಿಕತೆ, ಪ್ರತಿಭಟನೆ, ಆಕ್ರೋಶಗಳು ತಾವೇ ಮೇಲುಪದರಗಳಲ್ಲಿ ವಿಜ್ರಂಭಿಸದೆ ಕೆಳನೆಲೆಗೆ ಸರಿದು ಒಳದನಿಗಳಾಗುತ್ತವೆ.  ಮುಖ್ಯ ನಿರೂಪಣೆಯು ವಿಶೇಷವಾಗಿ ಭಾವನಾಶೀಲ ಆಪ್ತತೆಯನ್ನು ತಳೆಯುವುದರಿಂದ ಒಳಸರಿದ ಸಿಟ್ಟು, ವ್ಯಂಗ್ಯ, ಕೋಪಗಳಿಗೆ ಒಂದು ರೀತಿಯ ಆಸ್ಫೋಟತನದ ಶಕ್ತಿ ದೊರೆಯುತ್ತದೆ.  ಹೆಣ್ಣಿನ ಅನುಭವಕ್ಕೆ ನಿಷ್ಟವಾಗಿದ್ದಾಗಲೂ ಪಕ್ಷಪಾತ ಇಲ್ಲವೇ ಅಳುಬುರುಕತೆಗೆ ಒಲಿಯದ, ಮಾನವತೆಯ ಹೆಸರಿನಲ್ಲಿ ನಿರ್ಭಾವುಕವೂ ಆಗದ ಸಮತೋಲನ ದೃಷ್ಟಿಯನ್ನು ಸಾಧಿಸಲು ವೈದೇಹಿ ಯತ್ನಿಸುತ್ತಾರೆ.

ಅವರ ‘ಸಂ-ಸಾರ’ ಕಥೆಯಲ್ಲಿ ನಾಯಕಿಗೆ ತನ್ನ ಬದಲಾದ ಪಾತ್ರಗಳಲ್ಲಿ ತಣ್ಣನೆ ಕಳೆದುಕೊಂಡಿರುವುದು ಅರಿವಿಗೆ ಬರುವುದಿಲ್ಲವಾದರೆ, ‘ವರ್ತುಲ’ದಲ್ಲಿ ನಿಧಾನವಾಗಿ ತನ್ನ ಸ್ಥಿತಿಯನ್ನು ಅರಿಯುತ್ತಾಳೆ.  ವೈದೇಹಿ ನಿರೂಪಣೆಗಾಗಿ ಬೇರೆ ಬೇರೆ ಪಾತ್ರಗಳ ಪ್ರಜ್ಞೆಯಿಂದ ಸಮಸ್ಯೆಯನ್ನು ನೋಡುವ ಪ್ರಯೋಗಗಳನ್ನು ಮೊದಲ ಹಂತದಲ್ಲೇ ನಡೆಸಿರುವುದು ಮುಖ್ಯವಾದ ಸಂಗತಿ.  ‘ಪದವೀಧರ’ದಲ್ಲಿ ತರುಣನೊಬ್ಬನ ದೃಷ್ಟಿಯಿಂದ ವಸ್ತುವಿನ ನಿರೂಪಣೆ ಇದ್ದರೆ ‘ಬೀಳು-ಬೇರು’ ಕಥೆಯಲ್ಲಿ ಸಮಸ್ಯೆಯ ಕೇಂದ್ರ ಅವಿವಾಹಿತೆಯಿಂದ ಆಗಿದ್ದರೂ ನಿರೂಪಕ ಪ್ರಜ್ಞೆ ಅವಳ ತಂದೆಯದು.  ಎಮ್ಮೆ ವ್ಯಾಪಾರ, ಇಂದಿಗೆ ವರನನ್ನು ಹುಡುಕುವ ವ್ಯವಹಾರ ಎರಡನ್ನೂ ಒಟ್ಟಿಗೆ ತರುವ ಮೂಲಕ ಮದುವೆ-ವ್ಯಾಪಾರವಾಗುವ ಧ್ವನಿಯು, ವಿವರಣೆಯೇ ಬೇಕಾಗದಷ್ಟು ಸ್ಪಷ್ಟವಾಗಿ ಕೇಳುತ್ತದೆ.  ಆದರೆ ಕತೆಯುದ್ದಕ್ಕೂ ಸಂವೇದನಾಶೀಲವಾಗಿದ್ದೂ ಮಗಳ ಮನಸ್ಸನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳಲಾಗದಂಥ ಮೌಲ್ಯ ಪ್ರಪಂಚ ಈ ತಂದೆಯದು.  ‘ನಿನ್ನ ಅಮ್ಮ ನಾನು ನೋಡಿದ ಇಪ್ಪತ್ತನೆಯ ಹುಡುಗಿ ಗೊತ್ತಿದೆಯೇ?” ಎಂಬುದು ಆತನಿಗೆ ತೀರಾ ಸಹಜ.  ಎಮ್ಮೆ ವ್ಯಾಪಾರದಷ್ಟೇ ವ್ಯಾವಹಾರಿಕ.  ಆದರೆ ಈ ಮಾತಿಗೆ ಇಂದಿ ತನ್ನನ್ನು ಸುಟ್ಟುಬಿಡುವಂತೆ ದುರುಗುಟ್ಟಿ ನೋಡಿದ್ದು ಮಾತ್ರ ಅವನಿಗೆ ತಲುಪಲಾರದ ವಿಷಯ.

‘ಚಿಪ್ಪು’ ಕಥೆಯ ಯಶೀ ತೋರುವ ಭಾವತುಮುಲ ಮದುವೆ ತನಗೆ ಬೇಕೇ ಬೇಡವೇ ಎಂಬ ಸಂದಿಗ್ಧ ಸ್ಥಿತಿಯನ್ನು ಬಿಂಬಿಸುತ್ತದೆ.  ಮದುವೆಯ ಸಂಸ್ಥೆಯ ಒಳಗೆ ಬದುಕುವ ಹೆಣ್ಣಿನ ನಾಲ್ಕು ಮನಸ್ಥಿತಿಗಳನ್ನು ‘ಒಂದು ಅಪರಾಧದ ತನಿಖೆ’, ‘ಆತ’, ‘ಗೂಡಿನೊಳಗೊಂದು ಹಕ್ಕಿ’ ಮತ್ತು ‘ಅಪರಿಚಿತ’ ಕತೆಗಳು ಕಟ್ಟಿಕೊಡುತ್ತವೆ’.  ಹೃದಯದೊಳಗೆ ಹೆಣ್ಣು ಬೈತಿಡುತ್ತ ಬಂದ ಇಂಥ ನೂರಾರು ಮೂಕ ಮರ್ಮರಗಳಿಗೆ ವೈದೇಹಿ ಬಾಯಿಕೊಡುವಂತೆ ಬರೆಯುವಾಗಲೇ ತನ್ನ ವಿಶಿಷ್ಟ ಸ್ಥಿತಿಯನ್ನು ಹೆಣ್ಣೇ ಅರಿವಿಗೆ ತಂದುಕೊಳ್ಳುವಂತೆಯೂ ಮಾಡುತ್ತಾರೆ.  ಈ ಆತ್ಮ ನಿರೀಕ್ಷಣೆಯ ಮೂಲಕವಾಗಿ ಅವರ ಹೆಣ್ಣುಗಳು ‘ಒಂದು ಮಾದರಿ’ಯ ಪ್ರತಿಬಿಂಬವಾಗದೆ, ಅನೇಕ ಬಿಡಿ ಬಿಡಿ ಮಾನವ ವ್ಯಕ್ತಿಗಳಾಗಿ ಬೆಳೆದು ಬಿಡುತ್ತಾರೆ.

‘ಅಕ್ಕು’ ಮತ್ತು ‘ಚಂದಲೆ’ ಕಥೆಗಳು ಈ ಸಮಾಜದಲ್ಲಿನ ಮಾನವ ಸಂಬಂಧಗಳ, ಲೈಂಗಿಕ ಸಂಬಂಧಗಳ ಗೋಜಲುಗಳ ಬಗ್ಗೆ, ಮೌಲ್ಯಗಳ ಬಗ್ಗೆ, ಸಮಾಜದ ‘ಸ್ವಸ್ಥತೆ’ಯ ಬಗ್ಗೆ, ಅದರ ಕ್ರೌರ್ಯ, ಅಮಾನವೀಯತೆಗಳ ಬಗ್ಗೆ ಲೇಖಕಿಯ ವಿಮರ್ಶೆಯೂ ಆಗುವಂತೆ ಪಾತ್ರ ನಿರೂಪಣೆಯಿದೆ.  ತಾಂತ್ರಿಕವಾಗಿ ಪ್ರಯೋಗಶೀಲತೆಯೇ ಎದ್ದು ಕಾಣುವ ಸಂಕಲನ ‘ಗೋಲ’.

‘ಅಸ್ಪ್ರಶ್ಯರು’ ಕಾದಂಬರಿಯಲ್ಲಿ ಶ್ರೇಣೀಕೃತ ಸಮಾಜದೊಳಗಿನ ನೂರಾರು ಬಗೆಯ ಅಸ್ಪೃಶ್ಯತೆಯ ನೆಲೆಗಳನ್ನು, ಮುಖ್ಯವಾಗಿ ಲಿಂಗಭೇದದ ಫಲವಾದ ಹೆಣ್ಣು-ಗಂಡುಗಳ ಅಸ್ಪೃಶ್ಯತೆಯ ಮೂಲಕ ಶೋಧಿಸುವ ಮಹತ್ವಾಕಾಂಕ್ಷೆ ವೈದೇಹಿಯವರ ಕಾದಂಬರಿಯಲ್ಲಿದೆ.  ಬಹಿರಂಗವಾಗಿ ಗಾಂಧೀವಾದದ ಅಸ್ಪೃಶ್ಯತಾ ನಿವಾರಣಾ ಚಳವಳಿಯಲ್ಲಿ ಪಾಲ್ಗೊಂಡವರು, ತಮ್ಮದೇ ಮನೆಯೊಳಗಿನ ಸ್ಪೃಶ್ಯ-ಅಸ್ಪೃಶ್ಯ ವಲಯಗಳನ್ನು ಸಾಂಪ್ರದಾಯಕವಾಗಿ ಕಾಪಾಡಿಕೊಂಡಿರುವುದು ಒಂದು ಮುಖ, ಬಹಿರಂಗವಾಗಿ ಜಾತಿ ವಿನಾಶದ ಸಮಾಜ ಸುಧಾರಣೆ ವಿಚಾರಕ್ಕೆ ಪ್ರಚಾರ ಕೊಡುವವರು, ತಾವೇ ಕೈ ಹಿಡಿದವರ ಕೆಳ ಸಾಂಸ್ಕೃತಿಕ ಲಕ್ಷಣಗಳಿಗೆ ಒಗ್ಗಿಕೊಳ್ಳಲಾರದೆ ತೊಳಲಾಡುವುದು ಇನ್ನೊಂದು ಮುಖ.  ಮುಟ್ಟು, ಹೆರಿಗೆ, ಸಾವಿನ ಸೂತಕಗಳ ಸಾಮಾಜಿಕ ಆಚರಣೆಗಳು ಕಟ್ಟಿ ಬೆಳೆಸುವ ಅಸ್ಪೃಶ್ಯತೆಯು ಒಂದು ನೆಲೆಯದಾದರೆ, ಹೆಣ್ಣಿನ ಮನೆಯಂಗಳಕ್ಕೇ ಸೀಮಿತವಾದ ಲೋಕಕ್ಕೂ ಹೊರ ಬದುಕಿಗೆ ಒಡ್ಡಿದ ಗಂಡಿನ ಪ್ರಪಂಚಕ್ಕೂ ಇರುವ ಪ್ರಬಲವಾದ ಅಸ್ಪೃಶ್ಯತೆಯ ಕೋಟೆ ಇನ್ನೊಂದು ನೆಲೆಯದು.  ಈ ಅಸ್ಪೃಶ್ಯತೆಯ ಕೋಟೆಗೆ ಲಗ್ಗೆಯಿಡುವ, ಅದನ್ನು ಒಡೆಯುವ ವಿಚಾರ, ಕ್ರಿಯೆಗಳನ್ನು ಹೊಸ ಪೀಳಿಗೆಯ ತರುಣಿ- ತರುಣರಲ್ಲೂ, ಅಂತಃಕರಣ ಪರಿವರ್ತನೆಯನ್ನು ಹಳೆಯ ಪೀಳಿಗೆಯವರಿಂದಲೂ ನಿರೀಕ್ಷಿಸುತ್ತದೆ ಈ ಕಾದಂಬರಿ.

‘ಬಿಂದು ಬಿಂದಿಗೆ’ಯು ಹೆಣ್ಣು ಮಕ್ಕಳ ಸಾಂಪ್ರದಾಯಿಕ ಹಾಡಿನ ಗುಣ, ಕಲಾತ್ಮಕತೆಗಳೆರಡನ್ನೂ ಬೆಸೆಯುತ್ತ ಹೊಸ ವಿಚಾರಗಳನ್ನು ಹೇಳಲು ಯತ್ನಿಸುವ ಕವಿತೆಗಳ ಸಂಕಲನವಾಗಿದೆ.

ಲಂಕೇಶ್ ಪತ್ರಿಕೆಯ ಅಂಕಣಗಾರರಾಗಿಯೂ , ಬೇರೆ ಬೇರೆ ಸಂದರ್ಭಗಳಲ್ಲಿ ವೈದೇಹಿಯವರು ಬರೆದಂತ ಚಿಂತನೆ, ಲಲಿತ ಪ್ರಬಂಧ, ವಿಮರ್ಶೆ, ವಿಚಾರ ಲಹರಿಗಳೆಲ್ಲ ಒಗ್ಗೂಡಿ ‘ಮಲ್ಲಿನಾಥನ ಧ್ಯಾನ’ವಾಗಿದೆ.  ಒಂದರ್ಥದಲ್ಲಿ ಹೇಳುವುದಾದರೆ ಸ್ತ್ರೀತ್ವ-ಪುರುಷತ್ವಗಳ ಈ ಲೋಕದ ರೂಢಿಗತ ಭಿನ್ನತೆಯ ಅತಿರೇಖಗಳನ್ನು ಮೀರಬಲ್ಲಂಥ ನೆಲೆಯೊಂದರ ಧ್ಯಾನವೇ, ವೈದೇಹಿಯವರ ಒಟ್ಟು ಬರಹಗಳನ್ನು ಆವರಿಸುತ್ತದೆ ಎಂದು ಹೇಳಿದರೆ ಉತ್ರ್ಪೇಕ್ಷೆಯಲ್ಲ.

ಕ್ರೌಂಚ ಪಕ್ಶಿಗಳು ಕಥಾಸಂಕಲನ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತವಾಗಿ ಪ್ರಸಿದ್ಧವಾದ ಕೃತಿ.  ಕ್ರೌಂಚ ಪಕ್ಷಿಗಳು – ಒಂದು ಸತ್ತು, ಇನ್ನೊಂದು ಬದುಕಿರದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೇನೋ? ಹೌದಲ್ಲ, ವಾಲ್ಮೀಕಿಗೆ ಪರಿತಾಪ ಉಂಟಾದದ್ದೇ ಒಂದು ಹಕ್ಕಿಯ ಸಾವಿನಿಂದ ಮತ್ತು ಇನ್ನೊಂದರ ಒದ್ದಾಟದಿಂದ. ಇದು ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲನದಲ್ಲಿ ಮೂಡಿಬರುವ ಅದೇ ಹೆಸರಿನ ಕಥೆಯಲ್ಲಿ ಮೂಡಿಬರುವ ಚಿಂತನೆ.  ಕ್ರೌಂಚ ಪಕ್ಷಿಗಳು ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನ ಕ್ರಮದ ಒಂದು ಆದಿ ಪ್ರತಿಮೆ (ಇದು ಈ ಪುಸ್ತಕದ ಬೆನ್ನುಡಿಯ ಬರಹ)

‘ಮರೆವು’ ಎಂಬ ಕಥೆಯಲ್ಲಿ ದೀರ್ಘಕಾಲ ಸಾಂಸಾರಿಕ ಬದುಕನ್ನು ನಡೆಸಿ, ಬದುಕಿನ ಅನುಭವಗಳ ಮೂಲಕವೇ ಮಾಗಿ ಪಕ್ವವಾದ ಇಬ್ಬರು ವ್ಯಕ್ತಿಗಳು ತಮ್ಮ ಬದುಕಿನ ಮುಸ್ಸಂಜೆಯಲ್ಲಿ ಕುಳಿತು ಧ್ಯಾನಿಸುತ್ತಾರೆ.  “ಒಟ್ಟಿಗೇ ಬದುಕಿ ಬದುಕಿ ಕಡೆಗೆ ಹೆಣ್ಣು ಗಂಡು ಎಂಬ ಮಾಯೆಯೇ ಪರಸ್ಪರರಲ್ಲಿ ಮಾಯವಾಗಿ ಕೇವಲ ಜೀವಿಗಳಾಗಿಬಿಡುತ್ತೇವೆಯೇ?” ಬದುಕನ್ನು ಬದುಕುತ್ತಲೇ ಸಾಗುವ ಈ ಪ್ರಕ್ರಿಯೆಯನ್ನು ‘ಪಕ್ವತೆಯತ್ತಲೇ ನಡೆಯಬೇಕಾದ  ಒಂದು ವಿಕಾಸದ ಕ್ರಮವೆಂದು ಭಾವಿಸಿ, ನಂಬಿ ಬದುಕಿದ ನಮ್ಮ ಪುರಾತನರ ಶ್ರದ್ಧೆಯೊಂದನ್ನು ಹೊಸ ಕಾಲದಲ್ಲಿ ಕುಂದಾಪುರದ ಜನಗಳ ಆಡುಮಾತಿನಲ್ಲಿ ಮತ್ತೆ ಕಟ್ಟಿಕೊಡುತ್ತಾರೆ ನಮ್ಮ ವೈದೇಹಿ ಎಂದು ಭಾಸವಾಗುವಂತೆ ಅವರ ಬರಹಲೋಕವಿದೆ.

(ಆಧಾರ: ಡಾ. ಬಿ. ಎನ್. ಸುಮಿತ್ರಾಬಾಯಿಯವರು ಬರೆದಿರುವ ಸಾಲುದೀಪಗಳು ಕೃತಿಯಲ್ಲಿನ ವೈದೇಹಿ ಅವರ ಬರಹದ ಜೊತೆಗೆ ಇತ್ತೀಚಿನ ವೆಬ್ ಅಂತರ್ಜಾಲದಲ್ಲಿನ ಒಂದಷ್ಟು ಮಾಹಿತಿಯನ್ನು ಈ ಲೇಖನಕ್ಕೆ ಆಧಾರವಗಿಸಿಕೊಂಡಿದ್ದೇನೆ).

Tag: Vaidehi

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)