ಎಡನೀರು ಶ್ರೀಗಳ ಮೇಲಿನ ಹಲ್ಲೆಗೆ ನಾಡೋಜ ಡಾ.ಮಹೇಶ ಜೋಶಿ ತೀವ್ರ ಖಂಡನೆ
ಬೆಂಗಳೂರು: ಕರ್ನಾಟಕದ ಗಡಿಭಾಗದ ಕಾಸರಗೋಡಿನ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಕಾರಿನ ಮೇಲೆ ನಡೆದಿರುವ ಹಲ್ಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತೀವ್ರವಾಗಿ ಖಂಡಿಸಿದ್ದಾರೆ. ಎಡನೀರು ಸಂಸ್ಥಾನವು ಪರಂಪರಾಗತವಾಗಿ ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕನ್ನಡದ ಅಸ್ಮಿತೆಯನ್ನು ಉಳಿಸಿ ಕೊಳ್ಳುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾ ಬಂದಿದೆ. ಇಲ್ಲಿನ ಶ್ರೀಶ್ರೀಗಳ ಮೇಲೆ ನಡೆದಿರುವ ಹಲ್ಲೆ ಕನ್ನಡದ ಮೇಲೆ ನಡೆದಿರುವ ಹಲ್ಲೆಯೇ ಆಗುತ್ತದೆ. ಕರ್ನಾಟಕದೊಂದಿಗೆ ಭಾವನಾತ್ಮಕವಾಗಿ ಬೆಸೆದು ಕೊಂಡಿರುವ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಲು ರಾಷ್ಟ್ರಕವಿ ಗೋವಿಂದ ಪೈಗಳು, ಕಯ್ಯಾರ ಕಿಞ್ಞಣ್ಣ ರೈ ಮೊದಲಾದ ಮಹನೀಯರು ನಿರಂತರ ಪ್ರಯತ್ನಗಳನ್ನು ನಡೆಸಿದ್ದರು. ಸದಾ ಮಲೆಯಾಳಿಗಳ ಅಸಹಕಾರದ ನಡುವೆ ತಮ್ಮತನವನ್ನು ಉಳಿಸಿ ಕೊಳ್ಳಲು ಹೆಣಗುತ್ತಿದ್ದಾರೆ. ಇಂತಹ ದಾಳಿಗಳು ಅವರ ನೈತಿಕತೆಯನ್ನು ಉಡುಗಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸದಾ ಕಾಸರಗೋಡು ಕನ್ನಡಿಗರ ಪರವಾಗಿ ತನ್ನ ಧ್ವನಿಯನ್ನು ಎತ್ತಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮಕ್ಕಾಗಿ ಬೋವಿಕಾನದಿಂದ ಇರಿಯಣ್ಣಿಗೆ ಎಡನೀರು ಶ್ರೀಶ್ರೀಗಳು ತೆರಳುತ್ತಿದ್ದಾಗ ಬಾವಿಕೆರೆ ಎನ್ನುವಲ್ಲಿ ಅವರ ಕಾರಿನ ಮೇಲೆ ಹಲ್ಲೆ ನಡೆದಿದೆ ಎನ್ನುವ ಘಟನೆಯನ್ನು ಸ್ಮರಿಸಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಕೇರಳದಲ್ಲಿರುವ ಕನ್ನಡಿಗರಿಗೆ ರಕ್ಷಣೆಯನ್ನು ಒದಗಿಸಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ