ಕೇಂದ್ರದ ಕನ್ನಡ ವಿರೋಧಿ ನೀತಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಸಮಾಧಾನ: ಕನ್ನಡಿಗರಿಗಾಗಿ ಬೀದಿಗಿಳಿಯುವುದು ಅನಿವಾರ್ಯ-ನಾಡೋಜ ಡಾ. ಮಹೇಶ ಜೋಶಿ

ಕೇಂದ್ರದ ಕನ್ನಡ ವಿರೋಧಿ ನೀತಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಸಮಾಧಾನ: ಕನ್ನಡಿಗರಿಗಾಗಿ ಬೀದಿಗಿಳಿಯುವುದು ಅನಿವಾರ್ಯ-ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್‌ ಸನ್ಮಾನ ವೆಬ್‌ಸೈಟ್‌ನಲ್ಲಿ ಕನ್ನಡವನ್ನು ಕಡೆಗಣಿಸಿದ ಕೆಂದ್ರ ಸರಕಾರದ ಇಬ್ಬಗೆಯ ನೀತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಟುವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸನ್ಮಾನ ಯೋಜನೆಯಲ್ಲಿ ರಾಜ್ಯದ ೫೦ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಹೀಗಿರುವಾಗ ದೇಶದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್‌ ಸನ್ಮಾನ ಯೋಜನೆಯ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಕೇಂದ್ರ ಸರಕಾರ ಗಧಾಪ್ರಹಾರ ಮಾಡಿದಂತೆ. ವೆಬ್‌ಸೈಟ್‌ನಲ್ಲಿ ಇಂಗ್ಲಿಷ್, ಆಸ್ಸಾಮಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಭಾಷೆಗಳಿಗೆ ಮಾನ್ಯತೆ ನೀಡಿದ್ದಾರೆ. ಆದರೆ ಕನ್ನಡ ಭಾಷೆಗೆ ಮಾತ್ರ ಅನ್ಯಾಯ ಮಾಡಿರುವುದು ಸ್ವಷ್ಟವಾಗಿದೆ.

ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿ ಅತೀ ಪ್ರಾಚೀನ ಹಾಗೂ ಶಾಸ್ರೀಯ ಸ್ಥಾನ ಮಾನ ಹೊಂದಿದ ಕನ್ನಡಕ್ಕೆ ಮನ್ನಣೆ ನೀಡದಿರುವುದು ಕೇಂದ್ರ ಸರಕಾರದ ತಾರತಮ್ಯ ಧೋರಣೆ ಎದ್ದು ತೋರುತ್ತದೆ. ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಬಗ್ಗೆ ಅಸಡ್ಡೆ ತೋರುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಸಾಕಷ್ಟು ಬಾರಿ ನಮ್ಮ ನಾಡಿನ ಬಗ್ಗೆ ಅಸಡ್ಡೆ ತೋರುತ್ತಲೇ ಬಂದಿರುವ ಕೇಂದ್ರ ಸರಕಾರ ಹಿಂದೆ ಅತಿವೃಷ್ಟಿ ಅನಾವೃಷ್ಟಿಯ ಪರಿಹಾರ ನೀಡುವಲ್ಲಿಯೂ ರಾಜ್ಯಕ್ಕೆ ಬೇಧಭಾವ ಮಾಡಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ಕೇಂದ್ರ ಸರಕಾರದ ಇಬ್ಬಗೆಯ ನೀತಿಯನ್ನು ಟೀಕಿಸಿದ್ದಾರೆ..

ನಮ್ಮ ಭಾಷೆ, ನಮ್ಮ ನೆಲ, ನಮ್ಮ ಜನರನ್ನು ಕೇಂದ್ರವು ಸದಾ ತೃತೀಯ ಸ್ಥಾನದಲ್ಲಿಯೇ ಇಟ್ಟು ನೋಡುವ ಧೋರಣೆ ಮುಂದುವರೆಸಿಕೊಂಡು ಬರುತ್ತಿದೆ. ಪಿ.ಎಮ್‌ ಕಿಸಾನ್‌ ವೆಬ್‌ಸೈಟ್‌ ಮಾಹಿತಿ ಪ್ರಕಾರ ಕೇರಳದಲ್ಲಿ ೩೭ ಲಕ್ಷ, ಆಸ್ಸಾಂನಲ್ಲಿ ೩೧ ಲಕ್ಷ ಫಲಾನುಭವಿಗಳಿದ್ದರೆ ಕರ್ನಾಟಕದಲ್ಲಿ ೫೦ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಇದ್ದಾರೆ. ಈ ಫಲಾನುಭವಿಗಳಿಗೆ ಕೇಂದ್ರ ಸರಕಾರ ವಾರ್ಷಿಕವಾಗಿ ತಲಾ ೩ ಕಂತುಗಳಲ್ಲಿ ೬ ಸಾವಿರ ರೂ. ಪಾವತಿ ಮಾಡುತ್ತದೆ.

ಈ ಮಾಹಿತಿಯನ್ನು ದೇಶದ ಆಯಾ ಭಾಗದ ರೈತರಿಗೆ ಸ್ಥಳೀಯ ಭಾಷೆಗಳಲ್ಲಿ ಅರ್ಥವಾಗುವಂತೆ ವೆಬ್‌ಸೈಟ್‌ನಲ್ಲಿ ಹಾಕಿದ ಕೇಂದ್ರ ಸರಕಾರ ಕನ್ನಡಿಗ ರೈತರಿಗೆ ಅರ್ಥವಾಗಿಸುವ ನಿಟ್ಟಿನಲ್ಲಿ ಕನ್ನಡ ಬಳಕೆ ಮಾಡಿಲ್ಲ. ಈ ಬಗ್ಗೆ ರಾಜ್ಯ ಕೃಷಿ ಇಲಾಖೆ ಸಹ ಮೌನವಾಗಿರುವುದು ಕನ್ನಡಿಗರ ದುರಂತವೇ ಸರಿ.

ಕೇಂದ್ರ ಸರಕಾರ ತನ್ನ ಪಿ.ಎಮ್‌ ಕಿಸಾನ್‌ ವಿಕಾಸ್‌ ವೆಬ್‌ಸೈಟ್‌ನಲ್ಲಿ ತಕ್ಷಣದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಬೇಕು. ಕೇಂದ್ರ ಈ ಎಂದಿನಂತೆ ನಿರ್ಲಕ್ಷ್ಯ ತೋರಿದರೆ ಕನ್ನಡ ಸಾಹಿತ್ಯ ಪರಿಷತ್ತು ಕೈ ಕಟ್ಟಿ ಕುಳಿತು ಕೊಳ್ಳಲು ಸಾಧ್ಯವಿಲ್ಲ. ಸದ್ಯದಲ್ಲಿಯೇ ನಾಡಿನ ಸಾಹಿತಿಗಳು , ಚಿಂತಕರು, ಹೋರಾಟಗಾರರೊಂದಿಗೆ ಚರ್ಚೆ ನಡೆಸಲಾಗುವುದು. ಸಮಸ್ತ ಕನ್ನಡಿಗರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವುದರೊಂದಿಗೆ ಕಾನೂನು ಪರಿಣಿತರ ಮಾರ್ಗದರ್ಶನದಲ್ಲಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗುವುದು ಎಂದು ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.

ಶ್ರೀನಾಥ್‌ ಜೆ
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳುರು
press reliess-KASAPA_ಕಿಸಾನ್_ ಸನ್ಮಾನ್_ ವೆಬ್_ನಲ್ಲಿ ಕನ್ನಡ ಕಡೆಗಣನೆ-05-07-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)