ಮಂಡ್ಯದಲ್ಲಿ 2024 ಡಿಸೆಂಬರ್ 20, 21 ಮತ್ತು 22 ರಂದು ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರತಿನಿಧಿ ನೋಂದಣಿ ಅವಧಿ ವಿಸ್ತರಣೆ
ಬೆಂಗಳೂರು: ಮಂಡ್ಯದಲ್ಲಿ 2024 ಡಿಸೆಂಬರ್ 20, 21 ಮತ್ತು 22 ರಂದು ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಸಕ್ತಿ ಇರುವವರಿಗೆ “ವಿಶೇಷ ಪ್ರತಿನಿಧಿ” ನೋಂದಣಿಗಾಗಿ ಆನ್ಲೈನ್ ವ್ಯವಸ್ಥೆ ಮಾಡಲಾಗಿದ್ದು ಒಟ್ಟು ಐದು ಸಾವಿರ ಪ್ರತಿನಿಧಿಗಳಿಗೆ ಈ ಮೊದಲು ಅವಕಾಶವನ್ನು ಕಲ್ಪಿಸಿ ಕೊಡಲಾಗಿತ್ತು. 5.12.2024ಅನ್ನು ನೊಂದಣಿಗೆ ಕೊನೆಯ ದಿನವನ್ನಾಗಿ ಸೂಚಿಸಲಾಗಿತ್ತು., ಆದರೆ ಈಗಾಗಲೆ 4,077 ಕನ್ನಡಿಗರು ಪ್ರತಿನಿಧಿಗಳಾಗಿ ನೊಂದಣಿ ಮಾಡಿಕೊಂಡಿದ್ದು ಅಪಾರ ಸಂಖ್ಯೆಯಲ್ಲಿ ಆಸಕ್ತರು ಪ್ರತಿನಿಧಿಗಳಾಗಲು ಆಸಕ್ತಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರತಿನಿಧಿ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಸಂಬಂಧಪಟ್ಟ ಸಮಿತಿ ಮತ್ತು ಜಿಲ್ಲಾಡಳಿತದ ಜೊತೆಗೆ ನಡೆಸಿದ ಚರ್ಚೆಯ ಫಲವಾಗಿ ಈಗ ಒಟ್ಟು ಆರು ಸಾವಿರ ಪ್ರತಿನಿಧಿಗಳಿಗೆ ಈಗ ಅವಕಾಶ ಕಲ್ಪಿಸಲಾಗಿದ್ದು ಕೊನೆಯ ದಿನಾಂಕವನ್ನು 7.12.2024ರ ಗುರುವಾರಕ್ಕೆ ವಿಸ್ತರಿಸಲಾಗಿದೆ.
ಮೊದಲು ಬಂದವರಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದು ನಾಡೋಜ ಮಹೇಶ ಜೋಶಿಯವರು ತಿಳಿಸಿದ್ದು ಅನ್ಲೈನ್ ನೊಂದಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಮತ್ತು ಜಿಲ್ಲಾಡಳಿತವೂ ಅದನ್ನೇ ಮುಂದುವರೆಸಲು ಆಸಕ್ತಿ ತೋರಿದ ಕಾರಣದಿಂದ ಇದೇ ವ್ಯವಸ್ಥೆಯೇ ಮುಂದುವರೆಯುತ್ತದೆ. ಅತಿಥ್ಯಕ್ಕೆ ಹೆಸರಾದ ಮಂಡ್ಯದ ಪರಂಪರೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೊಂದಾಯಿತ ಪ್ರತಿನಿಧಿಗಳಿಗೆ ಬ್ಯಾಗ್, ನೋಟ್ ಪ್ಯಾಡ್, ಪೆನ್, ಅಧ್ಯಕ್ಷರ ಭಾಷಣ, ಸಮ್ಮೇಳನದ ಆಹ್ವಾನ ಪತ್ರಿಕೆ, ಅರ್ಧ ಕೆ.ಜಿ ಸಕ್ಕರೆ ಮತ್ತು ಬೆಲ್ಲ ಹಾಗೂ ಗುರುತಿನ ಚೀಟಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದೆ. ನೊಂದಣಿಯಾದ ಪ್ರತಿನಿಧಿಗಳಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಏರ್ ಪಿಲ್ಲೋ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ವ್ಯವಸ್ಥೆಯನ್ನೂ ಜಿಲ್ಲಾಡಳಿತವು ಮಾಡುವುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಂದಾಯಿತ ಪ್ರತಿನಿಧಿಗಳಿಗೆ ಅನ್ ಲೈನ್ನಲ್ಲಿಯೇ ಅಗತ್ಯ ಓ.ಓ.ಡಿ ಪ್ರಮಾಣ ಪತ್ರವನ್ನು ನೀಡಲಾಗುವುದು, ಕಾರ್ಯಕ್ರಮಗಳ ವಿವರ, ಸಮ್ಮೇಳನದ ಕ್ಷಣ ಕ್ಷಣದ ಮಾಹಿತಿಯನ್ನು ಎಸ್.ಎಂ.ಎಸ್ ಮತ್ತು ವಾಟ್ಸಪ್ಗಳ ಮೂಲಕ ಕಳುಹಿಸಲಾಗುವುದು, ಸಮ್ಮೇಳನ ನಡೆಯುವ ಸ್ಥಳದ ಮಾರ್ಗಸೂಚಿ ಮತ್ತಿತರ ವಿವರಗಳನ್ನೂ ಇ-ಮೇಲ್ ಮೂಲಕ ಹಂಚಿ ಕೊಳ್ಳಲಾಗುವುದು ಇದರಿಂದ ಸಮ್ಮೇಳನದ ಸ್ಥಳವನ್ನು ತಲುಪುವುದು ಸುಲಭವಾಗಲಿದೆ ಎಂದು ಮಂಡ್ಯ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಆಸಕ್ತರು ಅಂತರ್ಜಾಲ ತಾಣ https://kannadasahithyaparishattu.in/sammelana2024/ ಕ್ಕೆ ಭೇಟಿಯಿತ್ತು ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿಗೆ ಸಂಖ್ಯಾಮಿತಿಯಿದ್ದು ಸ್ವಯಂಚಾಲಿತವಾಗಿ ತಂತ್ರಾಂಶವು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದು ಸಮಸ್ತ ಕನ್ನಡಿಗರಿಗೂ ಈ ಅಗತ್ಯವಾದ ಮತ್ತು ಮಹತ್ವದ ಮಾಹಿತಿಯು ದೊರಕ ಬೇಕಾದ ನಿಟ್ಟಿನಲ್ಲಿ ಈ ವಿಚಾರವನ್ನು ಪತ್ರಿಕೆಯ ಎಲ್ಲ ಆವೃತ್ತಿಗಳಲ್ಲೂ ಪ್ರಕಟಿಸುವ ಮೂಲಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ.
ಪ್ರತಿಕ್ರಿಯೆ