87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ

87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ

WhatsApp Image 2024-06-25 at 4.18.26 PM

ಬೆಂಗಳೂರು: ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಮತ್ತು ಪದಾಧಿಕಾರಿಗಳು, ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಚೆಲುವರಾಯ ಸ್ವಾಮಿ, ಮಂಡ್ಯ ಜಿಲ್ಲೆಯ ಶಾಸಕರುಗಳನ್ನು ಒಳಗೊಂಡ ಸಭೆಯಲ್ಲಿ ಚರ್ಚಿಸಿ ಇಂದು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ.

ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸಂಬರ್ ತಿಂಗಳ 20,21,22ರ ಶುಕ್ರವಾರ, ಶನಿವಾರ, ಭಾನುವಾರಗಳಂದು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರ ಮತ್ತು ಜಿಲ್ಲಾಡಳಿತದ ಸಂಪೂರ್ಣ ಸಹಾಯ, ಸಹಕಾರ, ಸಹಯೋಗ, ಸಮನ್ವಯ ಮತ್ತು ಸಮಾಲೋಚನೆಗಳಿಂದ ಈ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿದೆ ಎನ್ನುವ ವಿಶ್ವಾಯಸವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವ್ಯಕ್ತ ಪಡಿಸಿದ್ದಾರೆ.

ಮೂರು ದಿನಗಳ ಕಾಲ ಜಗತ್ತಿನಲ್ಲೆಡೆಯಲ್ಲಿಯೂ ಇರುವ ಕನ್ನಡಿಗರು ಅಕ್ಕರೆಯ ನಾಡು ಸಕ್ಕರೆಯ ಬೀಡು ಮಂಡ್ಯಕ್ಕೆ ಆಗಮಿಸ ಬೇಕು. ಅಲ್ಲಿ ಕನ್ನಡ-ಕನ್ನಡಿಗ –ಕರ್ನಾಟಕದ ಕುರಿತು ಅರ್ಥಪೂರ್ಣ ಚರ್ಚೆಗಳು, ವಿಚಾರ ಮಂಥನಗಳು ನಡೆಯಲಿವೆ, ಕನ್ನಡತನ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ನಾಡಿನ ವಿಶೇಷ ತಿನುಸುಗಳ ಸುಗ್ರಾಸ ಭೋಜನವೂ ಇರಲಿದೆ ಎಂದಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಮೂರು ದಿನಗಳನ್ನು ‘ಕನ್ನಡ’ಕ್ಕಾಗಿ ಮೀಸಲಿಡುವಂತೆ ಕನ್ನಡಿಗರೆಲ್ಲರನ್ನೂ ಕೋರಿದ್ದಾರೆ. ಡಿಸಂಬರ್ ತಿಂಗಳ ಈ ಅವಧಿಯಲ್ಲಿ ಮಂಡ್ಯದಲ್ಲಿ ಹಿತಕರ ವಾತಾವರಣವಿದ್ದು, ಅದು ಕ್ರಿಸ್ ಮಸ್ ರಜೆಯ ಸಮಯವಾಗಿರುವುದರಿಂದ ಯುವ ಪೀಳಿಗೆಯವರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಭಾಗವಹಿಸಲು ಅನುಕೂಲಕರವಾಗಿರುತ್ತದೆ. ಇದರ ಜೊತೆಗೆ ಹೊರ ನಾಡು ಮತ್ತು ಹೊರ ದೇಶದವರಿಗೂ ಕೂಡ ಕ್ರಿಸ್ ಮಸ್ ರಜೆ ಇರುವುದರಿಂದ ಇದು ಸೂಕ್ತವಾದ ಕಾಲವಾಗಿದ್ದು ಎಲ್ಲರೂ ಭಾಗವಹಿಸಿ ಸಂಭ್ರಮದಿಂದ ಕನ್ನಡದ ಹಬ್ಬವನ್ನು ಆಚರಿಸೋಣ, ಕನ್ನಡದ ತೇರನ್ನು ಎಳೆಯೋಣ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಎಲ್ಲಾ ಕನ್ನಡಿಗರನ್ನು ಆಹ್ವಾನಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)