ಸೆ. ೧೭ರಂದು ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಸಭೆ

ಸೆ. ೧೭ರಂದು ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಸಭೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಅಭಿಮಾನದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರೆಲ್ಲರೂ ನಾಡು-ನುಡಿ-ನೆಲ-ಜಲ, ಸಂಸ್ಕೃತಿ, ಹಿರಿಮೆ, ಅಭ್ಯುದಯದ ಕುರಿತು ಚರ್ಚಿಸುವ ಮಹತ್ವದ ವೇದಿಕೆಯಾಗಿದೆ.

ಇದೇ ವರ್ಷದ ನವಂಬರ್ ತಿಂಗಳ ೧೧, ೧೨ ಮತ್ತು ೧೩ರಂದು ಹಾವೇರಿಯಲ್ಲಿ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದ್ದು ಇದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಪರಂಪರೆ, ಹಿರಿಮೆ, ವರ್ತಮಾನದ ಸವಾಲುಗಳು, ಭವಿಷ್ಯದ ಸಾಧ್ಯತೆಗಳು, ಕನ್ನಡಪರ ಚಿಂತನೆಯ ವಿಸ್ತಾರ, ನಾಡು-ನುಡಿ ಸಮಸ್ಯೆಗಳು ಮತ್ತು ಪರಿಹಾರ, ಕನ್ನಡ ಶಾಲೆಗಳ ಉಳಿವು, ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವ ಪ್ರಯತ್ನಗಳು, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ದ ಅನುಷ್ಠಾನ, ಪ್ರಮುಖ ಜ್ಞಾನ ಶಿಸ್ತುಗಳಾದ ವಿಜ್ಞಾನ ಮತ್ತು ತಂತ್ರಜ್ಞಾನ. ಕೃಷಿ, ಕ್ರೀಡೆ, ಆರ್ಥಿಕ ನೆಲೆಗಳು, ಅಧ್ಯಾತ್ಮ ಸೇರಿ ದಂತೆ ಹಲವು ಪ್ರಮುಖ ಕ್ಷೇತ್ರ ಮತ್ತು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ನಾಡಿನ ಗಡಿನಾಡು, ಹೊರನಾಡು ಕನ್ನಡಿಗರ ಸಮಸ್ಯೆಗಳೂ ಇಲ್ಲಿ ಪ್ರತಿನಿಧಿತವಾಗಲಿವೆ. ಸಮಗ್ರತೆ ಮತ್ತು ಪ್ರಾತಿನಿಧ್ಯವನ್ನು ಕಾಪಾಡಿ ಕೊಂಡು ಮಹತ್ವದ ಗುಣಾತ್ಮಕ ಕೊಡುಗೆಯನ್ನು ನಾಡಿಗೆ ನೀಡುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಲು ನಿರ್ಧರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತು ಆಗಿಸಲು ಸಂಕಲ್ಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಾರ್ವಜನಿಕರನ್ನು ವಿಚಾರ ಮಂಡನೆಯೂ ಸೇರಿದಂತೆ ಸಮ್ಮೇಳನದಲ್ಲಿ ಮುಕ್ತವಾಗಿ ತೊಡಗಿಸಿ ಕೊಳ್ಳಲು ಈಗಾಗಲೇ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಿದ್ದು, ಈ ಮೂಲಕ ಸಮ್ಮೇಳನ ಕೂಡ ಜನ ಸಾಮಾನ್ಯರ ಸಮ್ಮೇಳನವನ್ನಾಗಿಸಲು ಮುಂದಾಗಿದ್ದಾರೆ. ಕನ್ನಡ ಪರ ಮನಸ್ಸ ಗಳೆಲ್ಲವೂ ಒಟ್ಟಾಗಿ ಕಲಿತು ಚಿಂತನ-ಮಂಥನ ನಡೆಸುವಂತೆ ಆಗ ಬೇಕೆನ್ನುವುದು ಪ್ರಮುಖ ಉದ್ದೇಶವಾಗಿದೆ.

ಸಮ್ಮೇಳನದಲ್ಲಿ ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ನಾನಾ ಗೋಷ್ಠಿಗಳು, ಸಂವಾದ ನಡೆಯಲಿದೆ. ಈ ಗೋಷ್ಠಿಗಳ ವಿಷಯಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಕೆಳ ಕಂಡವರು ಸಮಿತಿಯ ಸದಸ್ಯರಾಗಿರಲಿದ್ದಾರೆ.

ಈ ಸಮಿತಿಯ ಮೊದಲ ಸಭೆಯು ೧೭.೯.೨೦೨೨ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖಾಗಿ ಸಮ್ಮೇಳನದಲ್ಲಿ ಮಂಡಿತವಾಗುವ ವಿಷಯಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಇತ್ಯಾದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಿತಿಯ ಸದಸ್ಯರು

ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀ ಬಿ. ಶಿವಲಿಂಗೇಗೌಡ ಬೆಂಗಳೂರು, ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ ಮೈಸೂರು, ಶ್ರೀ ಎಸ್.ಬಿ. ರಂಗನಾಥ ಸಿರಿಗೆರೆ, ಡಾ. ಶುಭಶ್ಚಂದ್ರ ಮೈಸೂರು, ಶ್ರೀಮತಿ ಪೂರ್ಣಿಮಾ ಸುರೇಶ್ ಉಡುಪಿ, ಡಾ. ಇಕ್ಬಾಲ್ ಅಹಮದ್ ಬೆಂಗಳೂರು, ಶ್ರೀ ಡ್ಯಾನಿ ಪಿರೇರಾ ಹೊಳೆನರಸೀಪುರ, ಡಾ. ಶಿವಾನಂದ ಕೆಳಗಿನಮನಿ ಶಿವಮೊಗ್ಗ, ಡಾ. ನಾ. ದಾಮೋದರ ಶೆಟ್ಟಿ ಮಂಗಳೂರು, ಡಾ. ಕೃಷ್ಣೇಗೌಡ ಚಿಕ್ಕಮಗಳೂರು, ಡಾ. ಬಿ.ಕೆ. ರವಿ ಬೆಂಗಳೂರು, ಡಾ. ಪದ್ಮಿನಿ ನಾಗರಾಜು ಬೆಂಗಳೂರು, ಡಾ. ಎಚ್.ಕೆ. ಮಳಲಿಗೌಡ ಬೆಂಗಳೂರು, ಡಾ. ತಲಕಾಡು ಚಿಕ್ಕರಂಗೇಗೌಡ ಬೆಂಗಳೂರು, ಶ್ರೀ ಸತೀಶ್ ಕುಲಕರ್ಣಿ ಹಾವೇರಿ, ಶ್ರೀಮತಿ ಶೋಭಾ ಎಚ್.ಜಿ. ಬೆಂಗಳೂರು, ಶ್ರೀ ಪ್ರಕಾಶ ಉಡಕೇರಿ ಧಾರವಾಡ, ಶ್ರೀಮತಿ ವಾಣಿ ನಾಯ್ಡು, ಚಿಕ್ಕಮಗಳೂರು, ಡಾ. ಭಕ್ತರಹಳ್ಳಿ ಕಾಮರಾಜು ಮಧುಗಿರಿ, ಕನ್ನಡ ವಿವಿ ಕುಲಪತಿಗಳಾದ ಪ್ರೊ. ಸ.ಚಿ. ರಮೇಶ, ಜಾನಪದ ವಿವಿ ಕುಲಪತಿಗಳಾದ ಪ್ರೊ. ಟಿ.ಎಂ. ಭಾಸ್ಕರ, ಸಂಗೀತ ವಿವಿ ಕುಲಪತಿಗಳಾದ ಪ್ರೊ. ನಾಗೇಶ ಬೆಟ್ಟಕೋಟೆ, ಮಹಿಳಾ ವಿಶ್ವವಿದ್ಯಾಯಲದ ಪ್ರೊ. ಬಿ.ಕೆ. ತುಳಸಿಮಾಲಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಕೆ. ಮಹಾಲಿಂಗಯ್ಯ, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್‌ಪಾಂಡು, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಲಿಂಗಯ್ಯ ಹಿರೇಮಠ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Kasapa-ಗೋಷ್ಟಿಗಳ ಆಯ್ಕೆ ಸಮಿತಿ ಸಭೆ- 16-09-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)