ಸಾಹಿತ್ಯ ಸಮ್ಮೇಳನ-೨ : ಬೆಂಗಳೂರು
ಮೇ ೧೯೧೬

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ

, , ೩ನೇ ಸಮ್ಮೇಳನಾಧ್ಯಕ್ಷರು

ಹೆಚ್.ವಿ. ನಂಜುಂಡಯ್ಯ

ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ೧೮೮೬ರಲ್ಲಿ ಬಿಎಲ್ ಪರೀಕ್ಷೆಯಲ್ಲಿ ೧೮೮೫ರಲ್ಲಿ ಎಂಎ ಪದವಿಯನ್ನು ಪಡೆದರು. ೧೮೯೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಫೆಲೋಷಿಪ್ ನೀಡಿ ಗೌರವಿಸಿತು.

೧೮೮೫ರಲ್ಲಿ ಮೈಸೂರು ಸರ್ಕಾರದಲ್ಲಿ ಉದ್ಯೋಗಕ್ಕೆ ಸೇರಿ ಮುನ್ಸೀಫರಾದರು. ೧೮೮೬ರಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಅನಂತರ ಅಂಡರ್ ಸೆಕ್ರೆಟರಿ, ಸಬ್ ಜಡ್ಜ್ ಆಗಿ ಸೇವೆ ಸಲ್ಲಿಸಿದ ನಂತರ ಚೀಫ್ ಜಡ್ಜ್ ಆಗಿ ಸೇವೆ ಸಲ್ಲಿಸಿ ೧೯೧೬ರಲ್ಲಿ ನಿವೃತ್ತರಾದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಉಪಕುಲಪತಿಗಳಾಗಿ ನೇಮಕಗೊಂಡು ೪ ವರ್ಷಗಳ ಕಾಲ ಅದರ ಪ್ರಗತಿಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು ಮತ್ತು ೧೯೧೫ರಿಂದ ೩ ಸಮ್ಮೇಳನಗಳಿಗೆ ಅಧ್ಯಕ್ಷರಾದ ಇವರು ಸಮ್ಮೇಳನಗಳ ಇತಿಹಾಸದಲ್ಲೇ ವಿಕ್ರಮ ಸಾಧಿಸಿದ್ದಾರೆ. ಬೇರಾವ ಅಧ್ಯಕ್ಷರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ.

ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ಸಿ.ಐ.ಇ. (ಕಂಪಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ನೀಡಿತು. ಮೈಸೂರು ಮಹಾರಾಜರು ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು.

ಕನ್ನಡ ನವೋದಯ ಕಾಲದ ಪ್ರಾರಂಭಘಟ್ಟದಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಹೆಚ್.ವಿ. ನಂಜುಂಡಯ್ಯನವರೂ ಒಬ್ಬರು. ಇವರು ರಚಿಸಿದ ಪ್ರಮುಖ ಕೃತಿಗಳು ಹೀಗಿವೆ.

 ೧. ವ್ಯವಹಾರದೀಪಿಕೆ (ನ್ಯಾಯಶಾಸ್ತ್ರ) – ೧೮೯0  ೨. ಅರ್ಥಶಾಸ್ತ್ರ – ೧೯0೧  ೩. ಲೇಖ್ಯಬೋಧಿನಿ   ೪. ರಿಲಿಜನ್ ಅಂಡ್ ಮಾರೆಲ್ ಎಜುಕೇಷನ್ (ಇಂಗ್ಲಿಷ್)  ೫. ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್)  ೬. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ (ಸಂಪಾದನೆ)  ೭. ವ್ಯವಹಾರ ಧರ್ಮಶಾಸ್ತ್ರ  ೮. ವಿಕ್ಟರ್ ಹ್ಯೂಗೋವಿನ ಫ್ರೆಂಚ್ ಕವಿತೆಗಳ ಅನುವಾದ

ಶ್ರೀಯುತರು ದಿನಾಂಕ ೨-೫-೧೯೨0ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷರು: ಎಚ್.ವಿ. ನಂಜುಂಡಯ್ಯ

ದಿನಾಂಕ ೬,, ಮೇ ೧೯೧೬,

ಸ್ಥಳ : ಕೋಟೆ ಹೈಸ್ಕೂಲ್, ಬೆಂಗಳೂರು

ಅಗ್ರಾಸನಾಧಿಪತಿಗಳಾದ ರಾಜಮಂತ್ರಪ್ರವೀಣ ಎಚ್.ವಿ. ನಂಜುಂಡಯ್ಯನವರು ಬೆಳಗಾಂ, ಬಿಜಾಪುರ, ಮುಂಬಯಿ, ಧಾರವಾಡ, ಮದರಾಸು ಮುಂತಾದ ದೂರ ದೂರ ಪ್ರದೇಶಗಳಿಂದ ದಯಮಾಡಿಸಿದ್ದ ಮಹನೀಯರುಗಳಿಗೂ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಪರವಾಗಿ ಸ್ವಾಗತವನ್ನು ನುಡಿಯುತ್ತಾ, ಕಾರ್ಯನಿರ್ವಾಹಾರಂಭದ ತಮ್ಮ ಪ್ರೌಢವಾದ ಸಂಭಾಷಣವನ್ನು ಪ್ರಾರಂಭಿಸಿದರು. ಇಂಡಿಯಾ ಗೌವರ್ನಮೆಂಟಿನವರು ಮೈಸೂರಲ್ಲಿ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸುವುದಕ್ಕೆ ಅನುಮತಿಯನ್ನಿತ್ತ ಸಂಗತಿಯನ್ನು ಪ್ರಸ್ತಾಪಿಸಿ, ಕನ್ನಡವು ಮೈಸೂರು ಸಂಸ್ಥಾನದ ಪ್ರಧಾನ ಭಾಷೆಯಾಗಿರುವುದು, ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಇದಕ್ಕೆ ಯಾವ ಬಗೆಯ ಮತ್ತು ಎಷ್ಟರಮಟ್ಟಿನ ಪ್ರಾಶಸ್ತ್ಯವನ್ನು ಕೊಡತಕ್ಕುದು? ಮೈಸೂರಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಕಲಿಯಲೇಬೇಕೆಂದು ಏರ್ಪಾಡು ಮಾಡಬೇಕೆ ಅಥವಾ ತಮಿಳು, ತೆಲುಗು, ಸಂಸ್ಕೃತಗಳೊಡನೆ ಕನ್ನಡವನ್ನೂ ಐಚ್ಛಿಕ ಭಾಷೆಯನ್ನಾಗಿ ಸೇರಿಸಬೇಕೆ? ಎಂಬ ವಿಷಯಗಳು ವಿಶ್ವವಿದ್ಯಾನಿಲಯದ ಏರ್ಪಾಡಿನ ಮಸೂದೆಯನ್ನು ತಯಾರು ಮಾಡುವವರ ಮನಸ್ಸನ್ನು ಕೋಟಲೆಗೊಳಿಸುತ್ತಿವೆ? ಈ ವಿಷಯದಲ್ಲಿ ಈ ಸಮ್ಮೇಳನವು ತನ್ನ ಅಭಿಪ್ರಾಯವನ್ನು ತಿಳಿಸುವುದಾದರೆ ಸರ್ಕಾರದವರಿಗೆ ಅನುಕೂಲವನ್ನುಂಟು ಮಾಡಿಕೊಟ್ಟಂತಾಗುವುದು ಎಂದು ಅಪ್ಪಣೆಕೊಟ್ಟರು.

ಪಠ್ಯಗ್ರಂಥಗಳ ಪರಿಷ್ಕರಣ ಕಾರ್ಯವನ್ನು ಪರಿಷತ್ತಿಗೆ ವಹಿಸಿ

ಕನ್ನಡನಾಡುಗಳಲ್ಲಿ ಕಾಣಬರುವ ಕನ್ನಡದ ಪ್ರಭೇದಗಳನ್ನು ಕುರಿತು ಮಾತನಾಡತೊಡಗಿ, ಗ್ರಾಂಥಿಕ ಪ್ರಯೋಗಗಳಲ್ಲಿ ಏಕರೂಪತೆಯನ್ನು ಸ್ಥಾಪಿಸುವುದು ಆವಶ್ಯಕವಾಗಿರುವುದೆಂದೂ, ಕನ್ನಡನಾಡುಗಳಲ್ಲಿರುವ ಪಾಠಶಾಲೆಗಳಲ್ಲಿ ಪಾಠ್ಯ ಪುಸ್ತಕಗಳನ್ನು ಕೆಲವು ವರ್ಷಗಳಮಟ್ಟಿಗೆ ಒಂದೇ ಆಗಿರುವಂತೆ ಮಾಡುವುದರಿಂದ ಈ ಉದ್ದೇಶವು ಕೈಗೂಡುವುದೆಂದೂ, ಅಂತಹ ಪಾಠ್ಯಪುಸ್ತಕಗಳನ್ನು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಪರಿಷ್ಕರಣಕ್ಕೆ ಕೊಟ್ಟು, ಅಲ್ಲಿ ಪರಿಷ್ಕೃತಗಳಾದ ಪುಸ್ತಕಗಳನ್ನೇ ಕೆಲವು ವರ್ಷಗಳವರೆಗೆ ಉಪಯೋಗಿಸಬಹುದೆಂದೂ ನುಡಿದರು. ಮೈಸೂರು ಸಂಸ್ಥಾನದಲ್ಲಿ ಅನ್ಯಭಾಷಾಪ್ರಾಬಲ್ಯವು ಇತರೆಡೆಗಳಲ್ಲಿರುವುದಕ್ಕಿಂತ ಕಡಿಮೆಯಾಗಿರುವುದರಿಂದಲೂ, ಕನ್ನಡವನ್ನಾಡುವ ಜನರೇ ಹೇರಳವಾಗಿರುವುದರಿಂದಲೂ, ಮೈಸೂರಿನ ಗ್ರಾಂಥಿಕ ಪ್ರಯೋಗಗಳನ್ನೇ ಸಾಧ್ಯವಾಗುವ ಮಟ್ಟಿಗೆ ಆದರ್ಶವಾಗಿಟ್ಟುಕೊಳ್ಳಬಹುದೆಂದು ಅಭಿಪ್ರಾಯಪಟ್ಟರು. ಬೇರೆಬೇರೆ ಕನ್ನಡನಾಡುಗಳ ಪಾಠ್ಯಪುಸ್ತಕಗಳನ್ನು ಈ ಪರಿಷತ್ತಿನ ಪರಿಷ್ಕರಣಕ್ಕೆ ಕೊಡುವಂತೆ ಆಯಾ ಸರ್ಕಾರಗಳನ್ನು ಈ ಪರಿಷತ್ತು ಪ್ರೇರಿಸುವುದಕ್ಕೆ ಸಾಧ್ಯವಾದರೆ ಈ ಪರಿಷತ್ತಿಗೆ ಮಹಾಯಶಸ್ಸುಂಟಾಗುವುದೆಂದು ಬಿನ್ನವಿಸಿದರು.

ಹೀಗೆ ಕನ್ನಡದ ವಿಷಯವನ್ನು ನಾನಾ ಬಗೆಯ ವಿಚಾರಗಳಿಂದ ವಿಶದಗೊಳಿಸಿ, ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕಿರಬೇಕಾದ ಸ್ಥಾನವನ್ನು ಸಭೆಯಲ್ಲಿ ನೆರೆದಿರುವ ಮಹನೀಯರು ಸಮ್ಮೇಳನವು ಮುಗಿಯುವುದರೊಳಗಾಗಿ ಚರ್ಚಿಸಿ, ನಿರ್ಣೀತವಾದ ತೀರ್ಮಾನವನ್ನು ಮೈಸೂರು ಸರ್ಕಾರಕ್ಕೆ ಶ್ರುತಪಡಿಸುವುದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು.

ಲೇಖಕರೇ ಪರಿಷತ್ತಿಗೆ ಹಸ್ತಪ್ರತಿ ಕಳಿಸಿ ಅನಂತರ ಪ್ರಕಟಿಸಿ

ಬೇರೆ ಬೇರೆ ಕನ್ನಡ ನಾಡುಗಳ ಗ್ರಂಥಕರ್ತರುಗಳು ತಂತಮ್ಮ ಗ್ರಂಥಗಳನ್ನು ಮುದ್ರಿಸುವುದಕ್ಕೆ ಮೊದಲೇ ಅವುಗಳನ್ನು ಪರಿಷತ್ತಿನ ಪರಾಮರ್ಶಕ್ಕೆ ಕಳುಹಿಸಿ, ಪರಿಷತ್ತಿನವರು ಕೊಡುವ ಸೂಚನೆಗಳನ್ನು ಪರ್ಯಾಲೋಚಿಸಿ, ಅನಂತರದಲ್ಲಿ ತಂತಮ್ಮ ಗ್ರಂಥಗಳನ್ನು ಮುದ್ರಿಸುವುದಾದರೆ, ಕಾಲಕ್ರಮದಲ್ಲಿ ಗ್ರಾಂಥಿಕ ಭಾಷೆಗೆ ಏಕರೂಪತೆ ಬರುವುದಲ್ಲದೆ ಗ್ರಂಥಾವಳಿಯೂ ವೃದ್ಧಿಯನ್ನೈದುತ್ತ ಬರುವುದು ಎಂದು ಶ್ರುತಪಡಿಸಿದರು.

Tag: Kannada Sahitya Sammelana 2, 2nd Kannada Sahitya Sammelana, ಕನ್ನಡ ಸಾಹಿತ್ಯ ಸಮ್ಮೇಳನ 2, 2ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)