ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿದ ಬ್ರಿಟನ್ ಸಾಹಸಿಗರು

ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿದ ಬ್ರಿಟನ್ ಸಾಹಸಿಗರು

WhatsApp Image 2024-09-12 at 3.11.20 PM

ಬೆಂಗಳೂರು: ಬ್ರಿಟನ್ ದೇಶದಿಂದ ಬಂದು ಭಾರತದಲ್ಲಿ ಸಾಹಸಯಾನದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಮೂವರು ಸಾಹಸಿಗರು, ಕನ್ನಡಿಗರೆಲ್ಲರ ಮಾತೃಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ನಾಡಿನ ಪರಂಪರೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ವಿಶದವಾಗಿ ವಿವರಿಸಿ ಅವರ ಸಾಹಸ ಯಾನಕ್ಕೆ ಶುಭವನ್ನು ಹಾರೈಸಿ ಅವರ ಸಾಮಾಜಿಕ ಕಾಳಜಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಬ್ರಿಟನ್ ದೇಶದದ ನಾಗರೀಕರಾದ ಡಿಕ್ಲಾಕ್ ಕಾಲನ್ ಮ್ಯಾಗಿಲ್ ವೃತ್ತಿಯಲ್ಲಿ ಪೈಲೆಟ್ ಆಗಿರುವವರು, ಅಲೆಕ್ಸ ಡೀನ್ ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಪಿ.ಎಚ್.ಡಿ ಮಾಡುತ್ತಿರುವವರು. ಸ್ಕಾಟ್ ಲ್ಯಾಂಡ್ನ ಅಲೆಕ್ಸಿ ವಿಶರ್ಡ್ ವೃತ್ತಿಯಲ್ಲಿ ಇಂಜಿನಿಯರ್ . ಈ ಮೂವರೂ ಸ್ನೇಹಿತರು ವಿದ್ಯೆಯಿಂದ ವಂಚಿತರಾದವರಿಗೆ ನೆರವಾಗುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು. ಅದಕ್ಕಾಗಿ ಅವರ ಕಂಡು ಕೊಂಡೊಂತಹ ದಾರಿ ಭಾರತದಲ್ಲಿನ ಸಾಹಸ ಪ್ರವಾಸ. ಕೇರಳದ ಕೊಚ್ಚಿನ್ ನಿಂದ ರಾಜಾಸ್ಥಾನದ ಜಸಲ್ಮೇರ್ ವರೆಗೆ ಅಟೋ ರಿಕ್ಷದಲ್ಲಿ ಪ್ರವಾಸ ಮಾಡುವ ಸಾಹಸ ಯಾತ್ರೆಯನ್ನು ಮಾಡಿ ಇದರಿಂದ ಸಂಗ್ರಹವಾದ ಹಣವನ್ನು ಅವಕಾಶವಂಚಿತರಿಗೆ ವಿದ್ಯೆ ಒದಗಿಸುವ ಯೋಜನೆಗೆ ಮೀಸಲಿಡಲು ನಿರ್ಧರಿಸಿದರು.

ಈ ಪ್ರವಾಸದ ಭಾಗವಾಗಿ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ಸಾಹಸಿಗಳ ತಂಡ ಭೇಟಿ ನೀಡಿತ್ತು. ಅವರನ್ನು ಸ್ವಾಗತಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ-ಕರ್ನಾಟಕ-ಕನ್ನಡದ ಮಹತ್ವದ ಕುರಿತು ಹೇಳಿ, ಕನ್ನಡ ಸಾಹಿತ್ಯ ಪರಿಷತ್ತಿನ 109 ವರ್ಷಗಳ ಸುದೀರ್ಘ ಇತಿಹಾಸವನ್ನು ವಿವರಿಸಿದರು. ಕನ್ನಡವನ್ನು ಬ್ರಿಟನ್ನಲ್ಲಿ ಪಸರಿಸುವ ಕುರಿತು ಈ ತಂಡದ ನೆರವನ್ನು ಕೋರಿದರು. ಕನ್ನಡ ಬಾವುಟವನ್ನು ನೀಡಿ ಈ ತಂಡಕ್ಕೆ ನಾಡೋಜ ಡಾ.ಮಹೇಶ ಜೋಶಿಯವರು ಶುಭ ಕೋರಿದ್ದು ಅರ್ಥಪೂರ್ಣವಾಗಿತ್ತು. ಕನ್ನಡ ಬಾವುಟವನ್ನು ಹೊತ್ತು ಸಾಹಸಿಗಳ ಅಟೋರಿಕ್ಷ ತನ್ನ ಮುಂದಿನ ಪಯಣವನ್ನು ನಡೆಸಿದ್ದು ತಾನು ಚಲಿಸುವ ಸ್ಥಳಗಳಲ್ಲಿ ಸಹಜವಾಗಿಯೇ ಕನ್ನಡದ ಕಹಳೆಯನ್ನು ಮೊಳಗಿಸುತ್ತಾ ಸಾಗಲಿದೆ.

ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದರು ಹಾಜರಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)