ಕನ್ನಡ ಸಾಹಿತ್ಯಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಎಂ.ವಿ.ಸೀಯವರ ಕೊಡುಗೆ ಅಪಾರ: ನಾಡೋಜ ಡಾ ಮಹೇಶ ಜೋಶಿ

ಕನ್ನಡ ಸಾಹಿತ್ಯಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಎಂ.ವಿ.ಸೀಯವರ ಕೊಡುಗೆ ಅಪಾರ: ನಾಡೋಜ ಡಾ ಮಹೇಶ ಜೋಶಿ

WhatsApp Image 2024-09-09 at 8.17.42 PM

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಎಂ.ವಿ.ಸೀ ಭದ್ರ ಬುನಾದಿ ಹಾಕಿದರೆ ತೇಜಸ್ವಿ ಘನತೆಯನ್ನು ನೀಡಿದರು ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಎಂ.ವಿ.ಸೀತಾರಾಮಯ್ಯ(ರಾಘವ) ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಛಿಸದೆ ಚಿಕ್ಕಮಗಳೂರಿನ ಮೂಡಿಗೆರೆಯ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು.‘ಸ್ವಗತ ಲಹರಿ ಮತ್ತು ಇತರ ಕವನಗಳು’ ಕವಿತೆಗಳ ಸಂಗ್ರಹವಾದರೆ, ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’, ‘ಏರೋಪ್ಲೇನ್ ಚಿಟ್ಟೆ’, ‘ಮಿಸ್ಸಿಂಗ್ ಲಿಂಕ್’, ‘ಮಿಲೇನಿಯಂ ಸರಣಿ’, ‘ಪರಿಸರದ ಕತೆ’ ಇವು ಕಥಾ ಸಂಗ್ರಹಗಳು. ‘ಯಮಳ ಪ್ರಶ್ನೆ’ ಏಕಾಂಕ ನಾಟಕ. ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’, ‘ಸ್ವರೂಪ’, ‘ನಿಗೂಢ ಮನುಷ್ಯರು’ ಇವು ವೈಚಾರಿಕ ಪ್ರಬಂಧಗಳ ಸಂಗ್ರಹ. ‘ಕರ್ವಾಲೋ’, ‘ಚಿದಂಬರ ರಹಸ್ಯ’, ‘ಕಾಡು ಮತ್ತು ಕ್ರೌರ್ಯ’, ‘ಜುಗಾರಿ ಕ್ರಾಸ್’ ಇವು ಕಾದಂಬರಿಗಳು. ‘ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್’ ಪ್ರವಾಸ ಕಥನದ ಜೊತೆಗೆ ಒಂದು ನದಿಯ ಇತಿಹಾಸವನ್ನು ತೋರುತ್ತವೆ. ‘ಅಣ್ಣನ ನೆನಪು’ ತಂದೆ ಕುವೆಂಪು ಅವರ ಬಗೆಗಿನ ನೆನಪು ಮತ್ತು ಹಲವು ಚಿಂತನೆಗಳನ್ನು ಒಳಗೊಂಡಿದೆ. ಸಹಜ ಕೃಷಿಯಂತಹ ಸಣ್ಣ ಪುಸ್ತಕದಲ್ಲಿ, ಪ್ಹುಕೋಕನ ಸಹಜ ಕೃಷಿ ಪದ್ಧತಿಯ ಬಗ್ಗೆ ಬರೆದಿರುವ ಅವರ ಕಥನ, ಕೃಷಿಯ ಬಗ್ಗೆ ಯಾವುದೇ ಜ್ಞಾನ ಇಲ್ಲದವನಿಗೂ ಇಡೀ ಬದುಕಿನ ಬಗೆಗೆ ಹೊಸ ವ್ಯಾಖ್ಯಾನ ಓದಿದ ಅನುಭವ ನೀಡುತ್ತದೆ. ಅಂಕಣಕಾರರಾಗಿಯೂ ಅವರು ಕನ್ನಡಿಗರ ಹೃನ್ಮನಗಳನ್ನು ಸೆಳೆದವರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತೇಜಸ್ವಿಯವರ ಕೊಡುಗೆಗಳನ್ನು ಸ್ಮರಿಸಿ ಕೊಂಡರು.

ಪ್ರೊ. ಎಂ. ವಿ. ಸೀತಾರಾಮಯ್ಯನವರು ತಮ್ಮ ವಿದ್ವತ್ತು ಮತ್ತು ಸಂಶೋಧನೆಗಳಿಗಾಗಿ ಅಪಾರವಾಗಿ ಗೌರವಿಸಲ್ಪಟ್ಟಿದ್ದಾರೆ. ವ್ಯಾಕರಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂಬುದು ವಿದ್ವಾಂಸರ ಅಭಿಮತ. ಪ್ರಾರಂಭಿಕ ಕನ್ನಡ ವ್ಯಾಕರಣದ ಕುರಿತಾದ ಅವರ ಕೃತಿಯು ಅಪಾರ ಜನಪ್ರಿಯತೆ ಹೊಂದಿದ್ದು ಇತರ ಭಾಷೆಗಳಿಗೆ ಸಹಾ ಅನುವಾದಗೊಂಡಿವೆ. ಹಳಗನ್ನಡದ ಶಬ್ದಮಣಿ ದರ್ಪಣದ ಬಗೆಗೆ ಸುದೀರ್ಘವಾದ ಅಧ್ಯಯನ ಕೈಗೊಂಡ ಎಂ ವಿ ಸಿ ಅವರು, ಅದರ ಕುರಿತಾದ ಒಂದು ಪರಿಷ್ಕೃತ ಕೃತಿಯನ್ನೂ ಪ್ರಕಟಿಸಿದರು. ಪ್ರೊ.ಎಂ. ವಿ. ಸಿ. ಅವರು ಶ್ರೀವಿಜಯನ ‘ಕವಿರಾಜಮಾರ್ಗ’ವನ್ನು ಕುರಿತು ಸಹಾ ಕೂಲಂಕಷ ಅಧ್ಯಯನ ನಡೆಸಿ ಅದರ ಕರ್ತೃತ್ವದ ಕುರಿತಾದ ಚರ್ಚೆಗೆ ಅಮೂಲ್ಯವಾದ ಮಾಹಿತಿ ಒದಗಿಸಿದ್ದಾರೆ. ಹಲವು ದಶಕಗಳಿಂದ ಉನ್ನತ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿರುವ ಬಿ.ಎಂ.ಶ್ರೀ ಪ್ರತಿಷ್ಠಾನದ ಬೆಳವಣಿಗೆಯಲ್ಲಿ ಪ್ರೊ. ಎಂ.ವಿ. ಸೀತಾರಾಮಯ್ಯನವರ ಕೊಡುಗೆ ಮಹತ್ವಪೂರ್ಣವಾದುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಶ್ರೀಮತಿ ಮೀರಾಶಿವಲಿಂಗಯ್ಯ, ಮಂಡ್ಯ ಜಿಲ್ಲಾ ಕ.ಸಾ.ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣೇಗೌಡ ಹೊಸ್ಕೂರು, ಕ.ಸಾ.ಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ಶ್ರೀಮತಿ ನಿವೇದಿತಾ ಹೊನ್ನತ್ತಿ ಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದರು ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)