ಶನಿವಾರ (ಮಾರ್ಚಿ 16) ದಂದು ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಮತ್ತು ಪ್ರವೀಣ್ ದತ್ ಸ್ಟೀಫನ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿ ಪ್ರದಾನ

ಶನಿವಾರ (ಮಾರ್ಚಿ 16) ದಂದು ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಮತ್ತು ಪ್ರವೀಣ್ ದತ್ ಸ್ಟೀಫನ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿ ಪ್ರದಾನ

kasapa_new

ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸಂಜೆ ಐದು ಗಂಟೆಗೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ‍್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಲಿದ್ದು ಎಸ್.ಎಂ.ಎಂ.ಐ ಧಾರ್ಮಿಕ ಸಭೆಯ ಕರ್ನಾಟಕ ಪ್ರಾಂತ್ಯಾಧಿಕಾರಿಗಳಾದ ಡಾ. ಸಿಸ್ಟರ್ ಜೆಸ್ಸಿ ಮರ್ಲಿನ್ ಪ್ರಶಸ್ತಿ ಪ್ರದಾನವನ್ನು ಮಾಡಲಿದ್ದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರಜ್ಞರಾದ ಡಾ.ಸಿ.ಜಿ. ಲಕ್ಷ್ಮಿಪತಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕನ್ನಡದಲ್ಲಿಯೇ ಕ್ತೈಸ್ತ ಪ್ರಾರ್ಥನೆಗಳು ನಡೆಯ ಬೇಕು ಎಂದು ಹೋರಾಟ ಮಾಡಿದ ಫಾದರ್ ಚಸರಾ ಎಂದೇ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಫಾದರ್ ಚೌರಪ್ಪ ಸೆಲ್ವರಾಜ್ ಚರ್ಚ್‍ಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ ಮತ್ತು ಸಂಗೀತ ರೂಪುಗೊಳ್ಳಲು ಶ್ರಮಿಸಿದವರು.. ಅವರ ನೆನಪಿನಲ್ಲಿ ‘ಸಂಚಲನಾ ಬಳಗ’ದವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಪ್ರತಿ ವರ್ಷ ಒಬ್ಬ ಪ್ರತಿಭಾವಂತ ಕ್ರೈಸ್ತ ಸಾಧಕ ಮತ್ತು ಕನ್ನಡ ಪರ ಹೋರಾಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿರುವ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಂತರ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವೀಣ್ ದತ್ ಸ್ಟೀಫನ್ ಪ್ರತಿಭಾವಂತ ಸಂಗೀತ ನಿರ್ದೇಶಕರು, ಫಾದರ್ ಚಸರಾ ಅವರ ಬಹುತೇಕ ಧ್ವನಿ ಸುರಳಿಗಳಿಗೆ ಇವರದೇ ಸಂಗೀತ. ಸ್ಟೀಫನ್ ಪ್ರಯೋಗ್ ಎನ್ನುವ ಹೆಸರಿನಲ್ಲಿ ಪ್ಯಾರೀಸ್ ಪ್ರಣಯ, ಸಂತೋಷ, ಬ್ರೇಕಿಂಗ್ ನ್ಯೂಸ್, ವಸುಂಧರ ಮೊದಲಾದ ಚಿತ್ರಗಳಿಗೆ ಪ್ರಯೋಗ ಶೀಲ ಸಂಗೀತವನ್ನು ನೀಡಿದ್ದಾರೆ. ಇದರಲ್ಲಿ ಪ್ಯಾರೀಸ್ ಪ್ರಣಯ ಚಿತ್ರ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿಯನ್ನು ಅವರಿಗೆ ತಂದು ಕೊಟ್ಟಿದೆ.

ಸಾಂಸ್ಕೃತಿಕವಾಗಿ ಬಹಳ ಮಹತ್ವದ ಈ ಕಾರ್ಯಕ್ರಮದ ವಿವರಗಳನ್ನು ನಿ‍ಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದರ ಜೊತೆಗೆ ನಿಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಾರ್ಯಕ್ರಮಕ್ಕೆ ಕಳುಹಿಸ ಬೇಕಾಗಿ ವಿನಂತಿ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ,
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)