ಸಾಹಿತ್ಯ ಸಮ್ಮೇಳನ–೩ : ಮೈಸೂರು
ಜೂನ್ ೧೯೧೭

ಅಧ್ಯಕ್ಷರು: ಎಚ್.ವಿ. ನಂಜುಂಡಯ್ಯ

, , ೩ನೇ ಸಮ್ಮೇಳನಾಧ್ಯಕ್ಷರು

ಹೆಚ್.ವಿ. ನಂಜುಂಡಯ್ಯ

ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ೧೮೮೬ರಲ್ಲಿ ಬಿಎಲ್ ಪರೀಕ್ಷೆಯಲ್ಲಿ ೧೮೮೫ರಲ್ಲಿ ಎಂಎ ಪದವಿಯನ್ನು ಪಡೆದರು. ೧೮೯೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಫೆಲೋಷಿಪ್ ನೀಡಿ ಗೌರವಿಸಿತು.

೧೮೮೫ರಲ್ಲಿ ಮೈಸೂರು ಸರ್ಕಾರದಲ್ಲಿ ಉದ್ಯೋಗಕ್ಕೆ ಸೇರಿ ಮುನ್ಸೀಫರಾದರು. ೧೮೮೬ರಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಅನಂತರ ಅಂಡರ್ ಸೆಕ್ರೆಟರಿ, ಸಬ್ ಜಡ್ಜ್ ಆಗಿ ಸೇವೆ ಸಲ್ಲಿಸಿದ ನಂತರ ಚೀಫ್ ಜಡ್ಜ್ ಆಗಿ ಸೇವೆ ಸಲ್ಲಿಸಿ ೧೯೧೬ರಲ್ಲಿ ನಿವೃತ್ತರಾದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಉಪಕುಲಪತಿಗಳಾಗಿ ನೇಮಕಗೊಂಡು ೪ ವರ್ಷಗಳ ಕಾಲ ಅದರ ಪ್ರಗತಿಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು ಮತ್ತು ೧೯೧೫ರಿಂದ ೩ ಸಮ್ಮೇಳನಗಳಿಗೆ ಅಧ್ಯಕ್ಷರಾದ ಇವರು ಸಮ್ಮೇಳನಗಳ ಇತಿಹಾಸದಲ್ಲೇ ವಿಕ್ರಮ ಸಾಧಿಸಿದ್ದಾರೆ. ಬೇರಾವ ಅಧ್ಯಕ್ಷರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ.

ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ಸಿ.ಐ.ಇ. (ಕಂಪಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ನೀಡಿತು. ಮೈಸೂರು ಮಹಾರಾಜರು ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು.

ಕನ್ನಡ ನವೋದಯ ಕಾಲದ ಪ್ರಾರಂಭಘಟ್ಟದಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಹೆಚ್.ವಿ. ನಂಜುಂಡಯ್ಯನವರೂ ಒಬ್ಬರು. ಇವರು ರಚಿಸಿದ ಪ್ರಮುಖ ಕೃತಿಗಳು ಹೀಗಿವೆ.

 ೧. ವ್ಯವಹಾರದೀಪಿಕೆ (ನ್ಯಾಯಶಾಸ್ತ್ರ) – ೧೮೯0  ೨. ಅರ್ಥಶಾಸ್ತ್ರ – ೧೯0೧  ೩. ಲೇಖ್ಯಬೋಧಿನಿ   ೪. ರಿಲಿಜನ್ ಅಂಡ್ ಮಾರೆಲ್ ಎಜುಕೇಷನ್ (ಇಂಗ್ಲಿಷ್)  ೫. ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್)  ೬. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ (ಸಂಪಾದನೆ)  ೭. ವ್ಯವಹಾರ ಧರ್ಮಶಾಸ್ತ್ರ  ೮. ವಿಕ್ಟರ್ ಹ್ಯೂಗೋವಿನ ಫ್ರೆಂಚ್ ಕವಿತೆಗಳ ಅನುವಾದ

ಶ್ರೀಯುತರು ದಿನಾಂಕ ೨-೫-೧೯೨0ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ – ೩

ಅಧ್ಯಕ್ಷರು: ಹೆಚ್. ವಿ. ನಂಜುಂಡಯ್ಯ

ದಿನಾಂಕ ೮,೯,೧೦ ಜೂನ್ ೧೯೧೭

ಸ್ಥಳ: ಮೈಸೂರು

ಪರಿಷತ್ತಿನ ಸ್ಥಾಪನೆಗೆ ಸರ್ಕಾರದ ಸಹಾಯ

ಕನ್ನಡ ಭಾಷೆಯನ್ನೂ ಸಾಹಿತ್ಯವನ್ನೂ ಪುಷ್ಟಿಗೊಳಿಸಿ ಅಭಿವೃದ್ಧಿಗೆ ತಂದು ಕನ್ನಡ ನಾಡಿ ಜನರೆಲ್ಲರನ್ನೂ ಒಟ್ಟುಗೂಡಿಸಿ ಅವರಲ್ಲಿ ಭಾಷಾ ವಿಷಯದಲ್ಲಿ ಪರಸ್ಪರ ಐಕಮತ್ಯವೂ ಸೌಹಾರ್ದವೂ ದಿನದಿನಕ್ಕೆ ಹೆಚ್ಚುವಂತೆ ಮಾಡುವುದೇ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಮುಖ್ಯೋದ್ದೇಶವಾಗಿದೆ. ಈ ಮಹಾಕಾರ್ಯಕ್ಕೆ ದೇಶಾಭಿವೃದ್ದಿಯಲ್ಲಿ ಆಸಕ್ತರಾದ ಸರ್ವರೂ ಒಮ್ಮನದಿಂದ ಸಹಾಯ ಮಾಡಬೇಕು.

ಪರಿಷತ್ತಿಗೆ ಶ್ರೀಮನ್ ಮಹಾರಾಜರ ಪ್ರೋತ್ಸಾಹ

ಈಗ ನಮ್ಮ ಶ್ರೀಮನ್ ಮಹಾರಾಜರವರು ಭಾಷಾ ಪರಿಷ್ಕರಣ ವಿಷಯದಲ್ಲಿ, ಪೂರ್ವಕಾಲದ ರಾಜಾಧಿರಾಜರಂತೆ ತಮ್ಮ ವಂಶದವರಾದ ಚಿಕ್ಕ ದೇವರಾಜವೊಡೆಯರವರ ಕಾಲದಿಂದ ಪಾರಂಪರ್ಯವಾಗಿ ಬಂದ ಕ್ರಮವನ್ನು ಅನುಸರಿಸಿ, ಸಂಪದಭಿವೃದ್ಧಿ ವಿಷಯಗಳಿಗೆ ಪ್ರೋತ್ಸಾಹಗಳನ್ನುಂಟು ಮಾಡುವಂತೆಯೇ, ವಿದ್ಯಾಭಿವೃದ್ಧಿಗೂ ಪ್ರೋತ್ಸಾಹವನ್ನು ಕೊಡಬೇಕೆಂಬ ಅಭಿಪ್ರಾಯವುಳ್ಳವರಾಗಿರುತ್ತಾರೆ. ಕನ್ನಡ ಮಾತನ್ನಾಡುವ ಜನರು ಈ ಮೈಸೂರು ರಾಜ್ಯದ ಹೊರಗಣ ಪ್ರಾಂತಗಳಲ್ಲಿ ಅನೇಕ ಲಕ್ಷ ಮಂದಿ ಇರುವರು. ಇವರೊಡನೆ ನಮ್ಮ ಜನರೂ ಸೌಹಾರ್ದದಿಂದ ಸೇರಿ ಒಮ್ಮನದಿಂದ ಕಾರ್ಯನಿರ್ವಹಣೆ ಮಾಡುತ್ತಾ ಬರಬೇಕು. ಹೀಗಾಗುವ ಪಕ್ಷಕ್ಕೆ ಕನ್ನಡ ನಾಡುಗಳ ಜನರನ್ನೆಲ್ಲ ಜ್ಞಾನಾಭಿವೃದ್ಧಿಯ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಇದಕ್ಕಾಗಿ ಮೇಲ್ವಿಚಾರಣೆಗೆ ಸೇರದ ಮತ್ತು ಯಾವ ವಿಧವಾದ ರಾಜಕೀಯ ಉದ್ದೇಶಗಳನ್ನೂ ಇಟ್ಟುಕೊಳ್ಳದ ಕರ್ಣಾಟಕ ಭಾಷಾಭಿಮಾನಿಗಳ ಒಂದು ಸಂಘವು ಏರ್ಪಾಡಾಗಬೇಕೆಂದು ಗೊತ್ತಾಯಿತು. ಈ ಪರಿಷತ್ತು ಶ್ರೀಮನ್ ಮಹಾರಾಜಾ ಸರ್ಕಾರದವರ ಉದಾರವಾದ ಸಹಾಯದಿಂದ ಸ್ಥಾಪಿತವಾಯಿತು.

ಕರ್ಣಾಟಕ ಸಾಹಿತ್ಯಾಭಿವೃದ್ಧಿಯ ವಿಷಯದಲ್ಲಿ ಮೊದಲೆರಡನೆಯ ಸಮ್ಮೇಳನಗಳು ಬೆಂಗಳೂರಲ್ಲಿ ನಡೆದುವು. ಈ ಮೂರನೆಯ ಸಮ್ಮೇಳನವು, ಎಂದರೆ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದ ಮೇಲೆ ನಡೆಯುವ ಈ ಎರಡನೆಯ ಸಮ್ಮೇಳನವು, ನಮ್ಮ ಶ್ರೀಮನ್ ಮಹಾರಾಜರವರ ೩೪ನೆಯ ವರ್ಧಂತ್ಯುತ್ಸವದ ಶುಭ ಕಾಲದಲ್ಲಿ ಈ ಮೈಸೂರು ರಾಜಧಾನಿಯಲ್ಲಿ ಕೂಡಿದೆ. ಶ್ರೀಮದ್ಯುವರಾಜರಾದ ತಾವು ಇಲ್ಲಿಗೆ ದಯಮಾಡಿಸಿ ಈ ಸಮ್ಮೇಳನದ ಪ್ರಾರಂಭೋತ್ಸವದ ಅಧ್ಯಕ್ಷಸ್ಥಾನವನ್ನು ವಹಿಸಿ ಈ ಸಭೆಗೆ ಅಸಾಧಾರಣವಾದ ಗೌರವವನ್ನು ದಯಪಾಲಿಸಿದುದಕ್ಕಾಗಿ ನಾವೆಲ್ಲರೂ ಹರ್ಷಿಸುತ್ತಿರುವೆವು.

ಮೊದಲು ಬೆಂಗಳೂರಿನಲ್ಲಿ ಸಮ್ಮೇಳನವು ನಡೆದಾಗ ಪರಿಷತ್ತಿನ ಉದ್ದೇಶಗಳೇನು? ಯಾವ ಯಾವ ವಿಧವಾದ ಕೆಲಸಗಳು ನಡೆಯಬೇಕು?ಯಾವ ಯಾವ ಮಾರ್ಗಗಳಿಂದ ಉದ್ದೇಶಗಳನ್ನು ಸಾಧಿಸಬೇಕು? ಎಂಬ ವಿಷಯಗಳನ್ನು ಕುರಿತು ವಿವರವಾಗಿ ಭಾಷಣಮಾಡಿದೆನು.

ಅವುಗಳನ್ನು ಇಲ್ಲಿ ಪುನಃ ಹೇಳುವ ಆವಶ್ಯಕತೆಯಿಲ್ಲ. ಈ ಪರಿಷತ್ತಿನ ಕೆಲಸವು ಕೊಂಚಮಟ್ಟಿಗಾದರೂ ಸಮರ್ಪಕವಾಗಿ ನಡೆಯಬೇಕಾದರೆ, ದ್ರವ್ಯ ಸಹಾಯವು ಒದಗಬೇಕಾದುದು ಮಾತ್ರವೇ ಅಲ್ಲದೆ, ಸಮರ್ಥರ ಮತ್ತು ಪಂಡಿತರ ಉದಾರಾಶ್ರಯವೂ ಅವಿಚ್ಛಿನ್ನವಾಗಿ ದೊರೆಯುತ್ತಿರಬೇಕು. ಸಭೆಗಳನ್ನೂ ಸಮ್ಮೇಳನಗಳನ್ನೂ ಏರ್ಪಾಡು ಮಾಡಿ ನಿಬಂಧನೆಗಳನ್ನು ಮಾಡುವುದು ತಿದ್ದುವುದು ಇವುಗಳಿಂದಲೇ ಸಂಪೂರ್ಣವಾದ ಫಲವು ಕೈಗೂಡುವುದಿಲ್ಲ. ಇನ್ನೂ ಇತರ ಅನೇಕ ಕಾರ್ಯಗಳು ನಡೆಯಬೇಕು. ಶ್ರೀಮದ್ಯುವರಾಜರಾದ ತಾವು ಇಲ್ಲಿಗೆ ಬಿಜಯಮಾಡಿ ತಮ್ಮ ಉದಾರಾಶ್ರಯವನ್ನಿತ್ತು, ಸಭಾ ಸಮಾರಂಭಕಾರ್ಯವನ್ನು ಹರ್ಷೋನ್ಮುಖದಿಂದ ನಡೆಯಿಸುವುದನ್ನು ನೋಡಿದರೆ, ಶಾಶ್ವತವಾಗಿ ನಿಲ್ಲುವ ಕೆಲಸಗಳನ್ನು ಮಾಡಲು ಸಮರ್ಥರಾದವರ ಸಹಾಯವನ್ನು ಸಂಪಾದಿಸುವುದಕ್ಕೂ ಶ್ರೀಮಂತರ ಉದಾರಾಶ್ರಯವನ್ನು ಸಂಪಾದಿಸುವುದಕ್ಕೂ ಬಹಳವಾಗಿ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಶ್ರೀಮದ್ಯುವರಾಜರವರ ಘನಸಾನಿಧ್ಯದಿಂದ ಪರಿಷತ್ತಿನ ಸದಸ್ಯರುಗಳಿಗೆ ವಿಶೇಷವಾದ ಪ್ರೋತ್ಸಾಹವಾಗಿರುವುದಲ್ಲದೆ ಅವರು ಮತ್ತಷ್ಟು ಶ್ರದ್ಧೆಯಿಂದ ಕೆಲಸವನ್ನು ಮಾಡಲು ಉತ್ಸಾಹಭರಿತರಾಗಿರುವರು. ಸರ್ಕಾರದವರು ಮಾಡಿರುವ ಉದಾರವಾದ ಸಹಾಯವನ್ನು ನೋಡುವಲ್ಲಿ ಶ್ರೀಮನ್ಮಹಾರಾಜಾರವರಿಗೆ ಪರಿಷತ್ತಿನ ಶ್ರೇಯೋಭಿವೃದ್ಧಿಯಲ್ಲಿ ಎಷ್ಟರಮಟ್ಟಿಗೆ ಪ್ರೀತಿವಿಶ್ವಾಗಳಿರುವುವೋ ಅವು ನಿರ್ಧಾರವಾಗಿ ವ್ಯಕ್ತಪಡುತ್ತಿರುವುವು. ಸರ್ಕಾರದವರ ಸಹಾಯವು ಮುಂದಕ್ಕೂ ನಡೆಯುವುದಲ್ಲದೆ ಇನ್ನೂ ಹೆಚ್ಚುತ್ತ ಬರುವುದೆಂದು ನಂಬಿದ್ದೇವೆ. ಶ್ರೀಮದ್ಯುವರಾಜರವರು ಈ ಸಭಾಸಮಾರಂಭದ ಅಧ್ಯಕ್ಷಸ್ಥಾನವನ್ನು ಕೃಪಾಪರಿಪೂರ್ಣತೆಯಿಂದ ಅಂಗೀಕರಿಸಿರುವುದನ್ನು ನೋಡಿದರೆ, ಪರಿಷತ್ತಿನ ಸದುದ್ದೇಶಗಳು ಶ್ರೀಮದ್ಯುವರಾಜರವರ ಮೆಚ್ಚಿಗೆಯನ್ನು ಪಡೆದಿರುವುದೆಂಬ ಸಂಗತಿಯೂ ಶ್ರೀಮನ್ಮಹಾರಾಜರವರಿಗೂ ವಿಶೇಷವಾದ ಆದರಾಸಕ್ತಿಗಳು ಉಂಟೆಂಬ ಸಂಗತಿಯೂ ಕನ್ನಡ ಭಾಷಾ ಸಾಹಿತ್ಯಗಳ ಏಳಿಗೆಗೆ ಬಲವಾದ ರಾಜಾಶ್ರಯವು ದೊರೆತಿರುವುದೆಂಬ ಸಂಗತಿಯೂ ದೃಢಪಡುತ್ತಿರುವುವು ಎಂದು ಸಂತುಷ್ಟರಾಗಿದ್ದೇವೆ. ಮಹಾಸ್ವಾಮಿ”.

Tag: Kannada Sahitya Sammelana 3, 3rd Kannada Sahitya Sammelana, 3ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನ 3

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)