ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದ ಕೆನಡಾ ಸಂಸದರ ಕುಟುಂಬ

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದ ಕೆನಡಾ ಸಂಸದರ ಕುಟುಂಬ. ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಭಾಷೆಗಿದೆ: ಶ್ರೀ ಚಂದ್ರ ಆರ್ಯ

Chandra Arya in KASAPA

ಬೆಂಗಳೂರು: “ಜಾತಿ, ಮತ, ಪಂಥ, ಧರ್ಮಗಳ ಕಟ್ಟುಗಳನ್ನು ಮೀರಿ ಏಕಸೂತ್ರದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಮಾತೃಭಾಷೆಗೆ ಇದೆ. ಈ ಭಾಷಾಬಂಧನಕ್ಕೆ ಪ್ರಪಂಚದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದೆ” ಎಂದು ಹೆಮ್ಮೆಯ ಕನ್ನಡಿಗ, ಕೆನಡಾ ಸಂಸದ ಶ್ರೀ ಚಂದ್ರ ಆರ್ಯ ಹೇಳಿದರು.

ಇಂದು ಬುಧವಾರ ಶ್ರೀ ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ, ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು. ಅವರ ಜೊತೆ ಅವರ ಶ್ರೀಮತಿ ಸಂಗೀತಾ ಗಾಯತ್ರಿ, ಸಹೋದರ ಶ್ರೀನಿವಾಸ್‌ ಸಹ ಸದಸ್ಯತ್ವ ಪಡೆದುಕೊಂಡರು.

ಪಂಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಚಂದ್ರ ಆರ್ಯರಿಗೆ ಸಂಪೂರ್ಣ ಮಾಹಿತಿ ನೀಡಿದರು. ನಂತರ ಮಾತನಾಡಿದ ಚಂದ್ರ ಆರ್ಯ ಅವರು, “ಕನ್ನಡ ಸಾಹಿತ್ಯ ಪರಿಷತ್ತು ಕೆಲ ಚಟುವಟಿಕೆಗಳಿಗೆ, ಕೆಲವರಿಗೆ ಮಾತ್ರ ಸೀಮಿತವಾಗದೆ ಎಲ್ಲ ಕನ್ನಡಿಗರನ್ನೂ ಒಳಗೊಳ್ಳುತ್ತಿರುವುದು ಸಂತಸದ ಸಂಗತಿ. ಇತ್ತೀಚಿನ ದಿನಗಳಲ್ಲಿ ನಾಡೋಜ ಡಾ. ಮಹೇಶ ಜೋಶಿ ಅವರ ನೇತ್ರತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಜನಸಾಮಾನ್ಯರ ಪರಿಷತ್ತಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಚಟುವಟಿಕೆಗಳು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗಟ್ಟಿಗೊಳಿಸುವಂಥದ್ದು” ಎಂದರು.

ನನ್ನ ತಂದೆಯವರು ತಮ್ಮ ಸರಕಾರಿ ಸೇವೆಯಲ್ಲಿರುವಾಗ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವಲ್ಲಿ ಕಾರ್ಯಯೋಜನೆಯನ್ನು ಕೈಗೊಂಡಿದ್ದರು” ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, “ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದ ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದು ಹಾಗೂ ಕೆನಡಾದಲ್ಲಿ ಪರಿಷತ್ತಿನ ಘಟಕದ ಮುಂದಾಳತ್ವವನ್ನು ತೆಗೆದುಕೊಂಡಿರುವುದು ಶ್ಲಾಘನೀಯ. ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಹೆಮ್ಮೆಯ ಕನ್ನಡಿಗ ಚಂದ್ರ ಆರ್ಯ ಅವರ ಕನ್ನಡದ ಅಸ್ಮಿತೆಗೆ ಪರಿಷತ್ತು ಹೆಮ್ಮೆ ವ್ಯಕ್ತ ಪಡಿಸುತ್ತಿದೆ ಎಂದು ಹೇಳಿದರು.

ಪರಿಷತ್ತಿನ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಚಂದ್ರ ಆರ್ಯ ಅವರು ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಶ್ರೀ ಬಿ.ಎಮ್‌. ಪಟೇಲ್‌ಪಾಂಡು, ಕನ್ನಡಪರ ಹೋರಟಗಾರ ಸತೀಶ ಗೌಡ ಅವರು ಉಪಸ್ಥಿತರಿದ್ದರು.

*ಶ್ರೀನಾಥ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
KASAPA_ಚಂದ್ರ ಆರ್ಯ ಕಸಾಪ ಭೇಟಿ_13-07-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)