ಕನ್ನಡ ಸಾಹಿತ್ಯ ಪರಿಷತ್ತಿನ ಪಂಕಜಶ್ರೀ ಪುರಸ್ಕಾರ ಸರೋಜ ನಾಗರಾಜ್ ಮತ್ತು ಕೆ.ವಿ.ರಾಜೇಶ್ವರಿಯವರಿಗೆ ಪ್ರಕಟ

ಕನ್ನಡ ಸಾಹಿತ್ಯ ಪರಿಷತ್ತಿನ ಪಂಕಜಶ್ರೀ ಪುರಸ್ಕಾರ ಸರೋಜ ನಾಗರಾಜ್ ಮತ್ತು ಕೆ.ವಿ.ರಾಜೇಶ್ವರಿಯವರಿಗೆ ಪ್ರಕಟ

kasapa1

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಟಿತ ಪಂಕಜಶ್ರೀ ಪುರಸ್ಕಾರಕ್ಕಾಗಿ 2023ನೆಯ ಸಾಲಿಗೆ ಚನ್ನಗಿರಿಯ ಶ್ರೀಮತಿ ಸರೋಜ ನಾಗರಾಜ್ ಮತ್ತು 2024ನೆಯ ಸಾಲಿಗೆ ಬೆಂಗಳೂರಿನ ಶ್ರೀಮತಿ ಕೆ.ವಿ.ರಾಜೇಶ್ವರಿಯವರನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಅನೇಕ ಹೆಸರುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾವುದೇ ಅರ್ಜಿ,ಶಿಪಾರಸ್ಸುಗಳಿಗೆ ಗಮನ ಕೊಡದೆ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆಯನ್ನು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಎ.ಪಂಕಜ ಅವರು ಈ ಪ್ರಶಸ್ತಿಯನ್ನು ಸ್ಥಾಪನೆ ಮಾಡಿದ್ದು 2013ನೆಯ ಸಾಲಿನಿಂದಲೂ ಈವರೆಗೂ ಹತ್ತು ಪ್ರಮಖ ಬರಹಗಾರ್ತಿಯರು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

2023ನೆಯ ಸಾಲಿನ ಪಂಕಜಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಕೆ.ಜಿ.ಸರೋಜಾ ನಾಗರಾಜ್ ಅವರು ಮೂಲತ: ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು ತಮ್ಮ ಹದಿಮೂರನೆಯ ವರ್ಷದಿಂದಲೂ ಬರವಣಿಗೆಯನ್ನು ನಿರಂತರವಾಗಿ ನಡೆಸುತ್ತಾ ಬಂದವರು. ‘ಸೂರ್ಯನ ಪಿಸುಮಾತು’ ‘ಹಸಿಮಣ್ಣಿನಲ್ಲಿ ಹೊಸ ಹೆಜ್ಜೆ’ ‘ಬಿಂಕದ ಕಾಡಿಗೆ’ ಸೇರಿದಂತೆ ಇವರ ಏಳು ಕೃತಿಗಳು ಈವರೆಗೂ ಪ್ರಕಟವಾಗಿದ್ದು ದೃಶ್ಯ ಮಾಧ್ಯಮದಲ್ಲಿಯೂ ಆಸಕ್ತರಾದ ಇವರು ಕಿರುತೆರೆಯಲ್ಲಿ ಕೂಡ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

kasapa2

2024ನೆಯ ಸಾಲಿನ ಪುರಸ್ಕೃತರಾದ ಡಾ.ಕೆ.ವಿ.ರಾಜೇಶ್ವರಿಯವರು ಬೆಂಗಳೂರಿನವರಾಗಿದ್ದು ಕೇಂದ್ರ ಸರ್ಕಾರ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಇದುವರೆಗೂ 70ಕ್ಕೂ ಹೆಚ್ಚು ಕಾದಂಬರಿಗಳು, 12 ವೈಚಾರಿಕ ಕೃತಿಗಳು, ಆರು ಕಥಾ ಸಂಕಲನಗಳು, ಆರು ಪ್ರವಾಸ ಕಥನಗಳು 38 ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಮಾನಸವ ವೀಣಾ ಮಧುಗೀತೆ’ ‘ರಶ್ಮಿ’ ‘ಮೊದಲ ಮೆಟ್ಟಿಲು’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಮನ್ನಣೆಯನ್ನು ಪಡೆದಿವೆ. ಅವರ ಅನೇಕ ಕಾದಂಬರಿಗಳು ಸಣ್ಣಕಥೆಗಳು ದೂರದರ್ಶನದ ಧಾರಾವಾಹಿಗಳಾಗಿ ಪ್ರಸಾರವಾಗಿವೆ. ಕಾವೇರಿ, ಸಮಾಗಮ, ಹೊಂಗಿರಣ ಎಂಬ ಮೆಗಾ ಧಾರಾವಾಹಿಗಳಿಗೂ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ.

ಪಂಕಜಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಇಬ್ಬರೂ ಲೇಖಕಿಯರನ್ನು ಕನ್ನಡ ಸಾಹಿತ್ಯ ಪರಿಷತ್ತು ಹಾರ್ದಿಕವಾಗಿ ಅಭಿನಂದಿಸುತ್ತದೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)