ಸರಳತೆ ಸಜ್ಜನಿಕೆಯ ಮೂರ್ತರೂಪ ಜಿ.ಎಸ್.ಶಿವರುದ್ರಪ್ಪ: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

ಸರಳತೆ ಸಜ್ಜನಿಕೆಯ ಮೂರ್ತರೂಪ ಜಿ.ಎಸ್.ಶಿವರುದ್ರಪ್ಪ: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

new-kasapa

ಬೆಂಗಳೂರು: ಜಿ.ಎಸ್.ಶಿವರುದ್ರಪ್ಪನವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಅಷ್ಟೇ ಪ್ರಿಯರು. ಅವರ ಭಾವಗೀತೆಗಳು ಹಲವಾರು ದಶಕಗಳಿಂದ ಕನ್ನಡಿಗರ ನಡುವೆ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭವಿಸದ ಕನ್ನಡಿಗನೇ ಇಲ್ಲ. ‘ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು’, ‘ಹಾಡು ಹಳೆಯದಾದರೇನು’, ‘ಯಾವುದೀ ಪ್ರವಾಹವು’, ‘ಬೆಳಗು ಬಾ ಹಣತೆಯನು’, ‘ನೀನು ಮುಗಿಲು ನಾನು ನೆಲ’ ಹೀಗೆ ಅವರ ಭಾವಗೀತೆಗಳೆಲ್ಲವೂ ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ, ಅದರಲ್ಲಿಯೂ ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ’ ಎನ್ನುವ ಹೆಣ್ಣಿನ ಮಹತ್ವವನ್ನು ವಿವರಿಸುವ ಅವರ ಕವಿತೆ ನನಗೆ ಅಚ್ಚಮೆಚ್ಚು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ 98ನೆಯ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಮ್ಮ ನೇತೃತ್ವದಲ್ಲಿ ನಡೆದ ‘ಮಧುರ ಮಧುರವೀ ಮಂಜುಳಗಾನ’ಕಾರ್ಯಕ್ರಮದಲ್ಲಿ ಜಿ.ಎಸ್.ಶಿವರುದ್ರಪ್ಪನವರು ಅನೇಕ ಸಲ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಸಮಯ ಪರಿಪಾಲನೆ ಅವರ ವ್ಯಕ್ತಿತ್ವದ ಬಹುದೊಡ್ಡಗುಣ. ಮೆಲುದನಿಯಲ್ಲಿ ಸೂಕ್ಷ್ಮಸಂವೇದನೆಗಳನ್ನು ಹಿಡಿಯುವಂತೆ ಮಾತನಾಡುತ್ತಿದ್ದರು ಎಂದು ತಮ್ಮ ಒಡನಾಟದ ಘಟನೆಗಳನ್ನು ನೆನಪು ಮಾಡಿ ಕೊಂಡರು. ಕಾವ್ಯಮೀಮಾಂಸೆಯ ಪಾಠ ಹೇಳಿದ್ದ ಜಿ.ಎಸ್.ಎಸ್. ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಸೇರಿದವರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿ, ಸಂಘಟಿಸಿ, ನಿರ್ವಹಿಸಿ ಜಿ.ಎಸ್.ಎಸ್ ಹೆಸರಾಗಿದ್ದರು. ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದರು. ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕ’ದ ಯೋಜನೆಗಳು ಅನನ್ಯವಾದವು. ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಯಿತು. ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಮುಂದುವರೆಸಿ ಯಶಸ್ಸು ಸಾಧಿಸಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಜಿ.ಎಸ್.ಎಸ್ ಅವರ ಕೊಡುಗೆಗಳನ್ನ ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗಿದ್ದದ್ದು ಕಂಡುಬರುತ್ತದೆ. ಒಂದು ಜೀವಸಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ನಾಗರೀಕ ಸಮಾಜ. ವಿಸ್ಮಯ ಉತ್ಸುಕತೆಗಳು ಅವರ ಕವಿತೆಗಳ ಪ್ರಧಾನ ಭಾವಗಳಾಗಿದ್ದವು. ‘ಕಾಲ’ ಮತ್ತು ‘ಮನುಷ್ಯ’ ತಮ್ಮ ಕಾವ್ಯದ ಕೇಂದ್ರಗಳು ಎಂದು ಅವರೇ ಗುರುತಿಸಿದ್ದರು. ಕುವೆಂಪು ಅವರ ನೇರ ಶಿಷ್ಯರಾಗಿದ್ದ ಜಿ.ಎಸ್.ಎಸ್ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಕುವೆಂಪು ಅವರ ನೇರ ಮಾರ್ಗದರ್ಶನದಲ್ಲಿ ರೂಪುಗೊಂಡಿದ್ದು ತಾತ್ವಿಕವಾಗಿ ಕನ್ನಡ ಕಾವ್ಯಪರಂಪರೆಯನ್ನು ವ್ಯಾಖ್ಯಾನಿಸುವ ಅವರ ಇನ್ನೆರಡು ಪ್ರಯತ್ನಗಳೆಂದರೆ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’. ಕನ್ನಡ ಸಾಹಿತ್ಯ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಅಂಶಗಳು ಈ ಕೃತಿಗಳಲ್ಲಿ ಚರ್ಚಿತವಾಗಿವೆ. ‘ಮಹಾಕಾವ್ಯ ಸಮೀಕ್ಷೆ’ ಗ್ರಂಥದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯ ಸಂಬಂಧ ತತ್ತ್ವಗಳನ್ನು ತೌಲನಿಕವಾಗಿ ವಿವೇಚಿಸಲಾಗಿದೆ. ಇಂಥ ಹೋಲಿಕೆಯ ಅಧ್ಯಯನವನ್ನು ಸಾಹಿತ್ಯ ತತ್ವಗಳ, ತಾತ್ತ್ವಿಕ ಪರಿಕಲ್ಪನೆಗಳ ನೆಲೆಯಲ್ಲಿ ಬಳಸಿ ಬರೆದ ಲೇಖನಗಳ ಸಂಕಲನ, ‘ಕಾವ್ಯಾರ್ಥ ಚಿಂತನ’. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದು ಕೊಟ್ಟ ಕೃತಿ . ದಾವಣಗೆರೆಯಲ್ಲಿ ನಡೆದ 61ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾಡಿದ ಭಾಷಣ ಚಾರಿತ್ರಿಕವಾದದ್ದು ಎಂದು ಹೇಳಿ ಜಿ.ಎಸ್.ಶಿವರುದ್ರಪ್ಪನವರ ಜೊತೆಗಿನ ತಮ್ಮ ಒಡನಾಟದ ಘಟನೆಗಳನ್ನು ನೆನಪು ಮಾಡಿ ಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟರು ಜಿ.ಎಸ್.ಎಸ್ ಅವರನ್ನು ಹಣತೆಯ ಕವಿ ಎಂದು ಬಣ್ಣಿಸಿ ಜೀವನದಲ್ಲಿ ಅವರು ಇಟ್ಟು ಕೊಂಡಿದ್ದ ಶಿಸ್ತು ಸಂಯಮಗಳನ್ನು ಬಿಂಬಿಸುವ ಘಟನೆಗಳನ್ನು ವರ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಇನ್ನೊಬ್ಬರ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನುಡಿ ನಮನದ ನಂತರ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.

ಎನ್.ಎಸ್.ಶ್ರೀಧರ ಮೂರ್ತಿ

ಸಂಚಾಲಕರು, ಪ್ರಕಟಣಾ ವಿಭಾಗ

ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)