‘87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮವಾಗಿ ಬರಬೇಕಾದವರು ನೆನಪಾಗಿ ಉಳಿದರು’ ಎಸ್.ಎಂ.ಕೃಷ್ಣ ಅಗಲುವಿಕೆ ಕುರಿತು ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ

ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ನಿಮಿಷಗಳಾದರೂ ಆ ನೆಲದಿಂದ ಬಂದ ದಿಗ್ಗಜ ಎಸ್.ಎಂ.ಕೃಷ್ಣ ಅವರು ಭಾಗವಹಿಸ ಬೇಕು ಎಂದು ಸಾಕಷ್ಟು ಪ್ರಯತ್ನಿಸಿದ್ದೆ. ಇದನ್ನು ಗೋಪ್ಯತೆ ಕಾರಣದಿಂದ ಯಾರೊಂದಿಗೆ ಹಂಚಿ ಕೊಳ್ಳದೆ ಸಂಬಂಧ ಪಟ್ಟವರಿಗೆ ಮಾತ್ರ ತಿಳಿಸಿದ್ದೆ. ಇದಕ್ಕೆ ಸಕಾರಾತ್ಮಕ ಸ್ಪಂದನವೂ ದೊರಕಿತ್ತು. ಅವರ ಕೆಲವು ಕ್ಷಣಗಳ ಉಪಸ್ಥಿತಿ ಸಮ್ಮೇಳನಕ್ಕೆ ಮೆರುಗನ್ನು ನೀಡುತ್ತಿತ್ತು, ಆದರೆ ಈಗ ಅವರು ಬರೀ ನೆನಪಾಗಿ ಉಳಿದು ಅವರ ಹೆಸರನ್ನು ವೇದಿಕೆಗೆ ಇಡುವಂತಹ ಸಂದರ್ಭ ಬಂದಿರುವುದು ನಿಜಕ್ಕೂ ವಿಷಾದಕರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದು ರಾಜಕೀಯ ಮುತ್ಸದ್ದಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. 

ಸುಂಸಂಸ್ಕೃತ ರಾಜಕಾರಣಿಯಾಗಿದ್ದ ಅವರು ಕಲೆ, ಸಾಹಿತ್ಯದ ಕುರಿತು ಅಪಾರ ಪ್ರೇಮವನ್ನು ಇಟ್ಟು ಕೊಂಡಿದ್ದರು. ಹಲವು ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನವನ್ನು ನಡೆಸಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ ವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮದ ವಿವರಗಳನ್ನು ದಿನಪತ್ರಿಕೆಯಲ್ಲಿ ನೋಡಿ ದೂರವಾಣಿ ಮೂಲಕ ವಿವರಗಳನ್ನು ತಿಳಿದು ಕೊಂಡು ಅಭ್ಯಾಗತರಾಗಿ ಬಂದು ಪ್ರೇಕ್ಷಕರಾಗಿ ಮುಂದಿನ ಸಾಲಿನಲ್ಲಿ ಕುಳಿತು ನಂತರ ಒತ್ತಾಯಿಸಿದ ನಂತರ ತಮ್ಮ ಮನದಾಳದ ಮಾತುಗಳನ್ನಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಅವರಿಗಿದ್ದ ಅಕ್ಕರೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಅವರಿದ್ದ ಗೌರವಕ್ಕೆ ನಿದರ್ಶನವಾಗಿದೆ ಎಂದು ನೆನಪಿಸಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ಘೋಷಣೆಯಾದ ದಿನದಿಂದಲೂ ಉತ್ಸಾಹ ತೋರಿದ್ದ ಅವರು ಹಲವು ಉಪಯುಕ್ತ ಸಲಹೆಗಳನ್ನು ನೀಡಿ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದ್ದರು. ಈಗ ಅವರ ಅಗಲುವಿಕೆ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ವಿಷಾದಿಸಿದ್ದಾರೆ. 

ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಾಗಲಕೋಟೆ, ತುಮಕೂರು, ಬೆಳಗಾವಿ, ಮೂಡುಬಿದರೆ ಹೀಗೆ 68ರಿಂದ 71ರವರೆಗಿನ ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಬಹು ಯಶಸ್ವಿಯಾಗಿ ನಡೆದಿದ್ದವು. ಅವುಗಳ ಅಯೋಜನೆಯಲ್ಲಿ ಅವರು ಅಪಾರ ಸಹಕಾರ ಮತ್ತು ಕಾಳಜಿಯನ್ನು ತೋರಿಸಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿಕೊಂಡು ದೂರದರ್ಶನದಲ್ಲಿ ಅವರ ಸಂದರ್ಶನ ಮಾಡಿದ್ದಾಗ ಮಹಾಭಾರತದ ಕೃಷ್ಣನಿಗೆ ಹೋಲಿಸಿದಾಗ ‘ತಾವು ಹೆಸರಿಗೆ ಮಾತ್ರ ಕೃಷ್ಣ’ ಎಂದಿದ್ದ ಅವರ ಸಜ್ಜನಿಕೆಯನ್ನು ನೆನಪು ಮಾಡಿಕೊಂಡರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡರು ಗಮಕ ವಾಚನದಲ್ಲಿ ಕೃಷ್ಣ ಅವರಿಗಿದ್ದ ಆಸಕ್ತಿಯನ್ನು ಸ್ಮರಿಸಿಕೊಂಡು ಉತ್ತಮ ತಬಲಾ ವಾದಕರೂ, ಹವ್ಯಾಸಿ ರಂಗಭೂಮಿನಟರೂ ಆಗಿದ್ದರು ಎಂದು ಹೇಳಿ, ಜೀವನದಶೈಲಿ ಉಡುಗೆ ತೊಡುಗೆಗಳಲ್ಲಿ ಅವರಿಗಿದ್ದ ಅಭಿರುಚಿಯನ್ನು ವಿವರಿಸಿದರು. ಸುರಸುಂದರಾಂಗರೆನ್ನಿಸಿಕೊಂಡಿದ್ದ ಅವರನ್ನು ಪರಂಪರೆಯಲ್ಲಿ ಬರುವ ‘ಕಂದರ್ಪ’ನ ಪರಿಕಲ್ಪನೆಗೆ ಹೋಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)