ಗೋವಾ ಕರ್ನಾಟಕದ ನಡುವಿನ ಸಂಪರ್ಕ ಸೇತುವೆ ಶಾ.ಮಂ.ಕೃಷ್ಣರಾಯರು ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

ಗೋವಾ ಕರ್ನಾಟಕದ ನಡುವಿನ ಸಂಪರ್ಕ ಸೇತುವೆ ಶಾ.ಮಂ.ಕೃಷ್ಣರಾಯರು ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ

WhatsApp Image 2024-02-15 at 10.45.15 AM

ಬೆಂಗಳೂರು:

ಶಾ.ಮಂ.ಕೃಷ್ಣರಾವ್ ಅವರು ಗೋವಾ ಮತ್ತು ಕರ್ನಾಟಕದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತ: ತಾವು ಬರೆಯುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಬೆಳೆಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು . ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಶಾ.ಮಂ.ಕೃಷ್ಣರಾಯರಿಗೆ ‘ದಿ.ಟಿ.ಶ್ರೀನಿವಾಸ್ ಸ್ಮರಣಾರ್ಥ ಶ್ರೀ ಪಿ.ಕೆ.ನಾರಾಯಣ’ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಗೋವಾದಲ್ಲಿ ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಅಲ್ಲಿದ್ದ ನಿರುದ್ವಿಗ್ನ ವಾತಾವರಣವನ್ನು ನೆನಪು ಮಾಡಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಅಂತಹ ಕಡೆ ಕನ್ನಡವನ್ನು ಕಟ್ಟಿ ಶಾ.ಮಂ.ಕೃಷ್ಣರಾಯರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂದರು. ಗೋವಾದಲ್ಲಿ ಅವರು ಕನ್ನಡ ಶಾಲೆಗಳನ್ನು ಕಟ್ಟಿದರು, ಸೈಕಲ್ಲಿನಲ್ಲಿ ಮನೆ ಮನೆಗೆ ಹೋಗಿ ಕನ್ನಡ ಪತ್ರಿಕೆಗಳನ್ನು ತಲುಪಿಸಿ ವಾಚನಾಭಿರುಚಿ ಬೆಳೆಸಿದರು. ‘ಗೋವಾ ಕನ್ನಡ ಸಂಘ’ ಗೋಮಾಂತ ಭಾರತಿ’ ‘ಕರ್ನಾಟಕ ಸಂಘ’ಗಳನ್ನು ಕಟ್ಟಿ ಕನ್ನಡಿಗರನ್ನು ಸಂಘಟಿಸಿದರು ಎಂದ ನಾಡೋಜ ಡಾ.ಮಹೇಶ ಜೋಶಿಯವರು, ಒಮ್ಮೆ ಗೌರೀಶ ಕಾಯ್ಕಿಣಿಯವರು ಗೋವಾಗೆ ಬಂದಾಗ ಕೃಷ್ಣರಾಯರು ಒಂದು ಸೇತುವೆ ತೋರಿಸಿ ‘ಇದು ಶಿಥಿಲಾವಸ್ಥೆಯಲ್ಲಿದೆ, ಇದು ಕುಸಿದರೆ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕ ಕಡಿದು ಹೋಗುತ್ತದೆ’ ಎಂದು ಹೇಳಿದಾಗ ತಕ್ಷಣ ಗೌರೀಶರು ‘ನೀನಿದ್ದೇಯಲ್ಲ’ಎಂದು ಹೇಳಿದ್ದ ಘಟನೆಯನ್ನು ನೆನಪು ಮಾಡಿ ಕೊಂಡು ಈ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಕೃಷ್ಣರಾಯರು ನಲವತ್ತು ವರ್ಷಗಳ ಕಾಲ ಕರ್ನಾಟಕ ಮತ್ತು ಗೋವೆಯ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದರು. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿ, ಛಲಬಿಡದೆ ಕೈಯಿಂದಲೇ ಹಣತೆತ್ತು ಕನ್ನಡ ಕಾರ್ಯಕ್ರಮಗಳನ್ನು ನಡೆಸಿ ಕನ್ನಡವನ್ನು ಪಸರಿಸುವ ಕೈಂಕರ್ಯವನ್ನು ಕೈಗೊಂಡರು. ಸಾಹಿತಿಗಳು, ಸಂಗೀತಗಾರರನ್ನು ಕರೆಸಿ ಕನ್ನಡದ ಕಾರ್ಯಕ್ರಮಗಳನ್ನು ಏರ್ಪಡಿಸಿದರು.. ಶಾ. ಮಂ. ಕೃಷ್ಣರಾಯರು ಕನ್ನಡ ಪ್ರಚಾರಕ್ಕಾಗಿ ಹಂತಹಂತವಾಗಿ ಕಾಯರ್ಕ್ರಮಗಳನ್ನು ರೂಪಿಸಿದ್ದರ ಜೊತೆಗೆ ಕನ್ನಡ ಓದುವುದರ ಬಗ್ಗೆಯೂ ಆಸ್ಥೆ ಬೆಳೆಯುವಂತೆ ಮಾಡಲು ಪುಸ್ತಕಗಳ ಪ್ರಕಟಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ನಾಟಕಾಭಿನಯಕ್ಕೂ ಒತ್ತು ಕೊಟ್ಟು ತಾವೇ ನಾಟಕಗಳನ್ನು ರಚಿಸಿ ರಂಗದ ಮೇಲೆ ಪ್ರದರ್ಶಿಸಿದರು ಇವೆಲ್ಲವನ್ನೂ ನಾನು ಗೋವಾದಲ್ಲಿದ್ದಾಗ ಕಣ್ಣಾರೆ ಕಂಡಿದ್ದೇನೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಶಾ.ಮಂ.ಕೃಷ್ಣರಾಯರ ಕೊಡುಗೆಗಳನ್ನು ಸ್ಮರಿಸಿ ಕೊಂಡರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಡಾ.ಈಶ್ವರ ದೈತೋಟರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಅಂತರಂಗ ಮತ್ತು ಬಹಿರಂಗಗಳೆರಡಲ್ಲಿಯೂ ಬಹಳ ಸುಂದರವಾಗಿದೆ ಎಂದು ಹೇಳಿ ಇದಕ್ಕೆ ಕಾರಣರಾದ ನಾಡೋಜ ಡಾ.ಮಹೇಶ ಜೋಶಿಯವರನ್ನು ಅಭಿನಂದಿಸಿದರು. ಶಾ.ಮಂ.ಕೃಷ್ಣರಾಯರ ಕೊಡುಗೆಗಳನ್ನು ವಿವರಿಸಿದ ಅವರು ಕೃಷ್ಣರಾಯರು ಸಂಪಾದಕರಾಗಿ ಪುಸ್ತಕ ಪ್ರಕಟಸಿದಾಗ ಆದದ್ದು ನಷ್ಟವೇ. ಆದರೂ ಧೃತಿಗೆಡದೆ ಅ.ನ.ಕೃ, ತ.ರಾ.ಸು,ಬೀಚಿ ಮೊದಲಾದವರ ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದರು ಕೃಷ್ಣರಾಯರು ಹಲವಾರು ಗ್ರಂಥಗಳನ್ನು ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿ ಕೊಂಕಣಿ ಕನ್ನಡಿಗರ ಸ್ನೇಹಸೇತುವೂ ಆದರು. ‘ಯುಗ ಪ್ರವರ್ತಕ ಜೀವೊತ್ತಮತೀರ್ಥರು’ ಕೃತಿಯನ್ನು ಮರಾಠಿಯಿಂದ ಅನುವಾದಿಸಿದರು.. ಬೆಂಗಳೂರಿಗೆ ಬಂದು ನೆಲೆಸಿದಾಗ ನೂತನ ವಾರಪತ್ರಿಕೆಯ ಸಂಪಾದಕರ ಜವಾಬ್ದಾರಿಯನ್ನು ಕೆಲಕಾಲ ನಿರ್ವಹಿಸಿದರು ಆಗ ತಾನು ಅವರ ಸಹೋದ್ಯೋಗಿಯಾಗಿದ್ದೆ ಎಂದು ನೆನಪು ಮಾಡಿಕೊಂಡರು. ದತ್ತಿ ಸ್ಥಾಪಿಸಿರುವಡಾ.ವರದಾ ಶ್ರೀನಿವಾಸರನ್ನು ಅವರು ಪ್ರಶಂಸಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾ.ಮಂ.ಕೃಷ್ಣರಾಯರು ‘ಪ್ರಶಸ್ತಿ’ ಎಂದರೆ ಆತಂಕ ಪಡುವ ಕಾಲ ಇದು. ನಾನು ಸರ್ಕಾರಿ ಪ್ರಶಸ್ತಿಗಳಿಂದ ಸದಾ ದೂರವೇ ಇದ್ದೇನೆ. ಆದರೆ ಇದು ಪ್ರೀತಿ ಅಭಿಮಾನ ತುಂಬಿದ ಪ್ರಶಸ್ತಿ ಶಿವರಾಮಕಾರಂತರು, ಇದ್ದಿನಬ್ಬ ಅವರ ಜೊತೆಗೆ ವಿದ್ವಾನ್ ಪಿ.ಕೆ.ನಾರಾಯಣ್ ದಕ್ಷಿಣ ಕನ್ನಡದಲ್ಲಿ ಕನ್ನಡವನ್ನು ಕಟ್ಟಿದವರು ಅಂತಹವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ನಾನು ತುಂಬಾ ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಗಿರುವ ಸುಧಾರಣೆಗಳನ್ನು ಅವರು ಮೆಚ್ಚಿಕೊಂಡರು. ದತ್ತಿದಾನಿಗಳಾದ ಡಾ.ವರದಾ ಶ್ರೀನಿವಾಸ್ ಕನ್ನಡ ಚಳುವಳಿಗೆ ಶ್ರೀ ಪಿ.ಕೆ.ನಾರಾಯಣ ಅವರ ಕೊಡುಗೆಗಳನ್ನು ಸ್ಮರಿಸಿ ಕೊಂಡು ಕನ್ನಡವನ್ನು ಬೆಳೆಸಿದ ಶಾ.ಮ.ಕೃಷ್ಣರಾಯರಿಗೆ ಅದು ಸಂದಿರುವುದು ಅರ್ಥಪೂರ್ಣವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಸ್ವಾಗತವನ್ನು ಮಾಡಿದರೆ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿ ಕೊಟ್ಟರು.

ನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ,
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)