ಕನ್ನಡ ನಾಡಿನ ಉದಯವನ್ನು ಸಂಕೀರ್ತಿಸಿದ ಹುಯಿಲಗೋಳ ನಾರಾಯಣ ರಾಯರು-ನಾಡೋಜ ಡಾ.ಮಹೇಶ ಜೋಶಿ

ಕನ್ನಡ ನಾಡಿನ ಉದಯವನ್ನು ಸಂಕೀರ್ತಿಸಿದ ಹುಯಿಲಗೋಳ ನಾರಾಯಣ ರಾಯರು-ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಈ ಹಾಡು ಪ್ರಕಟಗೊಂಡ ದಿನದಿಂದ ಕನ್ನಡ ನಾಡಿನ ಹೆಸರಿನ ಜೊತೆಗೆ ಅಜರಾಮರವಾಗಿ, ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ. ಅವರ ಜೊತೆಗೆ ನನ್ನ ಬಾಲ್ಯದ ನೆನಪುಗಳು ಮಿಳಿತವಾಗಿದೆ ಎನ್ನುವುದು ಧನ್ಯತೆಯ ಭಾವವನ್ನು ಉಂಟು ಮಾಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಎಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರಿಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಹುಯಿಲುಗೋಳ ನಾರಾಯಣ ರಾಯರ 140ನೆಯ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಹುಯಿಲುಗೋಳ ನಾರಾಯಣ ರಾಯರ ಮೊಮ್ಮಗ ನನ್ನ ಶಾಲೆಯ ಸಹಪಾಠಿ, ಮೊಮ್ಮಗನ ಜೊತೆ ನಾನು ಹುಯಿಲುಗೋಳ ನಾರಾಯಣ ರಾಯರನ್ನು ‘ಅಜ್ಜ’ ಎಂದೇ ಕರೆಯುತ್ತಿದ್ದೆ. ತಂದೆ ಮತ್ತು ತಾಯಿ ಎರಡೂ ಕಡೆಯಿಂದಲೂ ಅಜ್ಜನನ್ನು ಕಾಣುವ ಅದೃಷ್ಟವನ್ನು ಪಡೆಯದ ನನಗೆ ಅವರು ‘ದೇವರು ಕೊಟ್ಟ ಅಜ್ಜನಾಗಿದ್ದರು’. ಅವರು ಆಗ ದೊಡ್ಡ ಕವಿಗಳು ಎನ್ನುವುದು ಗೊತ್ತಿರಲಿಲ್ಲ. ಅದನ್ನು ಅರ್ಥ ಮಾಡಿ ಕೊಳ್ಳುವ ವಯಸ್ಸೂ ನನ್ನದಾಗಿರಲಿಲ್ಲ. ಆದರೆ ಅವರ ತೊಡೆಯ ಮೇಲೆ ಆಡಿದ್ದು ಆಶೀರ್ವಾದವಾಗಿ ಇವತ್ತು ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಯಕ್ಷನಾಗಿ ಕನ್ನಡ ಸೇವೆಯನ್ನು ಮಾಡುವ ಸೌಭಾಗ್ಯವನ್ನು ನೀಡಿದೆ ಎಂದು ಮಾತ್ರ ನನಗೆ ತೀವ್ರವಾಗಿ ಅನ್ನಿಸುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿ ಕೊಂಡರು.

ಬರವಣಿಗೆ ದೃಷ್ಟಿಯಿಂದ ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ಜೈ ಕರ್ನಾಟಕ ವೃತ್ತ’, ‘ಪ್ರಭಾತ’, ‘ಧನಂಜಯ’ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಜೊತೆಗೆ ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸುತ್ತಿದ್ದರು. ಅವರ ನಾಟಕಗಳು ಚಾರಿತ್ರಿಕಪ್ರಜ್ಞೆ ಮತ್ತು ಸಾಂಸ್ಕೃತಿಕ ಒಳನೋಟಗಳಿಗೆ ಹೆಸರಾದವು. ‘ಕನಕ ವಿಲಾಸ’, ‘ಪ್ರೇಮಾರ್ಜುನ’, ‘ಮೋಹಹರಿ’, ‘ಅಜ್ಞಾತವಾಸ’, ‘ಪ್ರೇಮ ವಿಜಯ’, ‘ಸಂಗೀತ’, ‘ಕುಮಾರರಾಮ ಚರಿತ’, ‘ವಿದ್ಯಾರಣ್ಯ’, ‘ಭಾರತ ಸಂಧಾನ’, ‘ಉತ್ತರ ಗೋಗ್ರಹಣ’, ‘ಸ್ತ್ರೀಧರ್ಮ ರಹಸ್ಯ’, ’ಶಿಕ್ಷಣ ಸಂಭ್ರಮ’, ‘ಪತಿತೋದ್ಧಾರ’ ಇವು ನಾರಾಯಣ ರಾಯರ ಪ್ರಮುಖ ನಾಟಕಗಳು. ಅವರು ‘ಮೂಡಲು ಹರಿಯಿತು’ ಎನ್ನುವ ಕಾದಂಬರಿಯನ್ನು ಕೂಡ ಬರೆದಿದ್ದಾರೆ. ವಸ್ತುವಿನ ದೃಷ್ಟಿಯಿಂದ ಇದು ಆ ಕಾಲಕ್ಕೇ ಕ್ರಾಂತಿಕಾರಕ ಎನ್ನಿಸಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿ ಹುಯಿಲುಗೋಳ ನಾರಾಯಣ ರಾಯರ ಕೊಡುಗೆಗಳನ್ನು ಸ್ಮರಿಸಿ ಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ 1924ರ ಡಿಸಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದು ಚರಿತ್ರಾರ್ಹ ಕಾಂಗ್ರೇಸ್ ಅಧಿವೇಶನ. ಇದರ ಅಧ್ಯಕ್ಷತೆಯನ್ನು ಸ್ವತ: ಮಹಾತ್ಮಾ ಗಾಂಧಿಯವರೇ ವಹಿಸಿದ್ದರು. ಇದಕ್ಕೆ ಸ್ವಾಗತ ಗೀತೆಯನ್ನು ರಚಿಸಲು ಪತ್ರಿಕೆಗಳ ಮೂಲಕ ಆಹ್ವಾನವನ್ನು ನೀಡಲಾಗಿತ್ತು. ಆಗ ಹುಯಿಲುಗೋಳ ನಾರಾಯಣ ರಾಯರು ಸುಡವ ಜ್ವರದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಬರೆದರು. ಗವಾಯಿ ಸುಬ್ಬರಾಯರು ಮತ್ತು ಗಂಗೂಬಾಯಿ ಹಾನಗಲ್ಲರು ಈ ಗೀತೆಯನ್ನು ಹಾಡಿ ಇಡೀ ಸಭೆಯನ್ನು ಪರವಶಗೊಳಿಸಿದರು. ಗಾಂಧೀಜಿಯವರು ಇದನ್ನು ಕೇಳಿ ಸಂತೋಷಪಟ್ಟು ನಾರಾಯಣ ರಾಯರನ್ನು ಸನ್ಮಾನಿಸಿದರು. ಮುಂದೆ ‘ಉದಯವಾಗಲಿ’ ಏಕೀಕರಣದ ಕಿಚ್ಚನ್ನು ನಾಡಿನೆಲ್ಲೆಡೆ ಪಸರಿಸಿತು. ಹಳೆ ಮೈಸೂರು ಭಾಗದಲ್ಲಿ ಕಾಳಿಂಗರಾಯರು ಈ ಗೀತೆಯನ್ನು ಜನಪ್ರಿಯಗೊಳಿಸಿದರು ಎಂದು ವಿವರಗಳನ್ನು ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)