ಸಾಹಿತ್ಯ ಸಮ್ಮೇಳನ-೫ : ಹಾಸನ
ಮೇ ೧೯೧೯

ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು

೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕರ್ಪೂರ  ಶ್ರೀನಿವಾಸರಾವ್

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯವಾಗಿ ದುಡಿದವರಲ್ಲಿ ಕರ್ಪೂರ ಶ್ರೀನಿವಾಸರಾಯರು ಪ್ರಮುಖರಾಗಿದ್ದಾರೆ. ಪರಿಷತ್ತಿಗೆ ಸ್ವಂತ ಕಟ್ಟಡವನ್ನು ದೊರಕಿಸುವಲ್ಲಿ ಅವರ ಪಾತ್ರ ಅಮೋಘವಾದುದು.

ಕರ್ಪೂರ ಸುಬ್ಬರಾಯರ ದ್ವಿತೀಯ ಪುತ್ರರಾದ ಕರ್ಪೂರ ಶ್ರೀನಿವಾಸರಾಯರು ೧೮೬೩ರಲ್ಲಿ ಜನಿಸಿದರು. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವಾಗ ಇವರ ಮನೆತನದ ಹಿರಿಯರು ಬೆಟ್ಟದಡಿಯಿಂದ  ಬೆಟ್ಟದ ತುದಿಯವರೆಗೆ ಕರ್ಪೂರ ಉರಿಸಿದ್ದರಿಂದ ಇವರ ಮನೆತನಕ್ಕೆ ಕರ್ಪೂರದವರು ಎಂದು ಹೆಸರಾಯಿತು.

ಬಡತನದ ಕುಟುಂಬದಲ್ಲಿ ಜನಿಸಿದ ಇವರು ನೌಕರಿಗಾಗಿ ಪೂನಾದಲ್ಲಿ ಪ್ರಯತ್ನಿಸುತ್ತಿದ್ದಾಗ ವಕೀಲರೊಬ್ಬರು ಕೊಡಿಸಿದ ವಿದ್ಯಾರ್ಥಿವೇತನದಿಂದ ವಿದ್ಯಾಭ್ಯಾಸ ಮುಂದುವರೆಸಿದರು. ಬಿ.ಎಸ್.ಸಿ ಮತ್ತು ಎಲ್.ಸಿ.ಇ. ಪದವಿಗಳನ್ನು ಗಳಿಸಿ  ಬೊಂಬಾಯಿಯಲ್ಲಿ ಇಂಜಿನಿಯರ್ ಆಗಿ ನೇಮಕಗೊಂಡ ಇವರು ರಿಲೀಫ್ ಇಂಜಿನಿಯರ್ ಆಗಿ ನಿವೃತ್ತರಾದರು. ಅನಂತರ ಮೈಸೂರು ಸರ್ಕಾರದ ಪ್ರಧಾನ ಇಂಜಿನಿಯರ್ ಆಗಿ ನೇಮಕಗೊಂಡರು.

೧೯೧೫ರಲ್ಲಿ ಪರಿಷತ್ತು ಪ್ರಾರಂಭವಾದಾಗ ೫00 ರೂ. ಕೊಟ್ಟ ಪ್ರಥಮ ಪೋಷಕರು ಶ್ರೀನಿವಾಸರಾಯರು, ೧೩ ವರ್ಷಗಳ ಕಾಲ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿಯೇ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಶಂಕುಸ್ಥಾಪನೆ ಆದುದು. ಇವರೇ ನಿರ್ಮಾಣದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಕೃಷ್ಣರಾಜ ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕರ್ಪೂರ ಶ್ರೀನಿವಾಸರ ಸೇವೆಯನ್ನು ಪರಿಗಣಿಸಿ ಮಹಾರಾಜರು ರಾಜಸಭಾಭೂಷಣ ಎಂಬ ಬಿರುದನ್ನು ಇತ್ತರು. ಮೈಸೂರು ಸಂಸ್ಥಾನದ ಪ್ರಥಮ ಕಾರ್ಯಕಾರಿ ಮಂಡಲಿಯ ಚುನಾಯಿತ ಸದಸ್ಯರಾಗಿದ್ದರು.

ಶ್ರೀನಿವಾಸರಾಯರು ಬರೆದ ಕೃತಿಗಳು ಹಲವಾರು:

 ೧. ಸಾಹಿತ್ಯ ಶಾಸ್ತ್ರ (ಲೇಖನಗಳು)  ೨. ವಿದ್ಯಾಕರಭೂಷಣ  ೩. ಧನಾರ್ಜನೆಯ ಕ್ರಮ ೪. ಅರ್ಥಸಾಧನೆ  ೫. ಹರಿಶ್ಚಂದ್ರ ಚರಿತ್ರೆ  ೬. ದೇಶಾಭಿಮಾನ  ೭. ಸಾಧನೆ ಪ್ರಕಾಶಿಕೆ ಇತ್ಯಾದಿ

ಇಂಗ್ಲಿಷ್, ಕನ್ನಡ ಮರಾಠಿ ಭಾಷೆಗಳಲ್ಲಿ ಪರಿಶ್ರಮ ಹೊಂದಿದ ಇವರು ಸುಭೋಧ ರಾಮರಾಯರ ಗ್ರಂಥಮಾಲೆಗೆ ವಿಶೇಷ ಪ್ರೋತ್ಸಾಹವಿತ್ತರು. ೮-೧೧-೧೯೩೩ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷರು: ಕರ್ಪೂರ ಶ್ರೀನಿವಾಸರಾಯರು

ದಿನಾಂಕ ೬, , ಮೇ ೧೯೧೯

ಸ್ಥಳ : ಹಾಸನ

ಈ ಸಮ್ಮೇಳನದ ಸ್ವಾಗತ ಮಂಡಲಿಯ ಅಧ್ಯಕ್ಷರಾದ ಹಾಸನದ ಡಿಸ್ಟ್ರಿಕ್ಟು ಡೆಪ್ಯುಟಿ ಕಮಿಷನರ್ ಮ|| ರಾ|| ಸಿ. ವೆಂಕಟರಾಯರವರ ಪರವಾಗಿ ಮ|| ರಾ|| ಅಡ್ವೊಕೇಟ್ ರಾಮಸ್ವಾಮಯ್ಯನವರು ತಮ್ಮನ್ನು ಸ್ವಾಗತಾಭಿನಂದನಗಳಿಂದ ಈ ನಗರಕ್ಕೆ ಬರಮಾಡಿಕೊಂಡು ಈಗ ತಾನೆ ಈ ಡಿಸ್ಟ್ರಿಕ್ಟಿನ ವಿಶೇಷಾಂಶಗಳನ್ನು ವಿವರಿಸಿದುದನ್ನು ತಾವುಗಳೆಲ್ಲರೂ ಕೇಳಿ ಐಕಮತ್ಯದಿಂದ ನನ್ನನ್ನು ಸಮ್ಮೇಳನದ ಅಧ್ಯಕ್ಷನಾಗಿರುವಂತೆ ನಿಯಮಿಸಿರುವುದರಿಂದ ತಮ್ಮ ಆಜ್ಞಾನುಸಾರವಾಗಿ ಇಲ್ಲಿನ ಕಾರ್ಯಗಳನ್ನು ನನ್ನ ಶಕ್ತ್ಯನುಸಾರ ನಡೆಯಿಸುವುದು ನನ್ನ ಕರ್ತವ್ಯವಾಗಿದೆ. ಮುಖ್ಯವಾಗಿ ಇಂತಹ ದೊಡ್ಡ ಕಾರ್ಯವು ಸರಿಯಾಗಿ ನೆರವೇರಬೇಕಾದರೆ ತಮ್ಮೆಲ್ಲರ ಸಹಾಯವು ಅತ್ಯಾವಶ್ಯಕವಾಗಿರುವುದು.

ಈ ಸಂಘವನ್ನು ‘’ಕರ್ಣಾಟಕ ಸಾಹಿತ್ಯ ಪರಿಷತ್ತ್ತು” ಎಂದು ಕರೆಯುವೆನಷ್ಟೆ! ಈ ನಾಮಧೇಯದಿಂದಲೇ ಈ ಸಂಘದವರ ಕರ್ತವ್ಯವು ಇಂತಹದೆಂದು ನಿಶ್ಚಯಿಸಬಹುದು.  ಈ ಹೆಸರಿನಲ್ಲಿ “ಕರ್ಣಾಟಕ ಸಾಹಿತ್ಯ ಪರಿಷತ್ತು” ಎಂಬ ಮೂರು ಶಬ್ದಗಳು ಇರುತ್ತವೆ; ಇವುಗಳಲ್ಲೊಂದಾದ ‘ಸಾಹಿತ್ಯ’ ಎಂಬ ಶಬ್ದದ ಅರ್ಥವನ್ನು ಮೊದಲು ವಿಚಾರಮಾಡಬೇಕಾಗಿದೆ.

ಸಾಹಿತ್ಯ ಎಂದರೆ, ‘’ಯಾವುದಾದರೊಂದು ಕಾರ್ಯವನ್ನು ನೆರವೇರಿಸಬೇಕಾದರೆ ಒಂದನ್ನೊಂದವಲಂಬಿಸಿಕೊಂಡಿರುವ ಸಮಾನ ಧರ್ಮಗಳುಳ್ಳ ಅನೇಕ ಪದಾರ್ಥಗಳು, ಅಥವಾ ಜನರು, ಒಂದೇ ಕಾರ್ಯದಲ್ಲಿ ಸಮವಾಗಿ ಸಂಬಂಧಿಸಿ ಸೇರತಕ್ಕದ್ದು” ಎಂದರ್ಥವಾಗುತ್ತದೆ. ಇದರಿಂದ ಸಾಹಿತ್ಯ ಶಬ್ದಾರ್ಥವನ್ನು ವಿಶಾಲವಾಗಿ ಮಾಡಿದಂತಾಗುತ್ತದೆ; ಆದರೆ ಪ್ರಕೃತಕ್ಕೆ ತಕ್ಕಂತೆ ಅದನ್ನು ಸಂಕೋಚಮಾಡಿ ಮನುಷ್ಯಕೃತ ಗ್ರಂಥ ವಿಶೇಷಗಳಿಗೆ ಮಾತ್ರ ನಿಯಮ ಮಾಡಿಕೊಂಡರೆ ಸಂಸ್ಕೃತದಲ್ಲಿ ರಘುವಂಶ, ಮಾಘ, ಭಾರವಿ, ಭಟ್ಟ, ಮೇಘದೂತ, ಕಾದಂಬರಿ, ಹರ್ಷಚರಿತ, ಭೋಜಚಮ್ಪು, ಶಾಕುಂತಲ, ಮುದ್ರಾರಾಕ್ಷಸ, ರತ್ನಾವಳಿ, ಉತ್ತರರಾಮಚರಿತ- ಇವೇ ಮೊದಲಾದ ಗ್ರಂಥಗಳ ಸಮುದಾಯವೆಂದು ತಾತ್ಪರ್ಯವಾಗುತ್ತದೆ.

ಇದರಂತೆಯೇ ಕನ್ನಡದಲ್ಲಿಯೂ ಅರ್ಥವಾಗಲೆಂದು ಕರ್ಣಾಟಕ ಸಾಹಿತ್ಯವೆಂದಿಟ್ಟಿದೆ. ಇದರಿಂದ ಕವಿರಾಜಮಾರ್ಗ, ಪಂಪಭಾರತ, ಪಂಪರಾಮಾಯಣ, ಲೀಲಾವತಿ, ಗದಾಯುದ್ಧ, ರಾಮಾಶ್ವಮೇಧ ಮಿತ್ರವಿಂದಾಗೋವಿಂದ- ಮೊದಲಾದ ಕನ್ನಡದ ಗ್ರಂಥಗಳ ಸಮುದಾಯವೆಂಬರ್ಥವನ್ನು ಕೊಡುತ್ತದೆ.

“ಪರಿಷತ್” ಎಂದರೆ ಸಭೆಯೆಂದರ್ಥವು-ಇತ್ಥಂಚ ‘’ಕರ್ಣಾಟಕ ಸಾಹಿತ್ಯ ಪರಿಷತ್” ಎಂದರೆ ಕನ್ನಡ ಭಾಷಾಗ್ರಂಥಗಳಲ್ಲಿ ಪ್ರಾಚೀನವಾದುವನ್ನು ಪರಿಷ್ಕರಣಮಾಡಿ ಪ್ರಕಟಿಸುವುದೂ, ಆಧುನಿಕ ಗ್ರಂಥಗಳನ್ನು ಸಂಗ್ರಹಿಸಿ ಉತ್ತಮವಾದವುಗಳಿಗೆ ಪ್ರೋತ್ಸಾಹವನ್ನು ಕೊಡುವುದೂ, ಉತ್ತಮವಾದ ಭಾಷಾಗ್ರಂಥಗಳನ್ನು ರಚಿಸಲು ಉತ್ತೇಜನ ಕೊಡುವುದೂ ಮತ್ತು ಎಲ್ಲಾ ಕರ್ಣಾಟಕ ದೇಶ ಭಾಗಗಲ್ಲಿಯೂ ಪ್ರಚಾರದಲ್ಲಿರುವ ಈ ಭಾಷೆಯ ವೃದ್ಧಿಯ ವಿಷಯದಲ್ಲಿರುವ ಸಮಯವರಿತು ತಕ್ಕ ಏರ್ಪಾಟುಗಳನ್ನು ಮಾಡಿ ಆಚರಣೆಗೆ ತರುವುದೂ-ಇದೇ ಮೊದಲಾದ ಕಾರ್ಯಗಳನ್ನು ಕೈಕೊಂಡು ನೆರವೇರಿಸಲು ಏರ್ಪಟ್ಟ ವಿದ್ವಾಂಸರ ಸಭೆ-ಎಂದು ನಿಷ್ಕೃಷ್ಟಾರ್ಥವು.

ಈ ಪರಿಷತ್ತಿನಲ್ಲಿ ಎಂತೆಂತಹ ಗ್ರಂಥಗಳು ಅಂಗೀಕಾರವನ್ನು ಹೊಂದಿರುತ್ತವೆ ಎಂದು ವಿಚಾರ ಮಾಡಬೇಕಾಗಿದೆ.

ಮಿತ್ರ ಸಮ್ಮಿತಗಳು

ಮಿತ್ರರು ಪರಸ್ಪರ ವಿಚಾರಮಾಡಿ ಸನ್ಮಾರ್ಗವನ್ನವಲಂಬಿಸುವುದಕ್ಕೂ ದುರ್ಮಾರ್ಗವನ್ನು ತ್ಯಜಿಸುವುದಕ್ಕೂ ಹೇಗೆ ಅವಕಾಶವಿರುತ್ತದೆಯೋ ಹಾಗೆಯೇ ಪುರಾಣೇತಿಹಾಸಗಳು ವಿಚಾರಕ್ಕೆ ಅವಕಾಶವನ್ನು ಕೊಟ್ಟು ವಿಹಿತ ಕರ್ಮದಲ್ಲಿ ಪ್ರವೃತ್ತಿಯನ್ನೂ ನಿಷಿದ್ಧ ಕರ್ಮದಲ್ಲಿ ನಿವೃತ್ತಿಯನ್ನೂ ಬೋಧಿಸುತ್ತವೆ.

ಇಂತಹ ಪುರಾಣೇತಿಹಾಸಗಳಲ್ಲಿರುವ ಉಪಾಖ್ಯಾನಗಳನ್ನು ಕನ್ನಡದಲ್ಲಿ  ಬೇರೆ ಬೇರೆ ಮುದ್ರಿಸಿ ಲೋಕೋಪಕಾರವನ್ನು ಮಾಡಬೇಕೆಂಬುದೂ ಈ ಪರಿಷತ್ತಿನ ಉದ್ದೇಶವಾಗಿರುತ್ತದೆ.

ಕಾಂತಾಸಮ್ಮಿತಗಳು

ಕಾವ್ಯಾನಾಟಕಾದಿಗಳಲ್ಲಿ ಮನುಷ್ಯನಿಗೆ ಕರ್ತವ್ಯಾಕರ್ತವ್ಯಗಳಲ್ಲಿ ಪ್ರವೃತ್ತಿ ನಿವೃತ್ತ್ಯುಪದೇಶವನ್ನು ಸರಸವಾಗಿ ಬೋಧಿಸುವುದರಿಂದ ಇವುಗಳನ್ನು ಓದಿದ ಮನುಷ್ಯನು ಮಾಡಬೇಕಾದುದನ್ನು ಮಾಡುವುದೂ, ಬಿಡಬೇಕಾದುದನ್ನು ಬಿಡುವುದೂ, ಕಂಡುಬರುತ್ತದೆ.

ರಾಮಾಯಣವನ್ನು ಓದಿದವನು, ‘’ಶ್ರೀರಾಮನಂತೆಯೇ ನಾನಿರಬೇಕು. ರಾವಣನಂತಿರಬಾರದು” ಎಂಬ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೂಡಿದ ಮಟ್ಟಿಗೆ ಇದನ್ನು ಆಚರಣೆಯಲ್ಲಿ ತರುತ್ತಾನೆ. ಆದಕಾರಣ ಕಾವ್ಯಗಳಿಂದ ಸಾಮಾನ್ಯ ಜನರಿಗೆ ತಿಳಿವಳಿಕೆಯೂ ಉಪಕಾರವೂ ಆಗುವಷ್ಟು ವೇದಶಾಸ್ತ್ರಗಳಿಂದಾಗಲಾರದು. ಆದುದರಿಂದಲೇ ಈ ಪರಿಷತ್ತಿನಲ್ಲಿ ಮುಖ್ಯವಾಗಿ ಕರ್ಣಾಟಕ ಕಾವ್ಯಗಳನ್ನು ಪ್ರಕಟಿಸಿ ಕನ್ನಡಿಗರಿಗೆ ಉಪಕಾರಮಾಡಬೇಕೆಂಬ ಉದ್ದೇಶವಿರುತ್ತದೆ.

ಹಿಂದೆ ಒಂದೇ ರಾಜ್ಯವಾಗಿದ್ದ ‘ಕರ್ಣಾಟಕವು ಈಗ ತುಂಡು ತುಂಡುಗಳಾಗಿ ಬೇರೆ ಬೇರೆ ಆಧಿಪತ್ಯಗಳಿಗೆ ಸೇರಲು ಅನೇಕ ರಾಜಕೀಯ ಮತ್ತು ಸಾಮಾಜಿಕ ಕಾರಣಗಳುಂಟು. ಅವುಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸುವುದು ಯುಕ್ತವಲ್ಲ; ಕಳೆದುಹೋದುದನ್ನು ಕುರಿತು ಪ್ರಸಂಗಮಾಡುವುದು ಅಷ್ಟು ಪ್ರಯೋಜನಕಾರಿಯೂ ಅಲ್ಲ. ಕರ್ಣಾಟಕದ ಈಗಿನ ಸ್ಥಿತಿಯು ಸಕಲ ವಿಧಗಳಲ್ಲಿಯೂ ಮೇಲಾಗಬೇಕು. ಹೀಗಾಗಲು ಬಗೆಬಗೆಯ ಪ್ರಯತ್ನಗಳು ಆವಶ್ಯಕಗಳು. ಆದರೆ ಅವುಗಳಲ್ಲಿ ಒಂದನ್ನು ಮಾತ್ರವೇ ನಮ್ಮ ಪರಿಷತ್ತು ಕೈಕೊಳ್ಳುವುದಕ್ಕೆ ಸಾಧ್ಯವು. ಅದೇನೆಂದರೆ – ಭಾಷಾ ಸೇವೆ, ಎಂದರೆ ಕರ್ಣಾಟಕ ಸಾಹಿತ್ಯ ಸಂಪತ್ತನ್ನು ಹೆಚ್ಚಿಸುವುದು. ಇದಕ್ಕಾಗಿ ನಾವು ಮಾಡತಕ್ಕುದೇನು! ಕರ್ಣಾಟಕ ಸಾಹಿತ್ಯ ಸಂಪತ್ತಿನ ಈಗಿನ ಸ್ಥಿತಿಯನ್ನು ಅದರ ಪೂರ್ವಸ್ಥಿತಿಯೊಡನೆ ಹೋಲಿಸುವುದಲ್ಲದೆ, ಇತರ ದೇಶಗಳ ಸಾಹಿತ್ಯ ಸಂಪತ್ತಿಗಳ ಅಭಿವೃದ್ಧಿಗೆ ಕಾರಣಗಳನ್ನು ತಿಳಿದು, ನಮ್ಮದೂ ಅವುಗಳಂತೆ ಏಳಿಗೆಯನ್ನು ಹೊಂದಬೇಕಾದರೆ ಆವಶ್ಯಕಗಳಾದ ಪ್ರಯತ್ನಗಳಾವುವೋ ಅವುಗಳನ್ನು ಕುರಿತು ವಿಚಾರಮಾಡುವುದು.

ಯಾವ ಕಾರ್ಯಸಿದ್ಧಿಗೂ ತತ್ಸಂಬಂಧವಾದ ಜ್ಞಾನ, ಇಚ್ಛಾ, ಕೃತಿ ಎಂಬ ಮೂರು ಘಟ್ಟಗಳುಂಟು. ಅವುಗಳಲ್ಲಿ ಮೊದಲನೆಯದು ಯಾವುದೆಂದರೆ, ಕಾರ್ಯ ವಿಷಯವಾಗಿ ಜ್ಞಾನಸಂಪಾದನೆ. ಮುಂದೆ, ಕಾರ್ಯದಲ್ಲಿ ಇಚ್ಛೆ ಹುಟ್ಟುವುದೇ ಎರಡನೆಯ ಸೋಪಾನ. ಕಾರ್ಯವು ಒಳ್ಳೆಯದೆಂದು ತಿಳಿದುಬಂದರೆ ಅದರಲ್ಲಿ ಉಪಾದೇಯಬುದ್ಧಿಯೂ, ಕೆಟ್ಟದೆಂದು ಕಂಡುಬಂದರೆ ಅದರಲ್ಲಿ ಹೇಯಬುದ್ಧಿಯೂ ಜನಿಸುತ್ತದೆ. ಮೂರನೆಯ ಮೆಟ್ಟಲು ಕೃತಿ. ಇಚ್ಛೆಯು ಉತ್ಕಟವಾದಂತೆ ತತ್ಸಂಬಂಧವಾದ ಕೃತಿಯೂ ಬಲವಾಗುತ್ತದೆ. ಉತ್ಕಟೇಚ್ಛೆಗೆ ಪೂರ್ಣಜ್ಞಾನವೇ ಮೂಲ. ಆದುದರಿಂದ ನಮ್ಮ ಕರ್ಣಾಟಕ ವಾಙ್ಮಯ ವಿಷಯವಾಗಿ ನಾವು ಮೊದಲು ಸರಿಯಾದ ಜ್ಞಾನವನ್ನು ಸಂಪಾದಿಸುವುದೇ ನಮ್ಮ ಪ್ರಥಮ ಕರ್ತವ್ಯವು. ಈ ಜ್ಞಾನಸಂಪಾದನೆಗೆ ನಾನು ಈಗತಾನೇ ಹೇಳಿದಂತೆ ಕರ್ಣಾಟಕ ಸಾಹಿತ್ಯ ಸಂಪತ್ತಿನ ಪೂರ್ವ ಮತ್ತು ಆಧುನಿಕ ಸ್ಥಿತಿಗಳನ್ನು ಒಂದರೊಡನೆ ಒಂದನ್ನು ಹೋಲಿಸುವುದು ಅತ್ಯಾವಶ್ಯಕವು.

ಸರ್ಕಾರದ ವಿದ್ಯಾಭ್ಯಾಸದ ಇಲಾಖೆಯವರೂ, ಕರ್ಣಾಟಕ ಗ್ರಂಥಮಾಲಾ ಸಂಪಾದಕರೂ ಸ್ವಲ್ಪಮಟ್ಟಿಗೆ, ಕನ್ನಡಭಾಷೆಗೆ ಪ್ರೋತ್ಸಾಹವನ್ನು ಕೊಡುತ್ತಿದ್ದರೂ, ಜನರಲ್ಲಿ ಭಾಷಾವಿಷಯವಾಗಿ ನಿಜವಾದ ಜಾಗ್ರತೆಯು ಇತರ ಕಡೆಗಳಲ್ಲಿರುವಂತೆ ಇನ್ನೂ ಹುಟ್ಟಿಲ್ಲ. ಈ ನ್ಯೂನತೆಯ ನಿವಾರಣಾರ್ಥವಾಗಿ ಈಚೆಗೆ ಪ್ರಯತ್ನಗಳು ನಡೆಯುತ್ತಲಿವೆ. ಅವುಗಳಲ್ಲಿ ಮುಖ್ಯವಾದುವುಗಳನ್ನು ಇಲ್ಲಿ ಸೂಚಿಸುತ್ತೇನೆ.

ಪ್ರಜೆಗಳು ತಮ್ಮ ಕ್ಷೇಮ ಮತ್ತು ಏಳಿಗೆಯ ಚಿಂತನೆಯನ್ನು ತಾವೇ ಸಂತತವೂ ಪರಾವಲಂಬನವಿಲ್ಲದೆ ಮಾಡಿಕೊಳ್ಳುವುದಕ್ಕೆ ಪ್ರವರ್ತಿಸಬೇಕೆಂಬ ದೂರದೃಷ್ಟಿಯೊಡನೆ ನಮ್ಮ ಶ್ರೀಮನ್ಮಹರಾಜರು ಉದಾರ ಮನಸ್ಸಿನಿಂದ ಈಗ್ಗೆ ೮ ವರುಷಗಳ ಹಿಂದೆ ಸಂಸದಭ್ಯುದಯ ಸಂಘವೊಂದನ್ನು ಸ್ಥಾಪಿಸಿ ದೇಶೋನ್ನತಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.

ಪರಿಷತ್ತಿಗೆ ದ್ರವ್ಯ ಸಹಾಯಮಾಡಿ

ಕರ್ಣಾಟಕ ಭಾಷಾಸೇವೆಗಾಗಿ ಈ ಕರ್ಣಾಟಕ ಸಾಹಿತ್ಯ ಪರಿಷತ್ತು ನಾಲ್ಕು ವರುಷಗಳ ಹಿಂದೆ ಸ್ಥಾಪಿಸಲ್ಪಟ್ಟಿತೆಂಬ ವಿಷಯವು ತಮ್ಮೆಲ್ಲರಿಗೂ ತಿಳಿದ ವಿಷಯವೇ. ಪರಿಷತ್ತಿನ ಕಾರ್ಯಗಳು ಕರ್ಣಾಟಕರೆಂದು ಯಾರುಯಾರು ಹೇಳಿಸಿಕೊಳ್ಳುತ್ತಾರೋ ಅವರೆಲ್ಲರ ಸಹಾಯದಿಂದಲೂ ಸಾಧ್ಯವಾದ ಮಟ್ಟಿಗೆ ನಡೆಯುತ್ತಲಿದೆ. ಇಂತಹ ಸಹಾಯವು ಮುಂದೆ ಇನ್ನೂ ಹೆಚ್ಚಾಗಬೇಕು. ಪ್ರಥಮತಃ ಅನೇಕ ವಿಷಯಗಳಲ್ಲಿ ಸರಿಯಾದ ಏರ್ಪಾಟುಗಳನ್ನು ಮಾಡಿ ಅವುಗಳನ್ನು ನಡೆಯಿಸುವುದೇ ಪರಿಷತ್ತಿಗೆ ಸಾಕಾದಷ್ಟು ಕೆಲಸವಾಗಿದ್ದೀತು. ಆದುದರಿಂದ ಪರಿಷತ್ತಿನ ಮುಖ್ಯೋದ್ದೇಶಗಳ ಸಿದ್ಧಿಗಾಗಿ ತಕ್ಕ ಪ್ರಯತ್ನಗಳು ಜರುಗಲಿಲ್ಲವೆಂದು ಅಪಾತತಃ ತೋರಬಹುದು. ಆದರೆ ಈ ವಿಷಯದಲ್ಲಿ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಪರ್ಯಾಲೋಚಿಸುವುದು ಯುಕ್ತವಾಗಿ ತೋರುತ್ತದೆ. ಈಗ ಮೈಸೂರು ಸಂಸ್ಥಾನದಿಂದ ಪ್ರತಿಮಾಸವೂ ಸಲ್ಲುವ ೧೩0 ರೂಪಾಯಿಗಳ ಸಹಾಯದ್ರವ್ಯವು ಪರಿಷ್ಮನಂದಿರದ ಬಾಡಿಗೆಗೂ ಇತರ ಅವಶ್ಯಕವಾದ ಸಿಬ್ಬಂದಿ ಖರ್ಚಿಗೂ ಸಾಕಾದರೂ ಪರಿಷತ್ತಿನ ಉದ್ದೇಶಗಳನ್ನೆಲ್ಲಾ ಸಫಲಗೊಳಿಸಲು ಅಧಿಕ ದ್ರವ್ಯವು ಅತ್ಯಂತ ಆವಶ್ಯಕ. ಹೊಸ ಪುಸ್ತಕಗಳನ್ನು ಬರೆಯಿಸಿ, ಗ್ರಂಥಕರ್ತರಿಗೆ ಬಹುಮಾನಗಳನ್ನು ನೀಡುವುದಕ್ಕೆ ಸರ್ಕಾರದಿಂದ ಸಲ್ಲುವ ದ್ರವ್ಯವು ಸಾಲದೆಂದು ನಾನು ಹೇಳಬೇಕಾದುದಿಲ್ಲ. ಇಂತಹ ಕಾರ್ಯಗಳೆಲ್ಲವೂ ಸರ್ಕಾರದಿಂದಲೇ ಆಗಬೇಕೆಂದು ನಾವು ನಿರೀಕ್ಷಿಸುವುದು ನಮಗೆ ಭೂಷಣಕರವಾಗಿಲ್ಲ. ಇತರ ಪ್ರಾಂತಗಳಲ್ಲಿ ಸರ್ಕಾರದಿಂದ ಇಷ್ಟು ಮಟ್ಟಿಗೆ ಕೂಡ ಸಹಾಯ ದೊರೆಯುವುದಿಲ್ಲ. ಆದುದರಿಂದ ನಮ್ಮ ಪರಿಷತ್ತಿನ ಉದ್ದೇಶಗಳೆಲ್ಲವೂ ಸಮರ್ಪಕವಾಗಿ ನೇರವೇರುವುದಕ್ಕೆ ಕರ್ಣಾಟಕರೆಲ್ಲರೂ ಏಕಮನಸ್ಸಿನಿಂದ ತಮ್ಮ ಶಕ್ತ್ಯನುಸಾರ ದ್ರವ್ಯಸಹಾಯವನ್ನು ಮಾಡಬೇಕೆಂಬುದು ನನ್ನ ಪ್ರಾರ್ಥನೆ.

ಪರಿಷತ್ತಿನ ಕರ್ತವ್ಯಗಳು

ಪರಿಷತ್ತಿನ ಕರ್ತವ್ಯಗಳ ವಿಷಯದಲ್ಲಿ ನಾವು ಪ್ರಕೃತ ಕೈಕೊಳ್ಳತಕ್ಕ ಪ್ರಯತ್ನಗಳನ್ನು ನಿರೂಪಿಸಿದುದಾಯಿತು. ಈಗ ಸಾಹಿತ್ಯ ಪರಿಷತ್ತು ಯಾವ ಯಾವ ಭಾಗಗಳಲ್ಲಿ ಏಳಿಗೆ ಹೊಂದುವಂತೆ ಮಾಡಬೇಕೆಂಬುದನ್ನು ನಾವು ಪರ್ಯಾಲೋಚನೆ  ಮಾಡಬಹುದು. ಇದಕ್ಕಾಗಿ ಬಂಗಾಳ, ಮಹಾರಾಷ್ಟ್ರ, ಗುಜರಾತಿ, ಆಂಧ್ರ್ರ ಮುಂತಾದ ಭಾಷೆಗಳ ಅಭಿವೃದ್ಧಿಗಾಗಿ ಆಯಾ ಪ್ರಾಂತದ ಭಾಷಾಭಿಮಾನಿಗಳು ಸ್ಥಾಪಿಸಿರುವ ಸಾಹಿತ್ಯ ಪರಿಷತ್ತುಗಳ ಕಡೆ ನಮ್ಮ ದೃಷ್ಟಿಯನ್ನಿಡಬೇಕು. ಆಯಾ ದೇಶದ ಭಾಷೆಯನ್ನೇ ಸರಿಯಾಗಿ ವ್ಯಾಸಂಗ ಮಾಡಿ ಆ ಭಾಷೆಯಲ್ಲಿಯೇ ಪುಸ್ತಕ ಭಾಂಡಾಗಾರವನ್ನು ಹೆಚ್ಚಿಸಿ, ತನ್ಮೂಲಕ ಜನಸಾಮಾನ್ಯರಲ್ಲಿ ಜ್ಞಾನವನ್ನು ಹರಡಬೇಕೆಂಬ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲಿವೆ. ಇದಕ್ಕಾಗಿ ಪಾಶ್ಚಾತ್ಯರಲ್ಲಿ ಪ್ರಚಾರಗೊಂಡಿರುವ ನಾನಾ ಆಧುನಿಕ ಶಾಸ್ತ್ರವಿಷಯವಾದ ಪುಸ್ತಕಗಳನ್ನು ದೇಶ ಭಾಷೆಯಲ್ಲಿ ಸಾಧ್ಯವಾದಮಟ್ಟಿಗೆ ಬರೆಯಿಸಿ, ಅವುಗಳನ್ನು ಪ್ರಚಾರಕ್ಕೆ ತರುವುದರಲ್ಲಿ ಜನರು ಉದ್ಯುಕ್ತರಾಗಿದ್ದಾರೆ. ಇದಲ್ಲದೆ, ನಮ್ಮ ಪ್ರಾಚೀನ ಸಾಹಿತ್ಯ ಸಂಪತ್ತಿನ ಪ್ರಚಾರಕ್ಕೂ ತಕ್ಕ ಏರ್ಪಾಡುಗಳು ನಡೆಯುತ್ತಲಿದೆ ಮತ್ತು ನಮ್ಮ ಪ್ರಾಚೀನ ತರ್ಕ, ವೇದಾಂತ, ಧರ್ಮಶಾಸ್ತ್ರ, ಸ್ಮೃತಿ ಮುಂತಾದ ಗ್ರಂಥಗಳಲ್ಲಿಯ ವಿಷಯಗಳನ್ನುಳ್ಳ ಪುಸ್ತಕಗಳು ಸಾಮಾನ್ಯರ ತಿಳಿವಳಿಕೆಗೋಸ್ಕರ ದೇಶಭಾಷೆಗಳಲ್ಲಿ ಹೊರಡುತ್ತಲಿವೆ. ಈ ಕಾರ್ಯಗಳೆಲ್ಲವನ್ನೂ ಕರ್ಣಾಟಕ ಭಾಷೆಯಲ್ಲಿ ನಾವೂ ಕೈಕೊಳ್ಳುವುದು ನಮ್ಮ ಕರ್ತವ್ಯವು.

ಈಗ ಸಾಹಿತ್ಯ ಪರಿಷತ್ ಸಮ್ಮೇಳನದ ಕಾರ್ಯವು ಮುಗಿದಂತಾಯಿತು. ಮುಖ್ಯವಾಗಿ, ಈ ಡಿಸ್ಟ್ರಿಕ್ಟಿನ ಡೆಪ್ಯೂಟಿ ಕಮಿಷನರ್ ಸಾಹೇಬರೂ, ಇಲ್ಲಿಯ ನಿವಾಸಿಗಳಲ್ಲಿ ಪ್ರಮುಖರಾದ                      ಮ|| ರಾ|| ಅಡ್ವೋಕೇಟ್ ವೆಂಕಟೇಶಯ್ಯನವರೂ, ಮ|| ರಾ|| ಅಡ್ವೋಕೇಟ್ ರಾಮಸ್ವಾಮಯ್ಯನವರೂ, ವಾಲಂಟಿಯರುಗಳೂ, ಇನ್ನೂ ಇತರರೂ ಬಹಳವಾಗಿ ಶ್ರಮಪಟ್ಟು, ದೂರದೇಶಗಳಿಂದ ಬಂದಿರುವ ನಮ್ಮೆಲ್ಲರನ್ನೂ ಸತ್ಕರಿಸಿ, ಸಮ್ಮೇಳನದ ಕಾರ್ಯವು ನಿರ್ವಿಘ್ನವಾಗಿ ನಡೆಯುವಂತೆ ಮಾಡಿಕೊಟ್ಟುದಕ್ಕಾಗಿ ಇಲ್ಲಿ ನೆರೆದಿರುವ ನಮ್ಮೆಲ್ಲರ ಕೃತಜ್ಞತೆಯನ್ನು ಪ್ರಕಟಪಡಿಸುವುದು ನನ್ನ ಪ್ರಥಮ ಕರ್ತವ್ಯವಾಗಿವೆ. ಇದನ್ನು ನೀವೆಲ್ಲರೂ ಏಕಕಂಠ್ಯದಿಂದ ಅನುಮೋದಿಸಿ ಈ ವಿಷಯದಲ್ಲಿ ನಿಮಗಿರುವ ಸಮಾಧಾನವನ್ನು ಕರತಾಡನ ಧ್ವನಿಯಿಂದ ತೋರ್ಪಡಿಸಬೇಕೆಂಬುದು ನನ್ನ ಕೋರಿಕೆಯಾಗಿದೆ.

ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳು

ಇನ್ನು, ಈ ಮೂರುದಿವಸಗಳು ನಡೆದ ಕಾರ್ಯಗಳನ್ನು ಸಂಕ್ಷೇಪವಾಗಿ ಸೂಚಿಸಬೇಕಾಗಿದೆ. ಪರಿಷತ್ತಿನ ಪಂಡಿತರಾದ ಮ|| ರಾ|| ಎನ್. ನಂಜುಂಡಶಾಸ್ತ್ರಿಗಳು ನಮ್ಮ ದೇಶದಲ್ಲಿ ಲಿಪಿಯು ಮೊದಲು ಹುಟ್ಟಿದುದು ಹೇಗೆ, ಅದು ಕ್ರಮೇಣ ಹೇಗೆ ವಿಕಾರವನ್ನು ಹೊಂದುತ್ತ ಬಂದಿರುವುದು-ಈ ಮುಂತಾದ ವಿಷಯಗಳನ್ನು ಬಹು ಶ್ರಮಪಟ್ಟು ಎಲ್ಲರಿಗೂ ಸುಲಭವಾಗಿ ಬೋಧಕವಾಗುವಂತೆ ಉಪನ್ಯಾಸ ಮಾಡಿದರು. ಈ ವಿಷಯದಲ್ಲಿ ನಾನು ಅಲ್ಪಸ್ವಲ್ಪ ವಿಚಾರಮಾಡಿದ್ದೇನೆ. ಬಾಲಬೋಧ ಲಿಪಿಯು ಮೊದಲು ಉತ್ತರದಲ್ಲಿ ಹುಟ್ಟಿತು. ನಮ್ಮ ದಕ್ಷಿಣ ದೇಶದ ಲಿಪಿಗಳು ಅದರಿಂದ ಅಪಾತತಃ ಭಿನ್ನವಾದುವುಗಳಂತೆ ತೋರಿದರೂ ಮೂಲವಾದ ಬಾಲಬೋಧೆ ಲಿಪಿಯನ್ನೇ ಅನುಸರಿಸಿ ಕ್ರಮೇಣ ಈಗ ರೂಢಿಯಲ್ಲಿರುವ ಕನ್ನಡ, ತೆಲುಗು, ತಮಿಳು ಲಿಪಿಗಳೂ ಹುಟ್ಟ್ಟಿವೆ ಎಂದು ನಂಬುವುದಕ್ಕೆ ಅನೇಕ ಪ್ರಮಾಣಗಳಿವೆ. ಈ ವಿಷಯಗಳನ್ನೆಲ್ಲಾ ಇಲ್ಲಿ ಚರ್ಚಿಸಲು ಕಾಲ ಸಾಲದುದರಿಂದ ಒಂದು ಸಂಗತಿಯನ್ನು ಮಾತ್ರ ಹೇಳುತ್ತೇನೆ. ಕನ್ನಡ ಮತ್ತು ತೆಲುಗು ಪ್ರತಿ ಅಕ್ಷರದ ಮೇಲೆ ಕೊಡುವ ತಲೆಕಟ್ಟೂ ಬಾಲಬೋಧೆ ಲಿಪಿಯಲ್ಲಿರುವ ಪ್ರತಿ ಅಕ್ಷರದ ಮೇಲಣ ಸರಳ ರೇಖೆಯೂ ಎರಡೂ ಒಂದೇ ಎಂದು ತಿಳಿಯಬಹುದು. ಈ ಉಪನ್ಯಾಸವು ಪರಿಷತ್ಪತ್ರಿಕೆಯಲ್ಲಿ ವಿಸ್ತಾರವಾಗಿ ಮುದ್ರಿತವಾಗಿರುವುದರಿಂದ ಅದನ್ನು ಸರ್ವರೂ ಓದಿ ಸಂತೋಷಪಡಬಹುದು.

ಪರಿಷತ್ತಿನ ಪಂಡಿತರಾದ ಮ|| ರಾ|| ಕಡಬದ ನಂಜುಂಡಶಾಸ್ತ್ರಿಗಳು ‘ಕುಸುಮಾವಳಿ’ ಎಂಬ ಗ್ರಂಥದ ಉತ್ಕೃಷ್ಟವಾದ ಕೆಲವು ಭಾಗಗಳನ್ನು ಆರಿಸಿ ಓದಿದರಲ್ಲದೆ, ಗ್ರಂಥವನ್ನು ರಚಿಸಿದ ಕವಿಯ ವಿಷಯವಾಗಿ ಅನೇಕ ಸಂಗತಿಗಳನ್ನು ನಿರೂಪಣೆ ಮಾಡಿದರು. ಈ ಉಪನ್ಯಾಸವು ಪರಿಷತ್ಪತ್ರಿಕೆಯಲ್ಲಿ ಮುಂದೆ ಪ್ರಕಟವಾಗುತ್ತದೆ.

ಮ|| ರಾ|| ರಾಜಪುರೋಹಿತರು ಅತ್ಯಂತ ಶ್ರಮಪಟ್ಟು ವಿಷಯ ಸಂಗ್ರಹವನ್ನು ಮಾಡಿ ಕರ್ಣಾಟಕದಲ್ಲಿ ಈಗ ಪ್ರಚಾರದಲ್ಲಿರುವ ಕನ್ನಡ ಮಾಸಪತ್ರಿಕೆಗಳನ್ನು ಕುರಿತು ಸ್ವಾರಸ್ಯವಾದೊಂದು ಉಪನ್ಯಾಸವನ್ನು ಓದಿದರು. ಮುಖ್ಯವಾಗಿ, ಇವುಗಳಲ್ಲಿ ‘ವಿಜ್ಞಾನ’ ವೆಂಬುದು ಮ|| ರಾ|| ವೆಂಕಟೇಶಯ್ಯಂಗಾರ್ಯರು ಮತ್ತು ಮ|| ರಾ|| ವೆಂಕಟನಾರಣಪ್ಪನವರಿಂದ ಪ್ರಕಟವಾಗಿ ಈಗಿನ ಪದ್ಧತಿಯನ್ನನುಸರಿಸಿ ಪಾಶ್ಚಾತ್ಯರ ಆಧುನಿಕ ಶಾಸ್ತ್ರಗಳನ್ನು ಸಾಮಾನ್ಯರಿಗೆ ಸುಲಭವಾಗಿ ತಿಳಿಯುವುದರಿಂದ ನಮ್ಮೆಲ್ಲರ ಅವಲೋಕನೆಗೆ ಆರ್ಹವಾಗಿದೆ. ಅಲ್ಲದೆ, ಧಾರವಾಡದ ವಾಗ್ಭೂಷಣ, ಮೈಸೂರಿನ ಕರ್ಣಾಟಕ ಗ್ರಂಥಮಾಲೆ, ಉಡುಪಿಯ ಕೃಷ್ಣಸೂಕ್ತಿ-ಇವೇ ಮುಂತಾದವು ವಾಚನಾರ್ಹವಾಗಿದೆ.

ಮ|| ರಾ|| ತೋರಣಗಲ್ ರಾಜಾರಾಯರು, ಕರ್ಣಾಟಕದಲ್ಲಿ ಪ್ರಚಾರಗೊಂಡಿರುವ ನಾಟಕಗಳ ವಿಷಯವಾಗಿ ಸ್ವಾರಸ್ಯವಾದೊಂದು ಭಾಷಣವನ್ನು ಮಾಡಿದರು. ಕನ್ನಡ ಭಾಷೆಯಲ್ಲಿ ಅತಿ ಪ್ರಾಚೀನವಾದ ನಾಟಕವು ಕ್ರಿ.ಶ. ೧೫ನೆಯ ಶತಮಾನದಲ್ಲಿ ರಚಿತವಾಯಿತೆಂದೂ, ಈಚೆಗೆ ಅನೇಕ ನಾಟಕಗಳು ಹುಟ್ಟಿರುವುವೆಂದೂ, ಇವರು ಸೂಚಿಸಿದರು.

ನಮ್ಮ ಪರಿಷತ್ತಿಗೆ ವಯಸ್ಸು ತುಂಬಿ ಅದಕ್ಕೆ ಪ್ರಾಶಸ್ತ್ಯ ಬಂದಿದ್ದ ಪಕ್ಷದಲ್ಲಿ ನಮ್ಮ ಪಂಡಿತ ಲಿಂಗರಾಜ ಅರಸಿನವರಿಗೆ ಒಂದು ಬಂಗಾರದ ಪದಕವನ್ನು ಭೂಷಣವಾಗಿಯೂ ಬಿರುದಾಗಿಯೂ ಕೊಡಬಹುದಾಗಿತ್ತು. ಮುಂದೆ ಈ ಪರಿಷತ್ತು ಇಂಥ ಪಂಡಿತರಿಗೆ ತಕ್ಕ ಬಹುಮಾನ ಕೊಡುವ ಸ್ಥಿತಿಗೆ ಬರಬೇಕೆಂದು ನಾವು ಪ್ರಾರ್ಥಿಸಬೇಕಲ್ಲದೆ, ಆ ಸ್ಥಿತಿಗೆ ತರತಕ್ಕ ಪ್ರಯತ್ನಗಳನ್ನು ನಾವು ಕೈಗೊಳ್ಳಬೇಕು.

Tag: Karpoora Srinivasa Rao, Karpura Srinivasa Rao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)