ಕನ್ನಡ ಸಾಹಿತ್ಯ ಪರಿಷತ್ತಿನ ‘ಪ್ರೊ.ಸಿ,ಎಚ್.ಮರಿದೇವರು ದತ್ತಿ’ ಪ್ರಶಸ್ತಿಗೆ ಐವರು ಸಾಧಕರ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತಿನ ‘ಪ್ರೊ.ಸಿ,ಎಚ್.ಮರಿದೇವರು ದತ್ತಿ’ ಪ್ರಶಸ್ತಿಗೆ ಐವರು ಸಾಧಕರ ಆಯ್ಕೆ

IMG-20240311-WA0063

IMG-20240311-WA0064

IMG-20240311-WA0065

IMG-20240311-WA0066

ಬೆಂಗಳೂರು: 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪ್ರೊ.ಸಿ,ಎಚ್.ಮರಿದೇವರು ದತ್ತಿ’ ಪ್ರಶಸ್ತಿಗೆ ಕುಷ್ಟಗಿಯ ನಿಸರ್ಗ ಸಂಗೀತ ವಿದ್ಯಾಲಯ, ಚಾಮರಾಜನಗರದ ಹಿರಿಯ ಬರಹಗಾರ ಕೆ.ಸಿ.ಶಿವಪ್ಪ, ರಾಯಚೂರಿನ ಕೃಷಿತಜ್ಞರಾದ ಕವಿತಾ ಮಿಶ್ರ, ತುಮಕೂರಿನ ಕನ್ನಡ ಸೇವಕ ಡಾ.ಬಿ.ನಂಜುಂಡ ಸ್ವಾಮಿ ಮತ್ತು ತುಮಕೂರಿನ ಸಂಗೀತ ಸಾಧಕರಾದ ಮಲ್ಲಿಕಾರ್ಜುನ ಕೆಂಕೆರೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕೃಷಿ, ನೀರಾವರಿ, ಕನ್ನಡ ಸೇವೆಯ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದರಿಗೆ ಈ ದತ್ತಿ ಪುರಸ್ಕಾರವನ್ನು ನೀಡಲಾಗುತ್ತದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೋಕಿನ ಹನಮಸಾಗರದಲ್ಲಿರುವ ನಿಸರ್ಗ ಸಂಗೀತ ವಿದ್ಯಾಲಯ ಮತ್ತು ರಂಗ ಕಲಾವಿದರ ಸಂಘ (ರಿ) ಸಂಪತ್ತಿಗೆ ಸವಾಲ್ ಖ್ಯಾತಿಯ ನಾಟಕಕಾರ ಮತ್ತು ನಿರ್ದೇಶಕ ಪಿ.ಬಿ.ಧತ್ತರಗಿ ಮತ್ತು ರಂಗ ನಿರ್ದೇಶಕಿ ಸರೊಜಮ್ಮ ಧತ್ತರಗಿಯವರಿಂದ ಸ್ಥಾಪಿತವಾಗಿದ್ದು ಮರೆಯಾಗುತ್ತಿರುವ ರಂಗಕಲೆಯನ್ನು ಉಳಿಸುವುದು, ಕಲಾವಿದರ ಬದುಕಿಗೆ ನೆರವಾಗುವುದು ದೊಡ್ಡಾಟ ಸಣ್ಣಾಟದಂತಹ ಜನಪದ ಕಲೆಗಳನ್ನು ಉಳಿಸುವುದು ಮೊದಲಾದ ಘನ ಉದ್ಧೇಸಶವನ್ನು ಹೊಂದಿದೆ. ನಿರಂತರ ಸಂಗೀತ ತರಬೇತಿ ನೀಡುತ್ತಿರುವ ಸಂಸ್ಥೆ 150ಕ್ಕೂ ಹೆಚ್ಚು ನಾಟಕಗಳನ್ನು ಹಮ್ಮಿಕೊಂಡು ಯಶಸ್ಸನ್ನು ಪಡೆದಿದೆ.

‘ಮುದ್ದುರಾಮ’ನ ಖ್ಯಾತಿಯ ಕೆ.ಸಿ.ಶಿವಪ್ಪನವರು ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೂ ಒಲಿದಿದ್ದು ಸಾಹಿತ್ಯದತ್ತ, ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು ಬೆಂಗಳೂರು ವಿಶ್ವಾವಿದ್ಯಾಲಯದ ಪ್ರಸಾರಂಗದ ನಿರ್ದೇಶಕರಾಗಿ, ಕನ್ನಡ ಸಂಸ್ಕೃತಿ ನಿರ್ದೇಶನಾಲಯದಲ್ಲಿ ಸಹ ನಿರ್ದೇಶಕರಾಗಿ, ವಿಧಾನ ಸೌಧದ ಸಚಿವಾಲಯದಲ್ಲಿ ವಿಶೇಷಾಧಿಕಾರಿಯಾಗಿ ಭಾರತೀಯ ವಿದ್ಯಾಭವನದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ದಕ್ಷ ಆಡಳಿತಗಾರ ಎಂಬ ಹೆಸರನ್ನು ಪಡೆದರು. ಮಲ್ಲಿಗೆ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿ ಕೂಡ ಸೇವೆ ಸಲ್ಲಿಸಿದ ಅವರು ಜಿ.ಎಸ್.ಎಸ್. ಮಹಾವಿದ್ಯಾಪೀಠದಲ್ಲಿ ಪ್ರಕಟಣಾ ವಿಭಾಗದ ಗೌರವ ನಿರ್ದೇಶಕರಾಗಿ ಅದರ ವ್ಯಾಪ್ತಿಯನ್ನು ಜಾಗತಿಕವಾಗಿ ಹಿಗ್ಗಿಸಿದ ಹೆಗ್ಗಳಿಕೆಯನ್ನು ಪಡೆದವರು. ರಾಗರತಿ, ಅನುರಾಗ, ರಾಧಾಮಾಧವ, ಚಿತ್ತವೃತ್ತಿ ಹೀಗೆ ಅನೇಕ ಕವನ ಸಂಕಲನಗಳನ್ನು ಹೊರ ತಂದಿರುವ ಅವರ ಸಮಗ್ರ ಕಾವ್ಯ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ಮುದ್ದುರಾಮ ಸರಣಿಯ ನಾಲ್ಕು ಚೌಪದಿಗಳ ಸಂಕಲನಗಳು ಬಂದಿದ್ದು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟಿವೆ. ಕನ್ನಡ ಮತ್ತು ಇಂಗ್ಲೀಷ್ನುಲ್ಲಿ ಅನೇಕ ಕೃತಿಗಳನ್ನು ಬರೆದಿರುವ ಅವರಿಗೆ ಹಲವು ಗೌರವಗಳು ಸಂದಿದ್ದು ಮೈಸೂರು ದಸರಾ ಕವಿಗೋಷ್ಟಿಯ ಅಧ್ಯಕ್ಷತೆ ಮತ್ತು ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವುಗಳಲ್ಲಿ ಮುಖ್ಯವಾದುದು.

ಪ್ರಗತಿಪರ ಕೃಷಿ ಮಹಿಳೆಯಾಗಿರುವ ಕವಿತಾ ಮಿಶ್ರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉನ್ನತ ಹುದ್ದೆಯನ್ನು ಬಿಟ್ಟು ಕೃಷಿಯ ಕಡೆಗೆ ಬಂದವರು. ಕೃಷಿಯಲ್ಲಿ ಹಲವು ಹೊಸತನಗಳನ್ನು ಅಳವಡಿಸಿದ ಅವರು ತೋಟಗಾರಿಕೆ ಮತ್ತು ಅರಣ್ಯ ಕೃಷಿಯಲ್ಲಿ ಕೂಡ ಮಹತ್ತರವಾದ ಸಾಧನೆಯನ್ನು ಮಾಡಿದವರು. ಜೇನು ಸಾಕಣಿಕೆ, ಕುರಿ ಸಾಕಾಣಿಕೆ, ದೇಸಿ ಹಸು ಸಾಕಾಣಿಕೆ, ಹೈನುಗಾರಿಕೆಯಲ್ಲಿ ಕೂಡ ಮಹತ್ವದ ಸಾಧನೆ ಮಾಡಿರುವ ಅವರ ಸೇವೆಯನ್ನು ದೇಶದ ಅನೇಕ ಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯಾಗಿ ಪಡೆದು ಕೊಂಡಿವೆ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಲಭಿಸಿವೆ.

ತುಮಕೂರಿನ ಕನ್ನಡ ಸೇವಕರಾದ ಡಾ.ಬಿ.ನಂಜಂಡ ಸ್ವಾಮಿಯವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ತುಮಕೂರಿನಲ್ಲಿ ಶುದ್ಧ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿರುವ ಇವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಅವರ ಲೇಖನಗಳು ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡದ ಪರವಾಗಿ ನಿರಂತರವಾಗಿ ನಂಜುಂಡ ಸ್ವಾಮಿಯವರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಸುಗಮ ಸಂಗೀತ ಗಾಯಕ ಮತ್ತು ಸಂಘಟಕರಾದ ಮಲ್ಲಿಕಾರ್ಜುಜನ ಕೆಂಕೆರೆಯವರು ಸ್ವರ ಸಿಂಚನ ಸುಗಮ ಕಲಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿರುವ ಅವರಿಗೆ ಹಲವಾರು ಗೌರವ ಸಂದಿದ್ದು ಪುರಸ್ಕಾರಗಳು ಸಂದಿವೆ.

ಪ್ರಶಸ್ತಿಯ ಆಯ್ಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳ ಪರವಾಗಿ ಎಸ್.ರಾಜಶೇಖರ್, ಎಂ.ಎಸ್.ರವಿ ಕುಮಾರ್ ಮತ್ತು ಕೆ.ಎಸ್.ಸಿದ್ದಲಿಂಗಪ್ಪನವರು ಹಾಜರಿದ್ದರು.

ಪ್ರಶಸ್ತಿಗೆ ಆಯ್ಕೆಯಾಗಿರುವ ನಿಸರ್ಗ ಸಂಗೀತ ವಿದ್ಯಾಲಯ, ಕೆ.ಸಿ.ಶಿವಪ್ಪ, ರಾಯಚೂರಿನ ಕೃಷಿತಜ್ಞರಾದ ಕವಿತಾ ಮಿಶ್ರ, ಡಾ.ಬಿ.ನಂಜುಂಡ ಸ್ವಾಮಿ ಮತ್ತು ಮಲ್ಲಿಕಾರ್ಜುನ ಕೆಂಕೆರೆ ಆಯ್ಕೆಯಾಗಿದ್ದಾರೆ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ,
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)