MENU

ಅನೇಕತೆಯಲ್ಲಿ ‘ಏಕತೆ’ಯನ್ನು ಸಾರಿದ ಸಂತ ಶ್ರೇಷ್ಠರು ಸಂತ ಶಿಶುನಾಳ ಶರೀಫರು: ನಾಡೋಜ ಡಾ.ಮಹೇಶ ಜೋಶಿ

ಅನೇಕತೆಯಲ್ಲಿ ‘ಏಕತೆ’ಯನ್ನು ಸಾರಿದ ಸಂತ ಶ್ರೇಷ್ಠರು ಸಂತ ಶಿಶುನಾಳ ಶರೀಫರು: ನಾಡೋಜ ಡಾ.ಮಹೇಶ ಜೋಶಿ

WhatsApp Image 2024-07-03 at 6.51.39 PM

ಬೆಂಗಳೂರು: ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿ ಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ `ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು . ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು, `ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು. ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ `ಸಮಾನತೆಯ ಹರಿಕಾರರು. ಇವರಿಬ್ಬರದು ಅಪರೂಪದ ಗುರು-ಶಿಷ್ಯ ಜೋಡಿ ಹೀಗಾಗಿ ಇಬ್ಬರನ್ನೂ ಒಟ್ಟಾಗಿಯೇ ಸ್ಮರಿಸುವ ಪರಂಪರೆ ನಡೆದು ಬಂದಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು

ದಿನನಿತ್ಯ ನಡೆಯುವ ಘಟನೆಗಳನ್ನು ಶರೀಫರು ತತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ನೀಡುತ್ತಿದ್ದರು. `ಕೋಡಗನ ಕೋಳಿ ನುಂಗಿತ್ತಾ’, `ಬಿದ್ದಿಯಬ್ಬೆ ಮುದುಕಿ’, `ಹಾವು ತುಳಿದೇನೆ’, `ಎಂಥ ಮೋಜಿನ ಕುದುರಿ’, `ಗುಡಿಯ ನೋಡಿರಣ್ಣ’, `ತರವಲ್ಲ ತಗೀ ನಿನ್ನ ತಂಬೂರಿ ‘ಏನ್ ಕೊಡ ಎನ್ ಕೊಡವಾ ‘ಸೋರುತಿಹುದು ಮನೆಯ ಮಾಳಿಗಿ, ಕುಂಬಾರಕೀ ಈಕೆ ಕುಂಬಾರಕಿ’, ‘ಗುಡು ಗುಡಿಯ ಸೇದಿ ನೋಡೋ’ ಮುಂತಾದ ತತ್ವಪದಗಳು ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ. ಶರೀಫರು ರಚಿಸಿದ ಒಟ್ಟು ೪೧೦ ತತ್ವ ಪದಗಳು ಇವರೆಗೂ ದಾಖಲಾಗಿದ್ದು ಅವುಗಳಲ್ಲಿ ದೇವಸ್ತುತಿ, ಗುರುಸ್ತುತಿ , ದಂಡಕ, ಕಾಲಜ್ಞಾನ, ಲಾವಣಿ, ಅಲಾವಿ ಪದಗಳು ಸೇರಿವೆ. ಜೊತೆಗೆ ಗುಣಾತ್ಮಕ ಹಿನ್ನೆಲೆಯಲ್ಲಿ ಬರೆದ ನೀತಿಯನ್ನು ಒಳಗೊಂಡ ಇನ್ನೂ ಅನೇಕ ರಚನೆಗಳಿವೆ. ಹೀಗೆ ತತ್ವ ಪದ ಹಾಡಿ ತತ್ವ ಬೋಧನೆ ಮಾಡಿದರು. ದಂಡಕಗಳನ್ನು ಹೇಳಿ ದೇವಿ-ದೇವತೆಯರನ್ನು ಸ್ತುತಿಸಿದರು. ಮಂಗಳಾರತಿಯನ್ನು ಹಾಡಿ ಸರ್ವರಿಗೂ ಮಂಗಳವನ್ನು ಬಯಸಿದರು. ಆದ್ದರಿಂದಲೇ ಶರೀಫರು ‘ಸರ್ವಜನರ ಸಂತ’ರಾದರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಶರೀಫರ ಕುರಿತು ಇಂದು ನಮ್ಮ ದೇಶದಲ್ಲಿ ಮಾತ್ರ ಜಗತ್ತಿನೆಲ್ಲೆಡೆ ಸಂಶೋಧನೆ ಮತ್ತು ವಿಶ್ಲೇಷಣೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.

ತ್ರಿಕಾಲ ಜ್ಞಾನಿಯಾಗಿದ್ದ ಗುರುಗೋವಿಂದ ಭಟ್ಟರು ತಮ್ಮ ಅಂತ್ಯದ ದಿನಗಳು ಸಮೀಪವಾಗುತ್ತಿರುವುದನ್ನು ಅರಿತು ಒಂದು ದಿನ ಶಿಷ್ಯರೆಲ್ಲರನ್ನು ಕರೆದು ‘ನನಗಾ ವಾಂತಿ ಬರೋಂಗ ಆಗ್ತಿದೆ. ಅದ್ರ ನಾ ಮಾಡೋ ವಾಂತಿ ಎಲ್ಲೂ ಚೆಲ್ಲಬಾರದು. ಯಾರೂ ತುಳೀಬಾರದು, ಅಂತಹ ಜಾಗ ನೋಡ್ರಪ್ಪಾ’ ಎಂದರು. ಸುತ್ತ ನೆರೆದ ಶಿಷ್ಯರೆಲ್ಲ ಗಾಬರಿಯಾದರು. ಅಷ್ಟು ಹೊತ್ತಿಗೆ ಶರೀಫರು ಅಲ್ಲಿಗೆ ಓಡೋಡಿ ಬಂದರು. ತಮ್ಮ ದೇಹವನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದರಿತು, ತಮ್ಮ ಬೊಗಸೆಯನ್ನು ಗುರುಗಳ ಮುಂದೆ ಒಡ್ಡಿದರು, ಗುರುಗಳು ಬೊಗಸೆಯಲ್ಲಿ ಮಾಡಿದ ವಾಂತಿಯನ್ನೇ ‘ಉತ್ಕಷ್ಟ ಪ್ರಸಾದ’ ಎಂದು ಶರೀಫರು ಕುಡಿದು ಬಿಟ್ಟರು. ಈ ಮೂಲಕ ಗುರು ಗೋವಿಂದ ಭಟ್ಟರು ತಮ್ಮೊಳಗಿನ ಆಧ್ಯಾತ್ಮ ಹಾಗೂ ಜ್ಞಾನಶಕ್ತಿಯನ್ನು ಶರೀಫರಿಗೆ ಧಾರೆಯೆರೆದರು. ಇದರ ಫಲವಾಗಿ ಶರೀಫರಲ್ಲೂ ಜ್ಞಾನ ಹಾಗೂ ಜಾಗೃತಶಕ್ತಿ ಮೂಡಿತು. ತಮ್ಮ ಗುರುಗಳು ದೇಹಾಂತ್ಯವಾದ ವರ್ಷ ೧೮೭೦ರ ನಂತರ ೧೯ ವರ್ಷಗಳ ಕಾಲ ಸಾಧನೆಗಳನ್ನು ಮಾಡಿ ಇನ್ನಷ್ಟು ಮಹಾಮಹಿಮರಾದರು ಎಂದು ಅವರ ಜೀವನದ ಘಟನೆಯನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಶರೀಫರು ಕನ್ನಡದ ಮೊದಲ ಮುಸ್ಲಿಂ ಕವಿ ಎನ್ನುವುದಕ್ಕಿಂತ ಜಾತಿಧರ್ಮವನ್ನು ಮೀರಿದ ದಾರ್ಶನಿಕ ಎನ್ನುವುದು ಸೂಕ್ತ ಎಂದು ವಿವರಿಸಿದರು.

ಗುರುಗಳಿಂದ ಕಾಲಜ್ಞಾನ ತಿಳಿದ ಶರೀಫರು ಮುಂದೆ ಒದಗಲಿರುವ ಅಪತ್ತುಗಳನ್ನು ಮೊದಲೇ ಗ್ರಹಿಸಿ, ಎಲ್ಲರನ್ನೂ ಎಚ್ಚರಿಸಿದರು. ಮುಂದೆ ಗುರುಗಳಾದ ಗೋವಿಂದಭಟ್ಟರಂತೆ ಶರೀಫರು ಕೊಡ ತಮ್ಮ ಅಂತ್ಯಕಾಲ ಸಮೀಪವಾಗುತ್ತಿರುವುದನ್ನು ಜ್ಞಾನಶಕ್ತಿಯಿಂದ ತಿಳಿದು. ‘ಬಿಡತೀನಿ ದೇಹ ಬಿಡತೇನಿ, ಕೊಡತೀನಿ ಭೂಮಿಗೆ, ಇಡತೀನಿ ಮಹಿಮರ ನಡತೀ ಹಿಡಿದು, ಜೀವನ ಬಾಧೆಗೆದ್ದು ಶಿವಲೋಕದೊಳಗೆ ನಾ’ ಎಂದು ನುಡಿದು ದೇಹತ್ಯಾಗ ಮಾಡಿ ಅಖಂಡದಲ್ಲಿ ನಿಂತರು. ಶಿಶುನಾಳದ ಶರೀಫರ ಗದ್ದುಗೆ ಇಂದಿಗೂ ಕೋಮು ಸೌಹಾರ್ದತೆ, ಹಿಂದೂ-ಮುಸ್ಲಿಂ ಭಾವೈಕ್ಯತೆ, ಭ್ರಾತೃತ್ವದ ಬಂಧುರತೆಗೆ ಸಾಕ್ಷಿಯಾಗಿದ್ದು, ಶರೀಫ-ಗೋವಿಂದ ಭಟ್ಟರ ಜೋಡಿ ಜಾತಿಮತಗಳ ಗಡಿ ದಾಟಿ ಸಾಧಿಸಿದ ಮಾನವತೆಯ ಎತ್ತರಕ್ಕೆ ನಿದರ್ಶನವಾಗಿದೆ. ಇಂದಿನ ಕಾಲಘಟ್ಟದಲ್ಲಿಯೂ ಈ ಅಚ್ಚರಿಯನ್ನು ನಾವು ನೋಡಬಹುದು. ಒಂದೆಡೆ ‘ಅಲ್ಲಾಹೋ ಅಕ್ಬರ್’ ಘೋಷಣೆ ಕೇಳಿ ಬಂದರೆ ಇನ್ನೊಂದೆಡೆ ‘ಹರ ಹರ ಮಹಾದೇವ್’ ಎಂಬ ಉದ್ಗಾರವನ್ನು ಕೇಳ ಬಹುದು. ಹಿಂದೂಗಳು ಹಣ್ಣು-ಕಾಯಿ ಅರ್ಪಿಸಿದರೆ, ಮುಸ್ಲೀಮರು ಸಕ್ಕರೆ ಅರ್ಪಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರೂ ಶಿಶುನಾಳಕ್ಕೆ ಭೇಟಿ ನೀಡಿ ಈ ಭಾವೈಕ್ಯತೆಯ ದರ್ಶನವನ್ನು ಪಡೆಯ ಬಹುದು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿ ಸಂತ ಶಿಶುನಾಳ ಶರೀಫರ ಚಿಂತನೆಗಳು ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದರು ಕಾರ್ಯಕ್ರಮದಲ್ಲಿ ಸಂತಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ ಜೋಡಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)