ಭಾಲ್ಕಿಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜ ಸ್ಥಂಭ ತೆರವು ಪ್ರಕರಣ

ಕಿಡಿಗೇಡಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮದೊಂದಿಗೆ ತಕ್ಷಣ ಕನ್ನಡ ಧ್ವಜ ಸ್ಥಂಭ ಮರು ನಿರ್ಮಾಣಕ್ಕೆ ನಾಡೋಜ ಡಾ. ಮಹೇಶ ಜೋಶಿ ಆಗ್ರಹ

ಬೆಂಗಳೂರು: ರಾಜ್ಯದ ಬಹುತೇಕ ಗಡಿ ಪ್ರದೇಶದಲ್ಲಿ ನಿರಂತರ ಕನ್ನಡ ಭಾಷೆಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದ ಹೃದಯ ಭಾಗದಲ್ಲಿ ಇರುವ ಕನ್ನಡ ಧ್ವಜ ಸ್ಥಂಭವನ್ನು ಕೆಲವು ಕಿಡಿಗೇಡಿಗಳು ಏಕಾ ಏಕಿ ತೆರವು ಮಾಡಿರುವ ಘಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬೀದರ ಜಿಲ್ಲೆಯು ಗಡಿ ಪ್ರದೇಶವಾಗಿದ್ದು ಆ ಭಾಗದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಹಿನ್ನೆಲೆಯಲ್ಲಿ ಶತ ಶತಮಾನಗಳಿಂದ ಆ ಭಾಗದ ಕನ್ನಡಾಭಿಮಾನಿಗಳು ಅಪಾರವಾದ ಕನ್ನಡ ಸೇವೆಯನ್ನು ಮಾಡುತ್ತಲೇ ಬಂದಿರುತ್ತಾರೆ. ಅದರ ಪರಿಣಾಮವಾಗಿ ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಧ್ವಜ ಹಾಗೂ ಧ್ವಜ ಸ್ಥಂಭ ಸ್ಥಾಪಿಸಲಾಗಿತ್ತು. ಆದರೆ ಕೆಲವು ವಿಕೃತ ಮನಸ್ಸಿನ ಸಮಾಜಘಾತುಕರು, ನಾಡದ್ರೋಹಿಗಳು, ಕನ್ನಡ ಧ್ವಜ ಹಾಗೂ ಧ್ವಜ ಸ್ಥಂಭಕ್ಕೆ ಅವಮಾನ ಮಾಡಿದ್ದಾರೆ. ಈ ಕುಕೃತ್ಯವನ್ನು ಎಸಗಿದವರನ್ನು, ಕೂಡಲೆ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.

ಭಾಲ್ಕಿ ನಗರದ ಮಧ್ಯಭಾಗದಲ್ಲಿ ಇರುವ ಶ್ರೀ ಚನ್ನಬಸವೇಶ್ವರ ಪಟ್ಟದದೇವರ ಆಶ್ರಮದ ಎದುರಿಗೆ ಕಳೆದ ಹತ್ತಾರು ವರ್ಷಗಳಿಂದ ಇದ್ದ ಕನ್ನಡ ಧ್ವಜ ಸ್ಥಂಭವನ್ನು ಕೆಲವು ಕಿಡಿಗೇಡಿಗಳು ಧ್ವಂಸ ಮಾಡಿದ್ದು ಅಕ್ಷಮ್ಯ. ಭಾಲ್ಕಿ ನಗರವು ಆದಿಯಿಂದಲೂ ಕನ್ನಡವನ್ನು ಕಟ್ಟಿಬೆಳೆಸುವಲ್ಲಿ ಸಾಕಷ್ಟು ಕೊಡುಗೆಯನ್ನು ಕೊಟ್ಟಿದೆ. ಉರ್ದು ಭಾಷೆಯ ಪ್ರಾಬಲ್ಯ ಇದ್ದ ಕಾಲದಲ್ಲಿ ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಪಟ್ಟದದೇವರ ಮಠದ ಎದುರು ಭಾಗದಲ್ಲಿ ಉರ್ದು ಭಾಷೆಯ ನಾಮಫಲಕ ಅಳವಡಿಸಿಕೊಂಡು, ಶ್ರೀ ಮಠದ ಒಳಗಡೆ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಕನ್ನಡಕ್ಕಾಗಿ ದುಡಿದ ಪವಿತ್ರ ಭೂಮಿಯಲ್ಲಿ ಕನ್ನಡದ ಧ್ವಜ ಸ್ಥಂಭಕ್ಕೆ ಅವಮಾನವಾಗಿದ್ದು ಸಹಿಸಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಭಾಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯವೆಸಗಿದ ಸಮಾಜಘಾತಕರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ದಂಡಾಧಿಕಾರಿಗಳ ಮೂಲಕ ಸರಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ಕನ್ನಡ ಸಂಘ ಸಂಸ್ಥೆಗಳು ಒತ್ತಾಯಿಸಿವೆ. ಇದರೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಬೀದರ ಜಿಲ್ಲಾ ಉಸ್ತುವಾರಿ ಸಚಿವರಿಗೂ, ಬೀದರ ಜಿಲ್ಲಾಧಿಕಾರಿಗಳಿಗೂ ಮತ್ತು ಬೀದರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಪತ್ರ ಬರೆಯುವ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ತಕ್ಷಣದಲ್ಲಿ ಧ್ವಂಸ ಮಾಡಲಾದ ಕನ್ನಡ ಧ್ವಜ ಸ್ಥಂಭವನ್ನು ತಕ್ಷಣದಲ್ಲಿ ಮರು ನಿರ್ಮಾಣ ಮಾಡಿ ಕನ್ನಡ ಧ್ವಜವನ್ನು ಹಾರಿಸಬೇಕು. ಈ ಮೂಲಕ ಗಡಿಯಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಸರಕಾರ ಮುಂದಾಗಬೇಕು. ಸ್ಥಳೀಯ ಯಾವುದೇ ವಿವಾದಗಳಿದ್ದರೂ ಅದಕ್ಕೆ ಪರಿಹಾರಗಳನ್ನು ಕಂಡುಕೊಂಡು ಇದ್ದ ಜಾಗದಲ್ಲಿಯೇ ಕನ್ನಡದ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.

Kasapa-ಬಾಲ್ಕಿ ಕನ್ನಡ ಧ್ವಜ ಸ್ಥಂಭ ತೆರವಿಗೆ ಕಸಾಪ ಆಕ್ರೋಶ - ೧೯-೦೯-೨೦೨೨

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)