ಪ್ರತ್ಯೇಕ ರಾಜ್ಯದ ಧ್ವನಿ ಎತ್ತುತ್ತಿರುವ ಸಚಿವ ಉಮೇಶ ಕತ್ತಿ ಹೇಳಿಕೆಗೆ ಕಟುವಾಗಿ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು

ಪ್ರತ್ಯೇಕ ರಾಜ್ಯದ ಧ್ವನಿ ಎತ್ತುತ್ತಿರುವ ಸಚಿವ ಉಮೇಶ ಕತ್ತಿ ಹೇಳಿಕೆಗೆ ಕಟುವಾಗಿ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು

DSC_1316

ಬೆಂಗಳೂರು: ರಾಜ್ಯ ಪ್ರತ್ಯೇಕತೆ ಕುರಿತು ಮಾತನಾಡಿ ಕನ್ನಡಿಗರ ನಡುವೆ ಗೊಂದಲ ಸೃಷ್ಟಿಸಿದ ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಅವರ ಹೇಳಿಕೆಯನ್ನು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕಟುವಾಗಿ ಖಂಡಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸುವ ಕುರಿತು ಸ್ವಾರ್ಥ ಹಾಗೂ ಸ್ವಹಿತಾಸಕ್ತಿ ಹಿನ್ನೆಲೆಯಲ್ಲಿ ಸಚಿವ ಉಮೇಶ ಕತ್ತಿಯವರು ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಇವರ ಪ್ರಚೋದನಾಕಾರಿ ಹೇಳಿಕೆಯಿಂದ ಕನ್ನಡಿಗರಲ್ಲಿ ಗೊಂದಲ ಉಂಟಾಗುತ್ತಿದೆ. ರಾಜ್ಯದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲು ಕಾರಣವಾಗುತ್ತಿದೆ. ಸರಕಾರ ಅವರಿಗೆ ಮುಖ್ಯ ಖಾತೆಯಾದ ಅರಣ್ಯ ಇಲಾಖೆಯನ್ನು ನೀಡಿದೆ. ಅದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಬದಲು ಕನ್ನಡಿಗರಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವ ಇವರ ಹೇಳಿಕೆಗಳು ಖಂಡನೀಯ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡ ನಾಡಿನ ಏಕೀಕರಣ ಸಂದರ್ಭದಲ್ಲಿ ಕನ್ನಡ ನೆಲಕ್ಕಾಗಿ ಅನೇಕ ಮಹನೀಯರು ಹೋರಾಟದಲ್ಲಿ ಪಾಲ್ಗೊಂಡು ನಾಡು ಒಂದಾಗಲು ಶ್ರಮಿಸಿದ್ದಾರೆ. ಅವರ ಹೋರಾಟ, ತ್ಯಾಗ, ಶ್ರಮದ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಹೀಗೆ ಒಂದಾಗಿರುವ ಕನ್ನಡ ನೆಲ ಒಡೆಯುವ ಮಾತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡಿಗರೇ ಹೆಚ್ಚಾಗಿರುವ ಇನ್ನೂ ಹಲವು ಪ್ರದೇಶಗಳು ನೆರೆಯ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಅವುಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಇಚ್ಛಾಶಕ್ತಿಯನ್ನು ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವ ಕತ್ತಿಯವರು ಪ್ರಕಟಿಸಬೇಕಿತ್ತು. ಇವರ ಸ್ವಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಅಟ್ಟಹಾಸವನ್ನು ಮಟ್ಟಹಾಕುವ ಧ್ವನಿ ಎತ್ತುವ ಬದಲು ಪ್ರತ್ಯೇಕತೆಯ ಸ್ವರ ಎಬ್ಬಿಸುತ್ತಿದ್ದಾರೆ. “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದುʼ ಎಂಬ ಸದಾಶಯದ ನುಡಿಯ ವಿಭಜನೆಗಾಗಿ ಕತ್ತಿ ಮಸೆಯುತ್ತ ಕಿಡಿ ಹಚ್ಚುವ ಕತ್ತಿಯವರ ನಡೆ ಸರಿಯಲ್ಲ.

ಅಂದು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಆಗ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ 25-12-1924 ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಇದರೊಂದಿಗೆ ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು. ಆದರೂ ಛಲಬಿಡದ ತ್ರಿವಿಕ್ರಮನಂತೆ ಹೋರಾಟ ನಡೆಸಿ ಕರ್ನಾಟಕವನ್ನು ಕಟ್ಟಿದ ಪರಿಯನ್ನು ಉಮೇಶ ಕತ್ತಿಯವರು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಅಪಸ್ವರದ ರಾಗದಿಂದಲೇ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತಿರುವ ಉಮೇಶ ಕತ್ತಿಯವರು ಕನ್ನಡಿಗರ ಹಾಗೂ ಅಖಂಡ ಕರ್ನಾಟಕದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಉಮೇಶ ಕತ್ತಿಯವರ ಹೇಳಿಕೆಯನ್ನು ಸಮಸ್ತ ಕನ್ನಡ ಜನತೆ ಬೆಂಬಲಿಸಬಾರದು, ನಿರ್ಲಕ್ಷಿಸಬಾರದು. ಮುಖ್ಯಮಂತ್ರಿಗಳು ಉಮೇಶ ಕತ್ತಿಯವರಿಗೆ, ಮಾತಿನಲ್ಲಿ ಹಿಡಿತ ಇಟ್ಟುಕೊಂಡು ಎಚ್ಚರದಲ್ಲಿರುವಂತೆ ಸೂಚಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತಿದೆ.

ಕನ್ನಡ ನಾಡು-ನುಡಿ ಕಟ್ಟುವ ನಿರಂತರ ಕಾಯಕದಲ್ಲಿ ಹಾಗೂ ಅದರ ಅಖಂಡತೆ ಕಾಪಾಡುವಲ್ಲಿ ೧೦೭ ವರ್ಷಗಳ ಇತಿಹಾಸ ಹೊಂದಿರುವ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ಬದ್ಧವಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Press Note_ಕತ್ತಿ ಹೇಳಿಕೆ ಖಂಡನೆ-28-06-2022.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)