ಆರು ಜನ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ಕಾಯಕ ಪ್ರಶಸ್ತಿ’ ದತ್ತಿ ಪುರಸ್ಕಾರ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಕನ್ನಡ ಕಾಯಕ ದತ್ತಿ’ ಪ್ರಶಸ್ತಿಗೆ 2023ನೆಯ ಸಾಲಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಬೆಂಗಳೂರಿನ ಗೋಮೂರ್ತಿ ಯಾದವ್, ರಂಗಭೂಮಿ ಕ್ಷೇತ್ರದಿಂದ ತುಮಕೂರಿನ ಕೆ.ರೇವಣ್ಣ, ಸಾಹಿತ್ಯ ಕ್ಷೇತ್ರದಿಂದ ಚಿತ್ರದುರ್ಗದ ಡಾ.ಮೀರ ಸಾಬಹಳ್ಳಿ ಶಿವಣ್ಣ ಮತ್ತು 2024ನೆಯ ಸಾಲಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಚಿಕ್ಕ ಬಳ್ಳಾಪುರದ ಜಿ.ಬಾಲಾಜಿ, ರಂಗಭೂಮಿ ಕ್ಷೇತ್ರದಿಂದ ದಕ್ಷಿಣ ಕನ್ನಡದ ಕೃಷ್ಣಮೂರ್ತಿ ಕವತ್ತಾರ್ ಮತ್ತು ಸಾಹಿತ್ಯ ಕ್ಷೇತ್ರದಿಂದ ವಿಜಯಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ.ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ವ.ಚ.ಚನ್ನೇಗೌಡರು ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಸ್ಥಾಪಿಸಿದ್ದು ನಾಡು-ನುಡಿ, ನೆಲ-ಜಲ ಕುರಿತು ಸೇವೆ ಸಲ್ಲಿಸಿದವರಿಗೆ, ಕನ್ನಡಪರ ಹೋರಾಟಗಾರರಿಗೆ ಮತ್ತು ರಂಗಭೂಮಿ/ಸಂಗೀತ ಕ್ಷೇತರದಲ್ಲಿ ದುಡಿದ ಮೂರು ಜನ ಮಹನೀಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡ ಬೇಕೆನ್ನುವುದು ದತ್ತಿ ದಾನಿಗಳ ಆಶಯ.
2023ನೆಯ ಸಾಲಿಗೆ ‘ಕನ್ನಡ ಕಾಯಕ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಬೆಂಗಳೂರಿನ ಗೋಮೂರ್ತಿ ಯಾದವ್ ಹದಿಹರಯದಲ್ಲಿಯೇ ಕನ್ನಡದ ಕ್ರಾಂತಿಕೂಟದ ಸದಸ್ಯರಾಗಿ ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾದವರು ಬಹುತೇಕ ಕನ್ನಡ ಹೋರಾಟಗಳಲ್ಲಿ ಅವರು ಮುಖ್ಯಪಾತ್ರ ವಹಿಸಿದ್ದಾರೆ.
ಭಾಗವತರು ಸಂಘಟನೆಯ ಮೂಲಕ ಕ್ರಿಯಾಶೀಲರಾಗಿರುವ ತುಮಕೂರಿನ ಕೆ.ರೇವಣ್ಣನವರು 21 ನಾಟಕೋತ್ಸವಗಳನ್ನು ನಡೆಸಿದ್ದು ಅನೇಕ ಹಿರಿಯರ ಕುರಿತ ವಿಚಾರಸಂಕಿರಣಗಳನ್ನು ನಡೆಸಿದ್ದಾರೆ, ಮಹತ್ವದ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಚಳ್ಳಕೆರೆ, ಚಿತ್ರದುರ್ಗ, ದೊಡ್ಡಬಳ್ಳಾಪುರಗಳಲ್ಲಿ ಪ್ರಾಧ್ಯಾಪಕರಾಗಿ/ಪ್ರಾಂಶುಪಾಲರಾಗಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಬುಡಕಟ್ಟು ಜನಾಂಗದ ಕುರಿತು ಆಳವಾದ ಅಧ್ಯಗಯನವನ್ನು ನಡೆಸಿರುವ ಅವರು ‘ಕಾಡುಗೊಲ್ಲರ ಸಾಂಸ್ಕೃತಿಕ ವೀರರ’ ಕುರಿತು ಸಂಶೋಧನೆ ನಡೆಸಿದ್ದು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳ್ನು ಪ್ರಕಟಿಸಿದ್ದಾರೆ.
2024ನೆಯ ಸಾಲಿನ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಗೆ ಆಯ್ಕೆಯಾಗಿರುವ ಗೌರಿಬಿದನೂರಿನ ಜಿ.ಬಾಲಾಜಿಯವರು ಗಡಿಭಾಗದಲ್ಲಿ ಕನ್ನಡ ಹೋರಾಟಕ್ಕೆ ಶಕ್ತಿ ತುಂಬಿದವರು. ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು.
ಕವತ್ತಾರ್ ಎಂಬ ಚಿಕ್ಕಹಳ್ಳಿಯಿಂದ ಬಂದ ಕೃಷ್ಣಮೂರ್ತಿ ಕವತ್ತಾರ್ ಹಲವು ದೃಶ್ಯಕಲೆಗಳಲ್ಲಿ ಸಕ್ರಿಯರು, ಮನ್ನೂರಕ್ಕೂ ಹೆಚ್ಚು ಕನ್ನಡ ಮತ್ತು ತುಳು ನಾಟಕಗಳನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. ಹಲವಾರು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಬಿಜಾಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಸಂಶೋಧಕರು, ಇತಿಹಾಸ, ನೀರಾವರಿ ತಜ್ಞರು 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಬಹುಭಾಷಿಕ ವಿದ್ವಾಂಸರೂ ಕೂಡ ಹೌದು
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ಆಯ್ಕೆಗಳನ್ನು ಮಾಡಲಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತರಾದ ಗೋಮೂರ್ತಿ ಯಾದವ್, ಕೆ.ರೇವಣ್ಣ, ಡಾ.ಮೀರ ಸಾಬಹಳ್ಳಿ ಶಿವಣ್ಣ ಜಿ.ಬಾಲಾಜಿ, ಕೃಷ್ಣಮೂರ್ತಿ ಕವತ್ತಾರ್ ಮತ್ತು ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಯವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಅವರ ಸಾಧನೆಯ ಹಾದಿ ಹೀಗೇ ಮುಂದುವರೆಯಲಿ ಎಂದು ಆಶಿಸಿದ್ದಾರೆ.
ಪ್ರತಿಕ್ರಿಯೆ