ನವಂಬರ್ 23ರ ಶನಿವಾರ ಸಂಜೆ 4.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 69ನೆಯ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕನ್ನಡಿಗರೆಲ್ಲರೂ ನಾಡು-ನುಡಿಯ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುವ ವಿಶೇಷ ಸಂದರ್ಭ ‘ಕನ್ನಡ ರಾಜ್ಯೋತ್ಸವ’ 1924ರ ನವಂಬರ್ ತಿಂಗಳಿನಲ್ಲಿ ವರಕವಿ ಬೇಂದ್ರೆಯವರು ‘ಹಲಸಂಗಿ ಗೆಳೆಯರ ಬಳಗ’ದ ಮೂಲಕ ಧಾರವಾಡದಲ್ಲಿ ‘ಕನ್ನಡ ರಾಜ್ಯೋತ್ಸವ’ವನ್ನು ನಡೆಸುವ ಪರಿಪಾಠವನ್ನು ಆರಂಭಿಸಿದರು. ಆ ಸಂಭ್ರಮಕ್ಕೆ ಈಗ ನೂರು ವರ್ಷ. ಈ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರ ಮಾತೃಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್ತು ನವಂಬರ್ 23ರ ಶನಿವಾರ ಸಂಜೆ 4.00 ಗಂಟೆಗೆ ‘69ನೆಯ ಕನ್ನಡ ರಾಜ್ಯೋತ್ಸವ’ವನ್ನು ಏರ್ಪಡಿಸಲಿದೆ ಇದೇ ಸಂದರ್ಭದಲ್ಲಿ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ವಿಶ್ರಾಂತ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಅವರು ಮಾಡಲಿದ್ದು ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದಾರೆ. ‘ಕನ್ನಡ ರಾಜ್ಯೋತ್ಸವದ ವಿಶೇಷ ಉಪನ್ಯಾಸ’ವನ್ನು ಭಾರತಮಿತ್ರ ಸಮ್ಮಾನಿತಿರು, ಇತಿಹಾಸ, ಶಾಸನ ಹಾಗೂ ಭಾರತೀಯ ಕಲಾತಜ್ಞ ಡಾ.ವಸುಂಧರಾ ಕವಲಿ ಫಿಲಿಯೋಜಾ ಅವರು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫ್ರಾನ್ಸ್ ದೇಶದ ಸಂಸ್ಕೃತ ವ್ಯಾಕರಣ ಶೈವಾಗಮ ಹಾಗೂ ಮುಖ್ಯ ಅತಿಥಿಗಳಾಗಿ ಭಾರತೀಯ ದೇವಾಲಯ ವಾಸ್ತುಶಿಲ್ಪ ತಜ್ಞರಾದ ಪದ್ಮಶ್ರೀ ಡಾ.ಪಿಯರ್ ಸಿಲ್ವನ್ ಫಿಲಿಯೋಜಾ ಅವರು ಭಾಗವಹಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡರು ಸ್ಥಾಪಿಸಿರುವ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ಯನ್ನು 2023ನೆಯ ಸಾಲಿಗೆ ಬೆಂಗಳೂರಿನ ಕನ್ನಡ ಹೋರಾಟಗಾರ ಗೋ. ಮೂರ್ತಿ ಯಾದವ್, ತುಮಕೂರಿನ ರಂಗ ಸಂಘಟಕ ಕೆ.ರೇವಣ್ಣ, ಚಿತ್ರದುರ್ಗ ಮೂಲದ ಬರಹಗಾರ ಡಾ.ಮೀರಸಾಬಿಹಳ್ಳಿ ಶಿವಣ್ಣ ಮತ್ತು 2024ನೆಯ ಸಾಲಿಗೆ ಗೌರಿಬಿದನೂರಿನ ಕನ್ನಡ ಹೋರಾಟಗಾರ ಜಿ.ಬಾಲಾಜಿ, ಉಡುಪಿ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಮತ್ತು ವಿಜಯಪುರದ ಸಂಶೋಧಕರೂ ನೀರಾವರಿ ತಜ್ಞರಾದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಗೆ ಪ್ರದಾನ ಮಾಡಲಾಗುತ್ತದೆ.
ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಅಭಿಮಾನಿಗಳು ಮತ್ತು ಬಂಧುಗಳು ಸ್ಥಾಪಿಸಿರುವ ‘ಡಾ.ಟಿ.ವಿವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ’ ಪ್ರಶಸ್ತಿಯನ್ನು ಕಾಸರಗೋಡಿನ ಹಿರಿಯ ವಿದ್ವಾಂಸ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರಿಗೂ ಶೈಲಜಾ.ಟಿ.ಎಸ್ ಅವರು ಸ್ಥಾಪಿಸಿರುವ ‘ಶ್ರೀಮತಿ ಟಿ.ಗಿರಿಜಾ ದತ್ತಿ ಪ್ರಶಸ್ತಿ’ಯನ್ನು ಹೆಸರಾಂತ ಅನುವಾದಕರೂ, ಭಾಷಾತಜ್ಞರೂ ಆಗಿರುವ ಡಾ.ವನಮಾಲಾ ವಿಶ್ವಿನಾಥ್ ಅವರಿಗೂ ಪ್ರದಾನ ಮಾಡಲಾಗುತ್ತದೆ.
ಹೆಸರಾಂತ ಉದ್ಯಮಿಗಳಾದ ಶ್ರೀನಿವಾಸ ಜೋಗಿಯವರು ತಮ್ಮ ಹೆತ್ತವರಾದ ‘ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ’ಯವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಧಾರವಾಡದ ಕಲಾವಿದ, ರಂಗಕರ್ಮಿ ಬಸವರಾಜ ಚನ್ನವೀರಪ್ಪ ಬೆಂಗೇರಿಯವರಿಗೂ ಮತ್ತು ಹಿರಿಯ ಗಾಂಧಿವಾದಿ ನಾರಾಯಣ ಘಟ್ಟ ಅವರು ಸ್ಥಾಪಿಸಿರುವ ‘ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದವಟ್ಟಿನ’ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ ಮತ್ತು ಸೇವಾದಳದ ಮುಖಂಡರೂ ಆದ ಹೆಚ್.ಹನುಮಂತಪ್ಪನವರಿಗೂ ಪ್ರದಾನ ಮಾಡಲಾಗುತ್ತದೆ.
ಸಾಂಸ್ಕೃತಿಕ ಮಹತ್ವದ ಈ ಕಾರ್ಯಕ್ರಮದ ವಿವರಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಮತ್ತು ಕಾರ್ಯಕ್ರಮಕ್ಕೆ ತಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಳುಹಿಸ ಕೊಡ ಬೇಕೆಂದು ವಿನಂತಿಸಿ ಕೊಳ್ಳಲಾಗಿದೆ.
ಪ್ರತಿಕ್ರಿಯೆ