ಕರ್ನಾಟಕ ಗೋವಾ ನಡುವಿನ ಸಂಬಂಧ ಅನನ್ಯ: ಗೋವಾ ವಿಮೋಚನೆಯಲ್ಲಿ ಕನ್ನಡಿಗರ ಪಾತ್ರ ಸ್ಮರಣಿಯ- ನಾಡೋಜ ಡಾ. ಮಹೇಶ ಜೋಶಿ

ಕರ್ನಾಟಕ ಗೋವಾ ನಡುವಿನ ಸಂಬಂಧ ಅನನ್ಯ: ಗೋವಾ ವಿಮೋಚನೆಯಲ್ಲಿ ಕನ್ನಡಿಗರ ಪಾತ್ರ ಸ್ಮರಣಿಯ- ನಾಡೋಜ ಡಾ. ಮಹೇಶ ಜೋಶಿ

KASAPA- ಗೋವಾದಲ್ಲಿ ಕಸಾಪ ಪದಾಧಿಕಾರಿಗಳ ಪದಗ್ರಹಣ- 25-07-2022

ಭಾವಚಿತ್ರ – ಗೋವಾದ ಪಣಜಿಯಲ್ಲಿ ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪಣಜಿ: ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಐತಿಹಾಸಿಕ ಬಾಂಧವ್ಯ ಬಹಳ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ಗೋವಾ ರಾಜ್ಯ ವಿಮೋಚನೆಯ ಸಂದರ್ಭದಲ್ಲಿ ಕನ್ನಡಿಗರ ತ್ಯಾಗ, ಬಲಿದಾನವನ್ನು ಗೋವನ್ನರು ಇಂದಿಗೂ ಗೌರವಿಸುತ್ತಿದ್ದಾರೆ. ಉಭಯ ರಾಜ್ಯಗಳ ನಡುವೆ ಶೈಕ್ಷಣಿಕ ಬಾಂಧವ್ಯಕ್ಕೆ ಧಾರವಾಡ ಹಾಗೂ ಬೆಳಗಾವಿ ಸಾಕ್ಷಿಯಾಗಿತ್ತು. ಗೋವಾದ ಮೊದಲ ಮುಖ್ಯಮಂತ್ರಿ ಶಶಿಕಲಾ ಕಾಕೋಡಕರ್‌ ಹಾಗೂ ಭಾರತ ದೇಶದ ಮೊದಲ ವಿದೆಶಾಂಗ ಮಂತ್ರಿ ಗೋವಾ ಮೂಲದ ಎಡ್ವರ್ಡ್‌ ಫೇಲಿರೋ ಇಬ್ಬರೂ ಧಾರವಾಡದಲ್ಲಿ ಕಲಿತವರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗೋವಾದ ಅರ್ನಾಂಡೊ ಮೆನೆಜಿಸ್‌ ಪ್ರಾಚಾರ್ಯರಾಗಿ ಜನಮೆಚ್ಚುಗೆಯ ಕೆಲಸ ಮಾಡಿದ್ದರು. ಅದರ ಪ್ರತೀಕವಾಗಿ ಇಂದಿಗೂ ಅವರ ಹೆಸರಿನಲ್ಲಿ ಧಾರವಾಡದಲ್ಲಿ ವೃತ್ತವೊಂದನ್ನು ರಚಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಗೋವಾ ಮತ್ತು ಕರ್ನಾಟಕದ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡರು.

ಗೋವಾದ ಪಣಜಿಯಲ್ಲಿ ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ, ಕನ್ನಡ ಸಂಘಗಳ ಒಕ್ಕೂಟ, ಮನೋಹರ ಗ್ರಂಥಮಾಲೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ʻಅಂಬಿಕಾತನಯದತ್ತʼ ಕವಿ-ಕಾವ್ಯ-ಕಲ್ಪನೆ ವಿಚಾರ ಸಂಕಿರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಸೌಹಾರ್ದಯುತ ಬಾಂಧವ್ಯ ಬೆಸೆಯಲು ಮುಂದಾಗಲಿದೆ. ಪರಿಷತ್ತು ರಾಜಕೀಯ ಹೊರತಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಪರಂಪರೆಯೊಂದಿಗೆ ಮುನ್ನಡೆಯಲಿದೆ. ಗೋವಾ ರಾಜ್ಯದಲ್ಲಿ ಪ್ರತ್ಯೇಕ ಎರಡು ಬಾರಿ ನನಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಕಾರ್ಮಿಕ ಆಯುಕ್ತನಾಗಿ ಇಲ್ಲಿ ಸೇವೆ ಸಲ್ಲಿಸಿದ್ದೆ. ಎರಡನೆಯ ಬಾರಿ ದೂರದರ್ಶನದ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಆಗ ಕೊಂಕಣಿ, ಮರಾಠಿ ಹಾಗೂ ಪೋರ್ಚುಗಿಸ್‌ ಭಾಷೆಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಾಷಾ ಸೌಹಾರ್ದವನ್ನು ಮೂಡಿಸುವಲ್ಲಿ ಕೆಲಸ ಮಾಡಿದ್ದೆ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಭಾಷೆ ಅಡ್ಡಿಯಾಗಲಾರದು ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಹಿಂದಿನಿಂದಲೂ ಗೋವಾ ಹಾಗೂ ಕರ್ನಾಟಕದ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡು ಬಂದಿದೆ. ಪರಸ್ಪರ ಎರಡು ರಾಜ್ಯಗಳು ಒಂದಕ್ಕೊಂದು ಜತೆಯಾಗಿ ಸಹೋದರ ಬಾಂಧವ್ಯ ಹೊಂದಿವೆ. ಉಭಯ ರಾಜ್ಯಗಳ ನಡುವೆ ಪರಸ್ಪರ ಅವಲಂಬನೆ ಬೆಳೆದುಕೊಂಡಿದೆ. ಕನ್ನಡದ ನೆಲದಿಂದ ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಗೋವಾಕ್ಕೆ ಪೂರೈಸಲಾಗುತ್ತದೆ. ಕೊಂಕಣಿ ನೆಲದಲ್ಲಿ ಅದೆಷ್ಟೋ ಕನ್ನಡದ ಕಾರ್ಮಿಕರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಗೋವನ್ನರು ಕನ್ನಡಿಗರಿಗೆ ನಿಸ್ವಾರ್ಥಭಾವದಿಂದ ಸ್ವಾಗತಿಸಿ ತಮ್ಮ ನೆಲದಲ್ಲಿ ದುಡಿಯಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಗೋವಾ ಮತ್ತು ಕರ್ನಾಟಕ ಪರಸ್ಪರ ಅವಲಂಬಿಸಿಕೊಂಡಿರುವ ರಾಜ್ಯಗಳು ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಗೋವಾದಲ್ಲಿ ಕನ್ನಡ ಭವನ:

ಗೋವಾ ನೆಲದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕಿದೆ. ಗೋವಾ ಕನ್ನಡ ಭವನ ನಿರ್ಮಿಸಲು ಕರ್ನಾಟಕ ಸರಕಾರ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದೆ. ಇನ್ನೂ ಗೋವಾ ಸರಕಾರ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡಬೇಕೆಂದು ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಗೋವಾದ ಜನ ಪ್ರತಿನಿಧಿಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಚರ್ಚೆ ನಡೆಸಿದೆ. ಆದಷ್ಟು ಬೇಗ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರಕಾರ ಸ್ಪಂದಿಸುವಂತೆ ಮನವಿ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ. ಡಾ. ಮಹೇಶ ಜೋಶಿ ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಗೋವಾ ರಾಜ್ಯದಲ್ಲಿ ನೆಲೆಸಿರುವ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳಬೇಕು. ಈ ಗೋವಾ ನೆಲದಲ್ಲಿ ಕನ್ನಡ ಭವನ ಆಗಬೇಕು. ಗೋವಾದಲ್ಲಿ ಇಂದು ಪ್ರಥಮ ಪದಗ್ರಹಣ ಸಮಾರಂಭ ನಡೆಯುತ್ತಿದೆ. ಗೋವೆಯ ಮೂಲನಿವಾಸಿಗಳನ್ನು ಹೊರತು ಪಡಿಸಿದರೆ ಇಲ್ಲಿ ಕನ್ನಡಿಗರೆ ಹೆಚ್ಚಾಗಿದ್ದಾರೆ. ಯಾವುದೇ ಕಾರಣಕ್ಕೂ ಉಭಯ ರಾಜ್ಯಗಳ ನಡುವೆ ಯಾವುದೇ ಬಿನ್ನಾಭಿಪ್ರಾಯಗಳು ಇರಬಾರುದು. ಈ ಹಿನ್ನೆಲೆಯಲ್ಲಿ ಈಗಾಲೇ ಕನ್ನಡ ಸಾಹಿತ್ಯ ಪರಿಷತ್ತು ಉಭಯ ರಾಜ್ಯ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದರು.

ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ ಬೆಳಗಾವಿ ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಇನ್ನು ಒಂದು ವರ್ಷದೊಳಗೆ ಗೋವಾ ನೆಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಬೇಕು. ಇಲ್ಲಿನ ಎಲ್ಲ ಕನ್ನಡಿಗರು ಮನಸ್ಸು ಮಾಡಿದರೆ ಕನ್ನಡ ಭವನ ನಿರ್ಮಾಣ ಕಷ್ಟವಲ್ಲ. ಮುಂದೆ ಕನ್ನಡ ಭವನ ತನ್ನ ಸ್ವಂತ ಜಾಗದಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇನ್ನೊಂದು ತಿಂಗಳೊಳಗೆ ಕನ್ನಡ ಭವನ ನಿರ್ಮಾಣಕ್ಕಾಗಿ ಬೇಕಾದ ಜಾಗ ಖರೀದಿಯಾಗಲೇಬೇಕು. ನನ್ನ ಮಠಕ್ಕಾಗಿ ನಾನು ಎಂದೂ ಇಲ್ಲಿಗೆ ಜೋಳಿಗೆ ಹಿಡಿದು ಬಂದವನಲ್ಲ. ಗೋವೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ನಾನು ಜೋಳಿಗೆ ಹಿಡಿಯಲು ಸಿದ್ಧ ಎಂದು ಶ್ರೀಗಳು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಗೋವಾ ರಾಜ್ಯಾ ಘಟಕದ ಡಾ. ಸಿದ್ಧಣ್ಣ ಮೇಟಿ ಮಾತನಾಡಿ, ಗೋವಾಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಹುಕ್ಕೇರಿ ಶ್ರೀಗಳು ಜೋಳಿಗೆ ಹಿಡಿದು ಬಂದರೆ ನಾನು ಆ ಜೋಳಿಗೆಯಲ್ಲಿ 10 ಲಕ್ಷ ರೂ. ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್‌ ಮಾತನಾಡಿ, ಗೋವಾದಲ್ಲಿಯ ಕೊಂಕಣಿಗರು ಕನ್ನಡಿಗರ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ. ಮಹೇಶ್‌ ಜೋಶಿ ಅವರು ಗೋವಾ ದೂರದರ್ಶನದಲ್ಲಿ ಇದ್ದಾಗ ಗೋವಾ ರಾಜ್ಯಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದರು. ಸಾಂಸ್ಕೃತಿವಾಗಿ ನಮ್ಮ ರಾಜ್ಯವನ್ನು ಒಂದು ಗೂಡಿಸುವಲ್ಲಿ ಇವರ ಸೇವೆ ಯಾವತ್ತು ಮರೆಯಲು ಸಾಧ್ಯವಿಲ್ಲ ಎಂದರು.

ವೇದಿಕೆಯಲ್ಲಿ ಇಂಡೋ- ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಅರವಿಂದ ಯಾಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ , ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕರ್ನಾಟಕ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಸೇರಿದಂತೆ ಅನೇಕ ಕನ್ನಡಿಗರು ಉಪಸ್ಥಿತರಿದ್ದರು.

ಶ್ರೀನಾಥ ಜ
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
KASAPA- ಗೋವಾದಲ್ಲಿ ಕಸಾಪ ಪದಾಧಿಕಾರಿಗಳ ಪದಗ್ರಹಣ- 25-07-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)