ಮಂಡ್ಯದಲ್ಲಿ ಆಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದೇಶಿಯರ ಕಲರವ

ಮಂಡ್ಯದಲ್ಲಿ ಆಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದೇಶಿಯರ ಕಲರವ

ಬೆಂಗಳೂರು: ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊಟ್ಟ ಮೊದಲ ಸಲ ದೊಡ್ಡ ಸಂಖ್ಯೆಯಲ್ಲಿ ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಮೆರಿಕ, ಯುರೋಪ್, ಗಲ್ಫ್ , ಏಷಿಯಾ ಪ್ಯಾಸಿಫಿಕ್, ಆಸ್ಟ್ರೇಲಿಯಾ ಹೀಗೆ ಜಗತ್ತಿನ ವಿವಿಧ ದೇಶಗಳ ಕನ್ನಡ ಸಂಘಗಳ ಚಟುವಟಿಕೆಗಳಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕನ್ನಡ ಸಾಹಿತ್ಯ ಪರಿಷತ್ತು ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿರುವ ಕನ್ನಡಿಗರ ಮಾತೃಸಂಸ್ಥೆ ಎನ್ನುವ ಭಾವವನ್ನು ಮೂಡಿಸಿರುವುದು ಈಗ ಫಲವನ್ನು ನೀಡುತ್ತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬ ಸೀಮೆಯನ್ನು ಮೀರಿ ಇದು ಜಾಗತಿಕ ಕನ್ನಡಿಗರ ಸಮ್ಮೇಳನದ ಸ್ವರೂಪವನ್ನು ಪಡೆಯಬೇಕು ಎನ್ನುವ ನಾಡೋಜ ಡಾ. ಮಹೇಶ ಜೋಶಿಯವರ ಹಂಬಲ ಈಗ ನಿಜವಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಹೊಸ ಪರಂಪರೆಯನ್ನು ಸೃಷ್ಟಿಸಲು ಈಗ ಮಂಡ್ಯ ಸಜ್ಜಾಗಿದೆ.

87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಸಲ 18 ದೇಶಗಳ ಸುಮಾರು 250ಕ್ಕೂ ಹೆಚ್ಚು ವಿದೇಶಿ ಕನ್ನಡಿಗರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಪುತಿನ ಅವರ ಮಗಳು ಅಲಮೇಲು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮೊಮ್ಮಗಳಾದ ನಿರ್ಮಲಾ ಕರ್ಪೂರ್, ಕನ್ನಡದ ಮೊಟ್ಟ ಮೊದಲ ಶಬ್ದಕೋಶದ ಕರ್ತೃ ಫರ್ಡಿನೆಂಡ್ ಕಿಟಲ್ ಅವರ ವಂಶಸ್ಥರು ಭಾಗವಹಿಸುವವರಲ್ಲಿ ಸೇರಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ವಿದೇಶಿ ಕನ್ನಡಿಗರಲ್ಲಿ 21 ಜನರನ್ನು ಸನ್ಮಾನಿಸಲಾಗುವುದು, ಇದರಲ್ಲಿ ಕನ್ನಡದ ಸೇವೆಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿರುವ (ಐವತ್ತು ವರ್ಷಗಳನ್ನು ಕಳೆದಿರುವ) ಮೂರು ಅಮೆರಿಕದ ಕನ್ನಡ ಸಂಘಗಳೂ ಸೇರಿವೆ. ಪ್ರಪ್ರಥಮವಾಗಿ ಕನ್ನಡ ಭವನವನ್ನು ವಿದೇಶದಲ್ಲಿ ಕಟ್ಟಿರುವ ಬೆಹರಿನ್ ಕನ್ನಡ ಸಂಘ, ಇತ್ತೀಚೆಗೆ ಸ್ವಂತ ಕನ್ನಡ ಭವನ ಕಟ್ಟಿರುವ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕನ್ನಡ ಸಂಘಗಲೂ ಸೇರಿವೆ. ಅದರಂತೆ ಅರವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕಾಗೋ ವಿಶ್ವವಿದ್ಯಾಲಯದ ಕನ್ನಡ ಪೀಠವನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಮಂಡ್ಯ ಜಿಲ್ಲೆಯ ಹೆಮ್ಮೆ ತ್ರಿವೇಣಿಯವರ ಪ್ರಖ್ಯಾತ ಕಾದಂಬರಿ ‘ಶರಪಂಜರ’ವನ್ನು ಇಟಲಿ ನಿವಾಸಿ ಕನ್ನಡತಿ ಜಯಾಮೂರ್ತಿಯವರು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದು ಇದು ಸಮ್ಮೇಳನದಲ್ಲಿ ವಿಶೇಷವಾಗಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ತ್ರಿವೇಣಿಯವರ ಮಗಳು ಮೀರಾ ಶಂಕರ್ ಕೂಡ ಹಾಜರಿರುರುವುದು ವಿಶೇಷವಾಗಿದೆ.

ಪ್ರಥಮ ಬಾರಿಗೆ ಯುರೂಪಿನ ಉತ್ಸಾಹಿ ಕಥೆಗಾರ, ಕವಯತ್ರಿಯರ ‘ಸಪ್ತಸಾಗರದಾಚೆಯೆಲ್ಲೋ’ ಕೃತಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೃತಿಗಳ ಮಾಲಿಕೆಯಲ್ಲಿ ಪ್ರಕಟವಾಗುತ್ತದೆ. ವಿದೇಶದಲ್ಲಿನ ಬರಹಗಾರರನ್ನು ಗುರುತಿಸಿ ಪ್ರೊತ್ಸಾಹಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶಕ್ಕೆ ಇದು ಮಹತ್ವದ ಮುನ್ನಡೆಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ 22 ಡಿಸಂಬರ್ 2024ರ ಬೆಳಿಗ್ಗೆ 9.30ರಿಂದ ‘ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ’ ಎನ್ನುವ ಅನಿವಾಸಿ ಭಾರತೀಯರ ಕುರಿತ ವಿಶೇಷ ಗೋಷ್ಟಿ ನಡೆಯಲಿದ್ದು ಅಮೆರಿಕಾದ ಅಮರನಾಥ ಗೌಡರವರು ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದರೆ, ಬಹರೆನ್ನಿನ ಕಿರಣ್ ಉಪಾಧ್ಯಾಯ ಆಶಯ ಭಾಷಣವನ್ನು ಮಾಡಲಿದ್ದಾರೆ. ಕತಾರ್ ನ ಎಚ್.ಕೆ.ಮಧು, ಇಂಗ್ಲೆಂಡ್ನ ಅಶ್ವಿನ್ ಶೇಷಾದ್ರಿ, ಯುಎಇಯ ಶಶಿಧರ ನಾಗರಾಜಪ್ಪ , ಜರ್ಮನಿಯ ರಶ್ಮಿ ನಾಗರಾಜ್ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅನಿವಾಸಿ ಭಾರತೀಯರ ಸಮನ್ವಾಯಾಧಿಕಾರಿ ಆರತಿ ಕೃಷ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ಮತ್ತು ಕನ್ನಡಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ವಿದೇಶಿಯವರ ಕುರಿತು ಅಧಿಕೃತ ದಾಖಲೆಯನ್ನು ಮಾಡಿರುವ ಡಾ.ಶ್ರೀನಿವಾಸ ಹಾವನೂರ ಅವರ ಮಗಳು ನಿವೇದಿತಾ ಹಾವನೂರ ಹೊನ್ನತ್ತಿ ಕೂಡ ಉಪಸ್ಥಿತರಿರುತ್ತಾರೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಹೇಳಿದ್ದಾರೆ.

ವಿಶ್ವದಲ್ಲಿರುವ 195 ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಕನ್ನಡ ಸಂಘಗಳಿವೆ ಎನ್ನುವುದು ಒಂದು ಅಂದಾಜು. ಈ ಕುರಿತು ಸ್ಪಷ್ಟ ದಾಖಲೆಗಳು ಎಲ್ಲಿಯೂ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಬೆಂಕಿ ಬಸಣ್ಣನವರು ‘ವಿದೇಶದಲ್ಲಿನ ಕನ್ನಡ ಸಂಘ’ಗಳ ಬಗೆಗೆ ಮಾಹಿತಿ ಕೋಶವೊಂದನ್ನು ಸಿದ್ದಪಡಿಸಿದ್ದು ಇದರಲ್ಲಿ ಪ್ರಸ್ತುತ 75ಕ್ಕೂ ಹೆಚ್ಚು ವಿದೇಶದಲ್ಲಿನ ಕನ್ನಡ ಸಂಘಗಳ ಕುರಿತ ಮಾಹಿತಿಗಳಿವೆ. ಇಂತಹ ಪ್ರಯತ್ನ ನಡೆದಿರುವುದು ಇದೇ ಮೊದಲಾಗಿದೆ ಎಂದು ತಿಳಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಮುಂಬರುವ ದಿನಗಳಲ್ಲಿ ಈ ಬೆಸುಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಾಲವನ್ನು ಮಹತ್ತರವಾಗಿ ವಿಸ್ತರಿಸುವುದಲ್ಲದೇ, ನಿಜವಾದ ಅರ್ಥದಲ್ಲಿ ಅದು ಜಾಗತಿಕ ಕನ್ನಡಿಗರೆಲ್ಲರ ಮಾತೃ ಸಂಸ್ಥೆಯಾಗಲು ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.


ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)