*ಅಮೃತವರ್ಷಿಣಿ ಎಫ್‌ಎಂ ಚಾನಲ್‌ ಸ್ಥಗಿತದಿಂದ* *ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ*

*ಅಮೃತವರ್ಷಿಣಿ ಎಫ್‌ಎಂ ಚಾನಲ್‌ ಸ್ಥಗಿತದಿಂದ* *ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ*

ಬೆಂಗಳೂರು: ಜನಸಾಮಾನ್ಯರಿಗೆ ಅತಿ ಸನಿಹವಾದ ಹೊಣೆಯನ್ನು ಆಕಾಶವಾಣಿ ನಿರ್ವಹಿಸುತ್ತಿದೆ. ನುಡಿ, ಕಲೆ, ಸಂಸ್ಕೃತಿ, ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸಬೇಕಿದ್ದ ಆಕಾಶವಾಣಿಯ ʻ*ಅಮೃತವರ್ಷಿಣಿʼ ಎಫ್‌ಎಂ ಚಾನಲ್‌* (೧೦೦.೧೦ ಎಫ್‌ ಎಂ) ಅನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿ ದೊಡ್ಡ ತಪ್ಪು ಮಾಡಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಪ್ರಸಾರಕ್ಕಾಗಿಯೇ ಮೀಸಲಾಗಿದ್ದ ಈ ʻ*ಅಮೃತವರ್ಷಿಣಿʼ ಎಫ್‌ಎಂ* ಚಾನಲ್‌ ಪ್ರಸಾರವನ್ನು ಸ್ಥಗಿತಗೊಳಿಸಿ, ಅದರ ಬದಲಾಗಿ ತೆಲುಗು ಭಾಷೆಯ ʻರಾಗಂʼ ಚಾನಲ್‌ ಅನ್ನು ಆರಂಭಿಸಲಾಗಿದೆ. “ಅಮೃತವರ್ಷಿಣಿ”ಯು ನಮ್ಮ ನಾಡಿನ ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತ ಕಲಾವಿದರಿಗೆ ಉತ್ತಮ ಅವಕಾಶ ನೀಡುತ್ತಿತ್ತು, ಅಲ್ಲದೇ ಶಾಸ್ತ್ರೀಯ ಸಂಗೀತ ಪರಂಪರೆಗೆ ಉತ್ತೇಜನ ನೀಡುತ್ತಿತ್ತು. ಈ ಬಾನೂಲಿಯು ಕೇಳುಗರಿಗೆ, ಶಾಸ್ತ್ರೀಯ ಸಂಗೀತ ಅಭ್ಯಾಸಿಗಳಿಗೆ ಆಪ್ಯಾಯಮಾನವಾಗಿತ್ತು. ಎರಡು ದಶಕಗಳಿಂದ ದಿನವಿಡೀ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತ ಹೃನ್ಮನಗಳನ್ನು ತಣಿಸುತ್ತಿತ್ತು. ಸರಿಸುಮಾರು ನಮ್ಮ ರಾಜ್ಯದ ೩೦೦೦ ಕ್ಕೂ ಹೆಚ್ಚು ಕಲಾವಿದರು “*ಅಮೃತವರ್ಷಿಣಿ*” ಮೂಲಕ ಸಂಗೀತ ಕಛೇರಿ ನೀಡಿದ್ದರು. ಸರಿಸುಮಾರು ವರ್ಷದಿಂದ ಈ ಚಾನಲ್‌ ಅನ್ನು ಸ್ಥಗಿತಗೊಳಿಸಿರುವುದು ವಿಷಾದನೀಯ ಎಂದು *ನಾಡೋಜ ಡಾ. ಮಹೇಶ ಜೋಶಿ* ಹೇಳಿದ್ದಾರೆ.

ಪ್ರತಿ ವರ್ಷ ಆಕಾಶವಾಣಿ ಆಯೋಜಿಸಲಾಗುತ್ತಿದ್ದ ಸಂಗೀತ ಸಮ್ಮೇಳನ, ಸಂಗೀತ ಕಛೇರಿಗಳು, ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಗಳನ್ನು ಕಳೆದ ಕರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಅದನ್ನೂ ಪುನರಾರಂಭಿಸದಿರುವುದು ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಕಲಾವಿದರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಆಕಾಶವಾಣಿಯಲ್ಲಿ ನಿತ್ಯ ಬೆಳಗ್ಗೆ ಸಂಜೆ ಕನ್ನಡದ ಸಂಗೀತ ಕಛೇರಿಗಳು, ಕಲಾವಿದರ ಸಂದರ್ಶನಗಳು, ಕಲಿಕಾ ತರಬೇತಿಗಳು ಸೇರಿದಂತೆ ಇತ್ಯಾದಿಗಳ ಸಾಂಸ್ಕೃತಿಕ ರಾಯಭಾರಿಯಾಗಬೇಕಿದ್ದ ಆಕಾಶವಾಣಿ ದಾರಿ ತಪ್ಪುತ್ತಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಕಲಾಪ್ರಕಾರಗಳ ಪ್ರಸಾರದಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ ಎಂದು *ನಾಡೋಜ ಡಾ. ಮಹೇಶ ಜೋಶಿ* ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಕಾಶವಾಣಿಯಲ್ಲಿ ಬಿತ್ತರವಾಗುವ ಸಂಗೀತ ಕಛೇರಿಗಳನ್ನು ಆಲಿಸುವ ಕೇಳುಗರ ಸಂಖ್ಯೆ ನಮ್ಮ ನಾಡಿನಲ್ಲಿ ಅಪಾರವಾಗಿದೆ. ಒಂದು ರೀತಿಯಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಆಕಾಶವಾಣಿಯೇ ಪ್ರೋತ್ಸಾಹದ ನೆಲೆ. ಆಕಾಶವಾಣಿಯ ಗ್ರೇಡ್‌ ಕಲಾವಿದರಾಗುವುದು ಹೆಮ್ಮೆಯ ಸಂಗತಿ. ಹೀಗಿರುವಾಗ “*ಅಮೃತವರ್ಷಿಣಿ*” ಚಾನಲ್‌ ಅನ್ನು ಏಕಾಏಕಿಯಾಗಿ ಪ್ರಸಾರಭಾರತಿ ನಿಲ್ಲಿಸಿರುವ ಈ ಕ್ರಮದಿಂದ ಕನ್ನಡಿಗರಿಗೆ ಭಾರಿ ನಷ್ಟವಾಗಿದೆ. ಪ್ರಾದೇಶಿಕ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಕಾಳಜಿ ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಲೇ ಇದ್ದಾರೆ. ಪ್ರಸಾರ ಭಾರತ ಪ್ರಾದೇಶಿಕ ಕಲಾವಿದರನ್ನು ಪ್ರೋತ್ಸಾಹಿಸುವ ಬದಲು ತನ್ನ ನಿಲುವಿನಿಂದ ಶಿಥಿಲವಾಗುತ್ತಿದೆ.

ವಿದೇಶಿಯರು ನಮ್ಮ ಕಲೆ, ಸಂಸ್ಕೃತಿಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂಡಿದ್ದಾರೆ. ಪರಿಣಾಮ ನಮ್ಮ ಶಾಸ್ತ್ರೀಯ ಕಲೆಗಳಾದ ಸಂಗೀತ, ನೃತ್ಯಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ವಿದೇಶದಲ್ಲಿ ನಮ್ಮ ಸಂಗೀತಗಳ ಶ್ರೀಮಂತಿಕೆಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆದರೆ ನಮ್ಮ ನೆಲದಲ್ಲಿ ನಮ್ಮ ಕಲೆ, ಕಲಾವಿದರನ್ನು ಬೆಂಬಲಿಸಬೇಕಾದ ಬಾನೂಲಿ ಕೇಂದ್ರವನ್ನೇ ನಿಲ್ಲಿಸಿರುವುದು ಸರಿಯಾದ ನಡೆಯಲ್ಲ ಎಂದು *ನಾಡೋಜ ಡಾ. ಮಹೇಶ ಜೋಶಿ* ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಹಲವಾರು ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕಂಡುಬರುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಲೇ ಬಂದಿದೆ. ಆದರೆ ತನ್ನ ಗಾಢ ನಿದ್ರೆಯಿಂದ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಕನ್ನಡಕ್ಕೆ ಸೂಕ್ತ ಗೌರವ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟಿಬದ್ಧವಾಗಿ ನಿಲ್ಲಲಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ* ತಿಳಿಸಿದ್ದಾರೆ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
KASAPA-ಆಕಾಶವಾಣಿ ಕುರಿತು ಕಸಾಪ ಅಸಮಧಾನ-17-08-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)