ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಆಹಾರ ವ್ಯವಸ್ಥೆ ಹಾಗೂ ವಿತರಣೆಯನ್ನು ಮಾಡುವುದಕ್ಕೆ ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಸಮಿತಿಗಳಿವೆ ಅದಕ್ಕೂ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಒದಗಿಸುವ ಬಗ್ಗೆ ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿ ಈ ವಿಷಯವನ್ನು ತಿಳಿಸಿದ್ದಾರೆ.
ಮಂಡ್ಯದಲ್ಲಿ ಅಯೋಜೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 25.6.2024ರಂದು ಎ.ಬಿ.ರಮೇಶ್ ಬಾಬು ಬಂಡಸಿದ್ದೇಗೌಡರ ಅಧ್ಯಕ್ಷತೆಯಲ್ಲಿ 35 ಜನರ ‘ಆಹಾರ ಸಮಿತಿ’ಯನ್ನು ರಚಿಸಲಾಗಿದ್ದು, ಸಮ್ಮೇಳನದಲ್ಲಿ ನಡೆಯ ಬೇಕಾದ ಊಟೋಪಚಾರಗಳ ವ್ಯವಸ್ಥೆಯನ್ನು ಈ ಸಮಿತಿಯು ನಿರ್ವಹಿಸುತ್ತದೆ. ಡಿಸಂಬರ್ 6ರಂದು ಈ ಸಮಿತಿಯು ಸಭೆ ಸೇರಿ ಸಮ್ಮೇಳನದಲ್ಲಿ ಮುದ್ದೆ, ಸೊಪ್ಪು ಸಾಂಬಾರ್ ವಿಶೇಷ ತಿನಿಸಾಗಿದ್ದು, ಉತ್ತರ, ದಕ್ಷಿಣ ಕರ್ನಾಟಕ ಶೈಲಿಯ ಊಟವನ್ನು 300 ಕೌಂಟರ್ಗಳಲ್ಲಿ ವ್ಯವಸ್ಥೆ ಮಾಡುವುದು ಸೇರಿದಂತೆ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದು ಕೊಂಡಿದೆ. ಇದು ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ವರದಿಯಾಗಿದ್ದು, ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಭಾಗವಹಿಸಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
ಮಧು.ಜಿ.ಮದೇಗೌಡರ ಅಧ್ಯಕ್ಷತೆಯಲ್ಲಿ 30 ಜನರ ‘ವಸ್ತು ಪ್ರದರ್ಶನ ಸಮಿತಿ’ಯನ್ನು ರಚಿಸಲಾಗಿದ್ದು ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಆಹಾರ ಮಳಿಗೆಗಳ ಹೊಣೆಯನ್ನು ಈ ಸಮಿತಿಯು ಹೊಂದಿರುತ್ತದೆ. ಈ ವಸ್ತು ಪ್ರದರ್ಶನ ಸಮಿತಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂಬ ಸೂಚನೆಯೂ ಸೇರಿದಂತೆ ಕೆಳಕಂಡ ನಿಯಮಗಳನ್ನು ನೀಡಿದೆ.
- ಮಳಿಗೆ ಸಮಯವು ಬೆಳಿಗ್ಗೆ೯:೦೦ ರಿಂದ ರಾತ್ರಿ ೧೦:೦೦ ವರೆಗೆ ಇರುತ್ತದೆ.
- ದಿನಾಂಕ ೬ನೇ ಡಿಸೆಂಬರ್ನಿಂದ ಮಳಿಗೆ ನೋಂದಣಿ ಆರಂಭವಾಗಲಿದ್ದು, ೧೩ರ ರಾತ್ರಿ ನೋಂದಣಿ ಮುಕ್ತಾಯವಾಗಲಿದೆ.
- ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ.
- ಮಳಿಗೆಗಳಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ.
- ಪ್ರತಿಯೊಂದು ಮಳಿಗೆಗೆ ಸಮಿತಿ ಒದಗಿಸುವ ಸೌಲಭ್ಯಗಳು ಈ ಮುಂದಿನಂತಿವೆ ( ಒಂದು ಟೇಬಲ್, ಎರಡು ಕುರ್ಚಿ , ಒಂದು ಜಂಕ್ಷನ್ ಬಾಕ್ಸ್, ವಿದ್ಯುತ್ ಸೌಲಭ್ಯ).
- ಮಳಿಗೆ ನೋಂದಣಿಯು ವಸತಿ ಸೌಲಭ್ಯವನ್ನು ಒಳಗೊಂಡಿರುವುದಿಲ್ಲ.
- ದಿನಾಂಕ ೧೯ ಡಿಸೆಂಬರ್ ೨೦೨೪ ರಂದು ಹಂಚಿಕೆ ಮಾಡಲಾದ ಮಳಿಗೆಗಳನ್ನು ಸಂಬಂಧ ಪಟ್ಟ ನೋಂದಣಿದಾರರು ಹಸ್ತಾಂತರ ಪಡೆಯುವುದು.
- ದಿನಾಂಕ ೨೦ ,೨೧, ೨೨ ಮೂರು ದಿನಗಳ ಅವಧಿಗೆ ಮಾತ್ರ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
- ಸಾಹಿತ್ಯ ಸಮ್ಮೇಳನದ ವಿನ್ಯಾಸ, ಪುಸ್ತಕ ಮಳಿಗೆ ಮತ್ತು ವಾಣಿಜ್ಯ ಮಳಿಗೆಗಳ ವಿನ್ಯಾಸವನ್ನು ಈ ಕೆಳಗೆ ತಮ್ಮ ಮಾಹಿತಿಗಾಗಿ ಒದಗಿಸಿದ್ದು ಈ ನಕ್ಷೆಯನ್ನು ಪರಿಶೀಲಿಸಿ ತಮ್ಮ ಇಚ್ಛೆಯ ಮಳಿಗೆಯನ್ನು ಕಾಯ್ದಿರಿಸಲು ಆಯ್ಕೆ ಮಾಡಲು ಕೋರಿದೆ.
- ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
- ಕಾನೂನುಬಾಹಿರ ಚಟುವಟಿಕೆಗಳಲ್ಲಿ ಅಥವಾ ಸಮಸ್ಯೆ ಸೃಷ್ಟಿಸುವ ಚಟುವಟಿಕೆಗಳಲ್ಲಿ ಯಾರೂ ಭಾಗವಹಿಸಬಾರದು.
- ನಿಮ್ಮ ಆಯಾ ಮಳಿಗೆಗಳಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಈ ಸೂಚನೆಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವ ಸಂಬಂಧವೂ ಇರುವುದಿಲ್ಲ
ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನದಲ್ಲಿ ಬಹುಮುಖ್ಯವಾದ ಸಮ್ಮೇಳನಾಧ್ಯಕ್ಷರ ಆಯ್ಕೆ , ವಿಚಾರ ಗೋಷ್ಟಿಗಳ ರೂಪಿಸುವಿಕೆ, ಸನ್ಮಾನಿತರ ಆಯ್ಕೆ, ಪುಸ್ತಕಪ್ರಕಟಣೆ ಮೊದಲಾದ ಹೊಣೆಗಳನ್ನು ನಿರ್ವಹಿಸುತ್ತದೆ. ಇಂತಹ ನಿರ್ಧಾರಗಳನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಏಕ ಪಕ್ಷೀಯವಾಗಿ ತೆಗೆದು ಕೊಳ್ಳುವುದಿಲ್ಲ. ಸಂಬಂಧ ಪಟ್ಟ ಸಮಿತಿಗಳಲ್ಲಿ ಪ್ರಸ್ತಾಪಿಸಿ ಅಲ್ಲಿಂದ ಅನುಮೋದನೆ ಪಡೆದ ನಂತರವೇ ತೀರ್ಮಾನಿಸುತ್ತಾರೆ.
ಹಿನ್ನೆಲೆ ಹೀಗಿದ್ದರೂ ಅನವಶ್ಯಕವಾಗಿ ನಾಡೋಜ ಡಾ.ಮಹೇಶ ಜೋಶಿಯವರ ಹೆಸರನ್ನು ಈ ವಿವಾದದಲ್ಲಿ ಎಳೆದು ತರುವಲ್ಲಿ ಕೆಲವರು ಮುಖ್ಯಪಾತ್ರ ವಹಿಸಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಖೇದವನ್ನು ಉಂಟು ಮಾಡಿದೆ.
ಪ್ರತಿಕ್ರಿಯೆ